Tuesday, June 17, 2008

ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಕೋಪ ತಾಪ


ಈಚೆಗೆ ವಾರ್ತೆಗಳನ್ನು ಕೇಳುವುದು, ನೋಡುವುದು, ಓದುವುದು ಎಲ್ಲ ಹಿಂಸೆಯುಂಟುಮಾಡುತ್ತದೆ. ಪ್ರೀತಿ ನಿಷ್ಕಾರಣವಾಗಿರಬೇಕು, ದ್ವೇಷ ಸಕಾರಣವಾಗಿರಬೇಕು ಅಂತ ಜಯಂತ ಕಾಯ್ಕಿಣಿ ಹಿಂದೆ ಒಮ್ಮೆ ಜನಪರ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದರು. ಇದನ್ನೇ ಕೇಳಿಸಿಕೊಂಡಿರಬಹುದಾದ ಫಿಲಿಪೀನ್ಸ್ ದೇಶದ ಯುವಕ ಕಂಪ್ಯೂಟರ್ ವೈರಸ್ ಪ್ರೋಗ್ರಾಂ ಬರೆದು, ಅದಕ್ಕೆ ಐಲವ್ಯೂ ಅಂತ ಹೆಸರುಟ್ಟು ಜಗತ್ತಿನ ಮೇಲೆ ಛೂ ಬಿಟ್ಟ. ನಿಷ್ಕಾರಣ ಪ್ರೀತಿ ಅರಸಿ ಹೊರಟ ನನ್ನಂತಹ ಕೆಲವರು ಹಲವು ದಿನ ನಿದ್ದೆಗೆಟ್ಟು ಸಕಾರಣವಾಗಿಯೇ ಅವನನ್ನ ದ್ವೇಷಿಸತೊಡಗಿದ್ದೇವೆ. ಇರಲಿ.

ಕೋಪಕ್ಕೆ ಕಾರಣವೇನು? ಏನೂ ಇರಬೇಕಿಲ್ಲ. ನಾವುಗಳು ಯಾರ ಮೇಲೆ ಪೈಪೋಟಿ ನಡೆಸುತ್ತಿದ್ದೇವೆ, ಯಾರ ಮೇಲೆ ಯಾಕೆ ಕೆಂಡ ಕಾರುತ್ತಿದ್ದೇವೆ, ಏನನ್ನ ಹುಡುಕಿ ಹೊರಟಿದ್ದೇವೆ ಅನ್ನೋದು ಒಮ್ಮೊಮ್ಮೆ ಅರ್ಥವಾಗದೇ ನಾನು ಕಕ್ಕಾಬಿಕ್ಕಿಯಾಗುವುದು ಉಂಟು. ಕಳೆದ ವರ್ಷ ಜಿಕೆ ಗೋವಿಂದರಾಯರು ಅನಂತಮೂರ್ತಿಯವರ ಮೇಲೆ ಸಿಟ್ಟಾಗಿ ಪ್ರತಿಭಟನೆ ಇತ್ಯಾದಿ ಮಾಡಿದರು. ಕಾರಣ: ಡಾಲರ್ ಕಾಲನಿಯಲ್ಲ ಜೆ.ಎಚ್.ಪಟೇಲರ ಸಹಕಾರದೊಂದಿಗೆ ಅವರು ಕಡಿಮೆ ದರದಲ್ಲಿ ಮನೆ ಪಡೆದರು ಅಂತ. ಕೋಪ ಮಾಡಿಕೊಂಡವರು ಗೋವಿಂದರಾಯರು ಮಾತ್ರ ಅಲ್ಲ, ಜೊತೆಗೆ ಇನ್ನಷ್ಟು ಜನ. ಯಾಕೆ ಅನಂತಮೂರ್ತಿಯವರ ಮೇಲೆಯೇ ಕೋಪ? ಅನೇಕ ಜನರಿಗೆ ಈರೀತಿಯ ಮನೆಗಳು ಅಲಾಟ್ ಆಗಿರಬಹುದಲ್ಲ? ತಮಗೆ ಮನೆ ಅಲಾಟ್ ಆಗಲಿಲ್ಲ ಎಂಬ ಹೊಟ್ಟೆಯುರಿಯೇ - ಛೆ ಛೆ - ಖಂಡಿತವಾಗಿಯೂ ಇರಲಾರದು. ಕಾರಣ ಹುಡುಕ ಹೊರಟರೆ ನಮ್ಮಂತರಂಗದಲ್ಲೇ ಸಿಗುತ್ತದೆ. ಕನ್ನಡದ ಪ್ರಮುಖ ಲೇಖಕರು, ಜ್ಞಾನಪೀಠಾರೂಢರಾದ ಅನಂತಮೂರ್ತಿಯವರ ಬಗ್ಗೆ ನಮಗೆಲ್ಲ ಕೆಲವು ನಿರೀಕ್ಷೆಗಳಿರುತ್ತವೆ - ಆ ನಿರೀಕ್ಷೆಗೆ ತಕ್ಕಂತೆ ಅವರು ನಡೆದುಕೊಳ್ಳದಿದ್ದಾಗ ನಮಗೆ ದುಃಖ ಸಿಟ್ಟು ಬರುವುದು ಸಹಜ. ಅಂದರೆ ಬಹುಶಃ ಸಾರ್ವಜನಿಕರಾದ ವ್ಯಕ್ತಿಗಳಿಗೂ ಸಾಧಾರಣ ಜನಕ್ಕೂ ನಾವು ಬೇರೆ ಬೇರೆ ಮಾನದಂಡಗಳನ್ನ ಇಟ್ಟುಕೊಂಡಿದ್ದೇವೆಂದು ಆಯಿತು. ಸಾರ್ವಜನಿಕ ವ್ಯಕ್ತಿಗಳಿಗೆ ಸಾಧಾರಣ ವ್ಯಕ್ತಿಗಳು ಮಾಡಬಹುದಾದ ಚೇಷ್ಟೆಗಳು ನಿಷಿದ್ಧ. ಮೇಷ್ಟರ ಕೆಲಸ ಮಾಡುವ ನನಗೂ ಇದು ಅನೇಕ ಬಾರಿ ಅನುಭವಕ್ಕೆ ಬಂದಿದೆ.

ಆದರೆ ಕಲವು ಘಟನೆಗಳಿಗೆ ಇಂಥಹ ವಿವರಣೆಯನ್ನ ಕೊಡಲಿಕ್ಕೆ ಸಾಧ್ಯವೇಯಿಲ್ಲ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಒಂದು ಪುಟ್ಟ ಹುಡುಗಿಯನ್ನ ಕಲ್ಲು ತೂರಿ ಕೊಂದರಂತೆ. ಕಾರಣ ಯಾರಿಗೂ ಗೊತ್ತಿಲ್ಲ. ದೆಹಲಿಯಲ್ಲಿ ಮುಂದೆ ಹೋಗಲು ಸೈಡ್ ಕೇಳುವುದಕ್ಕೆ ಒಮ್ಮೆ ಹಾರ್ನ್ ಮಾಡಿದ ಬಿ.ಎಸ್.ನಾಗರಾಜ್ ಎಂಬ ಪತ್ರಕರ್ತರನ್ನ ಹಿಡಿದು ಚೆಂಡಾಡಿ ಕೈಮುರಿದು ಕಳಿಸಿದರಂತೆ ಇಬ್ಬರು ಯುವಕರು! ಇಂಥ ಪ್ರಕರಣ ದೆಹಲಿಯಲ್ಲಿ ಇದು ಮೊದಲನೆಯದ್ದೇನು ಅಲ್ಲ. ಟ್ಯಾಮರಿಂಡ್ ಟ್ರೀ ಎಂಬ ರೆಸ್ಟಾರೆಂಟಿನಲ್ಲಿ ತಾವು ಕೇಳಿದ ತಕ್ಷಣ ಗುಂಡು ಕೊಡಲಿಲ್ಲವೆಂದು ಮಾಡೆಲ್ ಜೆಸಿಕಾ ಲಾಲ್ನ ಗುಂಡಿಟ್ಟು ಕೊಂದದ್ದು ಅಷ್ಟು ಸುಲಭವಾಗಿ ಮರೆಯುವುದಕ್ಕೆ ಸಾಧ್ಯವಿಲ್ಲ. ದೆಹಲಿಯ ರಸ್ತೆಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿ, ಪೋಲೀಸು ಪೇದೆಗಳೂ ಇಂಥ ಘಟನೆಗಳಲ್ಲಿ ಸಿಲುಕಿ ಬಲಿಪಶುಗಳಾಗಿರುವ ವರದಿಗಳೂ ಬಂದಿವೆ.
ಇದಕ್ಕೆ ರೊಡ್ ರೇಜ್ ಅಂತ ನಾಮಕರಣವನ್ನೂ ಮಾಡಿಯಾಗಿದೆ.

ಆದರೆ ಸಮಾಜಶಾಸ್ತ್ರಜ್ಞರಾಗಲೀ, ಮಾನಸ ಶಾಸ್ತ್ರಜ್ಞರಾಗಲೀ ಇದಕ್ಕೆ ಕಾರಣ ಏನೆಂದು ಇನ್ನೂ ಹೇಳುವ ಪ್ರಯತ್ನ ಮಾಡಿಲ್ಲ. ಆಶಿಶ್ ನಂದಿಯವರು ಇದನ್ನ “ಭಾರತದ ಅಮೆರಿಕೀಕರಣ” ಅಂತ ಹೇಳಿ ಅಲ್ಲಿನ ಇಂಥ ಅರ್ಥರಹಿತ ಘಟನೆಗಳ ಉದಾಹರಣೆಗಳನ್ನ ನೀಡಿದ್ದಾರೆ. ಜತೆಗೆ ಈ ಇಂಥ ಘಟನೆಗಳು ಮುಂದೆ ಇನ್ನೂ ಹೆಚ್ಚಾಗಲಿವೆಯೇ ಹೊರತು ಕಡಿಮೆಯಂತೂ ಆಗುವುದಿಲ್ಲ ಅಂತಲೂ ಹೇಳಿದ್ದಾರೆ. ಅಮೆರಿಕದಲ್ಲಿ ಶಾಲಾಮಕ್ಕಳು ಗನ್ ಹಿಡಿದು ತಮ್ಮ ಸಹಪಾಠಿಗಳನ್ನ, ಮೇಷ್ಟರುಗಳನ್ನ ಗುಂಡಿಟ್ಟು ಕೊಂದ ಮೂರ್ನಾಲ್ಕು ಘಟನೆಗಳು ಈಚಿನ ದಿನಗಳಲ್ಲಿ ವರದಿಯಾಗಿವೆ.

ಇಂಥ ಕೋಪ ತೀವ್ರ ಅಸಹಾಯಕತೆಯಿಂದ ಉಂಟಾಗಬಹುದು. ಚಡಪಡಿಕೆಯಿಂದ ಉಂಟಾಗಬಹುದು. ಕಾರಣವಿಲ್ಲದೆಯೂ ಆಗಬಹುದು. ಈಚೆಗೆ ಹೈದರಾಬಾದಿನಲ್ಲಿ ನಾನು ಸ್ಕೂಟರಿನಲ್ಲಿ ಹೋಗುತ್ತಿದ್ದೆ. ಒಂದು ಸಿಗ್ನಲ್ ಬಳಿ ನಿಲ್ಲಿಸಬೇಕಾಗಿದ್ದವನು, ಯಾವುದೋ ಲಹರಿಯಲ್ಲಿ ಕೆಂಪು ದೀಪ ನೋಡುವುದನ್ನ ತಡಮಾಡಿ ಲೈನಿನಿಂದ ಸ್ವಲ್ಪ ಮುಂದಕ್ಕೆ ಹೊರಟು ಹೋದೆ. ಎದುರಿನಿಂದ ಜೋರಾಗಿ ಒಂದು ಬಿಳಿ ಮಾರುತಿ ನನ್ನ ಮುಂದಿಂದ ಬಲಕ್ಕೆ ತಿರುಗಿತ್ತು. ಬಹುಶಃ ನಾನು ಸಮಯಕ್ಕೆ ಎಚ್ಚರಗೊಳ್ಳದಿದ್ದರೆ ಅಪಘಾತ ಆಗುತ್ತಿತ್ತೇನೋ. ತಪ್ಪು ನನ್ನದೇ ಆದ್ದರಿಂದ ನಾನು ಸುಮ್ಮನೆ ತಲೆತಗ್ಗಿಸಿ ನಿಂತೆ. ಆದರೆ ಆ ಮಾರುತಿಯಲ್ಲಿದ್ದ ಇಬ್ಬರು ಹುಡುಗರಿಗೆ ಸ್ವಲ್ಪ ಚಡಪಡಿಕೆ ಉಂಟಾಯಿತೆನ್ನಿಸುತ್ತದೆ. ಅವರು ಜೋರಾಗಿ ರಿವರ್ಸ್ನಲ್ಲಿ ಬಂದು ನನ್ನ ಸ್ಕೂಟರ್ಗೆ ಅಡ್ಡವಾಗಿ ನಿಂತು ವಾಚಾಮಗೋಚರ ಬಯ್ಯತೊಡಗಿದರು. ನಾನು ಕ್ಷಮೆ ಕೇಳೋಣವೆಂದು ಬಾಯಿ ತೆರೆಯುವಷ್ಟರಲ್ಲಿ “ಸಿಗ್ನಲ್ ನೋಡಿ ಮಾತಾಡು” ಅಂದರು. “ನಾನೇನು ಮಾತೇ ಆಡುತ್ತಿಲ್ಲ, ನನ್ನದೇ..... ” ಅನ್ನುವಷ್ಟರಲ್ಲಿ ಮತ್ತಷ್ಟು ಕೋಪ ತರಿಸಿಕೊಂಡು -“ಚುಪ್.. ” ಅಂದರು. ಅಷ್ಟರಲ್ಲಿ ನನ್ನ ಸಿಗ್ನಲ್ ಬಂದದ್ದರಿಂದ, ಹಿಂದೆ ನಿಂತಿದ್ದವರೆಲ್ಲಾ ಹಾರ್ನ್ ಬಜಾಯಿಸಿ ಈ ಮಾರುತಿ ದಾರಿ ಬಿಡುವಂತೆ ಮಾಡಿದರು. ತಪ್ಪಿಗೆ ಕ್ಷಮೆಯಾಚಿಸಲೂ ಅವಕಾಶ ಕೊಡದ ಅಸಹನೆ ನನ್ನನ್ನು ಅವಾಕ್ಕಾಗಿಸಿತ್ತು. ಯಾಕೆ ಹೀಗೆ? ನಾನು ಅಕಸ್ಮಾತ್ ಜಗಳಕ್ಕಿಳಿದಿದ್ದರೆ ಅವರ ಗಂಡಸುತನ ನಿರೂಪಿಸಲು ಅವಕಾಶವಾಗುತ್ತಿತ್ತೇನೋ. ಶರಣಾಗತಿಯಿಂದ ಯುದ್ಧ ಗೆದ್ದ ಭಾವನೆ ಬರುವುದೆಲ್ಲಿ?

ತಿರುಮಲೇಶ್ ಬಹಳ ಹಿಂದೆ ತಮ್ಮ ಕವಿತೆ ಮುಖಾಮುಖಿಯಲ್ಲಿ ಯುದ್ಧ, ಸಿಟ್ಟು ಸೆಡವಿನ ಬಗ್ಗೆ ಅದ್ಭುತ ಚಿತ್ರಣ ಕೊಟ್ಟಿದ್ದರು. ಇದ್ದಕ್ಕಿದ್ದಂತೆ ಕಂಡ ಬೆಕ್ಕಿನ ಜೊತೆಗಿನ ಅಘೋಷಿತ ದೃಷ್ಟಿಯುದ್ಧದ ಚಿತ್ರಣ ಕೊಟ್ಟು ಆ ಯುದ್ಧದಲ್ಲಿ ಕವಿಯ ಗೆಲುವನ್ನ ಒಂದು ವಿಷಾದದಲ್ಲಿ ಮುಗಿಸುತ್ತಾರೆ:

......... ಅಷ್ಟಕ್ಕೂ ನಾನು ಗಳಿಸಿದ್ದೇನು?
ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ ---
ಬಿಟ್ಟುಕೊಡುವುದರಿಂದ,
.......................

ಹೀಗೆ ಬರೆದ ತಿರುಮಲೇಶರು ಸುಮಾರು ಎರಡು ವರ್ಷಗಳ ಕಾಲ ಆಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರ ಮೇಲೆ ಯುದ್ಧ ಸಾರಿದ್ದರು. ಅವರ ಅಸ್ತ್ರ - ಕನ್ನಡಪ್ರಭ ಪತ್ರಿಕೆಯ ವಾಚಕರ ವಾಣಿ. ಕಡೆಗೂ ಪಟೇಲರ ಕುರ್ಚಿ ಕೈಬಿಟ್ಟಾಗ ತಿರುಮಲೇಶರಿಗೆ, ಮನುಕುಲದಮೇಲೆ ಮತ್ತೆ ಪುನಃನಂಬಿಕೆ ಹುಟ್ಟಿತೆನ್ನಿಸುತ್ತದೆ. ತಿರುಮಲೇಶರ ಸಿಟ್ಟಿಗೆ ಕಾರಣ: ಮುಖ್ಯಮಂತ್ರಿಯ ಕುರ್ಚಿ ಆಕ್ರಮಿಸಬೇಕಾದ ವ್ಯಕ್ತಿಗೆ ಇರಬೇಕಾದ ಯಾವುದೇ ಕನಿಷ್ಟ ಅರ್ಹತೆಯೂ ಪಟೇಲರಲ್ಲಿ ಕಾಣಿಸದಿದ್ದದ್ದು. (ಇದೂ ಒಂದು ಕಾರಣವೇ ಅಂತ ಸಿನಿಕರು ಕೇಳಬಹುದು) ಕರ್ನಾಟಕದಲ್ಲೇ ಇದ್ದಿರದ ತಿರುಮಲೇಶ್ ಇಲ್ಲಿನ ಪ್ರಜೆಗಳಿಗಿಂತ ಹೆಚ್ಚು ಕೋಪದಿಂದಿದ್ದರು. ಯುದ್ಧ ಸಾರಿದ್ದು ತಿರುಮಲೇಶ, ಗೆದ್ದದ್ದೂ ತಿರುಮಲೇಶ. ಆದರೆ ಹೋರಾಡಿದವರು ಯಾರು?

ಪಟೇಲರಷ್ಟೇ ಅಲ್ಲ, ತಿರುಮಲೇಶ ಡಾಲರ್ ಕಾಲನಿಯ ಪ್ರಕರಣದ ಬಗ್ಗೆ ಕೂಡಾ ಸಿಟ್ಟಾಗಿದ್ದರು. ಇದಕ್ಕೆ ಒಂದು ಹಿನ್ನೆಲೆಯಿದೆ - ಒಮ್ಮೆ ತಿರುಮಲೇಶ್, ಅಗ್ರಹಾರ ಕೃಷ್ಣಮೂರ್ತಿ ಮಾತಾಡುತ್ತಾ ಕೂತಿದ್ದಾಗ, ತಿರುಮಲೇಶ್ ಸಹಜವಾಗಿ ಅಗ್ರಹಾರ ಕೃಷ್ಣಮೂರ್ತಿಯನ್ನ ಕೇಳಿದ್ದರು - “ಲೇಖಕರಿಗೆ, ಅಕಾದಮಿ ಪ್ರಶಸ್ತಿ ವಿಜೇತರಿಗೆ ಸರಕಾರ ಸೈಟುಗಳನ್ನ ಕೊಡುತ್ತದಂತೆ ಹೌದಾ?” ಅದಕ್ಕೆ ಕೃಷ್ಣಮೂರ್ತಿ ತಮಾಷೆಯಾಗಿ - “ಲೇಖಕರಾದರೆ ಅವರಿಗೇನು ಕೋಡಿರುತ್ತಾ, ಯಾಕೆ ಸೈಟು ಕೊಡಬೇಕು?” ಅಂತ ಕೇಳಿದರು. ಅದು ತಿರುಮಲೇಶರಿಗೆ ಎಷ್ಟು ಗಟ್ಟಿಯಾಗಿ ತಟ್ಟಿತೆಂದರೆ ಅವರು ಬಾಹುಬಲಿಯಂತೆ ಆ ವಿಷಯವನ್ನ ಬಿಟ್ಟುಕೊಟ್ಟೇಬಿಟ್ಟರು. ಇಂಥ ನಿಲುವಿಗೆ ಸಹಲೇಖಕರಿಂದ ರೆಸಿಪ್ರೊಕೇಟಿವ್ ಚರ್ಯೆಗಳು ಬರದಿದ್ದದ್ದು ಸಹಜವಾಗಿಯೇ ಕೋಪಕ್ಕೆ ಕಾರಣವಾಗಿರಬಹುದು. ಇದು ಸಕಾರಣವಾದ ಕೋಪವೇ? ಹಾಗಾದರೆ ಇಂಥ ಕೋಪ ಎಲ್ಲರಿಗೂ ಯಾಕೆ ಬರುವುದಿಲ್ಲ?

ಅಮೆರಿಕದಲ್ಲಿ ರಾತ್ರೆಯವೇಳೆ ಸಬ್ವೇಗಳಲ್ಲಿ ನಡೆದಾಡಬೇಡಿರೆಂದು ಕಿವಿಮಾತು ಹೇಳುವವರನ್ನ ಕಂಡಿದ್ದೇನೆ. ಹಣಕ್ಕಾಗಿ ಲೂಟಿಮಾಡಲು ತಯಾರಾಗಿ ಹಲವು ಮಂದಿ ಅಲ್ಲಿ ಓಡಾಡುತ್ತಿರುತ್ತಾರಂತೆ. ಹಣವಿದ್ದರೆ, ಅದು ಲೂಟಿಯಾಗುವುದು ಖಂಡಿತ. ಅಕಸ್ಮಾತ್ ಹಣವಿಲ್ಲದಿದ್ದರೆ ಅಸಹಾಯಕತೆ, ಅಸಹನೆಯಲ್ಲಿ ಗುಂಡಿಟ್ಟು ಕೊಂದೇ ಬಿಡುತ್ತಾರಂತೆ. ಮಗ್ಗಿಂಗ್ ಅಂತ (ಮುಖಕ್ಕೆ ಇಕ್ಕುವುದು) ನಾಮಕರಣ ಆಗಿರುವ ಈ ಕಲೆ, ಹೊಸ ಸುಲಿಗೆಯ ವಿಧಾನ. ಇದು ಅಸಹನೆಯ ಪರಮಾವಧಿಯೇ? ಫಿಜಿಯಲ್ಲಿ ಜಾರ್ಜ್ ಸ್ಪೇಟ್ ಎಂಬ ತಲೆತಿರುಕ ಪಾರ್ಲಿಮೆಂಟ್ ಭವನದಲ್ಲಿ ಮಾಜಿ ಪ್ರಧಾನಿ, ಭಾರತ ಸಂಜಾತ ಮಹೇಂದ್ರ ಚೌಧರಿಯನ್ನೂ ಸೇರಿದಂತೆ ೩೦ ಜನರನ್ನ ಒತ್ತೆಯಾಳಾಗಿಟ್ಟುಕೊಂಡು ತನಗೇ ರಾಜ್ಯಭಾರ ನೀಡಬೇಕೆಂದು ಹಾರಾಡಿದ. ಹಿಂದೆ ತನ್ನದೇ ವ್ಯಾಪಾರ ಮಾಡಲು ಹೋಗಿ ಕೈಲಾಗದೇ ನಷ್ಟಮಾಡಿಕೊಂಡು ದಾರಿಕಾಣದೇ ಕಂಗಾಲಾಗಿದ್ದ ಈತನಿಗೆ ತನ್ನ ಅಸಹಾಯಕತೆಯನ್ನ ತೋಡಿಕೊಳ್ಳಲು ಕಂಡ ಮಾರ್ಗ ಇದು. ನನ್ನ ಅರ್ಹತೆಗೆ ತಕ್ಕಂತೆ ನಾನು ಎರಡನೆಯ ದರ್ಜೆಯಲ್ಲಿ ಪಾಸಾಗುವುದು ಒಂದು ಬದಿಗಾದರೆ - ನನ್ನ ಗೆಳೆಯ ರ್ಯಾಂಕು ಪಡೆದನೆಂದು ಸಿಟ್ಟಾಗೋದು ಮತ್ತೊಂದು ಬದಿ. ಹೊಟ್ಟೆಯುರಿ, ಸರಿ ಅರ್ಥವಾಗುತ್ತೆ - ಆದರೆ ಕೋಪ??

ಮನೋಜ್ ಪ್ರಭಾಕರ್‌ಗೆ ಯಾರ ಮೇಲೆ ಕೋಪ? ಯಾಕೆ ಕೋಪ? ಇದು ಕುತೂಹಲದ ವಿಷಯ. ಸತ್ಯ ತಿಳಿಯುವುದು ನಮ್ಮಂತಹವರಿಗೆ ಎಂದೆಂದಿಗೂ ಅಸಾಧ್ಯ. ಮೊದಲು ಅತ್ತು ಕರೆದು ಗೋಳಾಡಿ ಅಸಹಾಯಕರಾಗಿ ಕಂಡ ಕಪಿಲ್ ಮುಂದಿನ ಬಾರಿ ಕ್ಯಾಮರಾ ಎದುರಿಸುವಷ್ಟರಲ್ಲಿ ಮೈಯೆಲ್ಲಾ ಕೆಂಡವಾಗಿಬಿಟ್ಟಿದ್ದರು. ಎರಡರಲ್ಲಿ ದೊಡ್ಡ ಅಸ್ತ್ರ ಯಾವುದು? ಕಣ್ಣೀರೇ ಕೋಪವೇ?

ನಮ್ಮ ಕ್ರಿಕೆಟ್ ಹೀರೋಗಳು ಈ ಎಲ್ಲ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಬಹಳಷ್ಟು ಮಂದಿ ಕ್ರಿಕೆಟ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಆದರೆ ಇದರಲ್ಲಿ ನಿಜವಿದೆಯಂತ ಗೊತ್ತಾಗುತ್ತಾ ಹೋದಷ್ಟೂ ಸಿಟ್ಟು ಆಟಗಾರರ ಮೇಲೆಯೇ ಹೆಚ್ಚಾಗುತ್ತಾ ಹೋಗುತ್ತೆ. ಆದರೆ ಅಕಸ್ಮಾತ್ ದಾಲ್ಮಿಯಾ ಬಿಂದ್ರಾ ಲೆಲೆಯಂಥವರು ಇದರಲ್ಲಿ ಶಾಮೀಲಾಗಿದ್ದಾರಂತ ಸುದ್ದಿ ಬಂದರೆ, ಅವರುಗಳ ಮೇಲೆ ಕಪಿಲ್ ಮೇಲೆ ಬಂದಷ್ಟು ಕೋಪ ಬರಲಾರದೇನೋ - ಕೋಪವೂ ನಮ್ಮ ಇಷ್ಟದೇವತೆಗಳ ಮೇಲೆ ನಾವಿಟ್ಟ ನಿರೀಕ್ಷೆ ಮತ್ತು ನಡವಳಿಕೆಗಳ ಅಂತರದಿಂದ ಮಾತ್ರ ಉದ್ಭವವಾಗುವುದಲ್ಲವೇ - ದಾಲ್ಮಿಯಾ ಬಿಂದ್ರಾ ಲೆಲೆ ಗಳ ಮೇಲೆ ನಾವುಗಳು ಇಟ್ಟಿರುವ ನಿರೀಕ್ಷೆಯಾದರೂ ಏನು?

ಮನೊಜ್ ಜೊತೆಗೆ ಕೂಡಿ ವಿಡಿಯೋ ತೆಗೆಯಲು ಸಹಾಯ ಮಾಡಿದ ತರುಣ್ ತೇಜ್ಪಾಲ್ ಜೊತೆಗೇ ಯಾಕೆ ಹೋಗಿದ್ದು ಇನ್ಯಾರನ್ನಾದರೂ ಸಂಪರ್ಕಿಸಬಹುದಿತ್ತಲ್ಲವೇ? ಅನ್ನುವ ಪ್ರಶ್ನೆಗೆ ಮನೊಜ್ “ನಾನು ಮೊದಲ ಬಾರಿ ಸಂದರ್ಶನ ನೀಡಿದ ಪತ್ರಿಕೆಯಲ್ಲಿ ಇವರುಗಳು ಇದ್ದರು. ನನ್ನ ಕಾರಣವಾಗಿ ಅವರಿಗೆ ಅನೇಕ ತೊಂದರೆಗಳುಂಟಾಯಿತು. ಹೀಗಾಗಿ ಈ ಕೆಲಸವನ್ನ ನಾನು ಅವರ ಜೊತೆಗೇ ಮಾಡಬೇಕಂತ ನಿರ್ಧರಿಸಿದೆ” ಎಂದು ಹೇಳಿ ತಮ್ಮ ವಫಾದಾರಿ ತೋರಿಸಿದ್ದಾರೆ. ಅಂದರೆ ತೇಜ್ಪಾಲ್ಗೆ ಔಟ್ಲುಕ್ ಪತ್ರಿಕೆಯ ಮೇಲೆ ಸಿಟ್ಟೇ?

ಸಿಟ್ಟು ಯಾವಾಗಲೂ ವಿನಾಶಕಾರಿಯಾಗಿರಬೇಕೆಂದೇನೂ ಇಲ್ಲ. ಇದೇ ತರುಣ್ ತೇಜ್ಪಾಲ್ ಹಾರ್ಪರ್ ಕಾಲಿನ್ಸ್ ಎನ್ನವ ಸಂಸ್ಧೆ ಅರುಂಧತಿ ರಾಯ್ ಅವರ “ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಕಾದಂಬರಿ ಪ್ರಕಟಿಸಲು ಹಿಂದು ಮುಂದು ನೋಡಿದಾಗ ಸಿಡಿದೆದ್ದು ತಮ್ಮದೇ ಸಂಸ್ಥೆ ಇಂಡಿಯಾ ಇಂಕ್ ಸ್ಥಾಪಿಸಿ ಅದನ್ನ ಪ್ರಕಟಿಸಿದರು. ಆ ಕಾದಂಬರಿಗೆ
ಪ್ರತಿಷ್ಠಿತ ಬುಕರ್ ಬಹುಮಾನ ಬಂತು.

ಬಹುಮಾನದ ಹಣ ದೊಡ್ಡ ಮೊತ್ತ. ಅಷ್ಟು ದುಡ್ಡು ಬಂದಾಗ ಸಿಟ್ಟಾಗುವುದು ಅಸಹಜ ಅಲ್ಲವೇ? ಆದರೆ ಬುಕರ್ ಬಹುಮಾನ ಪಡೆದ ಅರುಂಧತಿ, ಆ ಹಣವನ್ನ ಒಯ್ದು ಎಲ್ಲಿ ಮುಳುಗಡೆ ಮಾಡಿದರು ಅನ್ನುವುದು ಇನ್ನೂ ಕುತೂಹಲದ ವಿಷಯ. ಅದುವರೆಗೂ ಎರಡು ಇಂಗ್ಲೀಷ್ ಚಿತ್ರಗಳಿಗೆ ಸ್ಕ್ರಪ್ಟ್ ಬರೆದು ಆಗಷ್ಟೇ ಪ್ರಥಮ ಕಾದಂಬರಿಗೆ ಬುಕರ್ ಪಡೆದ ಅರುಂಧತಿ ಬರವಣಿಗೆಯನ್ನೇ ಜೀವನ ಮಾಡಿಕೊಳ್ಳಬಹುದು ಎಂದು ಲೆಕ್ಕ ಹಾಕುತ್ತಾ ಕುಳಿತವರಿಗೆ ಚಳ್ಳೆಹಣ್ಣು ತಿನ್ನಸಿ - ಜಗತ್ತಿನ ಮೇಲೆ ಮುನಿಸಿ ಕುಳಿತರು. (ಸದ್ಯ ಕನ್ನಡದ ಖ್ಯತ ಮುನ್ನಡಿಕಾರರು ಯಾರೂ ಅರುಂಧತಿಗೆ ಮುನ್ನುಡಿ ಬರೆಯಲಿಲ್ಲ - ಇಲ್ಲವಾದರೆ ಉದಯೊನ್ಮುಖರಾದ ಇವರ ಮುಂದಿನ ಕೃತಿಗಳು ಇನ್ನೂ ಸತ್ವಶಾಲಿಯಾಗಿರಬಹುದು, ಅದನ್ನ ಕಾತರದಿಂದ ಎದುರುನೋಡುವಂತಾಗಿದೆ ಅಂತ ಬರದು ಕೈಕೈ ಹಿಸುಕಿಕೊಳ್ಳುತ್ತಾ ಕೂತಿರುತ್ತಿದ್ದರು) ಅರುಂಧತಿ, ಮೊದಲಿಗೆ ಅಣುಬಾಂಬು ಸಿಡಿಸಿದ ಸರಕಾರದ ಮೇಲೆ ಮುನಿಸಿಕೊಂಡು ಒಂದು ದೊಡ್ಡ ಪರಮಾಣು ವಿರೋಧಿ ಲೇಖನ ಬರೆದು ಜಗತ್ತಿನ ಮೇಲಿದ್ದ ತಮ್ಮ ಕೋಪವನ್ನೆಲ್ಲಾ ತೋಡಿಕೊಂಡು ಬಿಟ್ಟರು. ಅಲ್ಲಿಗೆ ಸಮಾಧಾನವಾಗದೇ ಮೇಧಾ ಪಾಟ್ಕರ್ ಜತೆ ಸೇರಿ ಬುಕರ್ನಿಂದ ಬಂದ ತಮ್ಮ ಸಕಲಸಂಪತ್ತನ್ನೂ ನರ್ಮದಾ ಬಚಾವೋ ಆಂದೋಳನದಲ್ಲಿ ಮುಳುಗಡೆ ಮಾಡಿದರು. ಈಗ ಒಬ್ಬರ ಬದಲಿಗೆ ಇಬ್ಬರು ಸಿಟ್ಟಾಗಿ ನರ್ಮದಾ ನದಿಯ ಮೇಲಿನ ಅಣಕಟ್ಟನ್ನ ವಿರೋಧಿಸಿ ಓಡಾಡುತ್ತಿದ್ದಾರೆ.

ಇಲ್ಲಿ ಅಣೆಕಟ್ಟು ಪರವಾಗಿ ಇರುವ ಗುಜರಾತಿನ ಜನ ಅರುಂಧತಿಯ ಕಾದಂಬರಿಯನ್ನು ಓದಿ, ಒಂದು ಕಡೆ ಖುಷಿ ಪಟ್ಟರೆ, ಮತ್ತೊಂದೆಡೆ ಆಕೆಗೆ ಯಾಕಾದರೂ ಬುಕರ್ ಬಹುಮಾನ ಬಂತೋ ಅಂತ ಬೇಸರ ಮಾಡುಕೊಂಡು ಕೂತಿದ್ದಾರೆ. ಅರುಂಧತಿಯಾಗಲೀ ಮೇಧಾ ಆಗಲೀ ಗುಜರಾತಿನೊಳಗೆ ಕಾಲಿಡದಂತೆ ಅನೌಪಚಾರಿಕ ನಿರ್ಬಂಧ ಹೂಡಲಾಗಿದೆ. ಅಂದರೆ ಒಂದು ಜನಸಮೂಹದ ಸಿಟ್ಟು ಕಾನೂನಿಗಿಂತ ಹಕ್ಕುಗಳಿಗಿಂತ ದೊಡ್ಡದಾಗಿ ನಿಂತುಬಿಡುತ್ತದೆ. ಅರುಂಧತಿಯಾಗಲೀ ಮೇಧಾ ಆಗಲೀ ಗುಜರಾತಿನೊಳಗೆ ಸಭೆ ಸಮಾರಂಭವನ್ನ ಉದ್ದೇಶಿಸದಂತೆ ಅನೌಪಚಾರಿಕ ನಿರ್ಬಂಧ ಹೂಡಲಾಗಿದೆ. ಅಂದರೆ ಒಂದು ಜನಸಮೂಹದ ಸಿಟ್ಟು ಕಾನೂನಿಗಿಂತ ಹಕ್ಕುಗಳಿಗಿಂತ ದೊಡ್ಡದಾಗಿ ನಿಂತುಬಿಡುತ್ತದೆ. ಸುಪ್ರೀಂ ಕೊರ್ಟಿನ ತೀರ್ಮಾನ ಬಂದ ಮೇಲೆ ಮೇಧಾರೂ ಇದನ್ನೇ ಮಾಡಿ ತೋರಿಸುತ್ತಿದ್ದಾರೆ. ಬರೋಡಾದಲ್ಲಿ ಮುನಿಸಿಪಾಲ್ಟಿಯ ನಲ್ಲಿಯಲ್ಲಿ ನೀರು ಬರದಿದ್ದರೆ - ಅದಕ್ಕೂ ನರ್ಮದಾ ಅಣೆಕಟ್ಟು ಹಾಕಲು ಅಡ್ಡಗಾಲು ಹಾಕುತ್ತಿರುವ ಮೇಧಾರೇ ಕಾರಣರಾಗಿಬಿಡುತ್ತಾರೆ ಪಾಪ!! ಒಂದು ಇಡೀ ಜನಸಮೂಹವನ್ನ ಸಿಟ್ಟಾಗಿಸುವುದು ಹೇಗೆಂದು ಮೇಧಾ ಒಂದು ಕಡೆಯಿಂದ, ಗುಜರಾತಿನ ರಾಜಕಾರಣಿಗಳು ಮತ್ತೊಂದು ಕಡೆಯಿಂದ ನಿರೂಪಿಸಿ ತೋರಿಸುತ್ತಿದ್ದಾರೆ.

ಯಾರ ಮೇಲೆ ಕೋಪ? ಯಾವ ಕಾರಣವಾಗಿ? ನಾನು ಕೆಲಸ ಮಾಡುತ್ತಿದ್ದ ಸಂಸ್ಧೆಯಲ್ಲಿ ನಿರ್ದೇಶಕರಾಗಿ ಮಾಜಿ ಐ‌ಎ‌ಎಸ್ ಅಧಿಕಾರಯೊಬ್ಬರು ಬಂದರು. ಆತ ಆ ಸಂಸ್ಧೆಯಿಂದ ನಿವೃತ್ತಿ ಪಡೆದು ಹತ್ತು ವರ್ಷಗಳಾಗುತ್ತ ಬಂದರೂ, ಆತನ ಕಾಲದಲ್ಲಿ ಸಂಸ್ಧೆಯಲ್ಲಿ ಕೆಲಸ ಮಾಡುವುದು ಎಷ್ಟು ಚೆನ್ನಾಗಿತ್ತು ಅಂತ ಈಗಲೂ ಜನ ಚಪ್ಪರಿಸಿ ಮಾತಾಡುತ್ತಾರೆ. ಯಾರಮೇಲೂ ಸಿಟ್ಟು ಮಾಡಿಕೊಳ್ಳದ ಆತನಿಗೆ ಅಕೌಂಟ್ಸ್ ಆಫೀಸರ್ ಕಂಡರಾಗುತ್ತಿರಲಿಲ್ಲ. ತನ್ನ ಕೋಣೆಯಲ್ಲಿ ಧೂಳು ಹೊಡೆಯದಿದ್ದರೂ, ಸಮಯಕ್ಕೆ ಸರಿಯಾಗಿ ಚಹಾದ ಸರಬರಾಜಾಗದಿದ್ದರೂ, ವಿದ್ಯುತ್ ಇಲಾಖೆಯವರು ಕರೆಂಟು ಕಿತ್ತರೂ, ಆ ಬಡಪಾಯಿಯನ್ನ ಕರೆದು ವಾಚಾಮಗೋಚರ ಬೈಯ್ಯುವುದೇ. ಯಾಕೆ ಸರ್ ಹೀಗೆ ಅಂತ ಕೇಳುವ ಧೈರ್ಯ ಯಾರಿಗೂ ಇಲ್ಲ. ಹಾಗೂ ಹೀಗೂ ಒಂದು ದಿನ ಧೈರ್ಯಮಾಡಿ ನಾವುಗಳು ಕೆಲವರು ಕೇಳಿಯೇಬಿಟ್ಟಾಗ -“ಅವನ ಮಾತಿನಲ್ಲಿ ರ ಕಾರ ಸ್ಪಷ್ಟವಾಗಿ ಉಚ್ಚಾರ ಮಾಡೊಲ್ಲವಲ್ಲವಯ್ಯಾ.. ಯ ಅನ್ನುತ್ತಾನೆ.. ” ಅಂದುಬಿಡುವುದೇ??

ಫುಲ್ ಆರ್ಮ್ ಶರ್ಟಿನ ತೋಳಿನ ಗುಂಡಿ ಹಾಕುತ್ತಿರಲಿಲ್ಲವೆಂಬ ಕಾರಣಕ್ಕೆ ನನಗೆ ನನ್ನ ಸಹೋದ್ಯೋಗಿಯೊಬ್ಬನ ಮೇಲೆ ವಿಪರೀತ ಸಿಟ್ಟು ಬರುತ್ತಿತ್ತು. ಅವನು ಕೋಣೆಗೆ ಬಂದರೆ ನನ್ನ ಮೈಯೆಲ್ಲಾ ಉರಿದು ಹೋಗುತ್ತಿತ್ತು. ಕಡೆಗೂ ನನ್ನ ಕಾಟ ಕೋಪ ತಡೆಯಲಾರದೇ ಅವನು ಬೇರೆ ಕೆಲಸ ನೋಡಿಕೊಂಡುಬಿಟ್ಟ. ಇದು ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ಇಂದಿಗೂ ಯಾಕೆ ನನಗೆ ಅವನನ್ನ ಕಂಡರೆ ಕೋಪ ಉಕ್ಕುತ್ತಿತ್ತು ಅಂತ ಅರ್ಥವಾಗಿಲ್ಲ. ಆ ಘಟನೆಗೆ ನನಗೆ ಪಶ್ಚತ್ತಾಪವೂ ಆಗಿಲ್ಲ ಬೇಸರವೂ ಆಗಿಲ್ಲ - ಆದರೆ ಕುತೂಹಲ ಮಾತ್ರ ನೀಗಿಲ್ಲ.

ಕೊಪತಾಪದ ವಿಚಾರ ಮಾತನಾಡಿ ಅಮಿತಾಭ್ ಬಚ್ಚನ್ ಬಗ್ಗೆ ಮಾತಾಡದಿದ್ದರೆ ಅದಕ್ಕೆ ಪೂರ್ಣತೆ ಎಲ್ಲಿ? ಒಂದು ಇಡೀ ಪೀಳಿಗೆಗೇ ಕೋಪವೆಂದರೇನು, ಅದನ್ನು ಸದ್ವಿನಿಯೋಗ ಮಾಡುವುದು ಹೇಗೆ ಅಂತ ಹೇಳಿಕೊಟ್ಟವರು ಬಚ್ಚನ್. ಈಗ ತಮ್ಮ ಎಬಿಸಿ‌ಎಲ್ ಇತ್ಯಾದಿಯಿಂದಾಗಿ ಆರ್ಥಿಕ ಕಷ್ಟಗಳಲ್ಲಿರುವ ಬಚ್ಚನ್ರನ್ನ ಪತ್ರಕರ್ತರು ಹಿಡಿದು ಚೆಂಡಾಡಿದ್ದಾಗಿದೆ. ಆದರೂ ಗಂಭೀರವಾಗಿ, ಏನೂ ಆಗಿಲ್ಲವೆಂಬಂತೆ ಸ್ಥಿತಪ್ರಜ್ಞರಾಗಿ ಕುಳಿತಿರುವ ಬಚ್ಚನ್ರ ಕೋಪ ಬರೇ ನಟನೆಗೆಮಾತ್ರ ಸೀಮಿತವಾಗಿತ್ತೇ? ಈ ಗಾಂಭೀರ್ಯ ಸೈಫ್ಗಾಗಲಿ ಅನುಪಮ್ ಖೇರ್ಗಾಗಲೀ, ಬರಲೇಯಿಲ್ಲ ನೋಡಿ.

ಆದರೂ ಕೋಪಬಂದಾಗ ಕೆಂಡಕಾರಿ ಕೂಗಾಡುವುದು ಒಳ್ಳಯದಂತ ವೈದ್ಯರ ಅಭಿಪ್ರಾಯ. ಇದರಿಂದಾಗಿ ಅಲ್ಸರ್ ತಪ್ಪಿಸಿದಂತಾಗುತ್ತದೆ. ಕೋಪವನ್ನ ತಡೆಯುತ್ತಾ ಹೊದಷ್ಟಕ್ಕೂ ಅದು ಪ್ರಷರ್ ಕುಕರ್ನ ಸ್ಟೀಮ್ನಂತೆ ಬಲಗೊಳ್ಳುತ್ತಾ ಹೋಗುತ್ತದೆ. ಅದಕ್ಕೇ ಆವಿ ಹೊರಹೋಗುವ ಕಲ ಸೇಫ್ಟೀ ವಾಲ್ವುಗಳು, ಗಾಸ್ಕೆಟ್ ರಿಲೀಸ್ ಸಿಸ್ಟಂಗಳೂ ಬೇಕೇಬೇಕು.

ಆದರೆ ಕೋಪದ ಫಲಗಳು ಒಮ್ಮೊಮ್ಮೆ ಎಷ್ಟು ರುಚಿಯಾಗಿರುತ್ತದೆಂದು ನನ್ನ ಈಚಿನ ಅನುಭವ ಹೇಳುತ್ತದೆ. ಹೈದರಾಬಾದಿನಲ್ಲಿ ನಾನೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕಂಪನಿಯಲ್ಲಿ ಇನ್ನಷ್ಟು ಬಂಡವಾಳ ಹೂಡಿಕೆ ಹೆಚ್ಚಿಸುವ ಸಲುವಾಗಿ ಕೆಲ ವಿದೇಶೀ ಆರ್ಥಿಕ ಸಂಸ್ಥೆಗಳಿಗೆ ನಮ್ಮ ಸಂಸ್ಥೆಯ ಮುಖ್ಯಸ್ಧರೊಡನೆ ನಾನು ಭೇಟಿ ನೀಡುವುದಿತ್ತು. ಹೊರಡುವ ಮುಂಚಿನಿಂದಲೇ ನನಗೂ ಮುಖ್ಯಸ್ಧರಿಗೂ ಸ್ವಲ್ಪ ಅಭಿಪ್ರಾಯಭೇದವಿತ್ತು - ನಾವು ತಕ್ಷಣ ಹೋಗುವುದಕ್ಕೆ ಸಾಕಷ್ಟು ತಯಾರಿಮಾಡಿಲ್ಲವಾದ್ದರಿಂದ - ಈ ಇಡೀ ಯಾತ್ರೆಯನ್ನ ೪-೫ ತಿಂಗಳನಂತರ ಪ್ಲಾನ್ ಮಾಡೋಣಾಂತ ನಾನು, ತಕ್ಷಣ ಹೊರಡಬೇಕಂತ ಬಾಸ್. ಕಡೆಗೂ ಗೆದ್ದದ್ದು ಮುಖ್ಯಸ್ಧರೇ (ಇದನ್ನು ಪ್ರತ್ಯೇಕವಾಗಿ ಹೇಳಬೇಕೇ?). ಸರಿ ಹೊರಟೆವು. ಆಮ್ಸ್ಟರ್ಡ್ಯಾಮ್ನಲ್ಲಿ ಒಂದಿನ ಮುಂಜಾನೆ ಇಷ್ಟವಿಲ್ಲದೆಯೇ ನಾನು ಟೈ, ಸೂಟು ಬೂಟು ಧರಿಸಿ ೮ಕ್ಕೆ ತಯಾರಾಗಿ ನಿಂತೆ. ಬಾಸ್ ಬಂದು - “ಈದಿನ ಕಂಪನಿಯ ಬಗ್ಗೆ ನಮ್ಮ ಯೋಜನೆಗಳ ಬಗ್ಗೆ ನೀನು ಮಾತಾಡು. ಎಷ್ಟಾದರೂ ನಿನ್ನ ಪ್ರಸೆಂಟೇಷನ್ ಚೆನ್ನಾಗಿರುತ್ತೆ. ಪ್ರಶ್ನೆಗಳು ಎದ್ದಾಗ ನಾನೂ ಸೇರಿಕೊಳ್ಳುತ್ತೇನೆ” ಅಂದ. ನಾನು ತಮಾಷೆಗೆ -“ನಾಚ್ ಮೇರಿ ಬುಲ್ಬುಲ್ ತೋ ಪೈಸಾ ಮಿಲೇಗಾ..” ಅಂದೆ. ಆ ಕ್ಷಣಕ್ಕೆ ಆತ ಸುಮ್ಮನಿದ್ದರೂ, ಈ ಮಾತಿಗೆ ನನ್ನನ್ನ ಆತ ಎಂದಿಗೂ ಕ್ಷಮಿಸಲಿಲ್ಲ. ಅದೇ ನನ್ನ ರಾಜೀನಾಮೆ ಪತ್ರವಾಯಿತು!! ಅದರ ಫಲವಾಗಿ ನಾನು ಕೆಲಸ ಹುಡುಕತೊಡಗಿದೆ. ಅದರಿಂದ ನನಗಾಗಿದ್ದೇನೆಂದರೆ ಮಾರುಕಟ್ಟೆಯಲ್ಲಿ ನನ್ನಂತಹ ಉದ್ಯೋಗಿಗಳನ್ನ ಪಡೆಯಲು ಬಹಳಷ್ಟು ಮಂದಿ ಕಾತರರಾಗಿದ್ದಾರೆ ಅನ್ನುವ ಸತ್ಯ ತಿಳಿದದ್ದು! ನಂತರ ಹಿಂದಿನದ್ದಕ್ಕಿಂತ ಒಂದು ಒಳ್ಳಯ ಕೆಲಸಕ್ಕೆ ಸೇರಿದ್ದೂ ಆಯಿತೆನ್ನಿ.

ಹಿಂದೆ ಒಮ್ಮೆ ಲಂಕೇಶ್ ನನ್ನನ್ನ ಪತ್ರಕೆಗಾಗಿ ವೈ‌ಎನ್ಕೆ ಸಂದರ್ಶನ ಮಾಡಲು ಹೇಳಿದ್ದರು. ವೈ‌ಎನ್ಕೆ ಆಗ ಕನ್ನಡಪ್ರಭದ ಸಂಪಾದಕರಾಗಿದ್ದರು. ನಾನು ಕೇಳಿದಾಗ -“ಬೇಡ”ಅಂದಷ್ಟೇ ಹೇಳಿ ವೈ‌ಎನ್ಕೆ ಸುಮ್ಮನಾದರು. ಆದರೆ ಅಷ್ಟಕ್ಕೆ ಬಿಡದೇ ನಾನು ಅವರನ್ನ ಬಲವಂತ ಮಾಡಿದೆ - “ಇಲ್ಲ ಲಂಕೇಶ್ಗೆ ಬೇಡ.” ಬಹುಶಃ ಹಳೇ ಮನಸ್ತಾಪ ಏನಾದರೂ ಇದ್ದಿದ್ದಿದ್ದಿರಬಹುದು. ಆದರೆ ವೈ‌ಎನ್ಕೆ ನನಗೆ ಕೊಟ್ಟ ಕಾರಣವೇನು ಗೊತ್ತೇ? “ಲಂಕೇಶ್ಗೆ ಗಿರೀಶ್ ಕಾರ್ನಾಡರ ಹಯವದನ ಇಷ್ಟವಿಲ್ಲ - ಕುದುರೆ ರೇಸಿನಲ್ಲಿ ದುಡ್ಡು ಕಳಕೊಂಡಿರೋದರಿಂದ ಹಯವದನಾನ ಬೈದು ಬರೀತಾರೆ, ಬೇಡ...” ಅಲ್ಲೂ ತಮ್ಮ ಪನ್ ಬಿಡದೇ ವಿಚಿತ್ರ ಕಾರಣ ಕೊಟ್ಟು ವೈ‌ಎನ್ಕೆ ತಪ್ಪಿಸಿಕೊಂಡುಬಿಟ್ಟರು.

ಆದರೆ ಇಂಥ ವೈ‌ಎನ್ಕೆ ಸಿಟ್ಟಾಗಿದ್ದಾರೆ ಜೀಬಿ ಸಿಟ್ಟಾಗಿದ್ದಾರೆ ಅಂತ ಒಂದು ಅದ್ಭುತ ಪದ್ಯವನ್ನ ಬರೆದಿದ್ದಾರೆ. ಅಟ್ಟದ ಮೇಲೆ ಸಿಟ್ಟಾಗಿರುವ ಜೀಬಿಯವರನ್ನು ಸಿಟ್ಟಾಗ ಬೇಡಿ ಎಂದರೆ ಕೇಳುವುದಿಲ್ಲ. ಯಾಕೆಂದರೆ ಇಳಿವಯಸ್ಸಿನ ಜೀಬಿಗೆ ಹೆಚ್ಚು ಹೊತ್ತು stand ಆಗುವ ತ್ರಾಣವಿಲ್ಲ. ನಾವೆಲ್ಲರೂ ಹೀಗೆ ಚೆನ್ನಾಗಿ sit ಆಗಿರೋಣ.

No comments: