Sunday, March 8, 2009

ರಾಶೊಮೊನ್: ಭೂತ, ವರ್ತಮಾನ

ಭಾಗ ೧: ಭೂತ

ಅಗಸೆಯ ಅಂಗಳದಲ್ಲಿ ವಿನಾಯಕ ಪಂಡಿತರು ಕುರಸೊವಾನ ಚಿತ್ರಗಳ ಬಗ್ಗೆ ಒಂದು ಒಳ್ಳೆಯ ಪ್ರಬಂಧವನ್ನು ಬರೆದಿದ್ದಾರೆ. ನನಗೆ ಕುರಾಸೊವಾನ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ರಾಶೊಮೊನ್ ಚಿತ್ರದ ಡಿ.ವಿ.ಡಿ ದೊರೆತಾಗ ಅದನ್ನು ಹಲವು ಬಾರಿ ನೋಡಿದೆ. ಈ ಚಿತ್ರಕ್ಕೆ ಮೂಲ ಆಧಾರ
 ರೈನೊಸುಕೆ ಅಕುಟಗವಾರ ಎರಡು ಕಥೆಗಳು.


ರಾಶೋಮನ್ ಕಥೆ ನನ್ನ ಕೈಗೆ ಸಿಕ್ಕಿಲ್ಲ ಆದರೆ ಅದರ ಸಾರ ಇಲ್ಲಿದೆ. ಕ್ಯೋಟೋ ನಗರದ ಅಂಚಿನಲ್ಲಿರುವ ರಾಶೊಮನ್ ಗೇಟಿನಲ್ಲಿ ಆ ಕಥೆ ಘಟಿಸುತ್ತದೆ. ಆಗಷ್ಟೇ ಕೆಲಸ ಕಳೆದುಕೊಂಡ ಬಡಪಾಯಿಯೊಬ್ಬ ಅಲ್ಲಿಗೆ ಬರುತ್ತಾನೆ. ಬೆಂಕಿ, ಭೂಕಂಪ, ಅಕಾಲಕ್ಕೆ ಈಡಾಗಿರುವ ಕ್ಯೋಟೊ ದುಃಖದಾಯೀ ಸ್ಥಿತಿಯಲ್ಲಿದೆ. ಅಲ್ಲಿ ಕುಳಿತು ಸತ್ತವರ ಜುಟ್ಟನ್ನು ಕತ್ತರಿಸಿ ವಿಗ್ ಮಾಡಿ ಮಾರುತ್ತಿರುವ ಮುದುಕಿ ತನ್ನ ಜೀವನೋಪಾಯಕ್ಕೆ ಇದನ್ನು ಮಾಡುವುದರಲ್ಲಿ ತಪ್ಪೇನೂ ಇಲ್ಲವೆಂದು ಸಮರ್ಥಿಸಿಕೊಳ್ಳುತ್ತಾಳೆ. ಇಂಥ ಕ್ರೂರ ಜಗತ್ತಿನಲ್ಲಿ ಜೀವಿಸಲು ಏನು ಮಾಡಿದರೂ ತಪ್ಪಿಲ್ಲವೆಂದು ಅವಳಿಂದ ಬೊಧನೆ ಪಡೆದ ಆತ ಅವಳ ಬಟ್ಟೆಗಳನ್ನೇ ಕದ್ದು ಓಡಿಹೋಗುತ್ತಾನೆ.

ಈ ಚಿತ್ರಕ್ಕೆ ಆಧಾರ In a Grove ಎಂಬ ಎರಡನೆಯ ಕಥೆ. ಹಾಗೆ ನೋಡಿದರೆ ಬಟ್ಟೆ ಕದಿಯುವ ಘಟನೆಯನ್ನು ಬಿಟ್ಟರೆ ರಾಶೋಮೊನ್ ಚಿತ್ರ ಹೆಚ್ಚಾಗಿ ಎರಡನೆಯ ಕಥೆಯ ಆಧಾರಿತವಾಗಿಯೇ ತಯಾರಿಸಲಾಗಿದೆ. In a Grove ಕಥೆಯನ್ನು ರಾಘವೇಂದ್ರ ಉಡುಪರು ಹಿಂದೆ ನನಗೆ ಕಳಿಸಿದ್ದರು. ಹೀಗಾಗಿ ಆ ಕಥೆಯನ್ನು ನಾನು ಇಂಗ್ಲೀಷ್ ಭಾಷಾಂತರದಲ್ಲಿ ಹಾಗೂ ದೇಶಕಾಲದ ಮೊದಲನೆಯ ಸಂಚಿಕೆಯಲ್ಲಿ ದೀಪಾ ಗಣೇಶ್ ಅನುವಾದಿಸಿದ್ದ ಕನ್ನಡ ಅವತರಣಿಕೆಯಲ್ಲೂ ಓದಿದ್ದೆ. ಕಥೆಯಲ್ಲಿ ಆಗುವುದಿಷ್ಟು. ತೋಪಿನಲ್ಲಿ ಒಂದು ಸಾವು. ಆ ಸಾವಿನ ಬಗ್ಗೆ ಏಳು ಜನರ ಹೇಳಿಕೆ. ಈ ಹೇಳಿಕೆಗಳೆಲ್ಲ ಪರಸ್ಪರ ವಿರೋಧಾಭಾಸದಿಂದ ಕೂಡಿರುತ್ತವೆ. ಯಾವುದು ಸತ್ಯ ಎನ್ನುವುದು ತಿಳಿಯುವುದಿಲ್ಲ. ಒಬ್ಬ ವ್ಯಕ್ತಿ ಅಸುನೀಗಿದ್ದಾನೆಂಬುದು ಮಾತ್ರ ಸ್ಪಷ್ಟ. ಆದರೆ ಸತ್ತದ್ದು ಹೇಗೆ? ಕೊಲೆಯೋ ಆತ್ಮಹತ್ಯೆಯೋ? ಸಾವಿಗೆ ಕಾರಣವಾದ ಆಯುಧ ಯಾವುದು? ಹಾಗೂ ಒಬ್ಬೊಬ್ಬರೂ ಕೊಡುತ್ತಿರುವ ಹೇಳಿಕೆಗಳ ಹಿಂದಿರುವ ಉದ್ದೇಶವೇನು ಎಲ್ಲವೂ ಅಸ್ಪಷ್ಟ. ಕಥೆ ಹೀಗೆ ಏಳು ಭಿತ್ತಿಚಿತ್ರಗಳನ್ನು ನೀಡಿ ಮುಗಿದು ಬಿಡುತ್ತದೆ.

ಇಂಥದೊಂದು ಕಥೆ[ಗಳ]ನ್ನು ಚಿತ್ರೀಕರಿಸುವುದು ಸುಲಭದ ಸಂಗತಿಯಲ್ಲ. ಬರವಣಿಗೆಯಲ್ಲಿ ಬಂದಾಗ ಒಂದೊಂದು ಅನುಭವವೂ ಓದುಗನ ಮನಸ್ಸಿನಲ್ಲಿ ತನ್ನದೇ ರೀತಿಯಲ್ಲಿ ಗ್ರಹೀತವಾಗುತ್ತದೆ. ಆದರೆ ಚಿತ್ರಕ್ಕೆ ಇಳಿಸಿದಾಗ [ಅದರಲ್ಲೂ ಕಲೆಯ ಮಾಧ್ಯಮವಲ್ಲದೇ ಫೋಟೋಗ್ರಫಿಕ್ ಮಾಧ್ಯಮಕ್ಕೆ ಇಳಿಸಿದಾಗ] ನಮಗೆ ಅದು ಓದಿಗಿಂತ, ಶ್ರವಣ ಮಾಧ್ಯಮದಲ್ಲಿ ತೆಗೆದು ಹಾಕುವ ಗಾಸಿಪ್ ಗಿಂತ ಹೆಚ್ಚು ನಂಬಿಕೆ ಹುಟ್ಟಿಸುವಂತೆ ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ಕಾಫ್ಕಾನ "Metamorphasis" ಅಥವಾ ಕುಂದೆರಾನ "Unbearable Lightness of Being" "HitchHiking Game" ನಂತಹ ಕಥೆಗಳನ್ನು ದೃಶ್ಯ ಮಾಧ್ಯಮಕ್ಕೆ ಇಳಿಸುವುದು ಹೆಚ್ಚಿನ ಸವಾಲಿನ ಮಾತಾಗುತ್ತದೆ. ಆದರೆ ಉತ್ತಮ ನಿರ್ದೇಶಕರಾದ ಕುರಸೋವಾರಂಥವರು ಇದನ್ನು ಬಹಳ ಸರಳವೆನ್ನುವಂತೆ ಮೀರಿ ನಿಂತು ಬಿಡುತ್ತಾರೆ.

ಈ ರೀತಿ ಒಂದೇ ಲೇಖಕನ ಎರಡು ಕಥೆಗಳನ್ನು ಕನ್ನಡದ ಸಂದರ್ಭದಲ್ಲಿ ಕಾಸರವಳ್ಳಿ ಸ್ಪಷ್ಟವಾಗಿ ಹೇಳದೆಯೇ ಮಾಡಿಬಿಟ್ಟಿದ್ದಾರೆ. ತಬರನ ಕಥೆ ಹಾಗೆ ನೋಡಿದರೆ ಒಂದು ಇಡೀ ಚಿತ್ರವಾಗುವಷ್ಟು ತಿರುಳಿರುವ ಕಥೆಯಲ್ಲ. ಆದರೆ ಕಾಸರವಳ್ಳಿಯವರ ಕೈಯಲ್ಲಿ ತಬರನ ಕಥೆಯಲ್ಲಿ ತುಕ್ಕೋಜಿ ಕಥೆಯೂ ಹಾಸು ಹೊಕ್ಕಾಗಿ ಬಂದು ಒಂದು ಅದ್ಭುತ improvisation ಆಗುವುದನ್ನು ನಾವು ಕಾಣಬಹುದು. ಹಾಗೆಯೇ ಬರವಣಿಗೆಯಲ್ಲಿ ಗ್ರಹಿಸಲು ಸುಲಭವಾದ ಆದರೆ ದೃಶ್ಯ ಮಾಧ್ಯಮಕ್ಕೆ ಕಷ್ಟವಾದ ನೆಹರೂ ಅವರ "Discovery of India" ಕೃತಿಯನ್ನು ಶ್ಯಾಮ್ ಬೆನೆಗಲ್ ವಿವಿಧ ಕಥೆ, ಕಲಾಪ್ರಕಾರಗಳನ್ನು ತಂದು ಎಷ್ಟು ಅದ್ಭುತವಾಗಿ ಚಿತ್ರೀಕರಿಸಿದ್ದಾರೆಂಬುದು ಗಮನಾರ್ಹವಾದ ಮಾತು. ಆ ಗುಚ್ಚದಲ್ಲಿ ನೆಹರೂ ವಿವರಿಸುವ ಗಾಂಧೀಜಿಯ ಭಾರತ ಆಗಮನವನ್ನು ಶ್ಯಾಮ್ ರಾಜಾರಾಯರ ಕಾಂತಾಪುರವನ್ನು ಅಡಕಗೊಳಿಸಿ ಗ್ರಹಿಸಿದ ರೀತಿ ನನಗೆ 
ಅತ್ಯಂತ ಪ್ರಿಯವಾದ ಭಾಗ.

ಪ್ರತಿಯೊಬ್ಬ ನಿರ್ದೇಶಕನೂ ಸಾಹಿತ್ಯ ಕೃತಿಯನ್ನು ತನ್ನ ಮಾಧ್ಯಮಕ್ಕೆ ಇಳಿಸುವಾಗ ಅದಕ್ಕೆ ಒಪ್ಪಿತವಾಗುವಂತೆ ಕೆಲ ಬದಲಾವಣೆಗಳನ್ನು ಮಾಡುತ್ತಾನೆ. ಬಹುಶಃ ಈ ಬದಲಾವಣೆಗಳು ಎಷ್ಟು ಸೂಕ್ತ ಎನ್ನುವುದೇ ಆ ನಿರ್ದೇಶಕನ ಸಫಲತೆಯ ಮಾಪನವಿದ್ದೀತು. ರಾಶೋಮನ್ ಚಿತ್ರ In the Groveಗಿಂತ ಭಿನ್ನವಾಗಿದ್ದರೂ ಕಥೆಯ ಆಶಯಕ್ಕೆ ಧಕ್ಕೆ ಬರದಂತೆ ಚಿತ್ರೀಕರಿಸಲಾಗಿದೆ. ಏಳು ಜನರ ವಕ್ತವ್ಯದಲ್ಲಿ ಮುದುಕ[ಸಾವಿಗೀಡಾದವನ ಅತ್ತೆ]ಯ ವಕ್ತವ್ಯ ಚಿತ್ರದಲ್ಲಿ ಇಲ್ಲ. ಇದರಿಂದ ಒಟ್ಟಾರೆ ನಿರೂಪಣೆಗೇನೂ ಧಕ್ಕೆಯುಂಟಾಗುವುದಿಲ್ಲ.



ಇದೊಂದನ್ನು ಬಿಟ್ಟರೆ, ಮರ ಕಡಿಯುವವ, ಭಿಕ್ಷು, ಪೊಲೀಸ್ ಅಧಿಕಾರಿ, ಡಕಾಯಿತ, ಸತ್ತವನ ಹೆಂಡತಿ ಮತ್ತು ಸತ್ತವನ ಆತ್ಮದ ನಿರೂಪಣೆಗಳನ್ನು ಯಾವ ಹೆಚ್ಚಿನ ಬದಲಾವಣೆಗಳೂ ಇಲ್ಲದೇ ಕುರಾಸೊವಾ ತಮ್ಮ ಚಿತ್ರದಲ್ಲಿ ಅಡಕಗೊಳಿಸಿದ್ದರು. ಆದರೆ ಚಲನ ಚಿತ್ರದಲ್ಲಿ ಭಿಕ್ಷುವಿನ ಪಾತ್ರವನ್ನು ತುಸು ಭಿನ್ನವಾಗಿ, ನಡೆಯುತ್ತಿರುವ ಅರ್ಥರಹಿತ ಕ್ರಿಯೆಗಳಿಗೆ ತುಸು ಅರ್ಥ ಹಚ್ಚಲು, ಅದನ್ನೇ ತತ್ವಶಾಸ್ತ್ರದ ಚೌಕಟ್ಟಿನಲ್ಲಿಡಲು ಕುರಾಸೊವಾ ಯತ್ನಿಸಿದ್ದಾರೆ. ಹಾಗೆಯೇ ಕಥೆಯಲ್ಲಿ ಮರ ಕಡಿಯುವವನ ಪಾತ್ರ ಸಣ್ಣದು - ಆತನಿಗೆ ಎರಡುಬಾರಿ ಕಥನದ ಅವಕಾಶವನ್ನು ಕೊಟ್ಟು ಕುರಾಸೋವಾ ಖಾಸಗಿಯಾಗಿ ಹಂಚಿಕೊಳ್ಳಲು ತಯಾರಿರುವ ಸತ್ಯಕ್ಕೂ ಕಾನೂನಿನ ಅಧಿಕಾರಿಗಳ ಮುಂದೆ ಕೊಟ್ಟಿರುವ ಹೇಳಿಕೆಗೂ ಇರಬಹುದಾದ ದಿನನಿತ್ಯದ ಆಭಾಸವನ್ನು ಗ್ರಹಿಸಲು ಪ್ರಯತ್ನಿಸಿದ್ದಾರೆ. ಈ ರೀತಿಯ ಬದಲಾವಣೆ ಮೂಲ ಕಥೆಯ ಅರ್ಥವಂತಿಕೆಯನ್ನು ಹೆಚ್ಚಿಸುತ್ತದೆ.

ಆದರೆ ಎಲ್ಲಕ್ಕಿಂತ ದೊಡ್ಡ ಸವಾಲೆಂದರೆ ಸತ್ತವನ ಆತ್ಮದ ಕಥೆಯನ್ನು ಸ್ಪಷ್ಟವಾದ ದೃಶ್ಯ ಮಾಧ್ಯಮದಲ್ಲಿ ಕಾಣಿಸುವುದು ಹೇಗೆ? ಕುರಾಸೊವಾ ಈ ಸವಾಲನ್ನು ಒಂದು ಭಿನ್ನ ರೀತಿಯಲ್ಲಿ ಸಫಲವಾಗಿ ಎದುರಿಸಿದ್ದಾರೆ. ಸತ್ತವನ ಆತ್ಮವನ್ನು ಒಂದು ಸ್ತ್ರೀಯ ಮಾಧ್ಯಮದಿಂದ ಕರೆತಂದು ದೃಷ್ಯಮಾಧ್ಯಮದಲ್ಲಿ ಮೂಡಿಸುತ್ತಾರೆ. ಒಂದು ರೀತಿಯಲ್ಲಿ ನಂಬಲಾಗದ, ನಂಬಬಾರದ ಕಥೆಯನ್ನು, ಅವುಗಳ ಭಿನ್ನ ಭಿನ್ನ ಭಾಗಗಳಲ್ಲಿ ನಂಬುವಂತೆ ಕುರಾಸೊವಾ ಚಿತ್ರಿಸುತ್ತಾರೆ. ಸತ್ತವನ ಆತ್ಮ ಒಂದು ಸ್ತ್ರೀಯ ದೇಹವನ್ನು ಹೊಗಲು ಬೇಕಾದ ತಯಾರಿ ಹಿನ್ನೆಲೆಯನ್ನೆ ಅವರು ಅದ್ಭುತವಾಗಿ ಆ ಚಿತ್ರದಲ್ಲಿ ಸೃಷ್ಟಿಸಿದ್ದಾರೆ.

ಜೊತೆಗೆ ಮೂಲ ಕತೆಯಲ್ಲಿ ನಮಗೆ ಸಿಗುವುದು ಅಧಿಕಾರಿಯ ಮುಂದೆ ಒಂದರ ನಂತರ ಒಂದು ಬರುವ
 ವಕ್ತವ್ಯಗಳು. ಚಿತ್ರದಲ್ಲಿ ಅವುಗಳಿಗೆಲ್ಲ ಒಂದು ಚೌಕಟ್ಟು ಕೊಡಲು ಒಂದು ಹೊಸ ಪಾತ್ರದ ಬಳಕೆಯಾಗುತ್ತದೆ. ಈ ಪಾತ್ರ ಬಹುಶಃ ರಾಶೊಮೊನ್ ಕಥೆಯಿಂದ ಅಮದು ಮಾಡಿದ ಕೆಲಸ ಕಳೆದುಕೊಂಡ ವ್ಯಕ್ತಿಯಿರಬಹುದು. ಆತ ಯಾರೆಂದು ನಮಗೆ ಸ್ಪಷ್ಟವಾಗದಿದ್ದರೂ ಆತನ ಪ್ರಶ್ನೆಗಳ ಮೂಲಕ ಎಲ್ಲರ ಕಥೆಗಳಿಗೂ ಒಂದು ಅಸ್ತಿತ್ವ ಬರುತ್ತದೆ. ಆ ವ್ಯಕ್ತಿಯ ಪ್ರಶ್ನೆಗಳಿಂದಲೇ ನಾವು ನಂಬುತ್ತಿರುವ ಸತ್ಯವನ್ನು ಅಲ್ಲಗಳೆಯಲು ಕುರಾಸೊವಾ ಪ್ರಯತ್ನಿಸುತ್ತಾರೆ.

ಮೂಲತಃ ಈ ಕಥೆ ದುರಂತದಿಂದ ಕೂಡಿರುವುದು - ಯಾರೂ ನಿಜ ಹೇಳುತ್ತಿಲ್ಲವೇನೋ ಎಂಬ ಅಭಿಪ್ರಾಯ ಕಥೆ ಓದುತ್ತಾ ಹೋದಂತೆ ಬಲಗೊಳ್ಳುತ್ತದೆ. ಸತ್ಯವನ್ನು ಗ್ರಹಿಸುವ ಭಿನ್ನ ನೆಲೆಗಳಿಂದ ಒಬ್ಬೊಬ್ಬರ ವಿವರಣೆಯೂ ಭಿನ್ನವಾಗಿರಬಹುದು. ಆದರೆ ಇಲ್ಲಿ ಕೊಲ್ಲಲು ಉಪಯೋಗಿಸಿದ ಕತ್ತಿ/ಖಡ್ಗ ದ ಬಗ್ಗೆ ಇರುವ ದ್ವಂದ್ವ, ನಾಪತ್ತೆಯಾಗುವ ಕುದುರೆ, ಬತ್ತಳಿಕೆಯಲ್ಲಿ ಇರಬಹುದಾದ ಬಾಣಗಳ ಸಂಖ್ಯೆ ಹಾಗೂ ಮುಖ್ಯ ಪಾತ್ರಧಾರಿಗಳ ನಿರೂಪಣೆಯಲ್ಲಿ ಬರುವ ತಮ್ಮ ಪಾತ್ರದ ಅತಿರಂಜಕತೆಯನ್ನು ನೋಡಿದಾಗ ಸತ್ಯವನ್ನು ಗ್ರಹೀತ ಮಾಡಿಕೊಳ್ಳುವ ಪರಿಯಲ್ಲಿರುವ ಭಿನ್ನತೆಗಿಂತ ಬೇಕೆಂದೇ ಎಲ್ಲರೂ ಸುಳ್ಳನ್ನಾಡುತ್ತಿದ್ದಾರೆ ಎಂಬ ಭಾವನೆ ಸಹಜವಾಗಿ ಓದುಗನಿಗೆ/ನೋಡುಗನಿಗೆ ಬರುತ್ತದೆ.

ಯಾರಿಗೂ ಈ ರೀತಿಯಾದ ಸುಳ್ಳು ಹೇಳುವುದರಿಂದ ಆಗಬಹುದಾದ ಉಪಯೋಗ/ಲಾಭ ವ್ಯಕ್ತವಾಗಿ ಕಾಣುವುದಿಲ್ಲವಾದ್ದರಿಂದ ಭಿಕ್ಷು ಹೇಳಿದಂತೆ ಜಗತ್ತು ಕ್ರೂರವಾಗಿ ಕಾಣುತ್ತದೆ. ಮೂಲ ಲೇಖಕರ ಉದ್ದೇಶ ಹೆಚ್ಚು ಸಿನಿಕತನದಿಂದ ಕೂಡಿದ್ದೇ ಆಗಿದ್ದೀತು. ರಾಶೊಮೊನ್ ಕಥೆಯ ಸಾರ, ಅವರ ಖಾಸಗೀ ಜೀವನದ ಕೆಲವು ವಿವರಗಳನ್ನು ಗಮನಿಸಿದಾಗ ಬಹುಶಃ ಅಕುಟಗವಾರ ಉದ್ದೇಶ ಮಾನವತಾವಾದದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನೆತ್ತುವ ದುರಂತವೇ ಇತ್ತೇನೋ ಅನ್ನಿಸುತ್ತದೆ. ಆದರೆ ಕುರಾಸೊವಾರಿಗೆ ಬಹುಶಃ ಈ ಅಸಹಾಯದ ದ್ವನಿಯ ಅಂತ್ಯ ಇಷ್ಟವಾಗಲಿಲ್ಲ ಅನ್ನಿಸುತ್ತದೆ. ಹೀಗಾಗಿ ರಾಶೊಮೊನ್ ಕಥೆಯಲ್ಲಿನ ಬಟ್ಟೆ ಕದಿಯುವ ಘಟನೆಯನ್ನು ನಿರೂಪಿಸಿದರೂ, ಕಡೆಗೆ ಎರಡೂ ಕಥೆಗಳಲ್ಲಿರದ ಒಂದು ಅನಾಥವಾಗಿ ಬಿದ್ದಿರುವ ನವಜಾತ ಶಿಶುವನ್ನು ಕರೆದು ತರುತ್ತಾರೆ. ಇದ್ದಕ್ಕಿಂದ್ದಂತೆ ಆ ಕೂಸಿನ ಆಗಮನದಿಂದ ಕೆಲ ವ್ಯಕ್ತಿಗಳ ಭೂಮಿಕೆ ಬದಲಾಗುವುದನ್ನು ನಾವು ಕಾಣುತ್ತೇವೆ. ಇಡೀ ಚಿತ್ರದಲ್ಲಿ ಕೃತಕ ಅನ್ನಿಸುವ ಭಾಗ ಇದು ಮಾತ್ರ.

ರಾಶೊಮೊನ್ ಕಥೆಯಲ್ಲದೇ ಚಿತ್ರೀಕರಣದ ದೃಷ್ಟಿಯಿಂದಲೂ ತುಂಬಾ ಅದ್ಭುತವಾದ ಚಿತ್ರ. ನೆರಳು ಬೆಳಕಿನಾಟ, ಕ್ಯಾಮರಾದ ಚಲನೆ, ನಟನೆಯಲ್ಲಿನ ಸಂಯಮ/ಅತಿರೇಕ, ಹಾಗೂ ಭಿನ್ನ ವಕ್ತವ್ಯಗಳಲ್ಲಿ ಬೇರೆ ರೀತಿಯಾಗಿ ನಡೆದುಕೊಳ್ಳಬೇಕಾದ್ದರಿಂದ ಒಂದೇ ದೃಶ್ಯವನ್ನು ನಾಲ್ಕಾರು ರೀತಿಯಲ್ಲಿ ಅಭಿನಯಸಲು ಒದಗುವ ಅವಕಾಶ - ಈ ಎಲ್ಲ ಸಾಧ್ಯತೆಗಳೂ ಚಿತ್ರವನ್ನು ಇನ್ನಷ್ಟು ಆಸಕ್ತಿಕರವನ್ನಾಗಿ ಮಾಡುತ್ತದೆ. ನಾನು ನೋಡಿದ ಡಿ.ವಿ.ಡಿಯಲ್ಲಿ ಆ ಚಿತ್ರದ ಛಾಯಾಗ್ರಾಹಕರೊಂದಿಗೆ ಸಂದರ್ಶನ ಮತ್ತು ಆ ಚಿತ್ರದ ಬಗೆಗಿನ ಪ್ರತಿ ದೃಶ್ಯದ ಬಗ್ಗೆಯೂ ಕಾಮೆಂಟರಿಯ ಭಾಗವಿದ್ದರಿಂದ ಚಿತ್ರವನ್ನು ಹಲವು ದೃಷ್ಟಿಕೊನಗಳಿಂದ ನೋಡಲು, ಮೊದಲ ನೋಟಕ್ಕೆ ಕಾಣದ್ದನ್ನು ಭಿನ್ನ ದೃಷ್ಟಿಯಿಂದ ಗ್ರಹಿಸಲು ನನಗೆ ಸಾಧ್ಯವಾಯಿತು. ಆದರೆ ಅದರ ತಾಂತ್ರಿಕತೆಯ ಬಗ್ಗೆ ಆ ಚಿತ್ರದಲ್ಲಿದೆ ಎನ್ನಲಾದ ತ್ರಿಕೋನ, ಅಡ್ಡಗೀಟು, ಕ್ಲೊಸಪ್, ಲಾಂಗ್ ಶಾಟ್‍ಗಳ ಸಿಂಬಾಲಿಸಂ ಬಗ್ಗೆ ನಾನು ಕೇಳಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬಹುದೇ ವಿನಃ ಆ ಬಗ್ಗೆ ಬರೆಯಲು ನಾನು ಸಮರ್ಥನಲ್ಲ.

ಭಾಗ ೨: ವರ್ತಮಾನ

Art imitates life; Life imitates art. ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಲಿ? ಸಧ್ಯಕ್ಕೆ ನಾನು ಚರ್ಚಿಸಲಿರುವ ವಿಚಾರಕ್ಕೆ ಎರಡನೆಯದೇ ಸರಿಯೇನೋ. ೧೯೨೭ ರಲ್ಲಿ ಅಕುಟಗವಾ ರೈನೊಸುಕೆ ಆತ್ಮಹತ್ಯೆ ಮಾಡಿಕೊಂಡರು, ಕುರಸೊವಾ ಈ ಚಿತ್ರವನ್ನು ೧೯೫೦ರಲ್ಲಿ ತಯಾರಿಸಿದ್ದರು ಎಂಬ ಸತ್ಯವನ್ನು ಅಲ್ಲಗಳೆಯಲಾದರೆ ನಾವು ಅವರ ಮೇಲೆ ಭಾರತದ ಇತ್ತೀಚಿನ ಘಟನೆಗಳಿಂದ ಪ್ರಭಾವಿತರಾದರು ಎಂಬ ಆರೋಪವನ್ನು ಹೇರಬಹುದಿತ್ತು. ಅಥವಾ ಸುಮಾರು ಚಿತ್ರಗಳಲ್ಲಿ ಮೊದಲಿಗೆ ಬರುವ disclaimer: this film is a work of fiction and any resemblance to events or characters in real life are purely co-incidental ಅನ್ನುವುದರ ಸತ್ಯಾಸತ್ಯತೆಯನ್ನು ಅದು ನಿಜಕ್ಕೂ ಕಾಕತಾಳೀಯವೇ ಅಂತ ಪ್ರಶ್ನಿಸಬಹುದಿತ್ತು. ಆದರೆ ಸಮಯಾಂತರದಿಂದ, ಭಾಷಾಂತರದಿಂದ, ದೇಶಾಂತರದಿಂದ ನಾವು ಈ ರೀತಿಯ ಪ್ರಶ್ನೆಗಳನ್ನು ಕೇಳದೆಯೇ ಇದರ ಕಾಕತಾಳೀಯತೆಯನ್ನು ಒಪ್ಪಬೇಕಾಗಿದೆ.

ನಾನು ಹೆಚ್ಚಿನ ಕುತೂಹಲವನ್ನು ಬೆಳೆಸಲು ಇಷ್ಟಪಡುವುದಿಲ್ಲ. ರಾಹುಲ್ ಮಹಾಜನ್, ಬಿಬೇಕ್ ಮೊಯಿತ್ರಾ, ಸಾಹಿಲ್ ಜರೂ, ಕರಣ್ ಅಹೂಜಾ, ರಾಹುಲ್‍ ಮಲ್ಹೋತ್ರ, ತ್ರಿಶಯ್ ಖನ್ನಾ ಎಂಬ ಏಳು ಪಾತ್ರಧಾರಿಗಳ ಕಥೆ ದೇಶದೆದುರು ಟೆಲಿವಿಷನ್ ಮೂಲಕ ಬಿಡುಗಡೆಗೊಂಡಿದೆ. ಕಥೆ ಅನಾವರಣವಾಗುತ್ತಿರುವಂತೆಯೇ ಒಬ್ಬೊಬ್ಬ ಪಾತ್ರಧಾರಿಯೂ ತಮ್ಮ ಕಥೆಯನ್ನು ಮಂಡಿಸುತ್ತಿದ್ದಾರೆ. ಎಲ್ಲರೂ ಕುರಸೊವಾನ ಚಿತ್ರದಂತೆಯೇ ಕ್ಯಾಮರಾದ ಕಣ್ಣಲ್ಲಿ ಕಣ್ಣಿಟ್ಟು ತಮ್ಮ 'ಸತ್ಯ'ವನ್ನು ಮಂಡಿಸುತ್ತಿದ್ದಾರೆ.

ವ್ಯತ್ಯಾಸ ಇಷ್ಟೇ - ಆ ಕಥೆಯನ್ನು ನಾವು ವೀಕ್ಷಕರಾಗಿ ನೇರವಾಗಿ ಅರಗಿಸಿಕೊಳ್ಳಲು ದೃಷ್ಯ ಮಾಧ್ಯಮಗಳು ನಮಗೆ ಅವಕಾಶವನ್ನೇ ಕೊಡುತ್ತಿಲ್ಲ. ಮಾಧ್ಯಮದ ನಡುವಿನ ಟಿಆರ್‍ಪಿ ಸಮರದಲ್ಲಿ ಎಲ್ಲರೂ ತಮ್ಮ ತಮ್ಮ ಎಕ್ಸ್‍ಕ್ಲೂಸಿವ್ ಸತ್ಯಗಳನ್ನು ನಮ್ಮ ಮುಂದೆ ಮಂಡಿಸುತ್ತಿದ್ದಾರೆ. ಅಲ್ಲಿ ಹಾಜರಿಲ್ಲದಿದ್ದರೂ ಗ್ರಾಫಿಕ್ಸ್‍ನ ಉಪಯೋಗದ ಮೂಲಕ ಕಣ್ಣಿಗೆ ಕಟ್ಟಿದಂತೆ ಸತ್ಯವನ್ನು ಪ್ರತಿದಿನ ವೃದ್ಧಿಸುತ್ತಾ ಹೊಸ ಹೊಸ ಕಾಣ್ಕೆಗಳೊಂದಿಗೆ ಬರುತ್ತಿದ್ದಾರೆ. ಪ್ರತಿದಿನ ನಮಗೆ new improved truth ಕಾಣಸಿಗುತ್ತಿದೆ. ಕುರಾಸೊವಾನ ನೆರಳುಬೆಳಕಿನಾಟ ಹಾಳಾಗಿ ಹೋಗಲಿ ಅನ್ನುವಂತೆ ನಮ್ಮ ಮುಂದೆ ದೃಶ್ಯಗಳನ್ನು ತೆರೆದಿಡುತ್ತಿದ್ದಾರೆ.

ಈ ಕಥೆ ಎಷ್ಟು ಅದ್ಭುತವಾಗಿದೆಯೆಂದರೆ ಘಟಾನುಘಟಿಗಳೆಲ್ಲಾ ಇದರಲ್ಲಿ ಮಣ್ಣು ಮುಕ್ಕುತ್ತಿರುವಂತಿದೆ. ಅಪೊಲೋ ಆಸ್ಪತ್ರೆಯ ರಿಪೋರ್ಟುಗಳು, ಗೋಪೀನಾಥ ಮುಂಡೆಯವರ ವಕ್ತವ್ಯ, ಭಾರತೀಯ ಜನತಾ ಪಾರ್ಟಿಯ ರಾಹುಲ್ ಮಹಾಜನ್ ಹಿಂದೆ ನಿಲ್ಲಬೇಕೇ ಕೈ ಕೊಡಬೇಕೇ ಎಂಬ ದಿನ ನಿತ್ಯದ ದ್ವಂದ್ವ ಎಲ್ಲವೂ ಕಪ್ಪು ಹಾಸ್ಯದಂತಿದೆ. ಸಾಹಿಲ್ ಜರೂ ಟೆಲಿವಿಷನ್ ಮಾಧ್ಯಮವನ್ನು ಉಪಯೋಗಿಸಿಕೊಂಡ ರೀತಿ. ಈಗಲೂ ನಾನು ಅಮಾಯಕ, ನನಗೇನೂ ಗೊತ್ತಿಲ್ಲಾ ಅನ್ನುತ್ತಿರುವ ರಾಹುಲ್ ಮಹಾಜನ್, ದೊಡ್ಡ ಕುಳವನ್ನು ಬಲೆಗೆ ಹಾಕಿದ್ದಾಯಿತು ಅನ್ನುವ ಧನ್ಯತಾ ಭಾವವನ್ನು ತೋರಿಸುತ್ತಿರುವ ಮನೀಶ್ ಅಗ್ರವಾಲ್ ಎಂಬ ಅಧಿಕಾರಿ, ಎಷ್ಟೊಂದು ಅದ್ಭುತ ಭಿತ್ತಿಚಿತ್ರಗಳು!

ಕಥೆಗಾರರ, ಸೃಜನಶೀಲ ಚಲನಚಿತ್ರಗಾರರ ಕೆಲಸವನ್ನು ಪತ್ರಕರ್ತರು ಹೀಗೆ ಕದ್ದರೆ, ನಾವೇನು ಕಥೆ ಬರೆಯುವುದು? ಏನು ಸಿನೇಮಾ ಮಾಡುವುದು??

ರಾಶೊಮೊನ್ ಚಿತ್ರ ಭ್ರಾಮಕ, ಅತಿವಾಸ್ತವವಾದಿ, ಕಾಲ್ಪನಿಕ ಮತ್ತು ಕಲೆ ಎನ್ನಬಹುದಾದ 'ಭ್ರಮೆ' ಹೊತ್ತ ಎಲ್ಲ ವಿಮರ್ಶಕರಿಗೂ ರಾಹುಲ್ ಮಹಾಜನ್, ಟೆಲಿವಿಷನ್ ಕಂಪನಿಗಳು, ಮತ್ತು ಇತರ ಪಾತ್ರಧಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಕುಡುಕ ಎನ್ನುವುದು ತಮಾಷೆಯ ಮಾತಲ್ಲ. ಇದು ಇನೂ ಒಂದು ಹೆಜ್ಜೆ ಮುಂದೆ ಹೋಗಬಹುದು ಅಷ್ಟೇ......

Wednesday, March 4, 2009

ಪಪ್ಪು ಪಾಸ್ ಹೋಗಯಾ

ಪುಟ್ಟವನಾಗಿದ್ದಾಗಿನಿಂದಲೂ ನನಗೆ ಮೊದಲ ರಾಂಕ್ ಬಂದ ನೆನಪಾಗಲೀ, ಯಾವುದೇ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದದ್ದಾಗಲೀ ಆದದ್ದಿಲ್ಲ. ಅಕಸ್ಮಾತ್ ಏನಾದರೂ ಬಂದರೆ ಅದು ಮೊದಲನೆಯದಲ್ಲದ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಬಹುಮಾನವೇ ಆಗಿರುತ್ತಿತ್ತು. ಅದೃಷ್ಟವಶಾತ್ ನಾನು ಎಂದೂ ಫೇಲ್ ಆಗಲಿಲ್ಲ ಎಂಬುದೇ ಖುಶಿಯ ವಿಷಯ.


ಪ್ರೈಮರಿ ತರಗತಿಯಲ್ಲಿದ್ದಾಗ ನಾನು ನನ್ನ ಅಕ್ಕನ ಬಾಲವಾಗಿ ಸ್ಕೂಲಿಗೆ ಹೋಗುತ್ತಿದ್ದೆ. ಏನು ಮಾಡಬೇಕೆಂದರೂ ಅಕ್ಕನ ಪರವಾನಗಿಯೊಂದಿಗೇ ಎಲ್ಲವೂ ನಡೆಯುವುದು. ಮಲ್ಪೆಯಲ್ಲಿ ವಾಸವಾಗಿದ್ದು ಪ್ರತಿದಿನ ಉಡುಪಿಗೆ ಸ್ಕೂಲಿಗೆ ಹೋಗುತ್ತಿದ್ದುದರಿಂದ,ನಮ್ಮ ಬಳಿ ಸಾಕಷ್ಟು ಲಗೇಜು ಇರುತ್ತಿತ್ತು.. ನಿರಂತರ ಸುರುಯುವ ಮಳೆಗೆಂದು ರೈನ್ಕೋಟು, ಛತ್ರಿ, ಶಾಲೆಯ ಪುಸ್ತಕಗಳು ಹಾಗೂ ಊಟದ ಪರಿಕರಗಳು. ಇವನ್ನೆಲ್ಲಾ ಹೊತ್ತು ಬಸ್ಸಿನಲ್ಲಿ ತೂರಿ ಶಾಲೆ ತಲುಪುವಲ್ಲಿ ಅಕ್ಕನ ಮಾತು ಕೇಳದೆಯೇ ತಪ್ಪಿಸಿಕೊಂಡರೆಂಬ ಭಯ ನನಗೆ.


ಆಗ ಅಕ್ಕ ಸಿನೇಮಾಕ್ಕೆ ಹೋಗಬೇಕೆಂದರೆ ನಾನು ಬಾಲಂಗೋಚಿಯಾಗಿ ಹೋಗುವುದು ಅನಿವಾರ್ಯ. ನನ್ನ ದೊಡ್ಡಪ್ಪಂದಿರ ಮಕ್ಕಳ ಜೊತೆ ಅಕ್ಕ, ಅವರ ಬಾಲಂಗೋಚಿಯಾಗಿ ನಾನು. ಇಂಟರ್ವೆಲ್ ನಲ್ಲಿ ಅವರೆಲ್ಲಾ ಕೊಕಾ ಕೋಲಾ (ಆಗ ಕೋಕ್ ಬೆಲೆ ೬೦ ಪೈಸೆ)ಕುಡಿದರೆ ಅದು ಇಷ್ಟವಿಲ್ಲದ ನನಗೆ ಪ್ಯಾರೀಸ್ ನ ಗಟ್ಟಿ ಟಾಫಿ (ಬೆಲೆ ೧೦ ಪೈಸೆ). ಅಲ್ಲೂ ನನಗೆ ಸಲ್ಲಬೇಕಾದ ಮೊಬಲಗು ಸಲ್ಲುತ್ತಿರಲಿಲ್ಲ. ಸ್ಕೂಲಿನಲ್ಲಿ ವಾರ್ಷಿಕ ಆಟೋಟದ ದಿನದಲ್ಲಿ ಕಪ್ಪೆ ರೇಸ್ ನಲ್ಲಿ ನಾನು ಭಾಗವಹಿಸಿದ್ದೆ. ರೇಸ್ ಪ್ರಾರಂಭಿಸಲು ಸೀಟಿ ಊದಿದ ನಂತರ ಎಲ್ಲರೂ ಕುಪ್ಪಳಿಸುವದನ್ನು ಪ್ರಾರಂಭಿಸಿದರೂ ನಾನು ಅಲ್ಲೇ ಅಕ್ಕನ ಪರವಾನಗಿಗಾಗಿ ಕಾಯುತ್ತಿದ್ದೆ. ನಾನು ಕುಪ್ಪಳಿಸುವ ವೇಳೆಗೆ, ಎಲ್ಲರೂ ವಾಪಸ್ಸಗಿದ್ದರು..


ಮುಂದಿನ ತರಗತಿಗಳ ಅಭ್ಯಾಸ ನನಗೆ ಬೆಂಗಳೂರಿನಲ್ಲಿ. ಶಾಲೆಯ ಕ್ರಿಕೆಟ್ ಟೀಮ್ ಸೇರಬೇಕೆಂದು ನನ್ನ ಆಸೆ. ಎದುರು ಮನೆಯ ಕೃಷ್ಣಪ್ರಸಾದ ಯಾವಾಗಲೂ ಆಟೋಟಗಳಲ್ಲಿ ಮುಂದು. ನಾನೂ ಕ್ರಿಕೆಟ್ ಸೇರಲು ಬಹಳಷ್ಟು ಪೈರವೀ ನಡೆಸಿದೆ. ಆದರೆ ಟೀಮ್ ಸೇರಲು ಇಲ್ಲವೇ ನಾನೊಂದು ಬ್ಯಾಟನ್ನು ಪ್ರತಿದಿನ ಶಾಲೆಗೆ ಒಯ್ಯಬೇಕಿತ್ತು (ಅರ್ಥಾತ್ ನನ್ನ ಬಳಿ ರಿಸೋರ್ಸಸ್ ಇರಬೇಕಿತ್ತು) ಇಲ್ಲ ಒಳ್ಳೆಯ ಆಟಗಾರನಾಗಬೇಕಿತ್ತು.. ಎರಡೂ ಇಲ್ಲದ ನಾನು ನನ್ನ ಕ್ಲಾಸಿನ 'ಬಿ' ಟೀಮಿನ ಹನ್ನೆರಡನೆಯ ಖಿಲಾಡಿಯಾಗಿ ಸೇರಿಕೊಂಡೆ-- ಗಮನಿಸಿ, ಇದು ನನ್ನ ಕ್ಲಾಸಿನ ಬಿ ಟೀಮ್... ಶಾಲೆಯದ್ದಲ್ಲ. ನಲವತ್ತು ಜನರ ಕ್ಲಾಸಿನಲ್ಲಿ ಹದಿನೈದು ಹುಡುಗಿಯರಿದ್ದರೆಂದು ಇಟ್ಟುಕೊಂಡರೆ ನಾನು ಕೆಳಗಿನಿಂದ ಮೂರನೆಯವನಾಗಿದ್ದೆ (ಅಲ್ಲೂ ಕೆಳಗಿನಿಂದಲೂ ಪ್ರಥಮ ಸ್ಥಾನ ಗಿಟ್ಟಿಸುವ ಭಾಗ್ಯ ನನಗಿರಲಿಲ್ಲ).


ಬಹುಶಃ ನನ್ನ ಟ್ಯಾಲೆಂಟು ದೈಹಿಕ ಚಟುವಟಿಕೆಗಳಲ್ಲಿರಲ್ಲವೇನೊ ಅಂದುಕೊಂಡು ನಾನು ಫೈನ್ ಆರ್ಟ್ ಕಡೆಗೆ ಗಮನ ಕೊಡಲು ಪ್ರಾರಂಭ ಮಾಡಿದೆ. ಮೊದಲು ಸಂಗೀತದ ಕ್ಲಾಸಿಗೆ ಸೇರಿದೆ -- ಬಚ್ಚಲುಮನೆಯಲ್ಲಿ ಅಕಸ್ಮಾತ್ ಹಾಡಿದರೆ ನನ್ನ ಧ್ವನಿಯನ್ನು ಕೇಳಿ ನಾನೇ ಬೆಚ್ಚಿಬೀಳುವಂಥ ಅಮರೀಶ್ ಪುರಿಯ ಧ್ವನಿಯಿದ್ದ ನನಗೆ ಈ ಪ್ರಯೋಗ ಹೆಚ್ಚು ಸಫಲತೆಯನ್ನು ನೀಡಲಿಲ್ಲ. ನಂತರ ಕೊಳಲು ಬಾರಿಸಲು ಕಲಿಯುವುದೆಂದು ನಿರ್ಧಾರಿತವಾಯಿತು. ಆದರೆ ಕೆಲವೇ ದಿನಗಳಲ್ಲಿ ಅದನ್ನೂ ಬಿಟ್ಟುಕೊಡಬೇಕಾಯಿತು. ಯಾಕೆಂದು ನಾನು ಹೇಳುವುದಕ್ಕಿಂತ ಆಗ ಅಲ್ಲಿದ್ದ, ಮಾತನಾಡುವುದನ್ನು ಆಗಷ್ಟೇ ಕಲಿಯುತ್ತಿದ್ದ ನನ್ನ ಸೋದರತ್ತೆಯ ಮಗನ ಮಾತುಗಳೇ ಸಾಕು: “ಮೆಸ್ತ್ರು ಫೂಟ್ ಬಾರಿಸೋ ಶೀರಾಮ ಅಂದ್ರು. ಅವನು ಊದಿದ. ಫೂತ್ ನಾಯಿಮರಿ ಕಿಲುಚ್ಕೊಂಡಂಗೆ ಕಿಲುಕ್ಚೊಂಬಿಡ್ತು"


ಸ್ವಲ್ಪದಿನ ನಾನು ತಬಲಾ ಕಲಿತೆ. ಆದರೆ ನಾನೆ ಜಾಕಿರ್ ಹುಸೇನ್ ಆಗುವ ಮೊದಲೇ ಅಪ್ಪನಿಗೆ ಬೆಂಗಳೂರಿನಿಂದ ಮೈಸೂರಿಗ ವರ್ಗವಾಯಿತು. ರೂಪಾಯಿ ಅರವತ್ತಕ್ಕೆ ಕೊಂಡ ತಬಲಾವನ್ನು ಆರು ತಿಂಗಳು ಉಪಯೋಗಿಸಿ ಅಷ್ಟಕ್ಕೇ ಮಾರಿದ್ದು ನನ್ನ ದೊಡ್ಡ ಸಾಧನೆಯಾಗಿತ್ತು. ಬಹುಶಃ ಬಿಸನೆಸ್ ಮ್ಯಾನೇಜ್ಮೆಂಟಿನಲ್ಲಿ ನನಗಿರಬಹುದಾದ ಟ್ಯಾಲೆಂಟಿಗೆ ಅದು ಏಕಮಾತ್ರ ಪುರಾವೆಯಿದ್ದೀತು.


ಈ ಮಧ್ಯ ಅಪ್ಪ ನನಗೆ ಒಂದು ಪುಟ್ಟ ಚೆಸ್ ಬೋರ್ಡು ಕೊಡಿಸಿದರು. ಫೈನ್ ಆರ್ಟ್ ಇಲ್ಲವಾದರೇನು ಬಹುಶಃ ಬೌದ್ಧಿಕ ಚಟುವಟಿಕೆಯಲ್ಲಿ ನನ್ನ ಟ್ಯಾಲೆಂಟಿರಬಹುದೇನೋ ಅಂತ ಪರೀಕ್ಷಿಸುವ ಸಮಯ ಬಂದಿತ್ತೆನ್ನಿಸುತ್ತದೆ. ಸ್ವಲ್ಪದಿನ ನಾನು ಚೆಸ್ ಆಡಿದೆ.ಅಂಥ ಸೀರಿಯಸ್ಸಾಗಿ ಅದನ್ನ ಕೈಗೆತ್ತಿಕೊಳ್ಳಲಿಲ್ಲವಾದರೂ ನಾನು ನನ್ನ ಗೆಳೆಯನಿಗೆ ಚೆಸ್ ಕಲಿಸುವ ಮಟ್ಟಿಗಾದೆ. ನನ್ನ ಖಾಸಂಖಾಸ್ ಗೆಳೆಯ ಮುರಳಿ ತನ್ನ ಹೊಸ ಚೆಸ್ ಬೋರ್ಡನ್ನು ಕೊಂಡಾಗ ಅವನಿಗೆ ಕಾಯಿಗಳನ್ನು ಯಾವ ದಿಕ್ಕಿನಲ್ಲಿ ಚಲಾಯಿಸಬೇಕೆಂದು ಹೇಳಿಕೊಟ್ಟೆ. ಒಂದು ಆಟ ಆಡೋಣವೇ ಅಂದ... ಮೊದಲ ಆಟದಲ್ಲೇ ನಾನು ಚೆಕ್ ಮೇಟ್ ಆಗಿದ್ದೆ!


ಹೈಸ್ಕೂಲಿಗೆ ಬಂದಾಗ -- ಎಂಟನೆಯ ತರಗತಿಯಲ್ಲಿ ನಾನು ತರಗತಿಯ ನಾಯಕನಾಗಲು ಮೊದಲ ಬಾರಿಗೆ ಚುನಾವಣೆಗೆ ನಿಂತೆ.ಸುಮಾರು ನೂರು ಜನರಿದ್ದ ತರಗತಿಯಲ್ಲಿ ಹದಿನೈದು ವೋಟುಗಳು ನನಗೆ ಬಿದ್ದುವು. ಆದರೂ ಸಮಧಾನದ ವಿಷಯವೆಂದರೆ ನನ್ನ ಮುಂದೆ ಇಬ್ಬರಿದ್ದರೂ (ಅವರು ನಾಯಕ, ಉಪನಾಯಕರಾಗಿ ನಿಯಮಿಸಲ್ಪಟ್ಟರು) ನನ್ನ ಹಿಂದೆಯೂ ಇಬ್ಬರಿದ್ದು ನಾನು ನಡುಮಧ್ಯದಲ್ಲಿದ್ದೆ.


ನನ್ನ ಜೀವನದ ಮೊದಲ ಸಾಧನೆ ಹತ್ತನೆಯ ತರಗತಿಯಿಲ್ಲಿ ಕಾಣಿಸಿತು. ನಮ್ಮ ಶಾಲೆಯ ವಾರ್ಷಿಕ ಸಂಚಿಕೆಗೆ ನಾನು ವಿದ್ಯಾರ್ಥಿ ಸಂಪಾದಕನಾದೆ. ಇದರಲ್ಲಿ ನನ್ನ ಸಾಧನೆಯೇನೂ ಇರಲಿಲ್ಲ. ನಾನು ಟ್ಯೂಷನ್ ಗೆ ಹೋಗುತ್ತಿದ್ದ ನಮ್ಮ ಕ್ಲಾಸ್ ಮಾಸ್ತರು ಅನಂತಪದ್ಮನಾಭಾಚಾರ್ ನಮ್ಮ ಮನೆಯ ಬಳಿಯಿದ್ದು, ನಾನು ಅವರ ಶಾಲೆಯ (ಆಮ್) ವಿದ್ಯಾರ್ಥಿಯಲ್ಲದೇ, ಮನೆಯ (ಖಾಸ್)ವಿದ್ಯಾರ್ಥಿಯಾದ್ದರಿಂದ ಈ ಗೌರವ ನನಗೆ ಸಂದಿತ್ತು. ಇದರಲ್ಲಿ ಸ್ಫರ್ಧೆಯಿರಲ್ಲಿಲ್ಲ. ಸಂಚಿಕೆಗೆ ನಮ್ಮಪ್ಪ ಒಂದು ಲೇಖನವನ್ನು ನನ್ನ ಹೆಸರಿನಲ್ಲಿ ಬರೆದು ಕೊಟ್ಟಿದ್ದರು.

ಕಾಲೇಜಿನಲ್ಲಿ ನನ್ನದು ಹೇಳಿಕೊಳ್ಳುವಂಥ ಸಾಧನೆಗಳೇನೂ ಇರಲಿಲ್ಲ. ಸಾಧಿಸಲು ನಾನು ಕಾಲೇಜಿಗೆ ಹೋಗಬೇಕಿತ್ತಷ್ಟೆ? ಆದರೆ ಚಾಮರಾಜಪೇಟೆಯ ನಮ್ಮ ಮನೆಯಿಂದ ಮಲ್ಲೇಶ್ವರದಲ್ಲಿರುವ ನಮ್ಮ ಕಾಲೇಜಿನ ನಡುಮಧ್ಯದಲ್ಲಿ ಮೆಜೆಸ್ಟಿಕ್ ಬರುತ್ತಿದ್ದದ್ದು, ಅಲ್ಲಿ ಹದಿನೈದು ಥಿಯೇಟರುಗಳಿದ್ದದ್ದು ನನ್ನ ತಪ್ಪೇ? ಆದರೆ ಇಷ್ಟು ಮಾತ್ರ ನಿಜ... ಜೇಬಿನಲ್ಲಿ ದುಡ್ಡಿಲ್ಲದೇ ಮೆಜೆಸ್ಟಿಕ್ ನಲ್ಲಿ ನಿಲ್ಲಲು ಸಾಧ್ಯವಾಗದ ಪ್ರತಿಯೊಂದು ದಿನವೂ ನಾನು ತಪ್ಪದೇ ಕಾಲೇಜಿಗೆ ಹೋಗಿದ್ದೆ. ಕಾಲೇಜಿನಲ್ಲಿ ಸುರೇಶನೆಂಬ ಗೆಳೆಯನಿದ್ದ. ಅವನು ಅದ್ಭುತವಾಗಿ ಕನ್ನಡದಲ್ಲಿ ಬರೆಯುತ್ತಿದ್ದ. ಅವನ ಬರವಣಿಗೆಯನ್ನು ಕಾಲೇಜಿನ ಗೋಡೆಪತ್ರಿಕೆಯಲ್ಲಿ ಹಚ್ಚುತ್ತಿದ್ದು ಅವನು ಕಾಲೇಜಿನಲ್ಲಿ ಸಾಕಷ್ಟು ಖ್ಯಾತನಾಗಿದ್ದ. ನಾನು ಕನ್ನಡದ ವಿದ್ಯಾರ್ಥಿಯಲ್ಲ, ನನ್ನ ಸಬ್ಜೆಕ್ಟು ಸಂಸ್ಕೃತವಾಗಿತ್ತು. ಆದರೂ ಸುರೇಶನ ಸುತ್ತಮುತ್ತ ಓಡಾಡುತ್ತಾ, ಅವನ ಜೊತೆ ಸೇರಿ ಏನಾದರೊಂದು ಆಗಾಗ ಬರೆಯುತ್ತಿದ್ದುದರಿಂದ ನಾನು ಕನ್ನಡ ವಿಭಾಗದಲ್ಲಿ ಪರಿಚಿತನಾಗಿದ್ದೆ.ಹೀಗಾಗಿ ಕಾಲೇಜಿನ ಕನ್ನಡ ಸಂಘಕ್ಕೆ ಕಾರ್ಯದರ್ಶಿಯನ್ನು ನಿಯಮಿಸುವ ಸಮಯ ಬಂದಾಗ ಮೇಷ್ಟ್ರು ಸುರೇಶನನ್ನು ಕೇಳಿದರು.ಅವನು ಕಾರ್ಯದರ್ಶಿಯಾಗಲು ಒಪ್ಪಲಿಲ್ಲವಾದ್ದರಿಂದ ಪಕ್ಕದಲ್ಲಿದ್ದ ನನಗೆ ಆ ಕೆಲಸ ಹಚ್ಚಲಾಯಿತು. ಮಿಕ್ಕ ಎಲ್ಲ ಹುದ್ದೆಗಳೂ ಚುನಾಯಿತ ಹುದ್ದೆಗಳಾಗಿದ್ದವು. ನಾನು ಸ್ಪರ್ಧಿಸುವ ಧೈರ್ಯ ಮಾಡಿರಲಿಲ್ಲ. ಆದ್ದರಿಂದ, ಈ ಹುದ್ದೆಯೂ ನಾನು ಸಂಪಾದಿಸಿದ್ದಲ್ಲವೆಂದಾಯಿತು. ಅದೇ ವರ್ಷ ನಾನು ಕಾಲೇಜಿನ ವಾರ್ಷಿಕ ಸಂಚಿಕೆಯ ಸಂಪಾದಕ ಮಂಡಳಿಗೆ ಆಯ್ಕೆಯಾದೆ. ಇದು ಮಾತ್ರ ನಾನು ಸಂಪಾದಿಸಿದ್ದೆನ್ನಬಹುದು - ಇದಕ್ಕೆ ನಮ್ಮ ಬರವಣಿಗೆಯ ನಮೂನೆಗಳನ್ನು ಸಲ್ಲಿಸಬೇಕಾಗಿತ್ತು. ಆ ವೇಳೆಗೆ ನನ್ನ ಒಂದೆರಡು ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರಿಂದ ನಾನೇ ಆಯ್ಕೆಯಾಗುವೆನೆಂಬ ಹುಂಬ ಖಾತ್ರಿ ನನಗಿತ್ತು.. ಆದರೆ ಆಶ್ಚರ್ಯವೆಂದರೆ, ಇದೇ ರೀತಿ ತಮ್ಮ ಬರವಣಿಗೆಯ ಆಧಾರದ ಮೇಲೆ ಆಯ್ಕೆಯಾದವರು ಒಬ್ಬಿಬ್ಬರಲ್ಲ -- ಐದು ಮಂದಿ! (ಅವರ ಮಧ್ಯ ಸಿಹಿಕಹಿ ಚಂದ್ರು ಕೂಡಾ ಇದ್ದ ಎಂಬುದು ಮುಖ್ಯವಲ್ಲದ ಆದರೆ ನನಗೆ ಮಹತ್ವದ ಮಾತು)...


ಕಾಲೇಜು ಬಿಟ್ಟನಂತರ ನಾನು ಕಥೆಬರೆಯುವ ಕಾಯಕವನ್ನು ಮುಂದುವರೆಸಿದೆ, ಅದರ ಜೊತೆಗೇ ಕಥಾಸ್ಫರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಪ್ರಜಾವಾಣಿ ಸ್ಫರ್ಧೆಯಲ್ಲಿ ಸತತ ಭಾಗವಹಿಸಿದ್ದಕ್ಕೆ ಬಂದದ್ದು - ಎರಡನೆಯ ಬಹುಮಾನ, ಮತ್ತು ಕೆಲ ಸಮಾಧಾನಕರ ಬಹುಮಾನಗಳು. ಗುಲಬರ್ಗಾ ವಿಶ್ವವಿದ್ಯಾನಿಲಯದವರು ಜಯತೀರ್ಥ ರಾಜಪುರೋಹಿತರ ಹೆಸರಿನಲ್ಲಿ ಒಂದು ಕಥಾಸ್ಫರ್ಧೆ ಮಾಡಿದರೆ, ಅದರಲ್ಲೂ ಎರಡನೆಯ ಬಹುಮಾನ. ಕ್ಲಾಸಿನಲ್ಲಿ ನಾನು ಪಡೆದ ಅತ್ಯುನ್ನತ ರಾಂಕ್ ಮೂರನೆಯದು(ಸಾಮಾನ್ಯವಾಗಿ ಹತ್ತರಿಂದ ಇಪ್ಪತ್ತೈದರ ನಡುವೆ ಇರುತ್ತಿದ್ದೆ). ಕಾಲೇಜಿನಲ್ಲಿ ಒಂದು ವರ್ಷ ಫರ್ಸ್ಟ್ ಕ್ಲಾಸ್ ಬಂದರೆ ಮುಂದಿನ ವರ್ಷ ಸೆಕೆಂಡು - ರಾಂಕಿನ ಪ್ರಶ್ನೆ ಕನಸಿನ ಮಾತು...... ನನ್ನ ಕಥಾಸಂಕಲನ "ಮಾಯಾದರ್ಪಣ"ದ ಹಸ್ತಪ್ರತಿಯನ್ನು ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿಗಾಗಿ ಕಳಿಸಿದಾಗ ನನಗೆ ಬಹುಮಾನ ಬಂತು.. ಆದರೆ ನನ್ನ ಜೊತೆಯಲ್ಲಿ "ಕಂಧೊಂಸೆ ಕಂಧೆ ಮಿಲ್ತೇ ಹೈ" ಅಂತ ಈ ಪ್ರಶಸ್ತಿಯನ್ನು ಹಂಚಿಕೊಂಡು ನಿಂತಿದ್ದವರು ಭಾಗೀರಥಿ ಹೆಗಡೆ ಮತ್ತು 'ಪ್ರಭಾ' (ಎಚ್. ಗೋಪಾಲಕೃಷ್ಣ)


ಹೀಗೆ ಎಂದಿಗೂ ಫರ್ಸ್ಟ್ ಬರದ ನನಗೆ ಇದ್ದಕ್ಕಿದ್ದ ಹಾಗೆ "ಅತ್ಯುತ್ತಮ ಕನ್ನಡ ಇಂಡಿಕ್ ಬ್ಲಾಗ್ ಪ್ರಶಸ್ತಿ" ಬಂದಿದೆಯೆಂಬ ಸುದ್ದಿ ಕೇಳಿ ಎಷ್ಟು ಖುಶಿಯಾಗಿರಬೇಕು ಯೋಚಿಸಿ! ಪ್ರಶಸ್ತಿಗೆ ನಾನು ನಾಮಿನೇಟ್ ಆಗಿದ್ದೆ ಎಂಬ ಸುದ್ದಿಯೂ ನನಗೆ ತಿಳಿದಿರಲ್ಲಿಲ್ಲ. ಸಂಪದದಲ್ಲಿಶ್ರೀನಿಧಿ ಎಂಬವರು ಬರೆದಾಗ ಪುಳಕಿತಗೊಂಡೆ. ಅವರು ಸಂಪದದಲ್ಲಿ ಈ ಮಾತು ಬರೆದರು:


"ಅತ್ಯುತ್ತಮ ಕನ್ನಡ ಬ್ಲಾಗ್

ಈ ಬಾರಿಯ ಅತ್ಯುತ್ತಮ ಕನ್ನಡ ಇಂಡಿಕ್ ಬ್ಲಾಗ್ ಪ್ರಶಸ್ತಿ ಶ್ರೀರಾಮ್ ಅವರ "ಕನ್ನದವೇ ನಿತ್ಯ" ಬ್ಲಾಗಿಗೆ ಬಂದಿದೆ. ಇವರಗಳಿಗೆ ಕೆಳಗಿರುವ ಕೊಂಡಿ ನೊಡಬಹುದು.
http://indibloggies.org/results-2005


ಸರಿ ಖುಶಿಯಿಂದ ಫಲಿತಾಂಶಗಳಿದ್ದ ಕೊಂಡಿಯನ್ನರಸಿ ಹೊರಟೆ. ನನಗೆ ದೊರಕಿದ್ದು ಈ ಪದಕ.




ಹಾಗೂ ನನ್ನ ಬ್ಲಾಗಿಗೆ ಬಂದ ವೋಟುಗಳ ಸಂಖ್ಯೆ ಇದು.



ಶ್ರೀನಿಧಿಯವರ ಸಂದೇಶಕ್ಕೆ ಹೆಚ್.ಪಿ.ನಾಡಿಗ್ ಬರೆದ ಪ್ರತಿಕ್ರಿಯೆ ಇದು.


ಅರ್ಥವಿಲ್ಲದ ಅವಾರ್ಡು

ಅರ್ಥವಿಲ್ಲದ ಅವಾರ್ಡು, ಕಣ್ರೀ ಅದು. ಅವರು ಈ ಅವಾರ್ಡು ನಡೆಸಿದ ರೀತಿ ನೋಡಿದ್ರೆ ಅದಕ್ಕೆ ಒಂದಷ್ಟು ಪ್ರಾಮುಖ್ಯತೆ ಕೊಡುವುದೂ ನಿರರ್ಥಕ.

ಈ‌ ಅವಾರ್ಡು ನಡೆಸಿದವ ಕೆಲ ದಿನಗಳ ಹಿಂದೆ ಶ್ಯಾಮ್ ಕಶ್ಯಪ್ ರವರಿಗೆ ಬರೆದಿದ್ದ ಪತ್ರ ಅವರ ಮೂಲಕ ನನಗೂ ತಲುಪಿತ್ತು. ಅವರ ಕನ್ನಡ judgeಗೆ nominate ಮಾಡಲು ಕನ್ನಡ ಬ್ಲಾಗುಗಳೇ ಸಿಕ್ಕಿರಲಿಲ್ಲವಂತೆ! (ಮಾರಾಯನಿಗೆ ಕನ್ನಡ ಬ್ಲಾಗುಗಳೂ ಇವೆಯೆಂಬುದು ತಿಳಿದಿತ್ತೋ ಇಲ್ವೊ!) ಕೊನೆಗೆ ಶ್ಯಾಮ್ ರವರೇ ಶ್ರೀರಾಮ್ ರವರ ಬ್ಲಾಗನ್ನ, ಸಂಪದದಲ್ಲಿರುವ ಓ ಎಲ್ ಎನ್ ರವರ ಬ್ಲಾಗನ್ನ, ಇಸ್ಮಾಯಿಲ್ ರವರ ಬ್ಲಾಗನ್ನ nominate ಮಾಡಿದ್ರು.

ಪಬ್ಲಿಕ್ ಪೋಲ್ ನಡೆಸಿ ಕೊಡೋ ಅವಾರ್ಡುಗಳು ಎಷ್ಟು ಅರ್ಥಪೂರ್ಣವೆಂಬುದು ಎಲ್ಲರಿಗೂ ತಿಳಿದ ವಿಷಯವೇ. (Indian Idolನ ಪಬ್ಲಿಕ್ ಎಸ್ ಎಮ್ ಎಸ್ ಪೋಲ್ ಮಾಡಿರುವ ರಗಳೆ ಬಗ್ಗೆ ನ್ಯೂಸ್ ಕೇಳಲಿಲ್ಲವಾ?) ಅದೇನೆ ಇರಲಿ, ಸೈಟು ತುಂಬ ads ತುರುಕಿಕೊಂಡು ಕೊನೆಗೆ ಡೊನೇಶನ್ ಕೂಡ ತೆಗೆದುಕೊಳ್ಳುತ್ತಿರುವ ಈ ಅವಾರ್ಡು ನನಗೆ ಬೇರೇನನ್ನೋ ತಿಳಿಸುತ್ತಿದೆ.

ಅವಾರ್ಡುಗಳನ್ನು ಪಡೆಯುವವರ recognitionಗೆ ಅವಾರ್ಡುಗಳಿದ್ದಾಗ, ಒಂದು ತರಹ ಚೆನ್ನಾಗಿರುತ್ತೆ. ಆದರೆ ಅವಾರ್ಡು ಕೊಡುವವರು ತಮಗಾಗಿ spotlight ಹಾಗೂ attention ಸೃಷ್ಟಿಸಿಕೊಳ್ಳುವ ಸಾಧನವನ್ನಾಗಿ ಅವಾರ್ಡನ್ನು ಉಪಯೋಗಿಸಿಕೊಂಡಾಗ, ಅಥವಾ ದುಡ್ಡು ಮಾಡಿಕೊಳ್ಳುವ ರೀತಿ ಕಂಡುಕೊಂಡಾಗ ಅವಾರ್ಡು ನೀರಸವಾಗಿ ಕಾಣತ್ತೆ.


ಅದಕ್ಕೆ ಶ್ರೀನಿಧಿಯವರ ಪ್ರತಿಕ್ರಿಯೆ ಇದು.

ನಿಜ

ಸ್ವಲ್ಪ publicity stunt ಥರ ಕಾಣಿಸಿತು. ಆದರೆ ಅದರ ಹಿಂದಿರುವ ರಾಜಕಾರಣ ತಿಳಿದಿರಲಿಲ್ಲ. ನೆನ್ನೆ ಒಂದು ಬ್ಲಾಗ್ ನೊಡುತ್ತಿರುವಾಗ ಸಿಕ್ಕ ಕೊಂಡಿ. ಹಾಗೇ ಸಂಪದದಲ್ಲಿ ಹಾಕಿದೆ.


ಶ್ಯಾಮ್ ಈ ಸಂದೇಶವನ್ನ ನನಗೆ ಕಳಿಸಿದರು.

ನಿಮ್ಮ ಬ್ಲಾಗಿಗೆ indianbloggies.org ನ 'ಕನ್ನಡದ ಅತ್ಯುತ್ತಮ ಬ್ಲಾಗ್' ಬಿರುದು ಲಭಿಸಿದೆ. ಇದರ ಕೊಂಡಿ ಇಲ್ಲಿದೆ:http://indibloggies.org/results-2005
ಅಭಿನಂದನೆಗಳು!


ಇದಲ್ಲದೆಯೇ ಈ ಅವರ್ಡುಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸಿದಾಗ ಸಿಕ್ಕ ಕೊಂಡಿ, ಮತ್ತು ಮಾತುಗಳು ಇವು.

Y'know Suze, it sure is easy.

There's a poll for best Indiblog. First things first, there's a jury selected. A certain man with a widely read blog volunteers for the job.

Not a prob, babe, not at all. The prob, hey, that comes later. Watch.

Then the man nominates his own blog for the award. Yep, it's pretty darned sure he would get nominated anyway, seeing as how he runs a popular blog. (And someone else did nominate him). But check the 2005-12-20 entry here: the man was the first to nominate his own blog, just two days after nominations began.

I'm like, how desperate does a man get? I'm like, should a juror not have the sense not to nominate himself to a list he judges?

(I'm like, should a blogger who won the thing last year not withdraw anyway?)

And then he actually tells his readers, not once but twice, vote for me, give me some of that love back. (Just as he did last year).

And I'm like, hey, is it any surprise that this man -- the one-time winner who lacks the grace to withdraw, the juror who nominates himself, the man who must go about asking for votes -- is it any surprise that he wins?

Such a thing as the spirit of a contest, Suze. Oooh yeah.



ಮೊದಲ ಬಾರಿಗೆ ಪಪ್ಪು ಪಾಸ್ ಹೋ ಗಯಾ... ಕುಛ್ ಮೀಠಾ ಹೋ ಜಾಯೆ???



Tuesday, June 17, 2008

ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಕೋಪ ತಾಪ


ಈಚೆಗೆ ವಾರ್ತೆಗಳನ್ನು ಕೇಳುವುದು, ನೋಡುವುದು, ಓದುವುದು ಎಲ್ಲ ಹಿಂಸೆಯುಂಟುಮಾಡುತ್ತದೆ. ಪ್ರೀತಿ ನಿಷ್ಕಾರಣವಾಗಿರಬೇಕು, ದ್ವೇಷ ಸಕಾರಣವಾಗಿರಬೇಕು ಅಂತ ಜಯಂತ ಕಾಯ್ಕಿಣಿ ಹಿಂದೆ ಒಮ್ಮೆ ಜನಪರ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದರು. ಇದನ್ನೇ ಕೇಳಿಸಿಕೊಂಡಿರಬಹುದಾದ ಫಿಲಿಪೀನ್ಸ್ ದೇಶದ ಯುವಕ ಕಂಪ್ಯೂಟರ್ ವೈರಸ್ ಪ್ರೋಗ್ರಾಂ ಬರೆದು, ಅದಕ್ಕೆ ಐಲವ್ಯೂ ಅಂತ ಹೆಸರುಟ್ಟು ಜಗತ್ತಿನ ಮೇಲೆ ಛೂ ಬಿಟ್ಟ. ನಿಷ್ಕಾರಣ ಪ್ರೀತಿ ಅರಸಿ ಹೊರಟ ನನ್ನಂತಹ ಕೆಲವರು ಹಲವು ದಿನ ನಿದ್ದೆಗೆಟ್ಟು ಸಕಾರಣವಾಗಿಯೇ ಅವನನ್ನ ದ್ವೇಷಿಸತೊಡಗಿದ್ದೇವೆ. ಇರಲಿ.

ಕೋಪಕ್ಕೆ ಕಾರಣವೇನು? ಏನೂ ಇರಬೇಕಿಲ್ಲ. ನಾವುಗಳು ಯಾರ ಮೇಲೆ ಪೈಪೋಟಿ ನಡೆಸುತ್ತಿದ್ದೇವೆ, ಯಾರ ಮೇಲೆ ಯಾಕೆ ಕೆಂಡ ಕಾರುತ್ತಿದ್ದೇವೆ, ಏನನ್ನ ಹುಡುಕಿ ಹೊರಟಿದ್ದೇವೆ ಅನ್ನೋದು ಒಮ್ಮೊಮ್ಮೆ ಅರ್ಥವಾಗದೇ ನಾನು ಕಕ್ಕಾಬಿಕ್ಕಿಯಾಗುವುದು ಉಂಟು. ಕಳೆದ ವರ್ಷ ಜಿಕೆ ಗೋವಿಂದರಾಯರು ಅನಂತಮೂರ್ತಿಯವರ ಮೇಲೆ ಸಿಟ್ಟಾಗಿ ಪ್ರತಿಭಟನೆ ಇತ್ಯಾದಿ ಮಾಡಿದರು. ಕಾರಣ: ಡಾಲರ್ ಕಾಲನಿಯಲ್ಲ ಜೆ.ಎಚ್.ಪಟೇಲರ ಸಹಕಾರದೊಂದಿಗೆ ಅವರು ಕಡಿಮೆ ದರದಲ್ಲಿ ಮನೆ ಪಡೆದರು ಅಂತ. ಕೋಪ ಮಾಡಿಕೊಂಡವರು ಗೋವಿಂದರಾಯರು ಮಾತ್ರ ಅಲ್ಲ, ಜೊತೆಗೆ ಇನ್ನಷ್ಟು ಜನ. ಯಾಕೆ ಅನಂತಮೂರ್ತಿಯವರ ಮೇಲೆಯೇ ಕೋಪ? ಅನೇಕ ಜನರಿಗೆ ಈರೀತಿಯ ಮನೆಗಳು ಅಲಾಟ್ ಆಗಿರಬಹುದಲ್ಲ? ತಮಗೆ ಮನೆ ಅಲಾಟ್ ಆಗಲಿಲ್ಲ ಎಂಬ ಹೊಟ್ಟೆಯುರಿಯೇ - ಛೆ ಛೆ - ಖಂಡಿತವಾಗಿಯೂ ಇರಲಾರದು. ಕಾರಣ ಹುಡುಕ ಹೊರಟರೆ ನಮ್ಮಂತರಂಗದಲ್ಲೇ ಸಿಗುತ್ತದೆ. ಕನ್ನಡದ ಪ್ರಮುಖ ಲೇಖಕರು, ಜ್ಞಾನಪೀಠಾರೂಢರಾದ ಅನಂತಮೂರ್ತಿಯವರ ಬಗ್ಗೆ ನಮಗೆಲ್ಲ ಕೆಲವು ನಿರೀಕ್ಷೆಗಳಿರುತ್ತವೆ - ಆ ನಿರೀಕ್ಷೆಗೆ ತಕ್ಕಂತೆ ಅವರು ನಡೆದುಕೊಳ್ಳದಿದ್ದಾಗ ನಮಗೆ ದುಃಖ ಸಿಟ್ಟು ಬರುವುದು ಸಹಜ. ಅಂದರೆ ಬಹುಶಃ ಸಾರ್ವಜನಿಕರಾದ ವ್ಯಕ್ತಿಗಳಿಗೂ ಸಾಧಾರಣ ಜನಕ್ಕೂ ನಾವು ಬೇರೆ ಬೇರೆ ಮಾನದಂಡಗಳನ್ನ ಇಟ್ಟುಕೊಂಡಿದ್ದೇವೆಂದು ಆಯಿತು. ಸಾರ್ವಜನಿಕ ವ್ಯಕ್ತಿಗಳಿಗೆ ಸಾಧಾರಣ ವ್ಯಕ್ತಿಗಳು ಮಾಡಬಹುದಾದ ಚೇಷ್ಟೆಗಳು ನಿಷಿದ್ಧ. ಮೇಷ್ಟರ ಕೆಲಸ ಮಾಡುವ ನನಗೂ ಇದು ಅನೇಕ ಬಾರಿ ಅನುಭವಕ್ಕೆ ಬಂದಿದೆ.

ಆದರೆ ಕಲವು ಘಟನೆಗಳಿಗೆ ಇಂಥಹ ವಿವರಣೆಯನ್ನ ಕೊಡಲಿಕ್ಕೆ ಸಾಧ್ಯವೇಯಿಲ್ಲ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಒಂದು ಪುಟ್ಟ ಹುಡುಗಿಯನ್ನ ಕಲ್ಲು ತೂರಿ ಕೊಂದರಂತೆ. ಕಾರಣ ಯಾರಿಗೂ ಗೊತ್ತಿಲ್ಲ. ದೆಹಲಿಯಲ್ಲಿ ಮುಂದೆ ಹೋಗಲು ಸೈಡ್ ಕೇಳುವುದಕ್ಕೆ ಒಮ್ಮೆ ಹಾರ್ನ್ ಮಾಡಿದ ಬಿ.ಎಸ್.ನಾಗರಾಜ್ ಎಂಬ ಪತ್ರಕರ್ತರನ್ನ ಹಿಡಿದು ಚೆಂಡಾಡಿ ಕೈಮುರಿದು ಕಳಿಸಿದರಂತೆ ಇಬ್ಬರು ಯುವಕರು! ಇಂಥ ಪ್ರಕರಣ ದೆಹಲಿಯಲ್ಲಿ ಇದು ಮೊದಲನೆಯದ್ದೇನು ಅಲ್ಲ. ಟ್ಯಾಮರಿಂಡ್ ಟ್ರೀ ಎಂಬ ರೆಸ್ಟಾರೆಂಟಿನಲ್ಲಿ ತಾವು ಕೇಳಿದ ತಕ್ಷಣ ಗುಂಡು ಕೊಡಲಿಲ್ಲವೆಂದು ಮಾಡೆಲ್ ಜೆಸಿಕಾ ಲಾಲ್ನ ಗುಂಡಿಟ್ಟು ಕೊಂದದ್ದು ಅಷ್ಟು ಸುಲಭವಾಗಿ ಮರೆಯುವುದಕ್ಕೆ ಸಾಧ್ಯವಿಲ್ಲ. ದೆಹಲಿಯ ರಸ್ತೆಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿ, ಪೋಲೀಸು ಪೇದೆಗಳೂ ಇಂಥ ಘಟನೆಗಳಲ್ಲಿ ಸಿಲುಕಿ ಬಲಿಪಶುಗಳಾಗಿರುವ ವರದಿಗಳೂ ಬಂದಿವೆ.
ಇದಕ್ಕೆ ರೊಡ್ ರೇಜ್ ಅಂತ ನಾಮಕರಣವನ್ನೂ ಮಾಡಿಯಾಗಿದೆ.

ಆದರೆ ಸಮಾಜಶಾಸ್ತ್ರಜ್ಞರಾಗಲೀ, ಮಾನಸ ಶಾಸ್ತ್ರಜ್ಞರಾಗಲೀ ಇದಕ್ಕೆ ಕಾರಣ ಏನೆಂದು ಇನ್ನೂ ಹೇಳುವ ಪ್ರಯತ್ನ ಮಾಡಿಲ್ಲ. ಆಶಿಶ್ ನಂದಿಯವರು ಇದನ್ನ “ಭಾರತದ ಅಮೆರಿಕೀಕರಣ” ಅಂತ ಹೇಳಿ ಅಲ್ಲಿನ ಇಂಥ ಅರ್ಥರಹಿತ ಘಟನೆಗಳ ಉದಾಹರಣೆಗಳನ್ನ ನೀಡಿದ್ದಾರೆ. ಜತೆಗೆ ಈ ಇಂಥ ಘಟನೆಗಳು ಮುಂದೆ ಇನ್ನೂ ಹೆಚ್ಚಾಗಲಿವೆಯೇ ಹೊರತು ಕಡಿಮೆಯಂತೂ ಆಗುವುದಿಲ್ಲ ಅಂತಲೂ ಹೇಳಿದ್ದಾರೆ. ಅಮೆರಿಕದಲ್ಲಿ ಶಾಲಾಮಕ್ಕಳು ಗನ್ ಹಿಡಿದು ತಮ್ಮ ಸಹಪಾಠಿಗಳನ್ನ, ಮೇಷ್ಟರುಗಳನ್ನ ಗುಂಡಿಟ್ಟು ಕೊಂದ ಮೂರ್ನಾಲ್ಕು ಘಟನೆಗಳು ಈಚಿನ ದಿನಗಳಲ್ಲಿ ವರದಿಯಾಗಿವೆ.

ಇಂಥ ಕೋಪ ತೀವ್ರ ಅಸಹಾಯಕತೆಯಿಂದ ಉಂಟಾಗಬಹುದು. ಚಡಪಡಿಕೆಯಿಂದ ಉಂಟಾಗಬಹುದು. ಕಾರಣವಿಲ್ಲದೆಯೂ ಆಗಬಹುದು. ಈಚೆಗೆ ಹೈದರಾಬಾದಿನಲ್ಲಿ ನಾನು ಸ್ಕೂಟರಿನಲ್ಲಿ ಹೋಗುತ್ತಿದ್ದೆ. ಒಂದು ಸಿಗ್ನಲ್ ಬಳಿ ನಿಲ್ಲಿಸಬೇಕಾಗಿದ್ದವನು, ಯಾವುದೋ ಲಹರಿಯಲ್ಲಿ ಕೆಂಪು ದೀಪ ನೋಡುವುದನ್ನ ತಡಮಾಡಿ ಲೈನಿನಿಂದ ಸ್ವಲ್ಪ ಮುಂದಕ್ಕೆ ಹೊರಟು ಹೋದೆ. ಎದುರಿನಿಂದ ಜೋರಾಗಿ ಒಂದು ಬಿಳಿ ಮಾರುತಿ ನನ್ನ ಮುಂದಿಂದ ಬಲಕ್ಕೆ ತಿರುಗಿತ್ತು. ಬಹುಶಃ ನಾನು ಸಮಯಕ್ಕೆ ಎಚ್ಚರಗೊಳ್ಳದಿದ್ದರೆ ಅಪಘಾತ ಆಗುತ್ತಿತ್ತೇನೋ. ತಪ್ಪು ನನ್ನದೇ ಆದ್ದರಿಂದ ನಾನು ಸುಮ್ಮನೆ ತಲೆತಗ್ಗಿಸಿ ನಿಂತೆ. ಆದರೆ ಆ ಮಾರುತಿಯಲ್ಲಿದ್ದ ಇಬ್ಬರು ಹುಡುಗರಿಗೆ ಸ್ವಲ್ಪ ಚಡಪಡಿಕೆ ಉಂಟಾಯಿತೆನ್ನಿಸುತ್ತದೆ. ಅವರು ಜೋರಾಗಿ ರಿವರ್ಸ್ನಲ್ಲಿ ಬಂದು ನನ್ನ ಸ್ಕೂಟರ್ಗೆ ಅಡ್ಡವಾಗಿ ನಿಂತು ವಾಚಾಮಗೋಚರ ಬಯ್ಯತೊಡಗಿದರು. ನಾನು ಕ್ಷಮೆ ಕೇಳೋಣವೆಂದು ಬಾಯಿ ತೆರೆಯುವಷ್ಟರಲ್ಲಿ “ಸಿಗ್ನಲ್ ನೋಡಿ ಮಾತಾಡು” ಅಂದರು. “ನಾನೇನು ಮಾತೇ ಆಡುತ್ತಿಲ್ಲ, ನನ್ನದೇ..... ” ಅನ್ನುವಷ್ಟರಲ್ಲಿ ಮತ್ತಷ್ಟು ಕೋಪ ತರಿಸಿಕೊಂಡು -“ಚುಪ್.. ” ಅಂದರು. ಅಷ್ಟರಲ್ಲಿ ನನ್ನ ಸಿಗ್ನಲ್ ಬಂದದ್ದರಿಂದ, ಹಿಂದೆ ನಿಂತಿದ್ದವರೆಲ್ಲಾ ಹಾರ್ನ್ ಬಜಾಯಿಸಿ ಈ ಮಾರುತಿ ದಾರಿ ಬಿಡುವಂತೆ ಮಾಡಿದರು. ತಪ್ಪಿಗೆ ಕ್ಷಮೆಯಾಚಿಸಲೂ ಅವಕಾಶ ಕೊಡದ ಅಸಹನೆ ನನ್ನನ್ನು ಅವಾಕ್ಕಾಗಿಸಿತ್ತು. ಯಾಕೆ ಹೀಗೆ? ನಾನು ಅಕಸ್ಮಾತ್ ಜಗಳಕ್ಕಿಳಿದಿದ್ದರೆ ಅವರ ಗಂಡಸುತನ ನಿರೂಪಿಸಲು ಅವಕಾಶವಾಗುತ್ತಿತ್ತೇನೋ. ಶರಣಾಗತಿಯಿಂದ ಯುದ್ಧ ಗೆದ್ದ ಭಾವನೆ ಬರುವುದೆಲ್ಲಿ?

ತಿರುಮಲೇಶ್ ಬಹಳ ಹಿಂದೆ ತಮ್ಮ ಕವಿತೆ ಮುಖಾಮುಖಿಯಲ್ಲಿ ಯುದ್ಧ, ಸಿಟ್ಟು ಸೆಡವಿನ ಬಗ್ಗೆ ಅದ್ಭುತ ಚಿತ್ರಣ ಕೊಟ್ಟಿದ್ದರು. ಇದ್ದಕ್ಕಿದ್ದಂತೆ ಕಂಡ ಬೆಕ್ಕಿನ ಜೊತೆಗಿನ ಅಘೋಷಿತ ದೃಷ್ಟಿಯುದ್ಧದ ಚಿತ್ರಣ ಕೊಟ್ಟು ಆ ಯುದ್ಧದಲ್ಲಿ ಕವಿಯ ಗೆಲುವನ್ನ ಒಂದು ವಿಷಾದದಲ್ಲಿ ಮುಗಿಸುತ್ತಾರೆ:

......... ಅಷ್ಟಕ್ಕೂ ನಾನು ಗಳಿಸಿದ್ದೇನು?
ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ ---
ಬಿಟ್ಟುಕೊಡುವುದರಿಂದ,
.......................

ಹೀಗೆ ಬರೆದ ತಿರುಮಲೇಶರು ಸುಮಾರು ಎರಡು ವರ್ಷಗಳ ಕಾಲ ಆಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರ ಮೇಲೆ ಯುದ್ಧ ಸಾರಿದ್ದರು. ಅವರ ಅಸ್ತ್ರ - ಕನ್ನಡಪ್ರಭ ಪತ್ರಿಕೆಯ ವಾಚಕರ ವಾಣಿ. ಕಡೆಗೂ ಪಟೇಲರ ಕುರ್ಚಿ ಕೈಬಿಟ್ಟಾಗ ತಿರುಮಲೇಶರಿಗೆ, ಮನುಕುಲದಮೇಲೆ ಮತ್ತೆ ಪುನಃನಂಬಿಕೆ ಹುಟ್ಟಿತೆನ್ನಿಸುತ್ತದೆ. ತಿರುಮಲೇಶರ ಸಿಟ್ಟಿಗೆ ಕಾರಣ: ಮುಖ್ಯಮಂತ್ರಿಯ ಕುರ್ಚಿ ಆಕ್ರಮಿಸಬೇಕಾದ ವ್ಯಕ್ತಿಗೆ ಇರಬೇಕಾದ ಯಾವುದೇ ಕನಿಷ್ಟ ಅರ್ಹತೆಯೂ ಪಟೇಲರಲ್ಲಿ ಕಾಣಿಸದಿದ್ದದ್ದು. (ಇದೂ ಒಂದು ಕಾರಣವೇ ಅಂತ ಸಿನಿಕರು ಕೇಳಬಹುದು) ಕರ್ನಾಟಕದಲ್ಲೇ ಇದ್ದಿರದ ತಿರುಮಲೇಶ್ ಇಲ್ಲಿನ ಪ್ರಜೆಗಳಿಗಿಂತ ಹೆಚ್ಚು ಕೋಪದಿಂದಿದ್ದರು. ಯುದ್ಧ ಸಾರಿದ್ದು ತಿರುಮಲೇಶ, ಗೆದ್ದದ್ದೂ ತಿರುಮಲೇಶ. ಆದರೆ ಹೋರಾಡಿದವರು ಯಾರು?

ಪಟೇಲರಷ್ಟೇ ಅಲ್ಲ, ತಿರುಮಲೇಶ ಡಾಲರ್ ಕಾಲನಿಯ ಪ್ರಕರಣದ ಬಗ್ಗೆ ಕೂಡಾ ಸಿಟ್ಟಾಗಿದ್ದರು. ಇದಕ್ಕೆ ಒಂದು ಹಿನ್ನೆಲೆಯಿದೆ - ಒಮ್ಮೆ ತಿರುಮಲೇಶ್, ಅಗ್ರಹಾರ ಕೃಷ್ಣಮೂರ್ತಿ ಮಾತಾಡುತ್ತಾ ಕೂತಿದ್ದಾಗ, ತಿರುಮಲೇಶ್ ಸಹಜವಾಗಿ ಅಗ್ರಹಾರ ಕೃಷ್ಣಮೂರ್ತಿಯನ್ನ ಕೇಳಿದ್ದರು - “ಲೇಖಕರಿಗೆ, ಅಕಾದಮಿ ಪ್ರಶಸ್ತಿ ವಿಜೇತರಿಗೆ ಸರಕಾರ ಸೈಟುಗಳನ್ನ ಕೊಡುತ್ತದಂತೆ ಹೌದಾ?” ಅದಕ್ಕೆ ಕೃಷ್ಣಮೂರ್ತಿ ತಮಾಷೆಯಾಗಿ - “ಲೇಖಕರಾದರೆ ಅವರಿಗೇನು ಕೋಡಿರುತ್ತಾ, ಯಾಕೆ ಸೈಟು ಕೊಡಬೇಕು?” ಅಂತ ಕೇಳಿದರು. ಅದು ತಿರುಮಲೇಶರಿಗೆ ಎಷ್ಟು ಗಟ್ಟಿಯಾಗಿ ತಟ್ಟಿತೆಂದರೆ ಅವರು ಬಾಹುಬಲಿಯಂತೆ ಆ ವಿಷಯವನ್ನ ಬಿಟ್ಟುಕೊಟ್ಟೇಬಿಟ್ಟರು. ಇಂಥ ನಿಲುವಿಗೆ ಸಹಲೇಖಕರಿಂದ ರೆಸಿಪ್ರೊಕೇಟಿವ್ ಚರ್ಯೆಗಳು ಬರದಿದ್ದದ್ದು ಸಹಜವಾಗಿಯೇ ಕೋಪಕ್ಕೆ ಕಾರಣವಾಗಿರಬಹುದು. ಇದು ಸಕಾರಣವಾದ ಕೋಪವೇ? ಹಾಗಾದರೆ ಇಂಥ ಕೋಪ ಎಲ್ಲರಿಗೂ ಯಾಕೆ ಬರುವುದಿಲ್ಲ?

ಅಮೆರಿಕದಲ್ಲಿ ರಾತ್ರೆಯವೇಳೆ ಸಬ್ವೇಗಳಲ್ಲಿ ನಡೆದಾಡಬೇಡಿರೆಂದು ಕಿವಿಮಾತು ಹೇಳುವವರನ್ನ ಕಂಡಿದ್ದೇನೆ. ಹಣಕ್ಕಾಗಿ ಲೂಟಿಮಾಡಲು ತಯಾರಾಗಿ ಹಲವು ಮಂದಿ ಅಲ್ಲಿ ಓಡಾಡುತ್ತಿರುತ್ತಾರಂತೆ. ಹಣವಿದ್ದರೆ, ಅದು ಲೂಟಿಯಾಗುವುದು ಖಂಡಿತ. ಅಕಸ್ಮಾತ್ ಹಣವಿಲ್ಲದಿದ್ದರೆ ಅಸಹಾಯಕತೆ, ಅಸಹನೆಯಲ್ಲಿ ಗುಂಡಿಟ್ಟು ಕೊಂದೇ ಬಿಡುತ್ತಾರಂತೆ. ಮಗ್ಗಿಂಗ್ ಅಂತ (ಮುಖಕ್ಕೆ ಇಕ್ಕುವುದು) ನಾಮಕರಣ ಆಗಿರುವ ಈ ಕಲೆ, ಹೊಸ ಸುಲಿಗೆಯ ವಿಧಾನ. ಇದು ಅಸಹನೆಯ ಪರಮಾವಧಿಯೇ? ಫಿಜಿಯಲ್ಲಿ ಜಾರ್ಜ್ ಸ್ಪೇಟ್ ಎಂಬ ತಲೆತಿರುಕ ಪಾರ್ಲಿಮೆಂಟ್ ಭವನದಲ್ಲಿ ಮಾಜಿ ಪ್ರಧಾನಿ, ಭಾರತ ಸಂಜಾತ ಮಹೇಂದ್ರ ಚೌಧರಿಯನ್ನೂ ಸೇರಿದಂತೆ ೩೦ ಜನರನ್ನ ಒತ್ತೆಯಾಳಾಗಿಟ್ಟುಕೊಂಡು ತನಗೇ ರಾಜ್ಯಭಾರ ನೀಡಬೇಕೆಂದು ಹಾರಾಡಿದ. ಹಿಂದೆ ತನ್ನದೇ ವ್ಯಾಪಾರ ಮಾಡಲು ಹೋಗಿ ಕೈಲಾಗದೇ ನಷ್ಟಮಾಡಿಕೊಂಡು ದಾರಿಕಾಣದೇ ಕಂಗಾಲಾಗಿದ್ದ ಈತನಿಗೆ ತನ್ನ ಅಸಹಾಯಕತೆಯನ್ನ ತೋಡಿಕೊಳ್ಳಲು ಕಂಡ ಮಾರ್ಗ ಇದು. ನನ್ನ ಅರ್ಹತೆಗೆ ತಕ್ಕಂತೆ ನಾನು ಎರಡನೆಯ ದರ್ಜೆಯಲ್ಲಿ ಪಾಸಾಗುವುದು ಒಂದು ಬದಿಗಾದರೆ - ನನ್ನ ಗೆಳೆಯ ರ್ಯಾಂಕು ಪಡೆದನೆಂದು ಸಿಟ್ಟಾಗೋದು ಮತ್ತೊಂದು ಬದಿ. ಹೊಟ್ಟೆಯುರಿ, ಸರಿ ಅರ್ಥವಾಗುತ್ತೆ - ಆದರೆ ಕೋಪ??

ಮನೋಜ್ ಪ್ರಭಾಕರ್‌ಗೆ ಯಾರ ಮೇಲೆ ಕೋಪ? ಯಾಕೆ ಕೋಪ? ಇದು ಕುತೂಹಲದ ವಿಷಯ. ಸತ್ಯ ತಿಳಿಯುವುದು ನಮ್ಮಂತಹವರಿಗೆ ಎಂದೆಂದಿಗೂ ಅಸಾಧ್ಯ. ಮೊದಲು ಅತ್ತು ಕರೆದು ಗೋಳಾಡಿ ಅಸಹಾಯಕರಾಗಿ ಕಂಡ ಕಪಿಲ್ ಮುಂದಿನ ಬಾರಿ ಕ್ಯಾಮರಾ ಎದುರಿಸುವಷ್ಟರಲ್ಲಿ ಮೈಯೆಲ್ಲಾ ಕೆಂಡವಾಗಿಬಿಟ್ಟಿದ್ದರು. ಎರಡರಲ್ಲಿ ದೊಡ್ಡ ಅಸ್ತ್ರ ಯಾವುದು? ಕಣ್ಣೀರೇ ಕೋಪವೇ?

ನಮ್ಮ ಕ್ರಿಕೆಟ್ ಹೀರೋಗಳು ಈ ಎಲ್ಲ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಬಹಳಷ್ಟು ಮಂದಿ ಕ್ರಿಕೆಟ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಆದರೆ ಇದರಲ್ಲಿ ನಿಜವಿದೆಯಂತ ಗೊತ್ತಾಗುತ್ತಾ ಹೋದಷ್ಟೂ ಸಿಟ್ಟು ಆಟಗಾರರ ಮೇಲೆಯೇ ಹೆಚ್ಚಾಗುತ್ತಾ ಹೋಗುತ್ತೆ. ಆದರೆ ಅಕಸ್ಮಾತ್ ದಾಲ್ಮಿಯಾ ಬಿಂದ್ರಾ ಲೆಲೆಯಂಥವರು ಇದರಲ್ಲಿ ಶಾಮೀಲಾಗಿದ್ದಾರಂತ ಸುದ್ದಿ ಬಂದರೆ, ಅವರುಗಳ ಮೇಲೆ ಕಪಿಲ್ ಮೇಲೆ ಬಂದಷ್ಟು ಕೋಪ ಬರಲಾರದೇನೋ - ಕೋಪವೂ ನಮ್ಮ ಇಷ್ಟದೇವತೆಗಳ ಮೇಲೆ ನಾವಿಟ್ಟ ನಿರೀಕ್ಷೆ ಮತ್ತು ನಡವಳಿಕೆಗಳ ಅಂತರದಿಂದ ಮಾತ್ರ ಉದ್ಭವವಾಗುವುದಲ್ಲವೇ - ದಾಲ್ಮಿಯಾ ಬಿಂದ್ರಾ ಲೆಲೆ ಗಳ ಮೇಲೆ ನಾವುಗಳು ಇಟ್ಟಿರುವ ನಿರೀಕ್ಷೆಯಾದರೂ ಏನು?

ಮನೊಜ್ ಜೊತೆಗೆ ಕೂಡಿ ವಿಡಿಯೋ ತೆಗೆಯಲು ಸಹಾಯ ಮಾಡಿದ ತರುಣ್ ತೇಜ್ಪಾಲ್ ಜೊತೆಗೇ ಯಾಕೆ ಹೋಗಿದ್ದು ಇನ್ಯಾರನ್ನಾದರೂ ಸಂಪರ್ಕಿಸಬಹುದಿತ್ತಲ್ಲವೇ? ಅನ್ನುವ ಪ್ರಶ್ನೆಗೆ ಮನೊಜ್ “ನಾನು ಮೊದಲ ಬಾರಿ ಸಂದರ್ಶನ ನೀಡಿದ ಪತ್ರಿಕೆಯಲ್ಲಿ ಇವರುಗಳು ಇದ್ದರು. ನನ್ನ ಕಾರಣವಾಗಿ ಅವರಿಗೆ ಅನೇಕ ತೊಂದರೆಗಳುಂಟಾಯಿತು. ಹೀಗಾಗಿ ಈ ಕೆಲಸವನ್ನ ನಾನು ಅವರ ಜೊತೆಗೇ ಮಾಡಬೇಕಂತ ನಿರ್ಧರಿಸಿದೆ” ಎಂದು ಹೇಳಿ ತಮ್ಮ ವಫಾದಾರಿ ತೋರಿಸಿದ್ದಾರೆ. ಅಂದರೆ ತೇಜ್ಪಾಲ್ಗೆ ಔಟ್ಲುಕ್ ಪತ್ರಿಕೆಯ ಮೇಲೆ ಸಿಟ್ಟೇ?

ಸಿಟ್ಟು ಯಾವಾಗಲೂ ವಿನಾಶಕಾರಿಯಾಗಿರಬೇಕೆಂದೇನೂ ಇಲ್ಲ. ಇದೇ ತರುಣ್ ತೇಜ್ಪಾಲ್ ಹಾರ್ಪರ್ ಕಾಲಿನ್ಸ್ ಎನ್ನವ ಸಂಸ್ಧೆ ಅರುಂಧತಿ ರಾಯ್ ಅವರ “ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಕಾದಂಬರಿ ಪ್ರಕಟಿಸಲು ಹಿಂದು ಮುಂದು ನೋಡಿದಾಗ ಸಿಡಿದೆದ್ದು ತಮ್ಮದೇ ಸಂಸ್ಥೆ ಇಂಡಿಯಾ ಇಂಕ್ ಸ್ಥಾಪಿಸಿ ಅದನ್ನ ಪ್ರಕಟಿಸಿದರು. ಆ ಕಾದಂಬರಿಗೆ
ಪ್ರತಿಷ್ಠಿತ ಬುಕರ್ ಬಹುಮಾನ ಬಂತು.

ಬಹುಮಾನದ ಹಣ ದೊಡ್ಡ ಮೊತ್ತ. ಅಷ್ಟು ದುಡ್ಡು ಬಂದಾಗ ಸಿಟ್ಟಾಗುವುದು ಅಸಹಜ ಅಲ್ಲವೇ? ಆದರೆ ಬುಕರ್ ಬಹುಮಾನ ಪಡೆದ ಅರುಂಧತಿ, ಆ ಹಣವನ್ನ ಒಯ್ದು ಎಲ್ಲಿ ಮುಳುಗಡೆ ಮಾಡಿದರು ಅನ್ನುವುದು ಇನ್ನೂ ಕುತೂಹಲದ ವಿಷಯ. ಅದುವರೆಗೂ ಎರಡು ಇಂಗ್ಲೀಷ್ ಚಿತ್ರಗಳಿಗೆ ಸ್ಕ್ರಪ್ಟ್ ಬರೆದು ಆಗಷ್ಟೇ ಪ್ರಥಮ ಕಾದಂಬರಿಗೆ ಬುಕರ್ ಪಡೆದ ಅರುಂಧತಿ ಬರವಣಿಗೆಯನ್ನೇ ಜೀವನ ಮಾಡಿಕೊಳ್ಳಬಹುದು ಎಂದು ಲೆಕ್ಕ ಹಾಕುತ್ತಾ ಕುಳಿತವರಿಗೆ ಚಳ್ಳೆಹಣ್ಣು ತಿನ್ನಸಿ - ಜಗತ್ತಿನ ಮೇಲೆ ಮುನಿಸಿ ಕುಳಿತರು. (ಸದ್ಯ ಕನ್ನಡದ ಖ್ಯತ ಮುನ್ನಡಿಕಾರರು ಯಾರೂ ಅರುಂಧತಿಗೆ ಮುನ್ನುಡಿ ಬರೆಯಲಿಲ್ಲ - ಇಲ್ಲವಾದರೆ ಉದಯೊನ್ಮುಖರಾದ ಇವರ ಮುಂದಿನ ಕೃತಿಗಳು ಇನ್ನೂ ಸತ್ವಶಾಲಿಯಾಗಿರಬಹುದು, ಅದನ್ನ ಕಾತರದಿಂದ ಎದುರುನೋಡುವಂತಾಗಿದೆ ಅಂತ ಬರದು ಕೈಕೈ ಹಿಸುಕಿಕೊಳ್ಳುತ್ತಾ ಕೂತಿರುತ್ತಿದ್ದರು) ಅರುಂಧತಿ, ಮೊದಲಿಗೆ ಅಣುಬಾಂಬು ಸಿಡಿಸಿದ ಸರಕಾರದ ಮೇಲೆ ಮುನಿಸಿಕೊಂಡು ಒಂದು ದೊಡ್ಡ ಪರಮಾಣು ವಿರೋಧಿ ಲೇಖನ ಬರೆದು ಜಗತ್ತಿನ ಮೇಲಿದ್ದ ತಮ್ಮ ಕೋಪವನ್ನೆಲ್ಲಾ ತೋಡಿಕೊಂಡು ಬಿಟ್ಟರು. ಅಲ್ಲಿಗೆ ಸಮಾಧಾನವಾಗದೇ ಮೇಧಾ ಪಾಟ್ಕರ್ ಜತೆ ಸೇರಿ ಬುಕರ್ನಿಂದ ಬಂದ ತಮ್ಮ ಸಕಲಸಂಪತ್ತನ್ನೂ ನರ್ಮದಾ ಬಚಾವೋ ಆಂದೋಳನದಲ್ಲಿ ಮುಳುಗಡೆ ಮಾಡಿದರು. ಈಗ ಒಬ್ಬರ ಬದಲಿಗೆ ಇಬ್ಬರು ಸಿಟ್ಟಾಗಿ ನರ್ಮದಾ ನದಿಯ ಮೇಲಿನ ಅಣಕಟ್ಟನ್ನ ವಿರೋಧಿಸಿ ಓಡಾಡುತ್ತಿದ್ದಾರೆ.

ಇಲ್ಲಿ ಅಣೆಕಟ್ಟು ಪರವಾಗಿ ಇರುವ ಗುಜರಾತಿನ ಜನ ಅರುಂಧತಿಯ ಕಾದಂಬರಿಯನ್ನು ಓದಿ, ಒಂದು ಕಡೆ ಖುಷಿ ಪಟ್ಟರೆ, ಮತ್ತೊಂದೆಡೆ ಆಕೆಗೆ ಯಾಕಾದರೂ ಬುಕರ್ ಬಹುಮಾನ ಬಂತೋ ಅಂತ ಬೇಸರ ಮಾಡುಕೊಂಡು ಕೂತಿದ್ದಾರೆ. ಅರುಂಧತಿಯಾಗಲೀ ಮೇಧಾ ಆಗಲೀ ಗುಜರಾತಿನೊಳಗೆ ಕಾಲಿಡದಂತೆ ಅನೌಪಚಾರಿಕ ನಿರ್ಬಂಧ ಹೂಡಲಾಗಿದೆ. ಅಂದರೆ ಒಂದು ಜನಸಮೂಹದ ಸಿಟ್ಟು ಕಾನೂನಿಗಿಂತ ಹಕ್ಕುಗಳಿಗಿಂತ ದೊಡ್ಡದಾಗಿ ನಿಂತುಬಿಡುತ್ತದೆ. ಅರುಂಧತಿಯಾಗಲೀ ಮೇಧಾ ಆಗಲೀ ಗುಜರಾತಿನೊಳಗೆ ಸಭೆ ಸಮಾರಂಭವನ್ನ ಉದ್ದೇಶಿಸದಂತೆ ಅನೌಪಚಾರಿಕ ನಿರ್ಬಂಧ ಹೂಡಲಾಗಿದೆ. ಅಂದರೆ ಒಂದು ಜನಸಮೂಹದ ಸಿಟ್ಟು ಕಾನೂನಿಗಿಂತ ಹಕ್ಕುಗಳಿಗಿಂತ ದೊಡ್ಡದಾಗಿ ನಿಂತುಬಿಡುತ್ತದೆ. ಸುಪ್ರೀಂ ಕೊರ್ಟಿನ ತೀರ್ಮಾನ ಬಂದ ಮೇಲೆ ಮೇಧಾರೂ ಇದನ್ನೇ ಮಾಡಿ ತೋರಿಸುತ್ತಿದ್ದಾರೆ. ಬರೋಡಾದಲ್ಲಿ ಮುನಿಸಿಪಾಲ್ಟಿಯ ನಲ್ಲಿಯಲ್ಲಿ ನೀರು ಬರದಿದ್ದರೆ - ಅದಕ್ಕೂ ನರ್ಮದಾ ಅಣೆಕಟ್ಟು ಹಾಕಲು ಅಡ್ಡಗಾಲು ಹಾಕುತ್ತಿರುವ ಮೇಧಾರೇ ಕಾರಣರಾಗಿಬಿಡುತ್ತಾರೆ ಪಾಪ!! ಒಂದು ಇಡೀ ಜನಸಮೂಹವನ್ನ ಸಿಟ್ಟಾಗಿಸುವುದು ಹೇಗೆಂದು ಮೇಧಾ ಒಂದು ಕಡೆಯಿಂದ, ಗುಜರಾತಿನ ರಾಜಕಾರಣಿಗಳು ಮತ್ತೊಂದು ಕಡೆಯಿಂದ ನಿರೂಪಿಸಿ ತೋರಿಸುತ್ತಿದ್ದಾರೆ.

ಯಾರ ಮೇಲೆ ಕೋಪ? ಯಾವ ಕಾರಣವಾಗಿ? ನಾನು ಕೆಲಸ ಮಾಡುತ್ತಿದ್ದ ಸಂಸ್ಧೆಯಲ್ಲಿ ನಿರ್ದೇಶಕರಾಗಿ ಮಾಜಿ ಐ‌ಎ‌ಎಸ್ ಅಧಿಕಾರಯೊಬ್ಬರು ಬಂದರು. ಆತ ಆ ಸಂಸ್ಧೆಯಿಂದ ನಿವೃತ್ತಿ ಪಡೆದು ಹತ್ತು ವರ್ಷಗಳಾಗುತ್ತ ಬಂದರೂ, ಆತನ ಕಾಲದಲ್ಲಿ ಸಂಸ್ಧೆಯಲ್ಲಿ ಕೆಲಸ ಮಾಡುವುದು ಎಷ್ಟು ಚೆನ್ನಾಗಿತ್ತು ಅಂತ ಈಗಲೂ ಜನ ಚಪ್ಪರಿಸಿ ಮಾತಾಡುತ್ತಾರೆ. ಯಾರಮೇಲೂ ಸಿಟ್ಟು ಮಾಡಿಕೊಳ್ಳದ ಆತನಿಗೆ ಅಕೌಂಟ್ಸ್ ಆಫೀಸರ್ ಕಂಡರಾಗುತ್ತಿರಲಿಲ್ಲ. ತನ್ನ ಕೋಣೆಯಲ್ಲಿ ಧೂಳು ಹೊಡೆಯದಿದ್ದರೂ, ಸಮಯಕ್ಕೆ ಸರಿಯಾಗಿ ಚಹಾದ ಸರಬರಾಜಾಗದಿದ್ದರೂ, ವಿದ್ಯುತ್ ಇಲಾಖೆಯವರು ಕರೆಂಟು ಕಿತ್ತರೂ, ಆ ಬಡಪಾಯಿಯನ್ನ ಕರೆದು ವಾಚಾಮಗೋಚರ ಬೈಯ್ಯುವುದೇ. ಯಾಕೆ ಸರ್ ಹೀಗೆ ಅಂತ ಕೇಳುವ ಧೈರ್ಯ ಯಾರಿಗೂ ಇಲ್ಲ. ಹಾಗೂ ಹೀಗೂ ಒಂದು ದಿನ ಧೈರ್ಯಮಾಡಿ ನಾವುಗಳು ಕೆಲವರು ಕೇಳಿಯೇಬಿಟ್ಟಾಗ -“ಅವನ ಮಾತಿನಲ್ಲಿ ರ ಕಾರ ಸ್ಪಷ್ಟವಾಗಿ ಉಚ್ಚಾರ ಮಾಡೊಲ್ಲವಲ್ಲವಯ್ಯಾ.. ಯ ಅನ್ನುತ್ತಾನೆ.. ” ಅಂದುಬಿಡುವುದೇ??

ಫುಲ್ ಆರ್ಮ್ ಶರ್ಟಿನ ತೋಳಿನ ಗುಂಡಿ ಹಾಕುತ್ತಿರಲಿಲ್ಲವೆಂಬ ಕಾರಣಕ್ಕೆ ನನಗೆ ನನ್ನ ಸಹೋದ್ಯೋಗಿಯೊಬ್ಬನ ಮೇಲೆ ವಿಪರೀತ ಸಿಟ್ಟು ಬರುತ್ತಿತ್ತು. ಅವನು ಕೋಣೆಗೆ ಬಂದರೆ ನನ್ನ ಮೈಯೆಲ್ಲಾ ಉರಿದು ಹೋಗುತ್ತಿತ್ತು. ಕಡೆಗೂ ನನ್ನ ಕಾಟ ಕೋಪ ತಡೆಯಲಾರದೇ ಅವನು ಬೇರೆ ಕೆಲಸ ನೋಡಿಕೊಂಡುಬಿಟ್ಟ. ಇದು ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ಇಂದಿಗೂ ಯಾಕೆ ನನಗೆ ಅವನನ್ನ ಕಂಡರೆ ಕೋಪ ಉಕ್ಕುತ್ತಿತ್ತು ಅಂತ ಅರ್ಥವಾಗಿಲ್ಲ. ಆ ಘಟನೆಗೆ ನನಗೆ ಪಶ್ಚತ್ತಾಪವೂ ಆಗಿಲ್ಲ ಬೇಸರವೂ ಆಗಿಲ್ಲ - ಆದರೆ ಕುತೂಹಲ ಮಾತ್ರ ನೀಗಿಲ್ಲ.

ಕೊಪತಾಪದ ವಿಚಾರ ಮಾತನಾಡಿ ಅಮಿತಾಭ್ ಬಚ್ಚನ್ ಬಗ್ಗೆ ಮಾತಾಡದಿದ್ದರೆ ಅದಕ್ಕೆ ಪೂರ್ಣತೆ ಎಲ್ಲಿ? ಒಂದು ಇಡೀ ಪೀಳಿಗೆಗೇ ಕೋಪವೆಂದರೇನು, ಅದನ್ನು ಸದ್ವಿನಿಯೋಗ ಮಾಡುವುದು ಹೇಗೆ ಅಂತ ಹೇಳಿಕೊಟ್ಟವರು ಬಚ್ಚನ್. ಈಗ ತಮ್ಮ ಎಬಿಸಿ‌ಎಲ್ ಇತ್ಯಾದಿಯಿಂದಾಗಿ ಆರ್ಥಿಕ ಕಷ್ಟಗಳಲ್ಲಿರುವ ಬಚ್ಚನ್ರನ್ನ ಪತ್ರಕರ್ತರು ಹಿಡಿದು ಚೆಂಡಾಡಿದ್ದಾಗಿದೆ. ಆದರೂ ಗಂಭೀರವಾಗಿ, ಏನೂ ಆಗಿಲ್ಲವೆಂಬಂತೆ ಸ್ಥಿತಪ್ರಜ್ಞರಾಗಿ ಕುಳಿತಿರುವ ಬಚ್ಚನ್ರ ಕೋಪ ಬರೇ ನಟನೆಗೆಮಾತ್ರ ಸೀಮಿತವಾಗಿತ್ತೇ? ಈ ಗಾಂಭೀರ್ಯ ಸೈಫ್ಗಾಗಲಿ ಅನುಪಮ್ ಖೇರ್ಗಾಗಲೀ, ಬರಲೇಯಿಲ್ಲ ನೋಡಿ.

ಆದರೂ ಕೋಪಬಂದಾಗ ಕೆಂಡಕಾರಿ ಕೂಗಾಡುವುದು ಒಳ್ಳಯದಂತ ವೈದ್ಯರ ಅಭಿಪ್ರಾಯ. ಇದರಿಂದಾಗಿ ಅಲ್ಸರ್ ತಪ್ಪಿಸಿದಂತಾಗುತ್ತದೆ. ಕೋಪವನ್ನ ತಡೆಯುತ್ತಾ ಹೊದಷ್ಟಕ್ಕೂ ಅದು ಪ್ರಷರ್ ಕುಕರ್ನ ಸ್ಟೀಮ್ನಂತೆ ಬಲಗೊಳ್ಳುತ್ತಾ ಹೋಗುತ್ತದೆ. ಅದಕ್ಕೇ ಆವಿ ಹೊರಹೋಗುವ ಕಲ ಸೇಫ್ಟೀ ವಾಲ್ವುಗಳು, ಗಾಸ್ಕೆಟ್ ರಿಲೀಸ್ ಸಿಸ್ಟಂಗಳೂ ಬೇಕೇಬೇಕು.

ಆದರೆ ಕೋಪದ ಫಲಗಳು ಒಮ್ಮೊಮ್ಮೆ ಎಷ್ಟು ರುಚಿಯಾಗಿರುತ್ತದೆಂದು ನನ್ನ ಈಚಿನ ಅನುಭವ ಹೇಳುತ್ತದೆ. ಹೈದರಾಬಾದಿನಲ್ಲಿ ನಾನೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕಂಪನಿಯಲ್ಲಿ ಇನ್ನಷ್ಟು ಬಂಡವಾಳ ಹೂಡಿಕೆ ಹೆಚ್ಚಿಸುವ ಸಲುವಾಗಿ ಕೆಲ ವಿದೇಶೀ ಆರ್ಥಿಕ ಸಂಸ್ಥೆಗಳಿಗೆ ನಮ್ಮ ಸಂಸ್ಥೆಯ ಮುಖ್ಯಸ್ಧರೊಡನೆ ನಾನು ಭೇಟಿ ನೀಡುವುದಿತ್ತು. ಹೊರಡುವ ಮುಂಚಿನಿಂದಲೇ ನನಗೂ ಮುಖ್ಯಸ್ಧರಿಗೂ ಸ್ವಲ್ಪ ಅಭಿಪ್ರಾಯಭೇದವಿತ್ತು - ನಾವು ತಕ್ಷಣ ಹೋಗುವುದಕ್ಕೆ ಸಾಕಷ್ಟು ತಯಾರಿಮಾಡಿಲ್ಲವಾದ್ದರಿಂದ - ಈ ಇಡೀ ಯಾತ್ರೆಯನ್ನ ೪-೫ ತಿಂಗಳನಂತರ ಪ್ಲಾನ್ ಮಾಡೋಣಾಂತ ನಾನು, ತಕ್ಷಣ ಹೊರಡಬೇಕಂತ ಬಾಸ್. ಕಡೆಗೂ ಗೆದ್ದದ್ದು ಮುಖ್ಯಸ್ಧರೇ (ಇದನ್ನು ಪ್ರತ್ಯೇಕವಾಗಿ ಹೇಳಬೇಕೇ?). ಸರಿ ಹೊರಟೆವು. ಆಮ್ಸ್ಟರ್ಡ್ಯಾಮ್ನಲ್ಲಿ ಒಂದಿನ ಮುಂಜಾನೆ ಇಷ್ಟವಿಲ್ಲದೆಯೇ ನಾನು ಟೈ, ಸೂಟು ಬೂಟು ಧರಿಸಿ ೮ಕ್ಕೆ ತಯಾರಾಗಿ ನಿಂತೆ. ಬಾಸ್ ಬಂದು - “ಈದಿನ ಕಂಪನಿಯ ಬಗ್ಗೆ ನಮ್ಮ ಯೋಜನೆಗಳ ಬಗ್ಗೆ ನೀನು ಮಾತಾಡು. ಎಷ್ಟಾದರೂ ನಿನ್ನ ಪ್ರಸೆಂಟೇಷನ್ ಚೆನ್ನಾಗಿರುತ್ತೆ. ಪ್ರಶ್ನೆಗಳು ಎದ್ದಾಗ ನಾನೂ ಸೇರಿಕೊಳ್ಳುತ್ತೇನೆ” ಅಂದ. ನಾನು ತಮಾಷೆಗೆ -“ನಾಚ್ ಮೇರಿ ಬುಲ್ಬುಲ್ ತೋ ಪೈಸಾ ಮಿಲೇಗಾ..” ಅಂದೆ. ಆ ಕ್ಷಣಕ್ಕೆ ಆತ ಸುಮ್ಮನಿದ್ದರೂ, ಈ ಮಾತಿಗೆ ನನ್ನನ್ನ ಆತ ಎಂದಿಗೂ ಕ್ಷಮಿಸಲಿಲ್ಲ. ಅದೇ ನನ್ನ ರಾಜೀನಾಮೆ ಪತ್ರವಾಯಿತು!! ಅದರ ಫಲವಾಗಿ ನಾನು ಕೆಲಸ ಹುಡುಕತೊಡಗಿದೆ. ಅದರಿಂದ ನನಗಾಗಿದ್ದೇನೆಂದರೆ ಮಾರುಕಟ್ಟೆಯಲ್ಲಿ ನನ್ನಂತಹ ಉದ್ಯೋಗಿಗಳನ್ನ ಪಡೆಯಲು ಬಹಳಷ್ಟು ಮಂದಿ ಕಾತರರಾಗಿದ್ದಾರೆ ಅನ್ನುವ ಸತ್ಯ ತಿಳಿದದ್ದು! ನಂತರ ಹಿಂದಿನದ್ದಕ್ಕಿಂತ ಒಂದು ಒಳ್ಳಯ ಕೆಲಸಕ್ಕೆ ಸೇರಿದ್ದೂ ಆಯಿತೆನ್ನಿ.

ಹಿಂದೆ ಒಮ್ಮೆ ಲಂಕೇಶ್ ನನ್ನನ್ನ ಪತ್ರಕೆಗಾಗಿ ವೈ‌ಎನ್ಕೆ ಸಂದರ್ಶನ ಮಾಡಲು ಹೇಳಿದ್ದರು. ವೈ‌ಎನ್ಕೆ ಆಗ ಕನ್ನಡಪ್ರಭದ ಸಂಪಾದಕರಾಗಿದ್ದರು. ನಾನು ಕೇಳಿದಾಗ -“ಬೇಡ”ಅಂದಷ್ಟೇ ಹೇಳಿ ವೈ‌ಎನ್ಕೆ ಸುಮ್ಮನಾದರು. ಆದರೆ ಅಷ್ಟಕ್ಕೆ ಬಿಡದೇ ನಾನು ಅವರನ್ನ ಬಲವಂತ ಮಾಡಿದೆ - “ಇಲ್ಲ ಲಂಕೇಶ್ಗೆ ಬೇಡ.” ಬಹುಶಃ ಹಳೇ ಮನಸ್ತಾಪ ಏನಾದರೂ ಇದ್ದಿದ್ದಿದ್ದಿರಬಹುದು. ಆದರೆ ವೈ‌ಎನ್ಕೆ ನನಗೆ ಕೊಟ್ಟ ಕಾರಣವೇನು ಗೊತ್ತೇ? “ಲಂಕೇಶ್ಗೆ ಗಿರೀಶ್ ಕಾರ್ನಾಡರ ಹಯವದನ ಇಷ್ಟವಿಲ್ಲ - ಕುದುರೆ ರೇಸಿನಲ್ಲಿ ದುಡ್ಡು ಕಳಕೊಂಡಿರೋದರಿಂದ ಹಯವದನಾನ ಬೈದು ಬರೀತಾರೆ, ಬೇಡ...” ಅಲ್ಲೂ ತಮ್ಮ ಪನ್ ಬಿಡದೇ ವಿಚಿತ್ರ ಕಾರಣ ಕೊಟ್ಟು ವೈ‌ಎನ್ಕೆ ತಪ್ಪಿಸಿಕೊಂಡುಬಿಟ್ಟರು.

ಆದರೆ ಇಂಥ ವೈ‌ಎನ್ಕೆ ಸಿಟ್ಟಾಗಿದ್ದಾರೆ ಜೀಬಿ ಸಿಟ್ಟಾಗಿದ್ದಾರೆ ಅಂತ ಒಂದು ಅದ್ಭುತ ಪದ್ಯವನ್ನ ಬರೆದಿದ್ದಾರೆ. ಅಟ್ಟದ ಮೇಲೆ ಸಿಟ್ಟಾಗಿರುವ ಜೀಬಿಯವರನ್ನು ಸಿಟ್ಟಾಗ ಬೇಡಿ ಎಂದರೆ ಕೇಳುವುದಿಲ್ಲ. ಯಾಕೆಂದರೆ ಇಳಿವಯಸ್ಸಿನ ಜೀಬಿಗೆ ಹೆಚ್ಚು ಹೊತ್ತು stand ಆಗುವ ತ್ರಾಣವಿಲ್ಲ. ನಾವೆಲ್ಲರೂ ಹೀಗೆ ಚೆನ್ನಾಗಿ sit ಆಗಿರೋಣ.