Sunday, March 8, 2009

ರಾಶೊಮೊನ್: ಭೂತ, ವರ್ತಮಾನ

ಭಾಗ ೧: ಭೂತ

ಅಗಸೆಯ ಅಂಗಳದಲ್ಲಿ ವಿನಾಯಕ ಪಂಡಿತರು ಕುರಸೊವಾನ ಚಿತ್ರಗಳ ಬಗ್ಗೆ ಒಂದು ಒಳ್ಳೆಯ ಪ್ರಬಂಧವನ್ನು ಬರೆದಿದ್ದಾರೆ. ನನಗೆ ಕುರಾಸೊವಾನ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ರಾಶೊಮೊನ್ ಚಿತ್ರದ ಡಿ.ವಿ.ಡಿ ದೊರೆತಾಗ ಅದನ್ನು ಹಲವು ಬಾರಿ ನೋಡಿದೆ. ಈ ಚಿತ್ರಕ್ಕೆ ಮೂಲ ಆಧಾರ
 ರೈನೊಸುಕೆ ಅಕುಟಗವಾರ ಎರಡು ಕಥೆಗಳು.


ರಾಶೋಮನ್ ಕಥೆ ನನ್ನ ಕೈಗೆ ಸಿಕ್ಕಿಲ್ಲ ಆದರೆ ಅದರ ಸಾರ ಇಲ್ಲಿದೆ. ಕ್ಯೋಟೋ ನಗರದ ಅಂಚಿನಲ್ಲಿರುವ ರಾಶೊಮನ್ ಗೇಟಿನಲ್ಲಿ ಆ ಕಥೆ ಘಟಿಸುತ್ತದೆ. ಆಗಷ್ಟೇ ಕೆಲಸ ಕಳೆದುಕೊಂಡ ಬಡಪಾಯಿಯೊಬ್ಬ ಅಲ್ಲಿಗೆ ಬರುತ್ತಾನೆ. ಬೆಂಕಿ, ಭೂಕಂಪ, ಅಕಾಲಕ್ಕೆ ಈಡಾಗಿರುವ ಕ್ಯೋಟೊ ದುಃಖದಾಯೀ ಸ್ಥಿತಿಯಲ್ಲಿದೆ. ಅಲ್ಲಿ ಕುಳಿತು ಸತ್ತವರ ಜುಟ್ಟನ್ನು ಕತ್ತರಿಸಿ ವಿಗ್ ಮಾಡಿ ಮಾರುತ್ತಿರುವ ಮುದುಕಿ ತನ್ನ ಜೀವನೋಪಾಯಕ್ಕೆ ಇದನ್ನು ಮಾಡುವುದರಲ್ಲಿ ತಪ್ಪೇನೂ ಇಲ್ಲವೆಂದು ಸಮರ್ಥಿಸಿಕೊಳ್ಳುತ್ತಾಳೆ. ಇಂಥ ಕ್ರೂರ ಜಗತ್ತಿನಲ್ಲಿ ಜೀವಿಸಲು ಏನು ಮಾಡಿದರೂ ತಪ್ಪಿಲ್ಲವೆಂದು ಅವಳಿಂದ ಬೊಧನೆ ಪಡೆದ ಆತ ಅವಳ ಬಟ್ಟೆಗಳನ್ನೇ ಕದ್ದು ಓಡಿಹೋಗುತ್ತಾನೆ.

ಈ ಚಿತ್ರಕ್ಕೆ ಆಧಾರ In a Grove ಎಂಬ ಎರಡನೆಯ ಕಥೆ. ಹಾಗೆ ನೋಡಿದರೆ ಬಟ್ಟೆ ಕದಿಯುವ ಘಟನೆಯನ್ನು ಬಿಟ್ಟರೆ ರಾಶೋಮೊನ್ ಚಿತ್ರ ಹೆಚ್ಚಾಗಿ ಎರಡನೆಯ ಕಥೆಯ ಆಧಾರಿತವಾಗಿಯೇ ತಯಾರಿಸಲಾಗಿದೆ. In a Grove ಕಥೆಯನ್ನು ರಾಘವೇಂದ್ರ ಉಡುಪರು ಹಿಂದೆ ನನಗೆ ಕಳಿಸಿದ್ದರು. ಹೀಗಾಗಿ ಆ ಕಥೆಯನ್ನು ನಾನು ಇಂಗ್ಲೀಷ್ ಭಾಷಾಂತರದಲ್ಲಿ ಹಾಗೂ ದೇಶಕಾಲದ ಮೊದಲನೆಯ ಸಂಚಿಕೆಯಲ್ಲಿ ದೀಪಾ ಗಣೇಶ್ ಅನುವಾದಿಸಿದ್ದ ಕನ್ನಡ ಅವತರಣಿಕೆಯಲ್ಲೂ ಓದಿದ್ದೆ. ಕಥೆಯಲ್ಲಿ ಆಗುವುದಿಷ್ಟು. ತೋಪಿನಲ್ಲಿ ಒಂದು ಸಾವು. ಆ ಸಾವಿನ ಬಗ್ಗೆ ಏಳು ಜನರ ಹೇಳಿಕೆ. ಈ ಹೇಳಿಕೆಗಳೆಲ್ಲ ಪರಸ್ಪರ ವಿರೋಧಾಭಾಸದಿಂದ ಕೂಡಿರುತ್ತವೆ. ಯಾವುದು ಸತ್ಯ ಎನ್ನುವುದು ತಿಳಿಯುವುದಿಲ್ಲ. ಒಬ್ಬ ವ್ಯಕ್ತಿ ಅಸುನೀಗಿದ್ದಾನೆಂಬುದು ಮಾತ್ರ ಸ್ಪಷ್ಟ. ಆದರೆ ಸತ್ತದ್ದು ಹೇಗೆ? ಕೊಲೆಯೋ ಆತ್ಮಹತ್ಯೆಯೋ? ಸಾವಿಗೆ ಕಾರಣವಾದ ಆಯುಧ ಯಾವುದು? ಹಾಗೂ ಒಬ್ಬೊಬ್ಬರೂ ಕೊಡುತ್ತಿರುವ ಹೇಳಿಕೆಗಳ ಹಿಂದಿರುವ ಉದ್ದೇಶವೇನು ಎಲ್ಲವೂ ಅಸ್ಪಷ್ಟ. ಕಥೆ ಹೀಗೆ ಏಳು ಭಿತ್ತಿಚಿತ್ರಗಳನ್ನು ನೀಡಿ ಮುಗಿದು ಬಿಡುತ್ತದೆ.

ಇಂಥದೊಂದು ಕಥೆ[ಗಳ]ನ್ನು ಚಿತ್ರೀಕರಿಸುವುದು ಸುಲಭದ ಸಂಗತಿಯಲ್ಲ. ಬರವಣಿಗೆಯಲ್ಲಿ ಬಂದಾಗ ಒಂದೊಂದು ಅನುಭವವೂ ಓದುಗನ ಮನಸ್ಸಿನಲ್ಲಿ ತನ್ನದೇ ರೀತಿಯಲ್ಲಿ ಗ್ರಹೀತವಾಗುತ್ತದೆ. ಆದರೆ ಚಿತ್ರಕ್ಕೆ ಇಳಿಸಿದಾಗ [ಅದರಲ್ಲೂ ಕಲೆಯ ಮಾಧ್ಯಮವಲ್ಲದೇ ಫೋಟೋಗ್ರಫಿಕ್ ಮಾಧ್ಯಮಕ್ಕೆ ಇಳಿಸಿದಾಗ] ನಮಗೆ ಅದು ಓದಿಗಿಂತ, ಶ್ರವಣ ಮಾಧ್ಯಮದಲ್ಲಿ ತೆಗೆದು ಹಾಕುವ ಗಾಸಿಪ್ ಗಿಂತ ಹೆಚ್ಚು ನಂಬಿಕೆ ಹುಟ್ಟಿಸುವಂತೆ ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ಕಾಫ್ಕಾನ "Metamorphasis" ಅಥವಾ ಕುಂದೆರಾನ "Unbearable Lightness of Being" "HitchHiking Game" ನಂತಹ ಕಥೆಗಳನ್ನು ದೃಶ್ಯ ಮಾಧ್ಯಮಕ್ಕೆ ಇಳಿಸುವುದು ಹೆಚ್ಚಿನ ಸವಾಲಿನ ಮಾತಾಗುತ್ತದೆ. ಆದರೆ ಉತ್ತಮ ನಿರ್ದೇಶಕರಾದ ಕುರಸೋವಾರಂಥವರು ಇದನ್ನು ಬಹಳ ಸರಳವೆನ್ನುವಂತೆ ಮೀರಿ ನಿಂತು ಬಿಡುತ್ತಾರೆ.

ಈ ರೀತಿ ಒಂದೇ ಲೇಖಕನ ಎರಡು ಕಥೆಗಳನ್ನು ಕನ್ನಡದ ಸಂದರ್ಭದಲ್ಲಿ ಕಾಸರವಳ್ಳಿ ಸ್ಪಷ್ಟವಾಗಿ ಹೇಳದೆಯೇ ಮಾಡಿಬಿಟ್ಟಿದ್ದಾರೆ. ತಬರನ ಕಥೆ ಹಾಗೆ ನೋಡಿದರೆ ಒಂದು ಇಡೀ ಚಿತ್ರವಾಗುವಷ್ಟು ತಿರುಳಿರುವ ಕಥೆಯಲ್ಲ. ಆದರೆ ಕಾಸರವಳ್ಳಿಯವರ ಕೈಯಲ್ಲಿ ತಬರನ ಕಥೆಯಲ್ಲಿ ತುಕ್ಕೋಜಿ ಕಥೆಯೂ ಹಾಸು ಹೊಕ್ಕಾಗಿ ಬಂದು ಒಂದು ಅದ್ಭುತ improvisation ಆಗುವುದನ್ನು ನಾವು ಕಾಣಬಹುದು. ಹಾಗೆಯೇ ಬರವಣಿಗೆಯಲ್ಲಿ ಗ್ರಹಿಸಲು ಸುಲಭವಾದ ಆದರೆ ದೃಶ್ಯ ಮಾಧ್ಯಮಕ್ಕೆ ಕಷ್ಟವಾದ ನೆಹರೂ ಅವರ "Discovery of India" ಕೃತಿಯನ್ನು ಶ್ಯಾಮ್ ಬೆನೆಗಲ್ ವಿವಿಧ ಕಥೆ, ಕಲಾಪ್ರಕಾರಗಳನ್ನು ತಂದು ಎಷ್ಟು ಅದ್ಭುತವಾಗಿ ಚಿತ್ರೀಕರಿಸಿದ್ದಾರೆಂಬುದು ಗಮನಾರ್ಹವಾದ ಮಾತು. ಆ ಗುಚ್ಚದಲ್ಲಿ ನೆಹರೂ ವಿವರಿಸುವ ಗಾಂಧೀಜಿಯ ಭಾರತ ಆಗಮನವನ್ನು ಶ್ಯಾಮ್ ರಾಜಾರಾಯರ ಕಾಂತಾಪುರವನ್ನು ಅಡಕಗೊಳಿಸಿ ಗ್ರಹಿಸಿದ ರೀತಿ ನನಗೆ 
ಅತ್ಯಂತ ಪ್ರಿಯವಾದ ಭಾಗ.

ಪ್ರತಿಯೊಬ್ಬ ನಿರ್ದೇಶಕನೂ ಸಾಹಿತ್ಯ ಕೃತಿಯನ್ನು ತನ್ನ ಮಾಧ್ಯಮಕ್ಕೆ ಇಳಿಸುವಾಗ ಅದಕ್ಕೆ ಒಪ್ಪಿತವಾಗುವಂತೆ ಕೆಲ ಬದಲಾವಣೆಗಳನ್ನು ಮಾಡುತ್ತಾನೆ. ಬಹುಶಃ ಈ ಬದಲಾವಣೆಗಳು ಎಷ್ಟು ಸೂಕ್ತ ಎನ್ನುವುದೇ ಆ ನಿರ್ದೇಶಕನ ಸಫಲತೆಯ ಮಾಪನವಿದ್ದೀತು. ರಾಶೋಮನ್ ಚಿತ್ರ In the Groveಗಿಂತ ಭಿನ್ನವಾಗಿದ್ದರೂ ಕಥೆಯ ಆಶಯಕ್ಕೆ ಧಕ್ಕೆ ಬರದಂತೆ ಚಿತ್ರೀಕರಿಸಲಾಗಿದೆ. ಏಳು ಜನರ ವಕ್ತವ್ಯದಲ್ಲಿ ಮುದುಕ[ಸಾವಿಗೀಡಾದವನ ಅತ್ತೆ]ಯ ವಕ್ತವ್ಯ ಚಿತ್ರದಲ್ಲಿ ಇಲ್ಲ. ಇದರಿಂದ ಒಟ್ಟಾರೆ ನಿರೂಪಣೆಗೇನೂ ಧಕ್ಕೆಯುಂಟಾಗುವುದಿಲ್ಲ.ಇದೊಂದನ್ನು ಬಿಟ್ಟರೆ, ಮರ ಕಡಿಯುವವ, ಭಿಕ್ಷು, ಪೊಲೀಸ್ ಅಧಿಕಾರಿ, ಡಕಾಯಿತ, ಸತ್ತವನ ಹೆಂಡತಿ ಮತ್ತು ಸತ್ತವನ ಆತ್ಮದ ನಿರೂಪಣೆಗಳನ್ನು ಯಾವ ಹೆಚ್ಚಿನ ಬದಲಾವಣೆಗಳೂ ಇಲ್ಲದೇ ಕುರಾಸೊವಾ ತಮ್ಮ ಚಿತ್ರದಲ್ಲಿ ಅಡಕಗೊಳಿಸಿದ್ದರು. ಆದರೆ ಚಲನ ಚಿತ್ರದಲ್ಲಿ ಭಿಕ್ಷುವಿನ ಪಾತ್ರವನ್ನು ತುಸು ಭಿನ್ನವಾಗಿ, ನಡೆಯುತ್ತಿರುವ ಅರ್ಥರಹಿತ ಕ್ರಿಯೆಗಳಿಗೆ ತುಸು ಅರ್ಥ ಹಚ್ಚಲು, ಅದನ್ನೇ ತತ್ವಶಾಸ್ತ್ರದ ಚೌಕಟ್ಟಿನಲ್ಲಿಡಲು ಕುರಾಸೊವಾ ಯತ್ನಿಸಿದ್ದಾರೆ. ಹಾಗೆಯೇ ಕಥೆಯಲ್ಲಿ ಮರ ಕಡಿಯುವವನ ಪಾತ್ರ ಸಣ್ಣದು - ಆತನಿಗೆ ಎರಡುಬಾರಿ ಕಥನದ ಅವಕಾಶವನ್ನು ಕೊಟ್ಟು ಕುರಾಸೋವಾ ಖಾಸಗಿಯಾಗಿ ಹಂಚಿಕೊಳ್ಳಲು ತಯಾರಿರುವ ಸತ್ಯಕ್ಕೂ ಕಾನೂನಿನ ಅಧಿಕಾರಿಗಳ ಮುಂದೆ ಕೊಟ್ಟಿರುವ ಹೇಳಿಕೆಗೂ ಇರಬಹುದಾದ ದಿನನಿತ್ಯದ ಆಭಾಸವನ್ನು ಗ್ರಹಿಸಲು ಪ್ರಯತ್ನಿಸಿದ್ದಾರೆ. ಈ ರೀತಿಯ ಬದಲಾವಣೆ ಮೂಲ ಕಥೆಯ ಅರ್ಥವಂತಿಕೆಯನ್ನು ಹೆಚ್ಚಿಸುತ್ತದೆ.

ಆದರೆ ಎಲ್ಲಕ್ಕಿಂತ ದೊಡ್ಡ ಸವಾಲೆಂದರೆ ಸತ್ತವನ ಆತ್ಮದ ಕಥೆಯನ್ನು ಸ್ಪಷ್ಟವಾದ ದೃಶ್ಯ ಮಾಧ್ಯಮದಲ್ಲಿ ಕಾಣಿಸುವುದು ಹೇಗೆ? ಕುರಾಸೊವಾ ಈ ಸವಾಲನ್ನು ಒಂದು ಭಿನ್ನ ರೀತಿಯಲ್ಲಿ ಸಫಲವಾಗಿ ಎದುರಿಸಿದ್ದಾರೆ. ಸತ್ತವನ ಆತ್ಮವನ್ನು ಒಂದು ಸ್ತ್ರೀಯ ಮಾಧ್ಯಮದಿಂದ ಕರೆತಂದು ದೃಷ್ಯಮಾಧ್ಯಮದಲ್ಲಿ ಮೂಡಿಸುತ್ತಾರೆ. ಒಂದು ರೀತಿಯಲ್ಲಿ ನಂಬಲಾಗದ, ನಂಬಬಾರದ ಕಥೆಯನ್ನು, ಅವುಗಳ ಭಿನ್ನ ಭಿನ್ನ ಭಾಗಗಳಲ್ಲಿ ನಂಬುವಂತೆ ಕುರಾಸೊವಾ ಚಿತ್ರಿಸುತ್ತಾರೆ. ಸತ್ತವನ ಆತ್ಮ ಒಂದು ಸ್ತ್ರೀಯ ದೇಹವನ್ನು ಹೊಗಲು ಬೇಕಾದ ತಯಾರಿ ಹಿನ್ನೆಲೆಯನ್ನೆ ಅವರು ಅದ್ಭುತವಾಗಿ ಆ ಚಿತ್ರದಲ್ಲಿ ಸೃಷ್ಟಿಸಿದ್ದಾರೆ.

ಜೊತೆಗೆ ಮೂಲ ಕತೆಯಲ್ಲಿ ನಮಗೆ ಸಿಗುವುದು ಅಧಿಕಾರಿಯ ಮುಂದೆ ಒಂದರ ನಂತರ ಒಂದು ಬರುವ
 ವಕ್ತವ್ಯಗಳು. ಚಿತ್ರದಲ್ಲಿ ಅವುಗಳಿಗೆಲ್ಲ ಒಂದು ಚೌಕಟ್ಟು ಕೊಡಲು ಒಂದು ಹೊಸ ಪಾತ್ರದ ಬಳಕೆಯಾಗುತ್ತದೆ. ಈ ಪಾತ್ರ ಬಹುಶಃ ರಾಶೊಮೊನ್ ಕಥೆಯಿಂದ ಅಮದು ಮಾಡಿದ ಕೆಲಸ ಕಳೆದುಕೊಂಡ ವ್ಯಕ್ತಿಯಿರಬಹುದು. ಆತ ಯಾರೆಂದು ನಮಗೆ ಸ್ಪಷ್ಟವಾಗದಿದ್ದರೂ ಆತನ ಪ್ರಶ್ನೆಗಳ ಮೂಲಕ ಎಲ್ಲರ ಕಥೆಗಳಿಗೂ ಒಂದು ಅಸ್ತಿತ್ವ ಬರುತ್ತದೆ. ಆ ವ್ಯಕ್ತಿಯ ಪ್ರಶ್ನೆಗಳಿಂದಲೇ ನಾವು ನಂಬುತ್ತಿರುವ ಸತ್ಯವನ್ನು ಅಲ್ಲಗಳೆಯಲು ಕುರಾಸೊವಾ ಪ್ರಯತ್ನಿಸುತ್ತಾರೆ.

ಮೂಲತಃ ಈ ಕಥೆ ದುರಂತದಿಂದ ಕೂಡಿರುವುದು - ಯಾರೂ ನಿಜ ಹೇಳುತ್ತಿಲ್ಲವೇನೋ ಎಂಬ ಅಭಿಪ್ರಾಯ ಕಥೆ ಓದುತ್ತಾ ಹೋದಂತೆ ಬಲಗೊಳ್ಳುತ್ತದೆ. ಸತ್ಯವನ್ನು ಗ್ರಹಿಸುವ ಭಿನ್ನ ನೆಲೆಗಳಿಂದ ಒಬ್ಬೊಬ್ಬರ ವಿವರಣೆಯೂ ಭಿನ್ನವಾಗಿರಬಹುದು. ಆದರೆ ಇಲ್ಲಿ ಕೊಲ್ಲಲು ಉಪಯೋಗಿಸಿದ ಕತ್ತಿ/ಖಡ್ಗ ದ ಬಗ್ಗೆ ಇರುವ ದ್ವಂದ್ವ, ನಾಪತ್ತೆಯಾಗುವ ಕುದುರೆ, ಬತ್ತಳಿಕೆಯಲ್ಲಿ ಇರಬಹುದಾದ ಬಾಣಗಳ ಸಂಖ್ಯೆ ಹಾಗೂ ಮುಖ್ಯ ಪಾತ್ರಧಾರಿಗಳ ನಿರೂಪಣೆಯಲ್ಲಿ ಬರುವ ತಮ್ಮ ಪಾತ್ರದ ಅತಿರಂಜಕತೆಯನ್ನು ನೋಡಿದಾಗ ಸತ್ಯವನ್ನು ಗ್ರಹೀತ ಮಾಡಿಕೊಳ್ಳುವ ಪರಿಯಲ್ಲಿರುವ ಭಿನ್ನತೆಗಿಂತ ಬೇಕೆಂದೇ ಎಲ್ಲರೂ ಸುಳ್ಳನ್ನಾಡುತ್ತಿದ್ದಾರೆ ಎಂಬ ಭಾವನೆ ಸಹಜವಾಗಿ ಓದುಗನಿಗೆ/ನೋಡುಗನಿಗೆ ಬರುತ್ತದೆ.

ಯಾರಿಗೂ ಈ ರೀತಿಯಾದ ಸುಳ್ಳು ಹೇಳುವುದರಿಂದ ಆಗಬಹುದಾದ ಉಪಯೋಗ/ಲಾಭ ವ್ಯಕ್ತವಾಗಿ ಕಾಣುವುದಿಲ್ಲವಾದ್ದರಿಂದ ಭಿಕ್ಷು ಹೇಳಿದಂತೆ ಜಗತ್ತು ಕ್ರೂರವಾಗಿ ಕಾಣುತ್ತದೆ. ಮೂಲ ಲೇಖಕರ ಉದ್ದೇಶ ಹೆಚ್ಚು ಸಿನಿಕತನದಿಂದ ಕೂಡಿದ್ದೇ ಆಗಿದ್ದೀತು. ರಾಶೊಮೊನ್ ಕಥೆಯ ಸಾರ, ಅವರ ಖಾಸಗೀ ಜೀವನದ ಕೆಲವು ವಿವರಗಳನ್ನು ಗಮನಿಸಿದಾಗ ಬಹುಶಃ ಅಕುಟಗವಾರ ಉದ್ದೇಶ ಮಾನವತಾವಾದದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನೆತ್ತುವ ದುರಂತವೇ ಇತ್ತೇನೋ ಅನ್ನಿಸುತ್ತದೆ. ಆದರೆ ಕುರಾಸೊವಾರಿಗೆ ಬಹುಶಃ ಈ ಅಸಹಾಯದ ದ್ವನಿಯ ಅಂತ್ಯ ಇಷ್ಟವಾಗಲಿಲ್ಲ ಅನ್ನಿಸುತ್ತದೆ. ಹೀಗಾಗಿ ರಾಶೊಮೊನ್ ಕಥೆಯಲ್ಲಿನ ಬಟ್ಟೆ ಕದಿಯುವ ಘಟನೆಯನ್ನು ನಿರೂಪಿಸಿದರೂ, ಕಡೆಗೆ ಎರಡೂ ಕಥೆಗಳಲ್ಲಿರದ ಒಂದು ಅನಾಥವಾಗಿ ಬಿದ್ದಿರುವ ನವಜಾತ ಶಿಶುವನ್ನು ಕರೆದು ತರುತ್ತಾರೆ. ಇದ್ದಕ್ಕಿಂದ್ದಂತೆ ಆ ಕೂಸಿನ ಆಗಮನದಿಂದ ಕೆಲ ವ್ಯಕ್ತಿಗಳ ಭೂಮಿಕೆ ಬದಲಾಗುವುದನ್ನು ನಾವು ಕಾಣುತ್ತೇವೆ. ಇಡೀ ಚಿತ್ರದಲ್ಲಿ ಕೃತಕ ಅನ್ನಿಸುವ ಭಾಗ ಇದು ಮಾತ್ರ.

ರಾಶೊಮೊನ್ ಕಥೆಯಲ್ಲದೇ ಚಿತ್ರೀಕರಣದ ದೃಷ್ಟಿಯಿಂದಲೂ ತುಂಬಾ ಅದ್ಭುತವಾದ ಚಿತ್ರ. ನೆರಳು ಬೆಳಕಿನಾಟ, ಕ್ಯಾಮರಾದ ಚಲನೆ, ನಟನೆಯಲ್ಲಿನ ಸಂಯಮ/ಅತಿರೇಕ, ಹಾಗೂ ಭಿನ್ನ ವಕ್ತವ್ಯಗಳಲ್ಲಿ ಬೇರೆ ರೀತಿಯಾಗಿ ನಡೆದುಕೊಳ್ಳಬೇಕಾದ್ದರಿಂದ ಒಂದೇ ದೃಶ್ಯವನ್ನು ನಾಲ್ಕಾರು ರೀತಿಯಲ್ಲಿ ಅಭಿನಯಸಲು ಒದಗುವ ಅವಕಾಶ - ಈ ಎಲ್ಲ ಸಾಧ್ಯತೆಗಳೂ ಚಿತ್ರವನ್ನು ಇನ್ನಷ್ಟು ಆಸಕ್ತಿಕರವನ್ನಾಗಿ ಮಾಡುತ್ತದೆ. ನಾನು ನೋಡಿದ ಡಿ.ವಿ.ಡಿಯಲ್ಲಿ ಆ ಚಿತ್ರದ ಛಾಯಾಗ್ರಾಹಕರೊಂದಿಗೆ ಸಂದರ್ಶನ ಮತ್ತು ಆ ಚಿತ್ರದ ಬಗೆಗಿನ ಪ್ರತಿ ದೃಶ್ಯದ ಬಗ್ಗೆಯೂ ಕಾಮೆಂಟರಿಯ ಭಾಗವಿದ್ದರಿಂದ ಚಿತ್ರವನ್ನು ಹಲವು ದೃಷ್ಟಿಕೊನಗಳಿಂದ ನೋಡಲು, ಮೊದಲ ನೋಟಕ್ಕೆ ಕಾಣದ್ದನ್ನು ಭಿನ್ನ ದೃಷ್ಟಿಯಿಂದ ಗ್ರಹಿಸಲು ನನಗೆ ಸಾಧ್ಯವಾಯಿತು. ಆದರೆ ಅದರ ತಾಂತ್ರಿಕತೆಯ ಬಗ್ಗೆ ಆ ಚಿತ್ರದಲ್ಲಿದೆ ಎನ್ನಲಾದ ತ್ರಿಕೋನ, ಅಡ್ಡಗೀಟು, ಕ್ಲೊಸಪ್, ಲಾಂಗ್ ಶಾಟ್‍ಗಳ ಸಿಂಬಾಲಿಸಂ ಬಗ್ಗೆ ನಾನು ಕೇಳಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬಹುದೇ ವಿನಃ ಆ ಬಗ್ಗೆ ಬರೆಯಲು ನಾನು ಸಮರ್ಥನಲ್ಲ.

ಭಾಗ ೨: ವರ್ತಮಾನ

Art imitates life; Life imitates art. ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಲಿ? ಸಧ್ಯಕ್ಕೆ ನಾನು ಚರ್ಚಿಸಲಿರುವ ವಿಚಾರಕ್ಕೆ ಎರಡನೆಯದೇ ಸರಿಯೇನೋ. ೧೯೨೭ ರಲ್ಲಿ ಅಕುಟಗವಾ ರೈನೊಸುಕೆ ಆತ್ಮಹತ್ಯೆ ಮಾಡಿಕೊಂಡರು, ಕುರಸೊವಾ ಈ ಚಿತ್ರವನ್ನು ೧೯೫೦ರಲ್ಲಿ ತಯಾರಿಸಿದ್ದರು ಎಂಬ ಸತ್ಯವನ್ನು ಅಲ್ಲಗಳೆಯಲಾದರೆ ನಾವು ಅವರ ಮೇಲೆ ಭಾರತದ ಇತ್ತೀಚಿನ ಘಟನೆಗಳಿಂದ ಪ್ರಭಾವಿತರಾದರು ಎಂಬ ಆರೋಪವನ್ನು ಹೇರಬಹುದಿತ್ತು. ಅಥವಾ ಸುಮಾರು ಚಿತ್ರಗಳಲ್ಲಿ ಮೊದಲಿಗೆ ಬರುವ disclaimer: this film is a work of fiction and any resemblance to events or characters in real life are purely co-incidental ಅನ್ನುವುದರ ಸತ್ಯಾಸತ್ಯತೆಯನ್ನು ಅದು ನಿಜಕ್ಕೂ ಕಾಕತಾಳೀಯವೇ ಅಂತ ಪ್ರಶ್ನಿಸಬಹುದಿತ್ತು. ಆದರೆ ಸಮಯಾಂತರದಿಂದ, ಭಾಷಾಂತರದಿಂದ, ದೇಶಾಂತರದಿಂದ ನಾವು ಈ ರೀತಿಯ ಪ್ರಶ್ನೆಗಳನ್ನು ಕೇಳದೆಯೇ ಇದರ ಕಾಕತಾಳೀಯತೆಯನ್ನು ಒಪ್ಪಬೇಕಾಗಿದೆ.

ನಾನು ಹೆಚ್ಚಿನ ಕುತೂಹಲವನ್ನು ಬೆಳೆಸಲು ಇಷ್ಟಪಡುವುದಿಲ್ಲ. ರಾಹುಲ್ ಮಹಾಜನ್, ಬಿಬೇಕ್ ಮೊಯಿತ್ರಾ, ಸಾಹಿಲ್ ಜರೂ, ಕರಣ್ ಅಹೂಜಾ, ರಾಹುಲ್‍ ಮಲ್ಹೋತ್ರ, ತ್ರಿಶಯ್ ಖನ್ನಾ ಎಂಬ ಏಳು ಪಾತ್ರಧಾರಿಗಳ ಕಥೆ ದೇಶದೆದುರು ಟೆಲಿವಿಷನ್ ಮೂಲಕ ಬಿಡುಗಡೆಗೊಂಡಿದೆ. ಕಥೆ ಅನಾವರಣವಾಗುತ್ತಿರುವಂತೆಯೇ ಒಬ್ಬೊಬ್ಬ ಪಾತ್ರಧಾರಿಯೂ ತಮ್ಮ ಕಥೆಯನ್ನು ಮಂಡಿಸುತ್ತಿದ್ದಾರೆ. ಎಲ್ಲರೂ ಕುರಸೊವಾನ ಚಿತ್ರದಂತೆಯೇ ಕ್ಯಾಮರಾದ ಕಣ್ಣಲ್ಲಿ ಕಣ್ಣಿಟ್ಟು ತಮ್ಮ 'ಸತ್ಯ'ವನ್ನು ಮಂಡಿಸುತ್ತಿದ್ದಾರೆ.

ವ್ಯತ್ಯಾಸ ಇಷ್ಟೇ - ಆ ಕಥೆಯನ್ನು ನಾವು ವೀಕ್ಷಕರಾಗಿ ನೇರವಾಗಿ ಅರಗಿಸಿಕೊಳ್ಳಲು ದೃಷ್ಯ ಮಾಧ್ಯಮಗಳು ನಮಗೆ ಅವಕಾಶವನ್ನೇ ಕೊಡುತ್ತಿಲ್ಲ. ಮಾಧ್ಯಮದ ನಡುವಿನ ಟಿಆರ್‍ಪಿ ಸಮರದಲ್ಲಿ ಎಲ್ಲರೂ ತಮ್ಮ ತಮ್ಮ ಎಕ್ಸ್‍ಕ್ಲೂಸಿವ್ ಸತ್ಯಗಳನ್ನು ನಮ್ಮ ಮುಂದೆ ಮಂಡಿಸುತ್ತಿದ್ದಾರೆ. ಅಲ್ಲಿ ಹಾಜರಿಲ್ಲದಿದ್ದರೂ ಗ್ರಾಫಿಕ್ಸ್‍ನ ಉಪಯೋಗದ ಮೂಲಕ ಕಣ್ಣಿಗೆ ಕಟ್ಟಿದಂತೆ ಸತ್ಯವನ್ನು ಪ್ರತಿದಿನ ವೃದ್ಧಿಸುತ್ತಾ ಹೊಸ ಹೊಸ ಕಾಣ್ಕೆಗಳೊಂದಿಗೆ ಬರುತ್ತಿದ್ದಾರೆ. ಪ್ರತಿದಿನ ನಮಗೆ new improved truth ಕಾಣಸಿಗುತ್ತಿದೆ. ಕುರಾಸೊವಾನ ನೆರಳುಬೆಳಕಿನಾಟ ಹಾಳಾಗಿ ಹೋಗಲಿ ಅನ್ನುವಂತೆ ನಮ್ಮ ಮುಂದೆ ದೃಶ್ಯಗಳನ್ನು ತೆರೆದಿಡುತ್ತಿದ್ದಾರೆ.

ಈ ಕಥೆ ಎಷ್ಟು ಅದ್ಭುತವಾಗಿದೆಯೆಂದರೆ ಘಟಾನುಘಟಿಗಳೆಲ್ಲಾ ಇದರಲ್ಲಿ ಮಣ್ಣು ಮುಕ್ಕುತ್ತಿರುವಂತಿದೆ. ಅಪೊಲೋ ಆಸ್ಪತ್ರೆಯ ರಿಪೋರ್ಟುಗಳು, ಗೋಪೀನಾಥ ಮುಂಡೆಯವರ ವಕ್ತವ್ಯ, ಭಾರತೀಯ ಜನತಾ ಪಾರ್ಟಿಯ ರಾಹುಲ್ ಮಹಾಜನ್ ಹಿಂದೆ ನಿಲ್ಲಬೇಕೇ ಕೈ ಕೊಡಬೇಕೇ ಎಂಬ ದಿನ ನಿತ್ಯದ ದ್ವಂದ್ವ ಎಲ್ಲವೂ ಕಪ್ಪು ಹಾಸ್ಯದಂತಿದೆ. ಸಾಹಿಲ್ ಜರೂ ಟೆಲಿವಿಷನ್ ಮಾಧ್ಯಮವನ್ನು ಉಪಯೋಗಿಸಿಕೊಂಡ ರೀತಿ. ಈಗಲೂ ನಾನು ಅಮಾಯಕ, ನನಗೇನೂ ಗೊತ್ತಿಲ್ಲಾ ಅನ್ನುತ್ತಿರುವ ರಾಹುಲ್ ಮಹಾಜನ್, ದೊಡ್ಡ ಕುಳವನ್ನು ಬಲೆಗೆ ಹಾಕಿದ್ದಾಯಿತು ಅನ್ನುವ ಧನ್ಯತಾ ಭಾವವನ್ನು ತೋರಿಸುತ್ತಿರುವ ಮನೀಶ್ ಅಗ್ರವಾಲ್ ಎಂಬ ಅಧಿಕಾರಿ, ಎಷ್ಟೊಂದು ಅದ್ಭುತ ಭಿತ್ತಿಚಿತ್ರಗಳು!

ಕಥೆಗಾರರ, ಸೃಜನಶೀಲ ಚಲನಚಿತ್ರಗಾರರ ಕೆಲಸವನ್ನು ಪತ್ರಕರ್ತರು ಹೀಗೆ ಕದ್ದರೆ, ನಾವೇನು ಕಥೆ ಬರೆಯುವುದು? ಏನು ಸಿನೇಮಾ ಮಾಡುವುದು??

ರಾಶೊಮೊನ್ ಚಿತ್ರ ಭ್ರಾಮಕ, ಅತಿವಾಸ್ತವವಾದಿ, ಕಾಲ್ಪನಿಕ ಮತ್ತು ಕಲೆ ಎನ್ನಬಹುದಾದ 'ಭ್ರಮೆ' ಹೊತ್ತ ಎಲ್ಲ ವಿಮರ್ಶಕರಿಗೂ ರಾಹುಲ್ ಮಹಾಜನ್, ಟೆಲಿವಿಷನ್ ಕಂಪನಿಗಳು, ಮತ್ತು ಇತರ ಪಾತ್ರಧಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಕುಡುಕ ಎನ್ನುವುದು ತಮಾಷೆಯ ಮಾತಲ್ಲ. ಇದು ಇನೂ ಒಂದು ಹೆಜ್ಜೆ ಮುಂದೆ ಹೋಗಬಹುದು ಅಷ್ಟೇ......

No comments: