Sunday, March 3, 2013

ಲೈಫ್ ಸೈಕಲ್


ಬೆಂಗಳೂರಿನ ಜಯನಗರ ಪ್ರಾಂತವನ್ನು ಸೈಕಲ್ ಸ್ನೇಹೀ ಪ್ರಾಂತವೆಂದು ಘೋಷಿಸಿ ರಸ್ತೆಯ ಇಬ್ಬದಿಗಳಲ್ಲೂ ಸೈಕಲ್ ಗುರುತಿನ ಚಿತ್ರವನ್ನು ಹಾಕಿದ್ದಾರೆ. ಭಾಜಪದ ಶಾಸಕರ ಕ್ರಮದಿಂದ ಯಡ್ಯೂರಪ್ಪನವರ ಕೆಜೆಪಿಗೆ ಎಷ್ಟು ಫಾಯಿದೆಯಾಗುವುದೋ ತಿಳಿಯದು. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿಲ್ಲವಾದ್ದರಿಂದ ಭಾಜಪ ಈ ರೀತಿಯ ಸೈಕಲ್ಲನ್ನು ಹೊಡಯಬಹುದು.

ತಮ್ಮ ಪಕ್ಷದ ಚಿನ್ಹೆಯಾದ ಸೈಕಲ್ಲನ್ನು ಹಿಂದೆ ಶಾಲಾಮಕ್ಕಳಿಗೆ ಮುಫತ್ತಾಗಿ ಹಂಚಿದಕೂಡಲೇ ಚಂದ್ರಬಾಬು ನಾಯುಡು ಚುನಾವಣೆ ಸೋತಿದ್ದರು. ಅದೇ ಕೆಲಸ ಮಾಡಿದ ಜೆಡಿಎಸ್ ನ ನೀತೀಶ್ ಕುಮಾರ್ ಗೆದ್ದಿದ್ದಾರೆ; ಸೈಕಲ್ಲಿನ ಗುರುತನ್ನು ಹೊತ್ತ ಸಮಾಜವಾದಿ ಪಕ್ಷ – ಉತ್ತರಪ್ರದೇಶವನ್ನು ಆಳುತ್ತಿದೆ. ಹೀಗಾಗಿ ಈಚೆಗೆ ಸೈಕಲ್ಲಿನ ನಸೀಬು ಖುಲಾಯಿಸಿದಂತೆನ್ನಿಸುತ್ತಿದೆ. ಇದರಲ್ಲಿ ನಿಜವಾದ ಸೈಕಲ್ಲಿನ ಪಾತ್ರವೆಷ್ಟೋ, ಚಿನ್ಹೆಯ ಪಾತ್ರವೆಷ್ಟೋ, ಸೈಕಲ್ ದಾರಿಯನ್ನು ಮಾಡಿಕೊಟ್ಟದ್ದರಿಂದ ಆಗಬಹುದಾದ ಫಾಯಿದೆಯೆಷ್ಟೋ ಆ ಚಿನ್ಹೆಯನ್ನ ಕರ್ನಾಟಕದಲ್ಲಿ ಪಡೆದದ್ದರಿಂದ ಯಡ್ಯೂರಪ್ಪನವರಿಗೆ ಏನಾಗಬಹುದೋ ತಿಳಿಯದಾಗಿದೆ.

ಜಯನಗರದ ಈ ಸೈಕಲ್ ಸ್ನೇಹೀ ದಾರಿಯಲ್ಲಿ ಸೈಕಲ್ ಪ್ರೇಮಿಗಳೇನಾದರೂ ತಮ್ಮ ಹಕ್ಕನ್ನು ಕಂಡುಕೊಳ್ಳಲು ಹೊರಟರೆ, ಆ ಜಾಗದಲ್ಲಿ ನೀಟಾಗಿ ಅನೇಕ ಕಾರುಗಳು ತಮಾಗಾಗಿಯೇ ಕಾಯ್ದಿರಿಸಿದ ಸ್ಥಳ ಎನ್ನುವೋಪಾದಿಯಲ್ಲಿ ಪಾರ್ಕ್ ಮಾಡಿದ್ದನ್ನು ಕಂಡು ವಾಪಸ್ಸಾಗಬೇಕಾಗಬಹುದು. ಈ ಸೈಕಲ್ ಮಾರ್ಗವನ್ನು ಉಪಯೋಗಸಲು ಯತ್ನಿಸಿದ ನನ್ನ ಗೆಳೆಯನೊಬ್ಬನಿಗೆ ಎಸ್.ಎಂ.ಎಸ್ ಕಳುಹಿದರೆ ಅವನು ವಾಪಸ್ ಕರೆ ಮಾಡಿದ. "ಎಸ್.ಎಂ.ಎಸ್ ಮಾಡಲು ನನ್ನ ಬಲಗೈ ಸ್ವಾಧೀನದಲ್ಲಿಲ್ಲ. ಸೈಕಲ್ ಪಥದಲ್ಲಿ ಸವಾರಿಮಾಡುತ್ತಿದ್ದರೆ ಫುಟ್ ಪಾತಿನ ಮೇಲೆ ಹಾಯ್ದು ಹೋಗುತ್ತಿದ್ದ ಮೋಟರ್ ಬೈಕು ಗುದ್ದಿ ಕೈ ಮುರಿದಿದೆ." ಎಂದ. ಹೀಗಾಗಿ ಈ ಸೈಕಲ್ ಹಾದಿಯೂ ನಮ್ಮ ಹಾಥೀ ಕಾ ದಾಂತ್ ನ ಮಿಕ್ಕ ಸವಲತ್ತುಗಳಂತೆ.... ನೋಡಲು ಮಾತ್ರವೇ – ಚಬಾಯಿಸಲಿಕ್ಕಲ್ಲ.

ಒಂದಾನೊಂದು ಕಾಲದಲ್ಲಿ ಅಟ್ಲಸ್, ರಾಲೇ, ಹರ್ಕ್ಯುಲಸ್, ಫಿಲಿಪ್ಸ್, ಬಿ.ಎಸ್.ಎ, ಏವನ್, ಹೀರೋ ಎಂದಷ್ಟೇ ಇದ್ದ,  ಸಾವಿರಕ್ಕೂ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಸೈಕಲ್ಲುಗಳು ಈಗ ಮುಂದುವರೆದು ಫೈರ್ ಫಾಕ್ಸು – ಬಿ.ಎಂ.ಡಬ್ಲು ಗಳಿಗೂ ಹೋಗಿ ಲಕ್ಷ ರೂಪಾಯಿ ದಾಟುವ ಫ್ಯಾನ್ಸೀ ಮಾಡಲ್ಲುಗಳವರೆಗೆ ತಲುಪಿವೆ. ಈ ಸೈಕಲ್ಲುಗಳ ಮೇಲೆ ಸವಾರಿ ಮಾಡಿದ ದೇಶವೂ ಮುಂದುವರೆದಿದೆ. ಸಹಜವಾಗಿ ಸೈಕಲ್ಲೇರಿ ಓಡಾಡುತ್ತಿದ್ದ ಮಧ್ಯಮ ವರ್ಗದವರೀಗ ಸೈಕಲ್ಲೇರಿದರೆ ಅದು ಹೆಲ್ತ್ ಸ್ಟೇಟ್ ಮೆಂಟೂ, ಫ್ಯಾಷನ್ ಸ್ಟೇಟ್ ಮೆಂಟೂ ಆಗುವುದುಂಟು. ನಾವು ಕಾಲೇಜಿನಲ್ಲಿದ್ದಾಗ ಎಂಟು ಕಿಲೋಮೀಟರುಗಳ ದೂರ ಸೈಕಲ್ಲು ಹೊಡೆದು ಕಾಲೇಜಿಗೆ ತಲುಪಿದರೆ ಪಡ್ಡೆಗಳು. ಅದೇ ದೂರವನ್ನು ಇಂದು ಸೈಕಲ್ಲಿನಲ್ಲಿ ಕ್ರಮಿಸಿದರೆ ಅದು ಪರಿಸರವಾದಿಯ ಹಸಿರು ಪಟ್ಟವನ್ನು ತಂದುಕೊಡುತ್ತದೆ.

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಸೈಕಲ್ ಏರುವುದೇ ಒಂದು ಕನಸಾಗಿತ್ತು. ರಸ್ತೆರಸ್ತೆಗೂ ಇದ್ದ ಸೈಕಲ್ ಬಾಡಿಗೆಯಂಗಡಿಗಳಲ್ಲಿ ಗೋಗರೆದು ಘಂಟೆಗಿಷ್ಟು ಪೈಸೆಯೆಂದು ಮನೆಯ ಹಿರಿಯರು ನಿಷಿದ್ಧ ಮಾಡಿದ್ದ ಸೈಕಲ್ ಸವಾರಿಯನ್ನು ಕದ್ದು ಮಾಡುತ್ತಿದ್ದ ಪುಳಕ ಈಗಿಲ್ಲ. ಈಚೆಗೆ ಸೈಕಲ್ ಕೊಂಡಾಗ ಕಂಡದ್ದು – ಪ್ರತೀ ರಸ್ತೆಗೂ ಒಂದೆಂದು ಇರುತ್ತಿದ್ದ ಸೈಕಲ್ ಷಾಪುಗಳೆಲ್ಲಾ ಕಾಣೆಯಾಗಿವೆ. ಅಕಸ್ಮಾತ್ ರಿಪೇರಿಯೋ ಪಂಚರೋ ಆದರೆ ಡೀಲರಿಗೆ ಫೋನ್ ಮಾಡಿ, ಸಮಯ ಪಡೆದು ಸರ್ವಿಸಿಂಗ್ ಮಾಡಿಸಬೇಕು.

ಸೈಕಲ್ ಕೊಂಡಾಗ ಸೈಕಲ್ಲಿಗೆ ಸರಿಹೊಂದುವ ಹೆಲ್ಮೆಟ್ಟನ್ನು ನನ್ನ ತಲೆಗೆ ಕಟ್ಟಿದಾಗ ಅನ್ನಿಸಿತ್ತು – ಇದೂ ಒಂದು ಮಾರುಕಟ್ಟೆಯ ವಿಧಾನವೇ. ಪೆಡಲ್ಲೇ ಎಟುಕದ ಸೈಕಲ್ಲಿನ ಮೇಲೆ ಕತ್ರಿ, ಬಾರು, ಸೀಟೆಂದು ಬೆಳೆದ ಬಾಲ್ಯ, ಕೌಮಾರ್ಯ, ವಯಸ್ಕ ಸ್ಥಿತಿಗಳನ್ನು ದಾಟಿರುವ ನನ್ನ ತಲೆಮಾರಿನ ತಲೆಯ ಮೇಲೆ ಈ ಗಟ್ಟಿ ಟೋಪಿಯೂ ಕುಳಿತುಕೊಂಡಿದೆ. ಡಬ್ಬಲ್ ರೈಡಿನಿಂದ ಬೆಳೆದ ಸ್ನೇಹಗಳೆಷ್ಟು? ಜಯಂತ ಕಾಯ್ಕಿಣಿಯ ಕಥೆಯಲ್ಲಿನ ಹುಡುಗಿ ತನ್ಮಯಿ ಸೂಟಿಯಲ್ಲಿ ಸೈಕಲ್ಲು ಕಲಿಯದಿದ್ದರೆ ಏನು ಮಾಡಬಹುದು? ಡಬ್ಬಲ್ ರೈಡು, ಲೈಟು, ರಾಂಗ್ ಸೈಡು ಎಂದು ಮೈಸೂರಿನ ಲಕ್ಷ್ಮೀಪುರ ಠಾಣೆಯ ಪೋಲೀಸನಿಗೆ ಕಟ್ಟಿದ ಫೈನುಗಳೆಷ್ಟು?

ಕಾನೂನು ಪಾಲಿಸುವ ಇರಾದೆಯಿದ್ದಾಗಲಂತೂ ಸಂಜೆಯವೇಳೆಗೆ ಸೈಕಲ್ ಓಡಿಸುವುದಕ್ಕೆ ನಾನಾ ತಯಾರಿಗಳು ಆಗುತ್ತಿದ್ದುವು. ನಮ್ಮ ತಲೆಮಾರಿಗೂ ಮುನ್ನ ಚಿಮಣಿ ಎಣ್ಣೆಯ ದೀಪದ ಮಂಕು ಬೆಳಕು ಸೈಕಲ್ಲಿನ ಮುಂಭಾಗಕ್ಕಿರುತ್ತಿತ್ತು - ರಸ್ತೆ ತೋರುವುದಕ್ಕಲ್ಲ, ಬದಲಿಗೆ ಎದುರಿನಿಂದ ಬಂದವರಿಗೆ ಅಸ್ತಿತ್ವವನ್ನ ಜಾಹೀರು ಮಾಡಲಿಕ್ಕೆ. ನಂತರ ಬಂದದ್ದು ಚಕ್ರಕ್ಕೆ ಅಂಟಿದ ಡೈನಮೋ – ಅದರಿಂದ ಹೊಮ್ಮುವ ಬೆಳಕು. ಆ ಲೈಟಿನಲ್ಲಿ ಒಂದಿಷ್ಟು ರಸ್ತೆ ಕಾಣುತ್ತಿತ್ತಾದರೂ, ಅದರ ಉದ್ದೇಶವೂ ಎದುರಿನವರಿಂದ ಆಗಬಹುದಾದ ಅಪಘಾತವನ್ನು ತಪ್ಪಿಸುವುದಷ್ಟೇ ಆಗಿತ್ತು. ಡೈನಮೋದ ಲೋಹ ಟೈರನ್ನು ಅರಗಿಸದಿರಲೆಂದು ಅದಕ್ಕೊಂದು ಪ್ಲಾಸ್ಟಿಕ್ಕಿನ ಟೋಪಿ. ಇದಿಲ್ಲವೆಂದರೆ ಟಾರ್ಚ್. ಟಾರ್ಚನ್ನು ಮುಂದಿನ ಲೈಟಿನ ಭಾಗಕ್ಕೆ ಸಿಕ್ಕಿಸುವಂತೆ ಒಂದು ಕ್ಲಿಪ್ಪು. ಯಾವೂದೂ ಸಲ್ಲದಿದ್ದರೆ ಮುಂದಿನ ಚಕ್ರದ ಸ್ಪೋಕ್ಸ್ ನಡುವೆಯೇ ಟಾರ್ಚನ್ನ ಸಿಕ್ಕಿಸಿ ಓಡಿಸುತ್ತಿದ್ದೆವು. ಆಗೆಲ್ಲಾ ಸೈಕಲ್ಲು ಸವಾರರನ್ನು ಪಾದಚಾರಿಗಳಿಗಿಂತ ಭಿನ್ನವಾಗಿ ನೋಡುತ್ತಿದ್ದರು –ಒನ್ ವೇ, ನೋ ಎಂಟ್ರಿ, ಡಬ್ಬಲ್ ರೈಡು, ಬೆಳಕಿಲ್ಲದೇ ಚಲಾಯಿಸುವುದು.. ಎಲ್ಲವೂ ತಪ್ಪೆಂಬ ಕಾನೂನು ಸೈಕಲ್ ಸವಾರರಿಗೆ ಅನ್ವಯವಾಗುತ್ತಿತ್ತು. ಇನ್ನೂ ಒಂದು ತಲೆಮಾರು ಹಿಂದಕ್ಕೆ ಹೋದರೆ ಸೈಕಲ್ಲಿಗೆ ಒಂದು ಲೈಸೆನ್ಸ್ ಬಿಲ್ಲೆಯೂ ಇತ್ತು.

ನಮ್ಮಂಥಹ ಮಧ್ಯತರಗತಿಯ ಬಾಲಕರಿಗೆ ಇರುತ್ತಿದ್ದುದು ಎರಡೇ ದೊಡ್ಡ ಖ್ವಯಿಷು. ಏಳನೆಯ ತರಗತಿ ಮೊದಲ ದರ್ಜೆಯಲ್ಲಿ ಪಾಸಾದರೆ ಅಪ್ಪ ಒಂದು ಎಚ್.ಎಂ.ಟಿ ಕೈಗಡಿಯಾರ ಕೊಡಿಸುತ್ತಿದ್ದ. ಎಸ್ಸೆಸ್ಸೆಲ್ಸಿ ಪಾಸಾದರೆ ಒಂದು ಸೈಕಲ್ಲು. ಈಗಂತೂ ಮೊಬೈಲಿನಲ್ಲೂ ಗಡಿಯಾರ, ಕಾರಿನಲ್ಲೂ, ಕಂಪ್ಯೂಟರಿನ ಮೂಲೆಯಲ್ಲೂ ಗಡಿಯಾರ... ಇಪ್ಪತ್ತೈದು ರೂಪಾಯಿ ತೆತ್ತರೆ ಸಸ್ತಾ ಕೈಗಡಿಯಾರವೂ ಸಿಗುವುದು.

ಆ ಕಾಲದ ಸೈಕಲ್ಲುಗಳೆಂದರೆ ಕೇವಲ ಸೈಕಲ್ಲುಗಳಲ್ಲ. It is not about a bike ಎಂದು ಆತ್ಮಕಥನವನ್ನು ಬರೆದ ಲಾನ್ಸ್ ಆರ್ಮಸ್ಟ್ರಾಂಗನ ಗಾಥೆ ಈಗ ಆತ್ಮಕಥೆಯಾಗಿರದೇ ಒಂದು ಕಾದಂಬರಿಯಾಗಿ ಪರಿವರ್ತಿತಗೊಂಡಿದೆ. ಹೌದು ಅವನ ಕಥೆ ಸೈಕಲ್ಲಿನ ಬಗ್ಗೆ ಆಗಿಯೇ ಇರಲಿಲ್ಲ. ಪೆಡಲ್ಲು ಒತ್ತಿ ಎರಡು ಚಕ್ರಗಳ ಮೇಲೆ ಒಂದು ಜಾಗದಿಂದ ಇನ್ನೊಂದಕ್ಕೆ ಹೋಗುತ್ತಿದ್ದ ಕಾಲ ಮುಂದುವರೆದಿದೆಯಾದರೂ ಈಗ ಚಕ್ರವೇ ಇಲ್ಲದ ಸ್ಥಾಯಿ ಸೈಕಲ್ಲುಗಳೂ ಜಿಮ್ ಗಳಲ್ಲಿ ಸಿಗುತ್ತವೆ.

ಬ್ರಜಿಲ್ ನ ಮೊಆಸಿರ್ ಸ್ಕಿಲಾರ್ ಬರೆದ ಶಾಂತಿ ಮತ್ತು ಯುದ್ಧ ಎನ್ನುವ ಕಥೆಯಲ್ಲಿ ಗಂಡ ಹೆಂಡತಿ ಕೂತಲ್ಲೇ ಒಂದು ನಕ್ಷೆ, ಸ್ಥಾಯಿ ಸೈಕಲ್ ಹಿಡಿದು ಮನದಲ್ಲೇ ಖಂಡಾತರದ ಪ್ರಯಾಣ ಮಾಡಿಬಿಡುತ್ತಾರೆ. ಹೀಗೆ ಸೈಕಲ್ಲಿನ ಪರಿಭಾಷೆಯೇ ಸಂಪೂರ್ಣ ಬದಲಾಗುತ್ತದೆ.

ಹದಿನೈದು ವರ್ಷಗಳ ಹಿಂದೆ ನಾನೊಂದು ಸೈಕಲ್ ಕೊಂಡೆ. ದಪ್ಪ ಟೈರಿನ ಆಲ್ ಟೆರೇನ್ ಬೈಕ್. ಕೊಂಡಾಗ ನನ್ನ ಮಗನಿಗೆ ಮೂರ್ನಾಲ್ಕು ವರ್ಷ ವಯಸ್ಸು. ಸೈಕಲ್ ಅಂಗಡಿಯಲ್ಲಿ ನನಗೆ ಬೇಕಾದ ಎರಡು ಪರಿಕರಗಳನ್ನು ಕೇಳಿದಾಗ ಅಂಗಡಿಯವನು ಅವಾಕ್ಕಾದ. ಒಂದು: ಸೈಕಲ್ಲಿನ ಬಾರಿನ ಮೇಲೆ ಜೋಡಿಸಿಕೊಡಬೇಕಿದ್ದ ಒಂದು ಪುಟ್ಟ ಸೀಟು. ಎರಡು: ಆ ಸೀಟಿನ ಮೇಲೆ ಕೂತ ಪುಟ್ಟ ತನ್ನ ಕಾಲುಗಳನ್ನು ಇಟ್ಟುಕೊಳ್ಳಲು ಕ್ರಾಸ್ ಬಾರಿನ ಮೇಲೆ ಪಾದವೂರುವ ಹ್ಯಾಂಡಲ್ಲು. ಮತ್ತು ಆಶ್ಚರ್ಯಕ್ಕೆ ತಾವಿಲ್ಲದ ಮೂರನೇ ಬಯಕೆ – ಪುಟ್ಟ ಬೆಲ್ಲು. ಚರಿತ್ರೆಯಲ್ಲಿಯೇ ಉಳಿದು ನಮ್ಮ ಬಾಲ್ಯವನ್ನು ಮತ್ತೆ ಜೀವಿಸಬಯಸುವ ನಡುವಯಸ್ಕರ ತೆವಲುಗಳನ್ನು ಆಲ್ ಟೆರೇನ್ ಬೈಕಿನ ಮೇಲೆ ಹೇರಬೇಕಾದ ಪರಿಸ್ಥಿತಿಯನ್ನು ಅವನು ಊಹಿಸಿಯೇ ಇರಲಿಲ್ಲವೆನ್ನಿಸುತ್ತದೆ......

ಇನ್ನೂ ಹಿಂದೆ ಆಣಂದದಲ್ಲಿ ವಿದ್ಯಾರ್ಥಿಯಾಗಿದ್ದಾಗ ಟೌನ್ ಹಾಲಿನಲ್ಲಿ ಚಲ್ ಚಂದೂ ಚೌಪಾತಿ ಅನ್ನುವ ಗುಜರಾತಿ ನಾಟಕ ನೋಡಿದಾಗಿನ ಅನುಭವವೇ ಮತ್ತೊಂದು. ಕೆಟ್ಟ ನಾಟಕವೆಂದು ಮಧ್ಯಂತರದಲ್ಲಿ ಎದ್ದು ಬರಲು ನೋಡಿದರೆ ಸಾಧ್ಯವೇ ಆಗಲಿಲ್ಲ. ಕಾರಣ: ಸೈಕಲ್ ಸ್ಟಾಂಡಿನಿಂದ ಸೈಕಲ್ ತೆಗೆಯುವುದೇ ಅಸಾಧ್ಯವಾಗಿತ್ತು. ಸೈಕಲ್ಲಿಗೆ ಬೀಗ ಹಾಕಿರಲಿಲ್ಲವಾದರೂ ಒಂದರ ಪಕ್ಕ ಒಂದನ್ನು ನಿಲ್ಲಿಸದೇ ಒಂದಕ್ಕೊಂದರಂತೆ ಒರಗಿಸಿಟ್ಟಿದ್ದ ಸೈಕಲ್ಲುಗಳ ಮಾಲೆಯಲ್ಲಿ ನನ್ನ ನಂತರ ಸೈಕಲ್ಲನ್ನು ನಿಲ್ಲಿಸಿದವರೆಲ್ಲರೂ ಮಧ್ಯಂತರದಲ್ಲಿ ಹೊರಬಂದ ಹೊರತು ನಾನು ಹೋಗುವಂತಿರಲಿಲ್ಲ. ಇದನ್ನು ಲಾಸ್ಟ್ ಇನ್ ಫರ್ಸ್ಟ್ ಔಟ್ ಪದ್ಧತಿಯಲ್ಲಿ ಹೊರತೆಗೆಯಬೇಕಿತ್ತು. ಹೀಗೆ ಜೋಡಿಸಿಟ್ಟಾಗ ಸ್ಟಾಂಡಿನವನು ತನ್ನ ಕಾಸನ್ನು ಪಡೆದದ್ದಲ್ಲದೇ – ಕಡೆಯ ಸೈಕಲ್ಲಿಗೆ ಸರಪಳಿ ಕಟ್ಟಿ ನಾಟಕ ಮುಗಿವವರೆಗೂ ಅಲ್ಲಿಂದ ಅದೃಶ್ಯನಾಗಬಹುದಿತ್ತು.

ಹಳೆಯ ಸಿನೇಮಾಗಳ ಫೈಟ್ ಸೀನುಗಳಲ್ಲಿ ಒಂದು ಖಾಯಂ ಘಟನೆಯಿರುತ್ತಲೇ ಇತ್ತು – ಸಾಲಾಗಿ ನಿಲ್ಲಿಸಿದ ಸೈಕಲ್ ಸ್ಟಾಂಡಿನ ಮೇಲೆ ನಾಯಕ ಖಳನನ್ನು ಒಗೆಯುವುದು. ಸಾಲಾಗಿ ಎಲ್ಲ ಸೈಕಲ್ಲುಗಳೂ ನೆಲಕಚ್ಚುವುದು. ಆದರೀಗ ಲೈಫು ಬದಲಾಗಿ ಲೈಫ್ ಸೈಕಲ್ಲು ಭಿನ್ನವಾಗಿದೆ. ನಾಗರಹಾವಿನ ಜಮೀಲನೂ ಇಲ್ಲ, ಚೈನ್ ತೆಗೆದು ಖಳರನ್ನು ಥಳಿಸುವ ರಾಮ್ ಗೋಪಾಲ ವರ್ಮರ ಶಿವ ನೂ ಇಲ್ಲ. ಎರಡನ್ನೂ ಮೀರಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ. ಕೆಲ ವರ್ಷಗಳ ಹಿಂದೆ ಬಂದ ಲೈಫ್ ಇಸ್ ಬ್ಯೂಟಿಫುಲ್ ಚಿತ್ರದಲ್ಲಿ ತಂದೆ ಮಗ ಸೈಕಲ್ಲನ್ನೇರಿ ಓಡಾಡಿದ್ದು ನೆನಪಾದರೂ, ಆ ಚಿತ್ರ ಎರಡನೇ ಮಹಾಯುದ್ಧದ ಕಾಲದ್ದಾಗಿತ್ತು ಎನ್ನುವ ಮಾತು ಥಟ್ಟಂತ ತಟ್ಟಿತು.

ಈಗ ಸೈಕಲ್ ಹತ್ತಿದರೆ ಎಲ್ಲಿಂದೆಲ್ಲಿಗೆ ಹೋಗಬೇಕು, ರಸ್ತೆ ಹೇಗೆ ದಾಟಬೇಕು, ಟೋಪಿಯಿಲ್ಲದೇ ಮುಂದೆಹೋಗುವ ಪರಿಯೇನು, ಪಂಚರಗಡಿ-ರಿಪೇರಿಯಂಗಡಿ ಎಲ್ಲಿದೆ ಎಂದು ತಿಳಿಯದ ಅತಂತ್ರತೆಯಿದೆ. ಈ ನಡುವೆ ಜಯನಗರದ ಅರ್ಥಹೀನ ಸೈಕಲ್ ಮಾರ್ಗಗಳು ನಮ್ಮನ್ನು ಆಹ್ವಾನಿಸುವ ಕಪಟ ಮಾಡುತ್ತಿವೆ. ಖುಲ್ಲಾ ಹವೆಯಲ್ಲಿ ಮೈಸೂರು ನಗರದಿಂದ ಬಲಮುರಿಗೊಮ್ಮೆ – ಶ್ರೀರಂಗಪಟ್ಟಣಕ್ಕಿನ್ನೊಮ್ಮೆ ಹೋಗುತ್ತಿದ್ದ ಪಡ್ಡೆ ದಿನಗಳು ನೆನಪುಮಾತ್ರವಾಗಿ ಉಳಿದಿವೆ.
No comments: