Tuesday, April 19, 2011

ಬದಲಾದ ಬೆಂಗಳೂರಿಗೆ ಬರಲಾಗಿ...

ಬೆಂಗಳೂರಿಗೆ ವಾಪಸ್ಸಾಗಿ ಇಲ್ಲಿ ತಳವೂರುವುದು ನನಗಿದ್ದ ಕನಸುಗಳಲ್ಲಿ ಒಂದಾಗಿತ್ತು. ಹಾಗೆ ನೋಡಿದರೆ ನಿಜವಾದ ಬೆಂಗಳೂರಿಗ ವಲಸೆ ಹೋಗುವುದೇ ಇಲ್ಲ. ಇಲ್ಲಿಯೇ ಪಿಂಚನಿ ದೊರೆಯಬಹುದಾದ ಒಳ್ಳೆಯ ಕೆಲಸ ಸಿಕ್ಕರೆ, ಹೊರಗೆ ದೊರೆಯಬಹುದಾದ ತುಸು ಹೆಚ್ಚು ಹಣ, ಅಥವಾ ಹುದ್ದೆಯನ್ನು ನಾವು ತಿರಸ್ಕರಿಸುವವರೇ. ಸುಮ್ಮನೆ ಯಾಕೆ ರಿಸ್ಕ್ ತೆಗೆದುಕೊಳ್ಳಬೇಕು? ಇದ್ದಹಾಗೆ ಇರಲು ಸಾಧ್ಯವಾದರೆ ಅದಕ್ಕಿಂತ ಹೆಚ್ಚಿನ ತೃಪ್ತಿ ಬೇರೇನಿದೆ. ಹೀಗಾಗಿಯೇ ಬೆಂಗಳೂರಿಗರ ಮನಸ್ಥಿತಿಯನ್ನು ವಿವರಿಸಲು ಸರಿಯಾದ ವಿಶೇಷಣವೆಂದರೆ ‘ಅಡ್ಜಸ್ಟ್’ ಅನ್ನವ ಪದವೇ ಇರಬಹುದು. ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿರುವ ನನಗೆ ಒಳ-ಹೊರಗಿನ ಎರಡೂ ನೋಟಗಳು ಸಿಕ್ಕಿರುವುದರಿಂದ ಇಲ್ಲಿನ ಬದಲಾವಣೆಗಳು ಯಾವ ದಿಗ್ಭ್ರಾಂತಿಯನ್ನೂ ಉಂಟುಮಾಡಿಲ್ಲ. ಊರು, ಒಂದು ರೀತಿಯಲ್ಲಿ ಹಿಂದಿನಷ್ಟೇ ಆರಾಮವಾಗಿ ಸೋಮಾರಿಯಾಗಿದೆ. ಆಗಾಗ ತಕ್ಷಣದ ಚಟುವಟಿಕೆ ಕಾಣುತ್ತದೆ. ಹಾಗೂ ಎಷ್ಟು ಅಸ್ತವ್ಯಸ್ತವಾಗಬಹುದೋ ಅಷ್ಟೂ ಅಸ್ತವ್ಯಸ್ತವಾಗಿದೆ. ಇಲ್ಲಿ ಸಹನಶೀಲತೆ, ಅಸಹನೆ, ಸಹಿಷ್ಣುತೆ ಎಲ್ಲವೂ ಏಕಕಾಲಕ್ಕೆ ಆಗುವುದನ್ನ ನಾವು ಕಾಣುತ್ತಿದ್ದೇವೆ. ನಮಗೆ ನಮ್ಮ ರಜನಿ ಸಾರ್ [ಹೆಸರು: ಶಿವಾಜಿರಾವ್ ಗಾಯಕ್ ವಾಡ್, ತಾಯ್ನುಡಿ: ಮರಾಠಿ, ಕನ್ನಡ ಚೆನ್ನಾಗಿ ಬಲ್ಲ ತಮಿಳು ಸಿನೇಮಾದ ಸೂಪರ್ ಹೀರೋ] ಸಿನೇಮಾಗಳೆಂದರೆ ಪ್ರೀತಿ. ಆತ ಬೆಂಗಳೂರಿಗ, ಕನ್ನಡಿಗ ಅನ್ನುವ ಹೆಮ್ಮೆ. ಆದರೂ ಆತನಿರುವ ನಾಡು ನೀರನ್ನು ಕೇಳಿದರೆ ನಾವು ಉರಿದೇಳುತ್ತೇವೆ. ನೀರು ಕನ್ನಡತನದ ಪ್ರತೀಕವಾದಾಗ ಊರೆಲ್ಲ ಹಳದಿ-ಕೆಂಪು ಬಾವುಟಗಳು ಹಾರಾಡುತ್ತವೆ. ಈ ಬಣ್ಣ ಮತ್ತು ಈ ಬಣ್ಣದ ಬಾವುಟಗಳು ಅಪಾಯಕಾಲದ ಕವಚಗಳಾಗಿ ಇರುತ್ತವೆ.

ಅನೇಕ ವರ್ಷಗಳಿಂದ ಮುಸುಕಿನಲ್ಲಿ ಕುಳಿತಿದ್ದ ತಿರುವಳ್ಳುವರ್ ಪುತ್ಥಳಿ ಇದ್ದಕ್ಕಿದ್ದಂತೆ ಬೆಳಕನ್ನು ನೋಡುತ್ತದೆ. ಅದಕ್ಕೆ ಮೂಲ ಎರಡು ರಾಜ್ಯಗಳ ನಡುವಿನ ಶಾಂತ ಸಂಬಂಧ, ಹಾಗೂ ಅಲ್ಲಿ ಅನಾವರಣಗೊಂಡ ಕವಿ ಸರ್ವಜ್ಞನ ಪುತ್ಥಳಿ. ಇದು ನಮಗೆ ಅ-ಶಾಂತ ಶಾಂತಿಯನ್ನು ನೀಡಿದೆ. ನಗರಕ್ಕೆ ಬೆಂಕಿಯಿಕ್ಕಬಹುದಾಗಿದ್ದ ಈ ಘಟನೆ, ಯಾವದೇ ತೊಂದರೆಯಿಲ್ಲದೇ 2009ರಲ್ಲಿ ಮತ್ತೊಂದು "ನಗರದ ಕಾರ್ಯಕ್ರಮ"ವಾಗಿ ಸರಳವಾಗಿ ಏನೂ ಆಗದೇ ನಡೆದು ಹೋಯಿತು. ಬೆಂಗಳೂರಿಗನಾಗಿ ನನಗೆ ಮುಂಚಿದ್ದ ಕೋಪವೂ, ಈಗಿನ ಪ್ರಶಾಂತತೆಯೂ ಅರ್ಥವೇ ಆಗಿಲ್ಲ. ತಮಿಳು ಕನ್ನಡ ಸಂಬಂಧದಲ್ಲಿನ ತಿರುವನ್ನು ಇದು ಸೂಚಿಸುತ್ತದೆಯೇ? ನನಗಿನ್ನೂ ಗೊತ್ತಿಲ್ಲ.
‘ಹೊರನಾಡಿಗ’ರ ಒಳವಲಸೆ ನಡೆಯುತ್ತಿರುವಂತೆಯೇ ಕನ್ನಡಿಗರು ಒಂದು ವಿಚಿತ್ರ ಆತ್ಮಾಭಿಮಾನದ ಠೀವಿಯಿಂದ ಮುನ್ನಡೆಯುತ್ತಿರುವಂತಿದೆ. ಈ ಆತ್ಮಾಭಿಮಾನ ಮತ್ತು ಠೀವಿ ಈಚೆಗೆ ಬೆಂಗಳೂರಿನಲ್ಲಿ ಭವ್ಯವಾಗಿ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯಕ್ತವಾಗಿತ್ತು. ಇಡೀ ನಗರವೇ ಆ ಹಬ್ಬಕ್ಕಾಗಿ ಅರಶಿನ ಕುಂಕುಮದ ಬಣ್ಣದಿಂದ ರಾರಾಜಿಸುತ್ತಿತ್ತು. 98 ವರ್ಷ ವಯಸ್ಸಿನ ಪ್ರೊ.ವೆಂಕಟಸುಬ್ಬಯ್ಯನವರು ನಲವತ್ತರ ಮಧ್ಯವಯಸ್ಕರ ಯೌವನೋತ್ಸಾಹದಲ್ಲಿ ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ನಮಗವರ ವಯಸ್ಸೂ ಕಾಣಲಿಲ್ಲ. ಅವರಿಗೆ ಅದರ ಅನುಭವವೂ ಆದಂತಿರಲಿಲ್ಲ. ಆತ, ಯಾವುದೇ ಸಂಕೋಚವಿಲ್ಲದೇ ಹೇಳಬೇಕಾದ್ದನ್ನು, ಮುಖ್ಯವಾಗಿ ಸರಕಾರದಲ್ಲಿರುವ ಭ್ರಷ್ಟಾಚಾರದ ವಿಚಾರವನ್ನೂ ಮಂಡಿಸಿದರು. ಅದರ ಫಲ – ಮುಖ್ಯಮಂತ್ರಿಗಳು ಆ ಮಾತನ್ನು ಗಮನಿಸಿ ಪ್ರತಿಕ್ರಿಯಿಸುವ ಪ್ರಮೇಯ ಬಂತು. ಸಮ್ಮೇಳನದ ಪುಸ್ತಕದಂಗಡಿಗಳು ಜನಜಂಗುಳಿಯಿಂದ ತುಂಬಿ, ಪುಸ್ತಕ ಮಾರಾಟ ಬಿರುಸಿನಿಂದ ನಡೆಯಿತು. ಇಪ್ಪತ್ತು ವರ್ಷಗಳ ಕೆಳಗೆ ಕನ್ನಡ ಭಾಷೆ ಕುಂದುತ್ತಿದೆ ಅದನ್ನು ರಕ್ಷಿಸಬೇಕು ಅನ್ನುವ ಕಾತರವನ್ನು ನಾವು ತೋರಿದ್ದೆವು. ನಮ್ಮ ಪ್ರಮುಖ ಲೇಖಕರೊಬ್ಬರು ಆಂಗ್ಲ ಟೈಪ್ ರೈಟರುಗಳನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕೆನ್ನುವ ಕರೆಯನ್ನು ನೀಡಿದ್ದರು. ಆಡಳಿತದಲ್ಲಿ ಕನ್ನಡಕ್ಕೇ ಪ್ರಾಮುಖ್ಯತೆ ಇರಬೇಕೆನ್ನುವ ಕರೆಯಿತ್ತು. ಆದರೆ ಇಂದು ಭಾಷೆ ಎಷ್ಟು ಜೀವಂತಿಕೆ ತೋರಿಸುತ್ತಿದೆಯೆಂದರೆ ಬೆಂಗಳೂರಿಗ-ಕನ್ನಡಿಗ ಹೆಚ್ಚು ತಾಳ್ಮೆಯನ್ನೂ, ಆತ್ಮಾಭಿಮಾನವನ್ನೂ ತೋರಿಸುತ್ತಿರುವಂತಿದೆ. ಹೀಗಾಗಿಯೇ ಹೆಚ್ಚು ಸಹನಶೀಲತೆಯೂ ಇದೆಯೇನೋ. ಈ ಸಮ್ಮೇಳನವನ್ನು ಬಸವನಗುಡಿಗೆ ಬದಲು ಫ್ರೇಜರ್ ಟೌನಿನಲ್ಲೋ ಬಾನಸವಾಡಿಯಲ್ಲೋ ನಡೆಸಿದ್ದರೆ ಅದು ಇಷ್ಟೇ ಯಶಸ್ವಿಯಾಗುತ್ತಿತ್ತೇ? ಈ ಬಗ್ಗೆ ನಾನು ಯೋಚಿಸುತ್ತೇನೆ: ಬಹುಶಃ ಬೆಂಗಳೂರಿನಲ್ಲಿ ಭೂಗೋಳದೊಳಿಗಿನ ಭೂಗೋಳ, ಮಹಾನಗರದೊಳಗಿನ ಪೇಟೆಗಳು ಇವೆಯೆಂಬುದನ್ನ ನಾವು ಗುರುತಿಸಬೇಕೇನೋ..

ಸದಾ ಹೋರಾಟದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಸಮ್ಮೇಳನವನ್ನು ನಿರ್ವಹಿಸುವುದರಲ್ಲಿ ಮುಖ್ಯಪಾತ್ರ ವಹಿಸಿತ್ತು. ಹೋರಾಟಗಾರರು ಮುಖ್ಯವಾಹಿನಿಯಲ್ಲಿ ಸೇರಿಹೋದರೇ ಎನ್ನುವ ವಾದಸರಣಿಯನ್ನೂ ಇದು ತೆರೆಯಿತು. ಕರಾವೇ ತಮ್ಮ ಭೂಮಿಕೆಯನ್ನು ಪುನಃಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆಯೇ? ನಮಗೆ ಭಾಷೆಯ ಬಗೆಗೆ ಇನ್ನೂ ಆತಂಕವಿದೆಯೇ? ಯಾವುದೇ ಭಾನುವಾರ ಬೆಳಿಗ್ಗೆ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ ಕಲ್ಚರ್ ನ ವಾಡಿಯಾ ಹಾಲಿಗೆ ಹೋದರೆ ನಮಗೆ ಭಾಷೆಯ ಬಗ್ಗೆ ಯಾವುದೇ ಆತಂಕವಿರಬಾರದು ಅನ್ನುವ ಭಾವನೆ ಬರುತ್ತದೆ. ನಿಧಾನವಾಗಿ ಭಾನುವಾರ ಬೆಳಿಗ್ಗೆ ಅಲ್ಲಿಗೆ ಹೋದಲ್ಲಿ ಒಂದು ಮುಫತ್ತು ತಿಂಡಿ-ಕಾಫಿ ಸಿಗುವುದಲ್ಲದೇ ವೇದಿಕೆಯ ಮೇಲೊಬ್ಬ ಬರಹಗಾರ ಮೂರು ಅತಿಥಿಗಳು, ಹೊರಗೊಂದು ಪುಸ್ತಕ ಮಳಿಗೆ ಕಾಣಸಿಗುತ್ತದೆ. ನಮ್ಮ ಬರಹಗಾರರನ್ನೂ ಪ್ರಕಾಶಕರನ್ನೂ ಹಿಡಿದಿಡಲು ಯಾರಿಗೂ ಸಾಧ್ಯವಾಗಿಲ್ಲ. ಅಲ್ಲೆಲ್ಲೋ ಹಿನ್ನೆಲೆಯಲ್ಲೊಬ್ಬ ಓದುಗ ಚಪ್ಪಾಳೆ ತಟ್ಟುತ್ತ ಪುಸ್ತಕವನ್ನು ಕೊಳ್ಳುತ್ತಿರಬೇಕು.

ಬೆಂಗಳೂರು ಯಾವಗಲೂ ಹಲವು ಲೋಕಗಳಲ್ಲಿ, ಹಲವು ಮಜಲುಗಳಲ್ಲಿ ಬೆಳೆದಿದೆ. ಟೈಂಸ್ ಪ್ರಕಾಶಕರು ಜನಪ್ರಿಯ ಪತ್ರಿಕೆ ವಿಜಯ ಕರ್ನಾಟಕವನ್ನು ಕೊಂಡ ಕೆಲಕಾಲದಲ್ಲೇ ಈವರೆಗೂ ಗುಜರಾತು ಮತ್ತು ಆರ್ಥಿಕ ದೈನಂದಿನ ಪತ್ರಿಕೆಗಳಿಗೆ ಮೀಸಲಾಗಿದ್ದ ಕಾರ್ಯವನ್ನು ಕನ್ನಡಿಗರ ಮೇಲೆ ಎಸಗಿದರು: ಟೈಂಸ್ ಆಫ್ ಇಂಡಿಯಾ ಪತ್ರಿಕೆಯನ್ನು ಕನ್ನಡಾನುವಾದದಲ್ಲಿ ಪ್ರಕಟಿಸಲು ನಿರ್ಧರಿಸಿದ್ದು ಅನೇಕರಿಗೆ ಸೋಜಿಗವುಂಟುಮಾಡಿತು. ನಮ್ಮ ಪ್ರಮುಖ ಲೇಖಕರಾದ ಡಾ. ಯು.ಆರ್. ಅನಂತಮೂರ್ತಿಯವರಿಗಂತೂ ಇದರಿಂದ ವಿಪರೀತ ಸಿಟ್ಟೇ ಬಂತು. ಕನ್ನಡದ ಸೊಗಡನ್ನು ಮೆಚ್ಚಿ ಬೆಳೆದ, ಆ ಸೊಗಡನ್ನು ಬೆಂಗಳೂರಿನ ಪುನರ್ನಾಮಕರಣದ ಮೂಲಕ ಹೊರನಾಡಿಗರಿಗೂ ಹಬ್ಬಬೇಕು ಅನ್ನುವ ಆಶಯವಿದ್ದ ಅನಂತಮೂರ್ತಿಯವರಿಗೆ ಸಿಟ್ಟು ಬರುವುದರಲ್ಲಿ ಆಶ್ಟರ್ಯವೇನೂ ಇರಲಿಲ್ಲ.

ಭಾಷೆ ರಾಜ್ಯದಾದ್ಯಂತ ಇರುವ ವಿಚಾರವಾದರೂ, ರಾಜಧಾನಿಯಲ್ಲಿ ಇದರ ಮಹತ್ವವೇ ಬೇರೆ. ಭಾಷೆಯ ಬಗ್ಗೆ ಕಳಕಳಿಯಿರುವ ಮೇಧಾವಿಗಳೂ, ಬುದ್ದಿಜೀವಿಗಳೂ ಇಲ್ಲೇ ಇರುವುದರಿಂದ ಭಾಷೆಯ ಬಾವುಟವನ್ನು ಇಲ್ಲಿ ಎತ್ತಿ ಹಿಡಿಯುವುದು ಮುಖ್ಯವಾಗುತ್ತದೆ. ಔಟ್ ಲುಕ್ ಪತ್ರಿಕೆಗೆ ಬರೆವ ಸುಗತ ಶ್ರೀನಿವಾಸರಾಜು ಕನ್ನಡದ ಆತಂಕದ ಬಗ್ಗೆ ಆಗಿಂದಾಗ್ಗೆ ಬರೆಯುತ್ತಿರುತ್ತಾರೆ. ಕನ್ನಡವೇ ಉಚ್ಚರಿಸದ ರಾಮಚಂದ್ರ ಗುಹಾ ತನ್ನನ್ನು ಹೆಮ್ಮೆಯ ಕನ್ನಡಿಗನೆಂದು ವಿವರಿಸಿಕೊಂಡಾಗ ಆತನನ್ನು ನಮ್ಮ ನಡುವಿನಲ್ಲಿರಿಸಿಕೊಂಡು ಸಂಜೆಯ ಹರಟೆಯನ್ನು ಕೋಶೀಸ್ ನಲ್ಲಿ ನಡೆಸಲು ನಾವು ತಯಾರೇ. ಹೀಗಾಗಿ ಇಲ್ಲಿನ ಆತಂಕ ಕೇವಲ ಕನ್ನಡ ಭಾಷೆಯದ್ದಲ್ಲದೇ ಅದ್ದಕ್ಕೂ ಮೀರಿದ್ದು ಅನ್ನುವುದನ್ನ ನಾವು ಗಮನಿಸಬೇಕಿದೆ.


ಹೊಸದಾಗಿ ಹುಟ್ಟಿಕೊಂಡ ಲ್ಯಾಂಡ್ ಮಾರ್ಕ್, ಕ್ರಾಸ್ ವರ್ಡ್ ಪುಸ್ತಕದಂಗಡಿಗಳನ್ನು ಅಪ್ಪಿಕೊಳ್ಳುತ್ತಲೇ, ಶ್ಯಾನಭಾಗರ ಪ್ರೀಮಿಯರ್ ಮುಚ್ಚಿ ಹೋದಬಗ್ಗೆ ಕೊರಗುವುದನ್ನು ಹೇಗೆ ವಿವರಿಸಬೇಕು.. ವಾರಾಂತ್ಯದಲ್ಲಿ ನೂರಾರು ರೂಪಾಯಿ ತೆತ್ತು ದೆಹಲಿಯ ಅಜಯ ಬಿಜ್ಲಿ ನಡೆಸುವ ಪಿವಿ‌ಆರ್ ನ ಪರದೆಯ ಮೇಲೆ ಮುಂಗಾರು ಮಳೆ ನೋಡುವುದಕ್ಕೆ ಏನನ್ನಬೇಕು.. ಅಥವಾ ನಮ್ಮ ಹೃದಯಾಂತರಾಳದಲ್ಲಿ ಬೆಂಗಳೂರಿನ ಮೂಲದ್ರವ್ಯವನ್ನಿಟ್ಟುಕೊಂಡೇ ಮಹಾನಗರದ ಛದ್ಮವನ್ನು ನಾವು ಧರಿಸಿದ್ದೇವೇಯೇ? ಹಳೆಯ ಜಾಗಗಳಾದ ಚಾಮರಾಜಪೇಟೆ, ಬಸವನಗುಡಿ, ಜಯನಗರ, ಗಾಂಧಿಬಜಾರುಗಳನ್ನೇ ತೆಗೆದುಕೊಳ್ಳೋಣ. ಊರ ತುಂಬ ಇರುವ ಹೊಳೆವ ಮಾಲ್-ಮಲ್ಟಿಪ್ಲೆಕ್ಸುಗಳು ಇಲ್ಲೆಲ್ಲಿ? ಗಾಂಧಿಬಜಾರಿನ ಮುಖ್ಯರಸ್ತೆಯಲ್ಲಿನ ತರಕಾರಿ ಮಳಿಗೆ ಬಿರುಸಿನಿಂದ ವ್ಯಾಪಾರ ಮುಂದುವರೆಸುತ್ತಿದ್ದಾಗಲೇ ಅಲ್ಲಿನ ಸೂಪರ್ ಸ್ಟೋರ್ ಗಳು ಮುಚ್ಚಿರುವುದನ್ನು ಸೊರಗಿರುವುದನ್ನ ನಾವು ಕಂಡಿದ್ದೇವೆ. ಕೆಲದಿನ ಮುಚ್ಚಿ ಹೆಚ್ಚು ವ್ಯತ್ಯಾಸವೇ ಇಲ್ಲದೇ ಮತ್ತೆ ತೆರೆದಿರುವ ವಿದ್ಯಾರ್ಥಿ ಭವನದ ಬಣ್ಣೆ ದೋಸೆಗಾಗಿ ನಾವುಗಳು ಒಂದರ್ಧ ಘಂಟೆ ಶಾಂತಿಯಿಂದ ಕಾಯಲು ತಯಾರು. ಎದುರಿಗೆ ತುಸುದೂರದಲ್ಲಿ ಉಡುಪಿ ಶ್ರೀ ಕೃಷ್ಣಭವನವೂ ಅವತರಿಸಿದೆ. ಅಲ್ಲಿಯೇ ತುಸುದೂರದಲ್ಲಿ ಅತ್ಯಂತ ಜನಪ್ರಿಯ ಎಸ್.ಎಲ್.ವಿ ಎದುರಿಗೆ ಕೆ.ಎಫ್.ಸಿಯ ಅಂಗಡಿಯೂ, ಪಾಪಡೀವಾಲಾ ಚಾಟ್ ಭಂಡಾರವನ್ನು ಎತ್ತಂಗಡಿ ಮಾಡಿದ ವಿದೇಶಿ ಮೆಕ್ ಡೊನಾಲ್ಡೂ ಇದೆ. ರೀಟೈಲ್ ವ್ಯಾಪಾರಕ್ಕೆ ದೊಡ್ಡ ಅಂಗಡಿಗಳು ಬಂದಾಗ್ಯೂ ನನ್ನ ಕಿರಾಣಿಯಂಗಡಿಯವನ ವ್ಯಾಪಾರವೇನೂ ಕಡಿಮೆಯಾದಂತಿಲ್ಲ. ದೊಡ್ಡ ಅಂಗಡಿಗಳು ಅನೇಕ ಬಂದು ಹೋದುವಾದರೂ ಕಿರಾಣಿಯಂಗಡಿಯೊಂದೂ ಮುಚ್ಚಿಲ್ಲ. ನಾಗಶ್ರೀ ಮತ್ತು ಪ್ರಿಸಂ ತಮ್ಮ ವ್ಯಾವಾರ ಮುಂದುವರೆಸುತ್ತಿರುವಂತೆಯೇ ಜಯನಗರದ ಒಡಿಸ್ಸೀ ದೆಹಲಿಗೆ ಪಯಣ ಬೆಳೆಸಿಬಿಟ್ಟಿತು!


ಬೆಂಗಳೂರಿನಂತಹ ಬೆಳೆಯುತ್ತಿರುವ ಮಹಾನಗರ ತನ್ನ ಉಡುಪಿ, ದರ್ಶಿನಿಗಳೊಂದಿಗೇ – ತಂದೂರಿ ಮುಘಲಾಯಿಗಳನ್ನೂ ಅಂತರ್ಗತ ಮಾಡಿಕೊಂಡು ಮುನ್ನಡೆಯಬೇಕಾದದ್ದು ಸಹಜವೇ ಏನೋ. ಆದರೆ ನಾವು ಯಾವುದನ್ನು ನಮ್ಮದಾಗಿಸಿಕೊಳ್ಳುತ್ತೇವೆ, ಯಾವುದನ್ನು ಹೊರಗಟ್ಟುತ್ತೇವೆ ಅನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ದರ್ಶಿನಿಗಳಲ್ಲಿ ಬೈಟೂ ಕಾಫಿ ಕುಡಿಯುವ ನಾವೇ ಪ್ರೀತಿಯಿಂದ ನಮ್ಮದೇ ಆದ ಕೆಫೆ ಕಾಫಿ ಡೇ ಅನ್ನೂ ನಮ್ಮದಾಗಿಸಿಕೊಂಡಿದ್ದೇವೆ. ಅದೇ ಅಣಬೆಗಳಂತೆ ಹೆಗ್ಗಡೆಯವರ ಕಾಲದಲ್ಲಿ ಬೆಳೆದ ಪಬ್ಬುಗಳೆಲ್ಲಿ? ಎಲ್ಲೋ ಒಂದು ಪಬ್ ವರ್ಲ್ಡ್ ಇನ್ನೂ ಇದೆಯಾದರೂ, ನಾಸಾ, ಓಕನ್ ಕ್ಯಾಸ್ಕ್, ಅಂಡರ್ ಗ್ರೌಂಡ್ ಮತ್ತು ಊರಸುತ್ತಲೂ ಹಬ್ಬಿದ್ದ ರಮದಾ ಪಬ್ಸ್ ಇಲ್ಲವಾಗಿವೆ. ಒಂದು ಡ್ರಾಫ್ಟ್ ಬಿಯರು ಹೀರುವುದು, ಒಂದು ಪಿಚ್ಚರಿಗೆ ಹೇಳುವುದು ಹಿನ್ನಲೆಗೆ ಹೋಗಿ, ಅನೇಕ ಫೈನ್ ಡೈನಿಂಗ್, ಡಿಸೈನರ್ ಖಾನಾವಳಿಗಳು ಉದ್ಭವವಾಗಿವೆ.

ಶತಮಾನ ಜೀವಿಸಿದ ಸಸ್ಯಾಹಾರಿ ನಿಟ್ಟೂರು ಶ್ರೀನಿವಾಸರಾಯರ ಮನೆ ಇದ್ದಕ್ಕಿಂದ್ದಂತೆ ದೊಡ್ಡದೊಂದು ಪಾಸ್ಟಾ, ಮೆಡಿಟರೇನಿಯನ್ ಊಟವನ್ನು ಉಣಿಸುವ ಒಳ್ಳೆಯ ಗುಣಮಟ್ಟದ ವೈನ್ ಕುಡಿಸುವ ಎಕ್ಸ್ ಕ್ಲೂಸಿವ್ ರೆಸ್ಟುರಾ ಆಗಿಬಿಟ್ಟಿದೆ. ಇದನ್ನೂ ನಾವು ನಗರದ, ಜೀವನದ ಒಂದು ಭಾಗವಾಗಿ ಒಪ್ಪಿಬಿಟ್ಟಿದ್ದೇವೆ. ನಿಚಾನಿಯವರು ಬೆಂಗಳೂರಿನ ಉದ್ದಗಲಕ್ಕೂ ತಮ್ಮ ಥೀಮ್ ರೆಸ್ಟುರಾಗಳನ್ನು ಪ್ರಯೋಗಿಸಿ (ಸಾಹಿಬ್ ಸಿಂದ್ ಸುಲ್ತಾನ್, ಸಮರ್ಕಂಡ್, ಹಿಪ್ನೋಸ್, ಅಂಗೀಠಿ...) ಅದನ್ನು ಬೇರೆ ನಗರಗಳಿಗೆ ಒಯ್ದಿದ್ದಾರೆ. ಇದರಿಂದ ನಮಗೆ ಬೇಸರವೇ? ಒಂದು ರೀತಿಯಲ್ಲಿ ಹೌದು. ಸಂಜೆಯ ಸಮಯಕ್ಕೆ ಒಂದು ದಕ್ಷಿಣ ಭಾರತೀಯ ಪ್ಲೇಟ್ ಮೀಲನ್ನು ಆರ್ಡರ್ ಮಾಡಲು ಪ್ರಯತ್ನಿಸಿ ನೋಡಿ.. ಬೆಂಗಳೂರಿನ ಉಡುಪಿ-ದರ್ಶಿನಿಗಳು ದ್ವಂದ್ವದ ಬದುಕನ್ನು ಜೀವಿಸಲು ತೀರ್ಮಾನಿಸಿದಂತಿದೆ.. ದಿನಬೆಳಕಿನಲ್ಲಿ ದಕ್ಷಿಣ ಭಾರತೀಯ, ಸಂಜೆಯಾಗುತ್ತಿದ್ದಂತೆ ತಂದೂರಿ!


ಈಗ ಬೆಂಗಳೂರಿಗರನ್ನು ಕಾಡುತ್ತಿರುವುದು ನಮ್ಮ ಮೆಟ್ರೋ. ಅದರ ನಿರ್ಮಾಣದ ಮುಕ್ತಾಯ ಕಾಣುತ್ತಲೇ ಇಲ್ಲ. ಭೂಗತವಾಗಿರುವ ಜಗತ್ತಿನ ಮಿಕ್ಕ ಮೆಟ್ರೋಗಳಿಗಿಂತ ಭಿನ್ನವಾಗಿ ಈ ಮಟ್ರೋ ನಮ್ಮ ತಲೆಯ ಮೇಲೆ ಹೊರೆಯಾಗಿದೆ. ಹೊರೆ. ಮೆಟ್ರೋ ಪ್ರಾರಂಭವಾಗುವ ಸ್ಟೇಷನ್ನಿನ ಹಸರು ಬೈಯ್ಯಪ್ಪ-ನಹಳ್ಳಿ. ಇದರಲ್ಲೂ ಏನಾದರೂ ಗೂಢಾರ್ಥವಿದೆಯೇ? ಮೆಟ್ರೋ ಪ್ರಾರಂಭವಾಗುವುದನ್ನೇ ನಾವು ಕಾತರದಿಂದ ಕಾಯುತ್ತಿದ್ದೇವೆ. ಮೆಟ್ರೋದಲ್ಲಿ ಓಡಾಡಬೇಕೆಂಬ ಬಯಕೆಯಿಂದಲ್ಲ – ಬದಲಿಗೆ ಈ ಕೆಲಸ ಮುಗಿದು ನಮ್ಮ ಜೀವನ ಸರಾಗವಾದರೆ ಸಾಕು. ಅಷ್ಟೇ. ಇದೇ ಸಮಯಕ್ಕೆ ಬಿ.ಎಂ.ಟಿ.ಸಿ ಯ ಆತ್ಮಾಭಿಮಾನ ಎಷ್ಟು ಹಿರಿದೆಂದರೆ, ಆಗಾಗ ಆ ಸಂಸ್ಥೆ ಬಸ್ ದಿನವನ್ನು ಘೋಷಿಸಿ – ನಿಮ್ಮ ಖಾಸಗೀ ವಾಹನಗಳನ್ನು ಮನೆಯಲ್ಲೇ ಇಟ್ಟು ಬಂದರೆ, ಎಲ್ಲರನ್ನೂ ಬಸ್ಸಿನಲ್ಲೇ ಒಯ್ಯುವ ಸವಾಲನ್ನು ಹಾಕುತ್ತಿದ್ದಾರೆ. ಈ ಆತ್ಮಾಭಿಮಾನವನ್ನು ಮೆಚ್ಚಿಕೊಂಡರೂ, ಎಲ್ಲರೂ ಬಸ್ಸಿಗೆ ಮುಗಿಬಿದ್ದರೆ ಆಗುವ ಗತಿಯೇನು ಅನ್ನುವುದನ್ನು ನಾವು ಊಹಿಸಿಲ್ಲ.


ಬೆಂಗಳೂರು ಭಾರತೀಯ ನಗರಗಳಲ್ಲೇ ಅತ್ಯಂತ ಅಮೆರಿಕನ್ ನಗರ ಅಂತ ನಾವು ಹೇಳಿಕೊಳ್ಳಬಹುದು. ನಗರದಲ್ಲಿ ಕನಿಷ್ಟ ಮೂರು ರಸ್ತೆಗಳಲ್ಲಿ ನಮ್ಮ ವಾಹನಗಳು ಕಾನೂನಿನನ್ವಯ ರಸ್ತೆ ಬಲಬದಿಯಲ್ಲಿ ಓಡುತ್ತವೆ. ಯೋಜನಾರಹಿತ ಕೆಳಸೇತುವೆ, ಮೇಲ್ಸೇತುವೆಗಳು ಕೆಟ್ಟ ಕಟ್ಟಡತಂತ್ರದ ಹೆಮ್ಮೆಯನ್ನು ನಮ್ಮದಾಗಿಸುವಂತೆ ಮಾಡಿವೆ. ಸದ್ಯಕ್ಕೆ ರಿಚ್ಮಂಡ್ ರಸ್ತೆಯ ಕತ್ತರಿ ಮೇಲ್ಸೇತುವೆಯ ರಸ್ತೆಯನ್ನು ತುಸು ಅಡ್ಜಸ್ಟ್ ಮಾಡಿ ಒಂದು ಬದಿಯಲ್ಲಾದರೂ ಎರಡು ಬದಿ ವಾಹನ ಚಾಲನೆ ಪ್ರಾರಂಭಮಾಡಿದ್ದಾರೆ...!

ಬೆಂಗಳೂರಿನ ವಿಮಾನ ನಿಲ್ದಾಣವನ್ನು ಕಂಡರೆ ನನಗೆ ಎಲ್ಲಿಲ್ಲದ ಅಭಿಮಾನ. ಹಳೆಯ ವಿಮಾನ ನಿಲ್ದಾಣವನ್ನು ಮರೆಯದಂತೆ ಮಾಡುವ ಹಳೆತಕ್ಕೂ ಹೂಸತಕ್ಕೂ ಕೊಂಡಿಯಾಗಿರುವ ಈ ಕಟ್ಟಡವನ್ನು ಕಂಡು ಅಭಿಮಾನ ಪಡದಿರುವುದು ಹೇಗೆ? ಹೊಸ ವಿಮಾನ ನಿಲ್ದಾಣದಲ್ಲಿನ ಅನುಭವ ಹಳೆಯದಕ್ಕಿಂತ ಭಿನ್ನವಲ್ಲ. ಚೆಕ್ ಇನ್ ಗೆ ಉದ್ದನೆ ಸಾಲು, ಸೆಕ್ಯೂರಿಟಿಗೆ ಮತ್ತೊಂದು ಸಾಲು..ನಮ್ಮ ಮೂಲಾನುಭವವನ್ನು ನಾವು ಮರೆಯುವುದು ಹೇಗೆ? ಹಾಗಾದರೆ ಬದಲಾವಣೆಯೇ ಇಲ್ಲವೇ? ಖಂಡಿತವಾಗಿಯೂ ಇದೆ ಸ್ವಾಮಿ, ಇದೇ ಅನುಭವ ಪಡೆಯಲು ಸರಾಸರಿ 40 ಕಿಲೋಮೀಟರುಗಳ ಪ್ರಯಾಣ ಮಾಡಬೇಕು ಅನ್ನುವುದನ್ನು ನಾವು ಮರೆಯಬಾರದು. ಅಂತರರಾಷ್ಟ್ರೀಯ ವಿಮಾನಾಶ್ರಯದ ಮುಂಚಿನ ಮೇಲ್ಸೇತುವೆ ತಳಭಾಗದಲ್ಲಿ ಕಟ್ಟುತ್ತಿರುವ ಟೋಲ್ ಪ್ಲಾಜಾ ತಯಾರಾಗುತ್ತದ್ದಂತೆ, ಕಾರುಗಳ ಸಾಲು-ಪಾವತಿಗೆಂದು ಇನ್ನಷ್ಟು ಸಮಯ ಕಳೆಯುವುದು ಸಹಜವೇ. ಗಣೇಶನ ಹಬ್ಬದಾದಿಯಿಂದ ಏರಪೋರ್ಟಿನ ಮೇಲ್ಸೇತುವೆಯವರೆಗೆ, ಚಂದಾ ವಸೂಲಿಗಾಗಿ ನಾವು ಸದಾ ರಸೀತಿ ಪುಸ್ತಕ ತಯಾರಿರಿಸಿಕೊಂಡಿರುತ್ತೇವೆ. ನೋಡಿ ಸ್ವಾಮಿ, ನಾವಿರೋದೇ ಹೀಗೆ.!

ಬೆಳೆಯುತ್ತಿರುವ ನಗರಕ್ಕೆ ಹೊರನಾಡಿನವರು ವಲಸೆ ಬರುವುದು ಸಹಜವೇ. ಈ ವಲಸೆ ತನ್ನದೇ ಆತಂಗಳನ್ನೂ ತರುತ್ತಿದೆ. ಈ ಆತಂಕ ಒಳವಲಸೆಯ ಪ್ರಮಾಣದ ಬಗ್ಗೆ ಇರುವ ಆತಂಕವಲ್ಲ. ಈ ಆತಂಕ ಕೌಶಲ್ಯದ ಅವಶ್ಯಕತೆಯಿಲ್ಲದ ಕೆಲಸಗಳಿಗೂ ಹೊರನಾಡಿನಿಂದ ವಲಸೆ ಬರುತ್ತಿರವ ಪ್ರವೃತ್ತಿಯ ಬಗೆಗಿರುವ ಆತಂಕವಾಗಿದೆ. ಈ ಆತಂಕ ನಮ್ಮ ಸ್ಥಳೀಯ ಕಾರ್ಮಿಕರ ಮೇಲೆ ಯಾವ ಪರಿಣಾಮ ಬೀರಬಹುದು ಅನ್ನುವುದರ ಬಗೆಗಿನದು. ಬೆಳವಣಿಗೆ ಬೆಂಗಳೂರಿಗರಿಗೆ ಚಿನ್ನದ ಗಣಿಯಾಗಿ ಪರಿವರ್ತಿತವಾಗಿ ಉದ್ಯೋಗಾವಕಾಶ ಉಂಟುಮಾಡಿದೆಯೇ ಅಥವಾ ವಲಸೆಗಾರರ ಸ್ವರ್ಗವಾಗಿದೆಯೇ ಅನ್ನುವುದೇ ಪ್ರಶ್ನೆ. ಮೊನ್ನೆ ಉತ್ತರ ಭಾರತದ ನನ್ನ ಗೆಳೆಯನೊಬ್ಬ ಹೊಸದಾಗಿ ನಿರ್ಮಾಣವಾದ ಬಹುಮಹಡಿ ಅಪಾರ್ಟ್ ಮಂಟಿನ ಸೆಕ್ಯೂರಿಟಿ ಗಾರ್ಡಿಗೆ ನಾವು ಯಾರ ಮನೆಗೆ ಹೋಗಬೇಕು ಅನ್ನುವುದನ್ನ ತನಗೆ ತಿಳಿದ ತಾನು ಈಚೆಗಷ್ಟೇ ಕಲಿತ ಎರಡಕ್ಷರ ಕನ್ನಡದಲ್ಲಿ ಹೇಳಲು ತಿಣುಕುತ್ತಿದ್ದಾಗ ಸೆಕ್ಯುರಿಟಯವನೇ ಅವನನ್ನು ರಕ್ಷಿಸಿದ. ಅವನಿಗೇ ಕನ್ನಡ ಗೊತ್ತಿರಲಿಲ್ಲವಾದ್ದರಿಂದ ಇಬ್ಬರೂ ಸಹಜವಾಗಿ ಖುಷಿಯಿಂದ ಹಿಂದಿಗೆ ರವಾನೆಯಾದರು. ಅಲ್ಲಿಂದ ಮುಂದಕ್ಕೆ ಸಹಾಯ ಬೇಕಾದದ್ದು ಕನ್ನಡಿಗನಾದ ನನಗೆ

ನಾವು ಈ ಬಗ್ಗೆ ಗೊಣಗಬಾರದೇನೋ. ಬಹುಶಃ ನಾವು ಸಮಾಧಾನಕ್ಕಾಗಿ ಮುಂಬೈಯನ್ನು ನೋಡಬೇಕೇನೋ. ಅಥವಾ ನ್ಯೂಯಾರ್ಕನ್ನು. ಅಥವಾ ನಾವು ರಾಜ್ಯದ ಒಳಭಾಗಕ್ಕೆ ಹೋಗಿ ಖುಷಿ ಪಡಬೇಕೇನೋ. ರಾಜಧಾನಿ ಪ್ರಗತಿ ಸಾಧಿಸಿದಷ್ಟೂ ಭಾಷೆಗೆ ಕುತ್ತು ತಪ್ಪಿದ್ದಲ್ಲ. ಸ್ಥಳೀಯ ವ್ಯಾಪಾರಕ್ಕೆ ಕುತ್ತೂ-ಅವಕಾಶವೂ ಕಾಣುತ್ತದೆ. ನಮ್ಮ ಸಿನೇಮಾಗಳು ಭೀತಿಯಿಂದ ನಡುಗುತ್ತವೆ. ಆದರೂ ಕಾಸರವಳ್ಳಿಯವರ ಸಿನೇಮಾಕ್ಕೆ ಯಾವುದೋ ಮಲ್ಟಿಪ್ಲೆಕ್ಸ್ ನಲ್ಲಿ – ದಿನಕ್ಕೊಂದು ಆಟ, ಒಂದೇ ಪರದೆ, ವಾರಾಂತ್ಯವಿಲ್ಲದ ಐದು ದಿನಗಳ ಪ್ರದರ್ಶನ ದೊರೆಯುತ್ತದೆ. ದೂರದರ್ಶನದ ಹೃದಯವಂತಿಕೆಯ ಮುಲಾಜಿಲ್ಲದೇ ಈ ಸಿನೇಮಾ ತೆರೆ ಕಾಣಬಹುದು. ಬದಲಾವಣೆ ಕಾಣುತ್ತಿದೆ. ಆದರೆ ಇದು ಯಾವ ದಿಕ್ಕಿನ ಬದಲಾವಣೆ ಅನ್ನುವುದರ ಬಗ್ಗೆ ದಿಕ್ಕು ತೋಚದಾಗಿದೆ. ಎಲ್ಲವನ್ನೂ ನಾವು ನಮ್ಮ ಜೀವನದಲ್ಲಿ ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಕಲಿತಿದ್ದೇವೆ.


Monday, May 24, 2010

ಕನ್ನಡ ಭಾಷೆ, ತಂತ್ರಾಂಶ ಮತ್ತು ಬ್ಲಾಗ್ ಲೋಕ

[ಈ ಲೇಖನವನ್ನು ನಾನು ದೇಶಕಾಲ ವಿಶೇಷ ಸಂಚಿಕೆಗಾಗಿ ಪ್ರತ್ಯೇಕವಾಗಿ ಬರೆದೆ. ಪತ್ರಿಕೆಯ ಪ್ರತಿಗಳಿಗೆ deshakaala@gmail.com ಗೆ ಬರೆಯಿರಿ. ಈ ಪತ್ರಕೆ ಒಂದು ಸಂಗ್ರಾಹ್ಯ ಸಂಚಿಕೆ ಅನ್ನುವುದರಲ್ಲಿ ಅನುಮಾನವಿಲ್ಲ.]



ಇಪ್ಪತ್ತು ವರುಷಗಳ ಹಿಂದೆ ಬರವಣಿಗೆ ಎನ್ನುವುದು ಕಾಗದದ ಮೇಲೆ ಸೇರಿಸುವ ಅಕ್ಷರಜಾಲವಾಗಿತ್ತು. ಹಾಗೂ ಬರೆದದ್ದು ಪ್ರಕಟಗೊಳ್ಳಲು ಹಲವು ಸಹಜ ಅಡಚಣೆಗಳೂ ಇದ್ದುವು. ಈಗ ತಂತ್ರಜ್ಞಾನದ ವೃದ್ಧಿಯೊಂದಿಗೆ ಇಂದು ಕೀಲಿಮಣೆಯ ಮೇಲೆ ಹಲವುಬಾರಿ ಬೆರಳುಗಳನ್ನಾಡಿಸಿ, ಒಂದು ಗುಂಡಿಯನ್ನು ಒತ್ತಿದರೆ ಬರೆದದ್ದು ಜಗತ್ತಿಗೇ ತಿಳಿಯುತ್ತದೆ. ಅಚ್ಚು ಮಾಧ್ಯಮದಲ್ಲೂ ಇದು ತುಂಬಾ ಸರಳವಾಗಿದೆಯೆಂದು ಗೆಳೆಯರೊಬ್ಬರು ಹೇಳಿದರು. ಡಿಟಿಪಿಯ ತಂತ್ರಜ್ಞಾನ ಬಂದಿರುವುದರಿಂದ ಮೊದಲು 1000 ಪ್ರತಿಗಳಿಗೆ ಕಡಿಮೆ ಅಚ್ಚು ಮಾಡುವುದು ಕಷ್ಟ ಎಂದು ಒದ್ದಾಡುತ್ತಿದ್ದುದಕ್ಕೆ ವಿರುದ್ಧವಾಗಿ 150 ಪ್ರತಿಗಳನ್ನು ಅಚ್ಚು ಹಾಕಬಹುದಾದ ಸಾಧ್ಯತೆಯಿದೆಯಂತೆ. ಅಕ್ಷರ ಜೋಡಣೆಯನ್ನು ಕಂಪ್ಯೂಟರಿನಲ್ಲಿ ಕಾಯ್ದಿರಿಸಬಹುದಾದ್ದರಿಂದ, ಸರಕಾರಿ, ಲೈಬ್ರರಿ ಆರ್ಡರುಗಳು ಬಂದಾಗ ಇನ್ನಷ್ಟು ಪ್ರತಿಗಳನ್ನು ಅಚ್ಚು ಹಾಕಬಹುದು...

ಕೆಲವು ಮಾಧ್ಯಮಗಳಲ್ಲಿ ಈಗಲೂ ಪ್ರಕಟಿಸುವುದು ಕಷ್ಟವೇ ಆದರೂ, ಅದಕ್ಕೆ ಕಾಯಬೇಕಾಗಿ ಬಂದರೂ, ನಮಗೆ ಬಹಳಷ್ಟು ಇತರ ಮಾರ್ಗಗಳು ಸುಲಭವಾಗಿ ಕಾಣಿಸುತ್ತಿವೆ. ಬ್ಲಾಗುಗಳ ಲೋಕವೂ ತ್ವರಿತ ನಿರ್ವಾಣದ ಲೋಕವೇ ಆಗಿದೆ. ಇದರಿಂದ ಎಷ್ಟೋ ಹೊಸ ಧ್ವನಿಗಳು ಬರಬಹುದು, ಹೊಸ ರೀತಿಯ ಅಭಿವ್ಯಕ್ತಿಯೂ ಕಾಣಬಹುದು. ಆದರೂ ಈ ಯಂತ್ರದ ಮೂಲಕ ಮಾತನಾಡುವ, ಇಡೀ ವ್ಯಕ್ತಿತ್ವ ಪ್ರಕಟಗೊಳ್ಳದ - ಅನಾಮಿಕತೆಯಿಂದಾಗಿಯೇ ಬೆತ್ತಲಾಗುವ ಬ್ಲಾಗಿನ ಮಾಧ್ಯಮ ಕುತೂಹಲದ್ದೂ ಆಗಿದೆ. ಇದರಿಂದಾಗಿ ಈಗ ಕಾಣುವ ಈ ಅಭಿವ್ಯಕ್ತಿಗೆ ಶಿಸ್ತಿನ, ಎಸ್ಥಟಿಕ್ಸ್ ಗೆ ಸಂಬಂಧಿಸಿದ, ಚಿಂತನದ, ಹಲವು ಮಗ್ಗಲುಗಳನ್ನೂ ಯೋಚಿಸಿನೋಡಬಹುದು.

ಹೈದರಾಬಾದಿನಲ್ಲಿ ಕರ್ನಾಟಕ ಸಾಹಿತ್ಯ ಮಂದಿರ ಪ್ರಕಟಸುತ್ತಿದ್ದ ಪರಿಚಯ ಎಂಬ ಪತ್ರಿಕೆಗೆ ಬರೆದ ಬರವಣಿಗೆಗಳು ನನ್ನ ಮಟ್ಟಿಗೆ ಇಂದಿನ ಬ್ಲಾಗಿನ ಚೌಕಟ್ಟಿಗೆ ಹತ್ತಿರವಾದಂತಹ ಬರವಣಿಗೆಗಳು. ದೂರದ ಊರಿನಿಂದ ಬರುತ್ತಿದ್ದ ಪತ್ರಿಕೆಗೆ ಸಂಪಾದಕರೂ, ಬರಹಗಾರರೂ, ಪ್ರೂಫ್ ಓದುವವರೂ, ಒಮ್ಮೊಮ್ಮೆ ಕುತೂಹಲದಿಂದ ಅಕ್ಷರದ ಮೊಳೆಗಳನ್ನು ಜೋಡಿಸುತ್ತಿದ್ದವರೂ ಎಲ್ಲ ಅಲ್ಲಿ ಅಡ್ಡಾ ಹಾಕುತ್ತಿದ್ದ ನಾಲ್ಕಾರು ಮಿತ್ರರು. ಅಕ್ಷರ ಜೋಡಿಸಿ ನೋಡಿ, ಉಳಿದ ಜಾಗವನ್ನು ಸುದ್ದಿ, ಪುಟ್ಟ ಕತೆ, ಅಲ್ಲೇ ಹೆಣೆದ ಕವಿತೆ ಹೀಗೆ ಕ್ಷಣದಲ್ಲೇ ಬರೆದ ತಕ್ಷಣ ಸಾಕ್ಷಾತ್ಕಾರದ ತುಣುಕು ಬರವಣಿಗೆಗಳನ್ನು ಮಾಡಲು ಕೆಲವರಿಗಷ್ಟೇ ಸಾಧ್ಯವಿತ್ತು. ಆದರೂ ಈ ಸಾಧ್ಯತೆಯೂ ಸಂಪಾದಕನ ಒಟ್ಟಾರೆ ಒಪ್ಪಿಗೆಯ ಪರಿಧಿಯಲ್ಲಿ, ಶಿಷ್ಟಾಚಾರದ ಚೌಕಟ್ಟಿನೊಳಗೆ ನಡೆಯುತ್ತಿತ್ತು. ಇಂಥ ಮಾಧ್ಯಮ ಎಟುಕದಿದ್ದವರು ಎಲ್ಲಿಂದಲೋ ಪತ್ರಿಕೆಯಲ್ಲಿ ಪುಟ್ಟ ಸುದ್ದಿ ನೀಡಿ - ಪೋಸ್ಟ್ ಕಾರ್ಡ್ ಕಥೆಗಳ ಸಂಕಲನಕ್ಕೆ ಬರಹಗಳನ್ನು ಆಹ್ವಾನಿಸುತ್ತಿದ್ದರು. ಅಲ್ಲಿ ಪದಗಳ ಮಿತಿ ಒಂದು ನಿಗದಿತ ಜಾಗಕ್ಕೆ ಪರಿಮಿತವಾಗಿರುತ್ತಿತ್ತು. ನಿಮ್ಮ ಕೈಬರಹದ ಚಮತ್ಕಾರದಲ್ಲಿ ಹೆಚ್ಚು ಪದಗಳನ್ನು ಅದರೂಳಕ್ಕೆ ತೂರಿಸುವ ಶ್ರದ್ಧೆಯನ್ನು ಬರಹಗಾರರು ತೋರಬಹುದಿತ್ತು. ಹೀಗಾಗಿಯೇ ವರ್ಡ್ ಕೌಂಟ್ ಇಲ್ಲದ ಕಾಲದಲ್ಲೂ ಕಥಾಸ್ಪರ್ಧೆಗಳಿಗೆ ಪುಟಮಿತಿಗಳಿರುತ್ತಿದ್ದವು. ಆ ಪುಟಮಿತಿಯನ್ನೂ ಮೀರಿ ಕಥಾಸ್ಪರ್ಧೆಗಳಿಗೆ ಕಥೆಗಳನ್ನು ಕಳಿಸುತ್ತಿದ್ದ ನಮ್ಮ ಭಾಗ್ಯ ಈಗಿನ ಪದಗಳೆಣಿಸುನ ಲಕ್ಕಿಗರ ಕಾಲಕ್ಕಿಂತ ಭಿನ್ನವೂ ಉತ್ತಮವೂ ಆಗಿತ್ತನ್ನಿಸುತ್ತದೆ. ಅಥವಾ ನನಗೆ ವಯಸ್ಸಾಗುವುದನ್ನ ನಾನು ಗಮಸಿಸುತ್ತಿಲ್ಲ.

ಪ್ರಕಟಣಾ ತಂತ್ರಜ್ಞಾನ ಬೆಳೆದ ಹಾಗೆ ಅಂತರ್ಜಾಲವೂ ನಮ್ಮ ಕೈಗೆಟುಕುತ್ತಿರುವ ಈ ಕಾಲದಲ್ಲಿ ಬರವಣಿಗೆಯ ಪರಿಯ ಕೆಲ ನಿಯಮಗಳು ಸಹಜವಾಗಿಯೇ ಬದಲಾಗುತ್ತಿವೆ. ಹೀಗಾಗಿ ಇದರಿಂದ ಬರವಣಿಗೆಯ ಗುಣಮಟ್ಟದ ಮತ್ತು ವೈವಿಧ್ಯತೆಯ ಮೇಲೆ ಆಗಿರಬಹುದಾದ ಪರಿಣಾಮ ಏನಿರಬಹುದು? ಯಾರು ಈ ಹೊಸ ಮಾಧ್ಯಮವನ್ನು ತಮ್ಮದಾಗಿಸಿಕೊಂಡಿದ್ದಾರೆ, ಅವರುಗಳ ಸಾಮಾನ್ಯತಃ ಕಾಳಜಿಗಳೇನಿರಬಹುದು.. ಈ ಹುಡುಕಾಟಕ್ಕೆ ಹೊರಟರೆ ಕನ್ನಡದಲ್ಲಿ ಬರುತ್ತಿರುವ ಐನೂರಕ್ಕೂ ಹೆಚ್ಚು ಬ್ಲಾಗುಗಳನ್ನು ನಾವು ಪರಿಶೀಲಿಸಿ ಅದರಲ್ಲಿನ ಹೂರಣವನ್ನು ಹುಡುಕಬಹುದು. ಈ ಐನೂರು ಬ್ಲಾಗುಗಳು ಒಂದು ರೀತಿಯ ಖಾಸಗೀ ಆಸ್ತಿಯಲ್ಲಿ ಕಟ್ಟಿದ ಸ್ವಂತ ಮನೆಗಳು. ಇದಲ್ಲದೇ ಜಾಲದಲ್ಲಿರಬಹುದಾದ ತ್ವರಿತ ಪ್ರಕಟಣೆ ನೀಡುವ - ಸಂಪದ, ದಟ್ಸ್ ಕನ್ನಡದಂತಹ ಸಾಮೂಹಿಕ ತಾಣಗಳೂ ಹೊಸ ಮಾಧ್ಯಮವನ್ನು ಒದಗಿಸಿವೆ.

ಈ ತಂತ್ರಜ್ಞಾನದ ಭಿನ್ನತೆಯೇ ಹೊಸರೀತಿಯ ಬರವಣಿಗೆಯನ್ನೂ ಹೊಸತರಹದ ಬರಹಗಾರರನ್ನೂ ಹುಟ್ಟು ಹಾಕಿದೆ. ಎಂದೂ ಲೇಖನಿಯನ್ನು ಕಾಗದಕ್ಕೆ ಮುಟ್ಟಿಸದೇ ಇದ್ದಿರಬಹುದಾದ ಕಪಾಟಿನೊಳಗಿನ ಬರಹಗಾರರು ತಮ್ಮ ಲಜ್ಜೆಯನ್ನು ಬದಿಗೊತ್ತಿ ಕೀಲಿಮಣೆಯ ಮೇಲೆ ಕೈಯಾಡಿಸುತ್ತಾ ಮುಷ್ಟಿಮೈಥುನ ಮಾಡಿಕೊಳ್ಳಲು ಒಂದು ರೀತಿಯ ಬಹಿರಂಗ ಅನಾಮಿಕತೆಯನ್ನು ಬ್ಲಾಗುಗಳು ಒದಗಿಸಿಕೊಟ್ಟಿವೆ. ಇದೊಂದು ವಿಚಿತ್ರ ರೀತಿಯ ಮುಖ ಮುಚ್ಚಿಕೊಳ್ಳಲೇ ಬೇಕೆಂದು ಬಯಸುವ ಅನಾಮಿಕತೆಯಲ್ಲ. ಆದರೆ ಮುಖ ತೋರಿಸುತ್ತಲೇ, ನಾನ್ಯಾರು ಎನ್ನುವುದು ನಿನಗೆ ಗೊತ್ತಿಲ್ಲವಾದ್ದರಿಂದ ನನಗೆ ಪ್ರಾಮಾಣಿಕವಾಗಿರಲು - ಆ ಮೂಲಕ ನಿನಗೆ ನೋವುಂಟಾದರೂ ಅಪ್ರಿಯ ಸತ್ಯವನ್ನು ಹೇಳುವ ಧೈರ್ಯವನ್ನೂ ಈ ಮಾಧ್ಯಮ ಒದಗಿಸಿಕೊಟ್ಟಿದೆ. ಮುಂಬಯಿಯ ಬ್ಯಾಂಡ್ ಸ್ಟಾಂಡಿನ ಕಡಲ ಕಟ್ಟೆಯ ಮೇಲೆ ತಬ್ಬಿ ಕುಳಿತ ಅನೇಕ ಪ್ರೇಮಿಗಳಂತೆ - ತಮ್ಮ ಹತ್ತಿರದವರಿಂದ ಅನಾಮಿಕತೆಯನ್ನೂ, ಹಾಗೂ ಜಗತ್ತಿನಲ್ಲಿ ಬಿಂದಾಸ್ ಜೀವಿಸುವ ಖುಲ್ಲಂ-ಖುಲ್ಲಾ ಪ್ರವೃತ್ತಿಯನ್ನೂ ಏಕಕಾಲಕ್ಕೆ ಬೆಳೆಸಿಕೊಳ್ಳಲು ಈ ಮಾಧ್ಯಮ ಅನುವು ಮಾಡುಕೊಟ್ಟಿದೆ.


ಗಮ್ಮತ್ತಿನ ವಿಚಾರವೆಂದರೆ - ತಂತ್ರಜ್ಞಾನಕ್ಕೂ ನಮ್ಮಲ್ಲಿ ಬರವಣಿಗೆಯಲ್ಲಿ ತೊಡಗುತ್ತಿರುವ ಹೊಸ ಜನರಿಗೂ ನಾವು ತಾಳೆಹಾಕುತ್ತಿರುವಾಗಲೇ, ತಂತ್ರಜ್ಞಾನದಲ್ಲಿ ಈ ಮಧ್ಯೆ ಆದ ಬದಲಾವಣೆಗಳು ನಮ್ಮನ್ನು ಹೆಚ್ಚಾಗಿ ತಟ್ಟಲಿಲ್ಲವೆನ್ನುವ ವಿಚಾರವನ್ನು ಮನಗಾಣಬೇಕು. ಬರವಣಿಗೆಯ ಪ್ರಕ್ರಿಯೆಯನ್ನು ಬದಲಾಯಿಸಬಲ್ಲ, ಹಾಗೂ ನಾವು ಯೋಚಿಸುವ, ಆ ಆಲೋಚನೆಗಳನ್ನು ಅಕ್ಷರಕ್ಕಿಳಿಸುವ ಸಮಯದ ಸಮನ್ವಯತೆಯನ್ನು ಪ್ರಶ್ನಿಸುವ ಯಾವುದೇ ತಂತ್ರಜ್ಞಾನ ಕನ್ನಡವನ್ನು ಆಳವಾಗಿ ತಟ್ಟಿರಲಿಲ್ಲವೆನಿಸುತ್ತದೆ. ಗಣಕಯಂತ್ರ ಬರುವುದಕ್ಕೆ ಮೊದಲೇ ನಮ್ಮಲ್ಲಿ ಅನೇಕ ವರ್ಷಗಳ ಕಾಲ ಕನ್ನಡದ ಟೈಪ್ ರೈಟರುಗಳಿದ್ದುವು. ಬಹಳಷ್ಟು ಜನ ಇಂಗ್ಲೀಷ್ ಬರಹಗಾರರು ಕೈಬರಹದಿಂದ, ನೇರವಾಗಿ ಟೈಪು ಮಾಡುವ ಕಲೆಯನ್ನು ಮೈಗೂಡಿಸಿಕೊಂಡು, ತಮ್ಮ ಕೈಬರಹ ಹೆಚ್ಚಾಗಿ ಕಾಣದಂತೆ ಮರೆಮಾಚಿ ಮ್ಯಾನ್ಯುಸ್ಕ್ರಿಪ್ಟನ್ನು ಟೈಪ್ ಸ್ಕ್ರಪ್ಟಿಗೆ ಬದಲಾಯಿಸಿದ್ದರೂ, ಕನ್ನಡ ಭಾಷೆಯ ನುಡಿಗಟ್ಟಿನ ಸಂಕೀರ್ಣತೆಯಿಂದಾಗಿ ಕನ್ನಡ ಟೈಪ್ ರೈಟರ್ ಲೇಖಕರನ್ನು ಹೆಚ್ಚಾಗಿ ಆಕರ್ಷಿಸಲ್ಲಿಲ್ಲ. ಬಹುಶಃ ತಕ್ಷಣ ಬರಹಕ್ಕೆ ಆಗ ಐದಾರು ಸಾವಿರ ರೂಪಾಯಿ ಬೆಲೆಬಾಳುತ್ತಿದ್ದ ಟೈಪ್ ರೈಟರನ್ನು ಕೊಳ್ಳಬಹುದೆಂದು ಆಲೋಚಿಸುವ ಧೈರ್ಯವಿದ್ದದ್ದೇ - ಅಷ್ಟೊತ್ತಿಗಾಗಲೇ ನುರಿತು ಹೆಚ್ಚು ಬರೆಯುವ ಸಾಧ್ಯತೆಯಿದ್ದ ಅಸ್ಖಲಿತರಿಗೆ ಮಾತ್ರ. ಸಾಲದ್ದಕ್ಕೆ ಕನ್ನಡದ ಶುದ್ಧತೆಯನ್ನು ಗೌರವಿಸುವವರಿಗೆ ಐತ್ವಕ್ಕೂ (ೈ) ವಟ್ರಸುಳಿಗೂ (ೃ) ವ್ಯತ್ಯಾಸವನ್ನೇ ತೋರದ ಈ ಕ್ಲಿಷ್ಟ ಯಂತ್ರ ಬೇಸರವನ್ನೇ ತರಿಸಿರಬೇಕು. ಕನ್ನಡ ಟೈಪ್ ರೈಟರುಗಳನ್ನು ಪ್ರೀತಿಸಿದವರ - ಆ ತಂತ್ರಜ್ಞಾನವನ್ನು ಪೋಷಿಸಿದವರ ಯಾದಿ ತಯಾರಿಸಲು ಕಷ್ಟವೇ ಆಗಬಹುದಾದರೂ - ಖ್ಯಾತ ಬರಹಗಾರರಾದ ಎಸ್.ಎಲ್.ಭೈರಪ್ಪನವರು ಮಾತ್ರ ಎಲ್ಲ ಇಂಗ್ಲೀಷ್ ಟೈಪ್ ರೈಟರುಗಳನ್ನೂ ಅರಬ್ಬೀ ಸಮುದ್ರಕ್ಕೆ ಹಾಕಬೇಕೆಂದು ಹೇಳಿ ತಮ್ಮ ಕನ್ನಡಪ್ರೀತಿಯನ್ನ ವ್ಯಕ್ತ ಪಡಿಸಿದ್ದರು. ಆದರೆ ಭೈರಪ್ಪನವರು ಕನ್ನಡ ಟೈಪ್ ರೈಟರ್ ಉಪಯೋಗಿಸುತ್ತದ್ದರೇ ಇಲ್ಲವೇ ಅನ್ನುವುದು ನನಗೆ ತಿಳಿಯದು.

ನನಗೆ ತಿಳಿದಿರುವಂತೆ ಖಾಸಗೀ ಕನ್ನಡ ಟೈಪ್ ರೈಟರನ್ನು ಕೊಂಡವರಲ್ಲಿ ಮೊದಲಿಗರು ಯಶವಂತ ಚಿತ್ತಾಲರು. ಅದೃಷ್ಟವಶಾತ್ ಅದು ಅವರಿಗೆ ಒಗ್ಗಿ ಬರಲಿಲ್ಲ. ಅದೃಷ್ಟವಶಾತ್ ಅನ್ನುವ ಪದ ಉಪಯೋಗಿಸುವುದಕ್ಕೆ ಕಾರಣವನ್ನು ಚಿತ್ತಾಲರ ಶುದ್ಧವಾದ, ಚಿತ್ತಿಲ್ಲದ ಕೈಬರಹ ನೋಡಿದವರಿಗೆ ಅರ್ಥವಾಗುತ್ತದೆ. ಒಂದು ರೀತಿಯಲ್ಲಿ ಲೇಖಕನ ಕೈಯಿಂದಲೇ ಬಂದ ಅಕ್ಷರಗುಚ್ಚವನ್ನು ನೋಡವುದಕ್ಕೂ, ಮಧ್ಯೆ ಆ ಅಕ್ಷರಗಳನ್ನು ರೂಪಾಂತರಗೊಳಿಸಿ ಮುದ್ರಣಾಲಯದ ನಂತರ ನೋಡುವುದಕ್ಕೂ ಬಹಳವೇ ವ್ಯತ್ಯಾಸವಿದೆ.

ಅನಂತಮೂರ್ತಿಯವರ ಟಿಪ್ಪಣಿಗಳನ್ನು ನೋಡಿ - ಬರವಣಿಗೆಯಲ್ಲಿ ಅವರು ಅಕ್ಷರಗಳನ್ನು ನೇಯುವ ರೀತಿ ಆಪ್ಯಾಯಮಾನದ್ದು. ತಿರುಮಲೇಶರ ಅಕ್ಷರಗಳು ಹೈದರಾಬಾದೀ ಲಕ್ಷಣಗಳನ್ನು ಹೊಂದಿದ್ದು ಕನ್ನಡ-ಉರ್ದುವಿನ ಮಿಶ್ರಣದಂತೆ ಕಾಣುತ್ತದೆ. ಎಚ್.ಎಸ್.ವಿ ಅವರದ್ದು ಅಗಲವಾದ ವಿಶಾಲ ಮನಸ್ಸಿನ ಬರವಣಿಗೆ. ಕೆ.ಸತ್ಯನಾರಾಯಣರದ್ದು ಬಹಳಷ್ಟನ್ನು ಹೇಳಬೇಕೆಂಬ ಕಾತರದಿಂದ ಬರೆದ ಅವಸರದ ಬರವಣಿಗೆ - ಜಯಂತ ಕಾಯ್ಕಿಣಿಯದ್ದು ಮುದ್ದಾಗಿ ಕಾಣುವ ಶುದ್ಧ ಬರವಣಿಗೆ - ಅದರ ಜೊತೆಗೆ ಅಲ್ಲಿಲ್ಲಿ ಕೆಲವು ಚಿತ್ತಾರಗಳ ಸಂಭ್ರಮ - ಸಾಲದ್ದಕ್ಕೆ ಕಡಲ ದಂಡೆಯ ಜೀವಿ ಎಂದು ನಿರೂಪಿಸಲೋ ಎಂಬಂತೆ ಕಾಣುವ ಮೀನುಗಳ ಭಿತ್ತಿಗಳು. ನಾಗತಿಹಳ್ಳಿ ಚಂದ್ರಶೇಖರನದ್ದು ಅತೀ ಶುದ್ಧ, ಮುದ್ದಾದ, ಮುದ್ರಣದಂತೆ ಕಾಣುವ (ಒಮ್ಮೊಮ್ಮೆ ಕೃತಕವೆನ್ನಿಸಬಹುದಾದಷ್ಟು ಗುಂಡಾದ) ಬರವಣಿಗೆ.

ಈ ಮೀಮಾಂಸೆಗೆ ಒಗ್ಗದ ಕನ್ನಡದ ಇಬ್ಬರು ಲೇಖಕರು - ಪಾಲ್ ಸುದರ್ಶನ್ ಮತ್ತು ಪತ್ತೇದಾರಿ ಸಾಹಿತ್ಯ ಬರೆವ ಎಚ್.ಕೆ.ಅನಂತರಾವ್. ಪಾಲ್ ಟೈಪ್ ರೈಟರಿನ ಅನಂತ ಸಾಧ್ಯತೆಗಳನ್ನು ಪರಿಶೀಲಿಸಿ ನೇರವಾಗಿ ಬೇಕಿದ್ದರೆ ಎರಡು ಕಾಲಂಗಳಲ್ಲಿ ಟೈಪ್ ಮಾಡಬಲ್ಲವನಾಗಿದ್ದ ಚತುರ. ಸಿ.ಜಿ.ಕೆ ರಂಗನಿರಂತರ ಎನ್ನುವ 150 ದಿನಗಳ ಸತತ ನಾಟಕದ ಕಾರ್ಯಕ್ರಮ ನಡೆಸಿದಾಗ ಪಾಲ್ "ಕಟ್ಟೆ" ಅನ್ನುವ ಮೂರು ಕಾಲಮ್ಮಿನ ವಾರ್ತಾಪತ್ರವನ್ನು ಸುಲಭವಾಗಿ ನೇರವಾಗಿ ಟೈಪ್ ಮಾಡಿ, ಪ್ರತೀ ವಾರ ಹೊರತರುತ್ತಿದ್ದರು. ಅದರ ಹೂರಣವೂ ಅವರೇ, ಓರಣವೂ ಅವರೇ. ಎಚ್.ಕೆ.ಅನಂತರಾಯರ ತೊಂದರೆಗಳು ಎರಡು - ಅವರ ಕಥೆಗಳು ಅದ್ಭುತವಾಗಿರುವ ಸಾಧ್ಯತೆ ಇದ್ದರೂ - ಭಾಷೆಯ ಮೇಲಿನ ಹಿಡಿತ - ಕಾಗುಣಿತ - ಅಲ್ಪ ಮಹಾಪ್ರಾಣಗಳು ಅಷ್ಟಕ್ಕಷ್ಟೇ.. ಹೀಗಾಗಿ ವೈಎನ್ಕೆ ಹೇಳುತ್ತಿದ್ದಂತೆ ಅವರೊಬ್ಬ ಗ್ರೇಟ್ ಡಿಕ್ಟೇಟರ್. ಆದರೆ ಅವರಿಗೆ ಸಿಗುವ ಹುಡುಗರೂ ಎಷ್ಟು ಬೃಹಸ್ಪತಿಗಳಾಗುತ್ತಿದ್ದರೆಂದರೆ, ಅವರ ಕಾದಂಬರಿಗಳ ಅನೇಕ ವಾಕ್ಯಗಳನ್ನು ಬಹುಶಃ ಸುಧಾ ಪತ್ರಿಕೆಯ ಸಂಪಾದಕ ವಿಭಾಗವೇ ಬರೆದಿರಬಹುದು... ಈ ಇಬ್ಬರೂ ತಂತ್ರಜ್ಞಾನವನ್ನು ತಯಾರಿಸುವವರಿಗೆ ಖುಷಿಯನ್ನು ನೀಡುವವರು - ಒಬ್ಬಾತ ತನ್ನಬಳಿಯಿದ್ದ ತಂತ್ರಜ್ಞಾನವನ್ನು ಉಪಯೋಗಿಸುವ ಪರಿಗೆ, ಮತ್ತೊಬ್ಬ ಉಪಯೋಗಿಸಬಹುದಾದ ಸಾಧ್ಯತೆಗಳ ದಿಕ್ಕನ್ನು ತೋರಲು.... ಆದರೆ ಈ ಇಬ್ಬರೂ ತುರ್ತು ಪ್ರಕಟಣೆಯ ಬ್ಲಾಗುಗಳು ಪ್ರಕಟಣಾ ತಂತ್ರಜ್ಞಾನವನ್ನು ಉಪಯೋಗಿಸುವವರಲ್ಲ.

ಟೈಪ್ ರೈಟರಿನಿಂದ ಮುಂದಕ್ಕೆ ಹೊರಟರೆ ಕಂಪ್ಯೂಟರ್ ಯುಗಕ್ಕೆ ನಾವು ನೆಗೆಯಬೇಕು. ಆಂಗ್ಲಭಾಷೆಯ ಸೀದಾ ಸಾದಾ ಸಾಧ್ಯತೆಗಳನ್ನು ಮೀರಿ ಗಣಕಯಂತ್ರದ ಯುಗ ನಮ್ಮನ್ನು ಆವರಿಸಿತು. ಒಂದು ರೀತಿಯಲ್ಲಿ ಕನ್ನಡ ಸಾರಸ್ವತ ಲೋಕ ಟೈಪ್ ರೈಟರನ್ನು ಅಂತರ್ಗತ ಮಾಡಿಕೊಳ್ಳದಿದ್ದದ್ದೇ ಕನ್ನಡದ ಭಾಗ್ಯವಿರಬಹುದು. ಯಾಕೆಂದರೆ ಆಂಗ್ಲಭಾಷೆಯ ಅನಂತ ಸಾಧ್ಯತೆಗಳೂ ಟೈಪ್ ರೈಟರಿನಿಂದ ಆಮದಾದ ಕ್ವರ್ಟಿ (ಕ್ಯು, ಡಬ್ಲ್ಯು, ಈ, ಆರ್, ಟಿ, ವೈ) ಕೀಲಿಮಣೆಯಾಧಾರದ ಮೇಲೆಯೆ ಬೆಳಿಯಿತು. ಕನ್ನಡದ ಟೈಪ್ ರೈಟರಿನ ಕೀಲಿಮಣೆಯ ಬಂಧನಕ್ಕೆ ಒಳಗಾಗಿದ್ದವರು ಪಾಲ್ ಸುದರ್ಶನನಂತಹ ಕೆಲವಾರು ವ್ಯಕ್ತಿಗಳಾದ್ದರಿಂದ ಆ ಬಂಧನದಿಂದ ಮುಕ್ತರಾಗಿ ಭಿನ್ನವಾಗಿ ಯೋಚಿಸುವ ಸಾಧ್ಯತೆ ಕನ್ನಡವನ್ನೊಳಗೊಂಡು ಭಾರತೀಯ ಭಾಷೆಗಳಿಗೆ ಸುಲಭವಾಗಿ ಪ್ರಾಪ್ತವಾಯಿತು.

ತಂತ್ರಜ್ಞಾನದಲ್ಲಿ ತುಸು ಬದಲಾವಣೆಗಳಾಗುತ್ತಾ ಹೋದರೂ, ಅದು ಈಗಾಗಲೇ ಬರೆಯುತ್ತಾ ಇದ್ದ ಬರಹಗಾರರಿಗೆ ಉಪಯೋಗಿಸಲು ಸಿಕ್ಕ ಮತ್ತೊಂದು ಪರಿಕರವಾಯಿತೇ ಹೊರತು, ಬರವಣಿಗೆಯ ಪರಿಭಾಷೆಯನ್ನು ಅದು ಬದಲಾಯಿಸುವ ಗೋಜಿಗೆ ಹೋಗಲಿಲ್ಲ. ತಂತ್ರಜ್ಞಾನದ ಬದಲಾವಣೆಯನ್ನು ಆಸಕ್ತಿಯಿಂದ ಬರಮಾಡಿಕೊಂಡ ಸೃಜನಶೀಲ ಬರಹಗಾರರು ಕಡಿಮೆಯೇ ಇರಬೇಕು. ಇದಕ್ಕೆ ಕಾರಣ - ಬರಹಗಾರನ ಬಳಿಯಿದ್ದ (ಹಾಗೂ ಸುಲಭವಾಗಿ ಪ್ರಾಪ್ರವಾಗುತ್ತಿದ್ದ) ತಂತ್ರಜ್ಞಾನಕ್ಕೂ ಆ ಬದಿಯಲ್ಲಿ ಪ್ರಕಟಣಾ ಬಳಗದಲ್ಲಿದ್ದ ತಂತ್ರಜ್ಞಾನಕ್ಕೂ ತಾಳೆಯಿಲ್ಲದಿರುವುದೇ ಆಗಿತ್ತು. ನಮ್ಮಲ್ಲಿಗೆ ಮೊದಲಿಗೆ ಬಂದ ಸೇಡಿಯಾಪು ತಂತ್ರ ಆಂಗ್ಲ ಭಾಷೆಯಾಧಾರದ ಮೇಲೆ ಕನ್ನಡವನ್ನು ಬರೆಯುವ (phonetic transliteration) ರೀತಿಯನ್ನು ಪ್ರತಿಪಾದಿಸಿತು. ಅದೃಷ್ಟವಶಾತ್ತು ಅದು ಮುಕ್ತವಾಗಿ, ಮುಫತ್ತಾಗಿ ಲಭ್ಯವಾಗುತ್ತಿದ್ದ ಸಾಫ್ಟ್ ವೇರ್ ಆದ್ದರಿಂದ ಸುಲಭವಾಗಿ ಡೌನ್ ಲೋಡ್ ಮಾಡಿ ಉಪಯೋಗಿಸಲು ಸಾಧ್ಯವಾಗಿತ್ತು. ಹೀಗಾಗಿ ಅನೇಕರು ಸೇಡಿಯಾಪು, ಮತ್ತು ಅದೇ ನಿಯಮಗಳ ಆಧಾರದ ಮೇಲೆ ಹೆಚ್ಚಿನ ಶಿಷ್ಟತೆಯೊಂದಿಗೆ ವಿಕಸನಗೊಳ್ಳುತ್ತಿರುವ 'ಬರಹ'ದ ಮೊರೆ ಹೋದರು. ಅದೇ ಕಾಲಕ್ಕೆ ಪುಣೆಯಲ್ಲಿರುವ ಸರಕಾರಿ ಸಂಸ್ಥೆ ಸಿ-ಡ್ಯಾಕ್ - ಲೀಪ್ ಅನ್ನುವ ಸಾಫ್ಟ್ ವೇರನ್ನು ತಯಾರುಮಾಡಿತ್ತು. ಲೀಪ್ ಉತ್ತಮ ಸಾಫ್ಟ್ ವೇರ್ ಅನ್ನುವುದಕ್ಕೆ ಕಾರಣ - ಆ ಕಾರ್ಯಕ್ರಮದಲ್ಲಿ ಭಿನ್ನ ರೀತಿಯ ಅಕ್ಷರಗಳ ಫಾಂಟುಗಳಿಲ್ಲದ್ದದ್ದಲ್ಲದೇ (ನಂದಿ, ಉಮಾ), ಕೀಲಿಮಣೆಯನ್ನು ಉಪಯೋಗಿಸಲು ಮೂರು ಭಿನ್ನ ಆಯ್ಕೆಗಳಿದ್ದುವು - ಕನ್ನಡ ಟೈಪ್ ರೈಟರಿನ ಕೀಲಿಮಣೆ, ಬರಹದಂತೆ ಇಂಗ್ಲೀಷ್ ಅಕ್ಷರಗಳಾಧಾರದ ಮೇಲೆ ಕನ್ನಡವನ್ನು ಬರೆವ ಕೀಲಿಮಣೆ, ಮತ್ತು ಕನ್ನಡದ್ದೇ ಆದ ಕೀಲಿಮಣೆ. ಕನ್ನಡದ್ದೇ ಆದ ಕೀಲಿಮಣೆ ಅಂದರೇನು? ಕನ್ನಡ ಭಾಷೆಯ ನುಡಿಗಟ್ಟಿನ ನಿಯಮಾನುಸಾರ - ಸ್ವರಗಳು ಒಂದೆಡೆ, ವ್ಯಂಜನಗಳು ಒಂದೆಡೆ, ಒತ್ತಕ್ಷರಗಳನ್ನು ಒತ್ತುವ ನಿಯಮ ಹಾಗೂ ಒಟ್ಟರೆ ಒಂದು ಪದವನ್ನು ಟೈಪ್ ಮಾಡಲು ಉಪಯೋಗಿಸಲು ಒತ್ತಬೇಕಾದ ಕೀಲಿಗಳ ಸಂಖ್ಯೆಯನ್ನು ಮಿತಿಗೊಳಿಸುವುದರಲ್ಲಿ ಈ ಕೀಲಿಮಣೆ ಸಫಲವಾಗುತ್ತಿತ್ತು. ಒಂದು ರೀತಿಯಾಗಿ ಕನ್ನಡದ ಪರಿಭಾಷೆಗೆ ಒಗ್ಗಿದಂತೆ ಈ ಕೀಲಿಮಣೆಯನ್ನು ರೂಪಿಸಲಾಗಿತ್ತು. ಹೀಗಾಗಿಯೇ ಇದು ಕನ್ನಡದ - ಕಂಪ್ಯೂಟರೀಕರಣಕ್ಕೆ ಅತೀ ಮಹತ್ವದ ಕೊಡುಗೆಯಾಗಬಹುದಿತ್ತು.

ಆದರೆ ಇದರಲ್ಲಿ ಎರಡು ತೊಂದರೆಗಳಿದ್ದುವು. ಇದು ಕನ್ನಡದ್ದೇ ಆದ ಕೀಲಿಮಣೆಯಾದ್ದರಿಂದ - ಹಾಗೂ ಕನ್ನಡಕ್ಕಾಗಿಯೇ ಯಾರೂ ಕಂಪ್ಯೂಟರನ್ನು ಕೊಳ್ಳುತ್ತಿರಲಿಲ್ಲವಾದ್ದರಿಂದ, ಕಂಪ್ಯೂಟರನ್ನು ಕೊಂಡವರಿಗೆಲ್ಲರಿಗೂ ಆಂಗ್ಲಭಾಷೆಯ ಮೇಲೆ ತುಸುವಾದರೂ ಹಿಡಿತವಿದ್ದು ಆಂಗ್ಲದ ಕೀಲಿಮಣೆಯಮೇಲೆ ಅಭ್ಯಾಸಬಲದಿಂದಾಗಿ ಪ್ರಭುತ್ವವಿರುತ್ತಿದ್ದರಿಂದ ಬರಹ - ಆಕೃತಿ - ನುಡಿಗಳಂತಹ ಕಾರ್ಯಕ್ರಮಗಳೇ ಜನಪ್ರಿಯವಾಗುತ್ತಾ ಹೋದುವು. ಎರಡನೆಯ ತೊಂದರೆ ಮುಫತ್ತಾಗಿ ಸಿಗುತ್ತಿದ್ದ ಸೇಡಿಯಾಪುವಿನೆದುರು, ಹೆಚ್ಚು ಸಮಯ ಕಳೆಯದೇ ಡೌನ್ ಲೋಡ್ ಮಾಡಬಲ್ಲ ಬರಹದೆದುರು - ಐದಾರು ಸಾವಿರ ರೂಪಾಯಿ ಬೆಲೆ ತೆತ್ತು ಒಂದು ಹಾರ್ಡ್ ವೇರ್ ಲಾಕ್ ಜೊತೆಗೆ ಬರುತ್ತಿದ್ದ ಈ ತಂತ್ರಾಂಶವನ್ನು ಕೊಳ್ಳಲು ಯಾರಿಗೂ ಮನಸ್ಸೇ ಬರುತ್ತಿರಲಿಲ್ಲ. ಇಷ್ಟಲ್ಲಾ ಕೊಂಡರೂ, ಆ ತಂತ್ರಾಂಶದಲ್ಲಿ ಬರೆದ ಬರವಣಿಗೆಯನ್ನು ಓದಲೂ ಅದೇ ತಂತ್ರಾಂಶ ಬೇಕಿತ್ತಾದ್ದರಿಂದ - ಪ್ರಕಟಣಾ ಜಗತ್ತು ಅದನ್ನು ಬರಮಾಡಿಕೊಂಡ ಹೊರತು, ಖಾಸಗೀ ವ್ಯಕ್ತಿಗಳು ಅದನ್ನು ಮೈಗೂಡಿಸಿಕೊಳ್ಳವುದು ಕಷ್ಟವೇ ಆಗಿತ್ತು.

ಜಗತ್ತಿನಾದ್ಯಂತ ಬಳಸುವ ಇಂಗ್ಲೀಷ್ ಭಾಷೆಗೆ ಈ ರೀತಿಯಾದಂತಹ ತೊಂದರೆಗಳಿರಲಿಲ್ಲ. ಯಾವುದೇ ಹೊಸ ತಂತ್ರಾಂಶ ಬಂದರೂ, ಅದಕ್ಕೆ ಅಸ್ತಿತ್ವದಲ್ಲಿದ್ದ ಮಿಕ್ಕ ತಂತ್ರಾಂಶಗಳೊಂದಿಗೆ ಒಂದು ಕೊಂಡಿಯಿರುತ್ತಿತ್ತು. ಉದಾಹರಣೆಗೆ ವರ್ಡ್ ನಿಂದ ವರ್ಡ್ ಪರ್ಫೆಕ್ಟ್ ಅಥವಾ ಓಪನ್ ಆಫೀಸಿನಿಂದ ವರ್ಡ್ಗೆ, ಸುಲಭವಾಗಿ ಕಡತಗಳನ್ನು ಆಮದು ರಫ್ತುಮಾಡುವ ಸಾಧ್ಯತೆಯಿದ್ದಂತೆ, ಲೀಪಿನಿಂದ ಬರಹಕ್ಕೆ - ಹಾಗೂ ಕನ್ನಡದ ತಂತ್ರಾಂಶ ಹಿಡಿದು ವರ್ಡ್ ನಂತಹ ತಂತ್ರಾಂಶಕ್ಕೆ ಬದಲಿಸುವುದೂ, ಅದನ್ನು ಆ ತಂತ್ರಾಂಶದಲ್ಲಿ ಎಡಿಟ್ ಮಾಡುವುದೂ, ಸುಲಭವಾದ ಮಾತೇನೂ ಆಗಿರಲಿಲ್ಲ. ಹಾಗೂ ಏನೇ ಮಾಡಿದರೂ ಅದನ್ನು ಒದುವವರ ಯಂತ್ರದಲ್ಲಿ ಕನ್ನಡದ್ದೇ ಫಾಂಟ್ (ಅಕ್ಷರಗುಚ್ಛ) ಇಲ್ಲವಾದರೆ ಅಲ್ಲಿ ಕಾಣುತ್ತಿದ್ದದ್ದು ಕೇವಲ ಪ್ರಶ್ನಾರ್ಥಕ ಚಿನ್ಹೆಗಳು ಮಾತ್ರ....

ಹೀಗಾಗಿ ಕನ್ನಡದ ತಂತ್ರಾಂಶ ಒಂದು ಸಾಮಾನ್ಯ - ಎಲ್ಲರಿಗೂ ಅನ್ವಯವಾಗುವ - ಒಪ್ಪಿತ ಗುಣಮಟ್ಟವನ್ನು ರೂಪಿಸಲಿಲ್ಲವಾದ್ದರಿಂದ ಆ ಬದಿಯಲ್ಲಿ ಪ್ರಕಟಣಾ ತಂತ್ರಾಂಶದ ಕ್ರಾಂತಿ ನಡೆಯುತ್ತಿದ್ದರೂ ನಾವು ಸ್ವಲ್ಪಮಟ್ಟಿಗೆ ಹಿಂದುಳಿದೆವು. ಅರ್ಥಾತ್ - ನಮ್ಮ ಸುಪ್ತ ಅಭಿವ್ಯಕ್ತಿಗೆ ಇಂಗ್ಲೀಷಿನ ಬ್ಲಾಗ್ ಲೋಕ ತೆರೆದುಕೊಳ್ಳುತ್ತಿದ್ದರೂ, ಕನ್ನಡದ ಲೋಕ ಕೆಲಕಾಲದವರೆಗೆ ಸರಳವಾಗಿ ತೆರೆದುಕೊಳ್ಳಲಿಲ್ಲ. ಹೀಗಾಗಿ ಜಗತ್ತಿನಲ್ಲಿ ಜನ ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು, ದಿನಚರಿಯನ್ನೂ ಡೈರಿಯ ರೀತಿಯಲ್ಲಿ ತಮ್ಮ ತಮ್ಮ ಸ್ವಂತ ತಾಣಗಳಾದ ಬ್ಲಾಗುಗಳಲ್ಲಿ ಬರೆಯುತ್ತಾ ಹೋದರೂ ಕನ್ನಡದ ಮಟ್ಟಿಗೆ ಆ ಬೆಳವಣಿಗೆ ತುಸು ಸಾವಧಾನದಿಂದಲೇ ನಡೆಯಿತೆನ್ನಬೇಕು.

ತಂತ್ರಜ್ಞಾನದ ಬಗ್ಗೆ ಇಷ್ಟು ಉದ್ದದ ಮೀಮಾಂಸೆ ಬರೆಯಲು ಕಾರಣವಿಷ್ಟೇ - ಬ್ಲಾಗಿನಂತಹ ಒಂದು ಹೊಸ ಅಭಿವ್ಯಕ್ತಿಮಾಧ್ಯಮ ಉಂಟಾಗಬೇಕಾದರೆ ಅದಕ್ಕೆ ಇರಲೇಬೇಕಾದ ಪರಿಕರಗಳು, ಹಾಗೂ ಆ ಪರಿಕರಗಳನ್ನು ಉಪಯೋಗಿಸಲು ಇರಬೇಕಾದ ಸರಳತೆಯನ್ನು ಕನ್ನಡದ ಸಂದರ್ಭದಲ್ಲಿ ಅಳವಡಿಸಲು ನಮಗೆ ಸಾಕಷ್ಟೇ ಸಮಯ ಹಿಡಿಯಿತು. ಈಗಲೂ ಆ ಪ್ರಕ್ರಿಯೆ ಅಷ್ಟು ಸುಲಭವೇನೂ ಅಲ್ಲ. ನುಡಿಯನ್ನು ಮೈಗೂಡಿಸಿಕೊಂಡವರಿಗೆ ನೇರವಾಗಿ ಬ್ಲಾಗ್ ಮಾಡುವುದು ಸಾಧ್ಯವಿಲ್ಲ. ನನ್ನ ಮಟ್ಟಿಗೇ ಹೇಳಬೇಕಾದರೆ ನಾನು ಒಂದು ನೋಟ್ ಪ್ಯಾಡಿನಲ್ಲಿ ನನಗೆ ಬರೆಯಬೇಕನ್ನಿಸಿದ್ದನ್ನು ಬರೆದು ಅದನ್ನು ನನ್ನ ಬ್ಲಾಗಿನಲ್ಲಿ ಲಗತ್ತಿಸುತ್ತೇನೆ. ಆದರೆ ಈಗಿನ ತಂತ್ರಾಂಶ ಉಪಯೋಗಿಸಿ ಬರೆಯುವವರಿಗೆ ಬರಹ ಡೈರೆಕ್ಟ್ ಅಥವಾ ಆಪರೇಟಿಂಗ್ ಸಿಸ್ಟಂನಲ್ಲೇ ಲಭ್ಯವಿರುವ ಭಾಷಾ ಆಯ್ಕೆಯನ್ನು ಮಾಡಿ ಲೀಪ್ ಕೀಲಿಮಣೆಯ ನಿಯಮಾನುಸಾರ ನೇರವಾಗಿ ಬರೆಯಬಹುದಾಗಿದೆ. ಗಮ್ಮತ್ತಿನ ವಿಚಾರವೆಂದರೆ, ಈ ಬದಿಯಲ್ಲಿ ಬರೆದದ್ದನ್ನು ಆಬದಿಯಲ್ಲಿ ಜನ ಓದಬಲ್ಲವರಾಗಿದ್ದಾರೆ. ಯುನಿಕೋಡ್ನ ನಿಯಮಾನುಸಾರ ಈ ಬರವಣಿಗೆ ಆಗುತ್ತದಾದ್ದರಿಂದ ಕನ್ನಡ ತಂತ್ರಾಂಶಕ್ಕೆ ಒಂದು ಮೂಲಭೂತ ಪರಿಮಾಣ ಮತ್ತು ಗುಣಮಟ್ಟ ಪ್ರಾಪ್ತವಾಗಿದೆ.

ಹೀಗೆ ಸ್ಫೋಟಗೊಂಡಿರುವ ಅಭಿವ್ಯಕ್ತಿಗೆ ಮುಕ್ತ ಅವಕಾಶವನ್ನು ನೀಡುತ್ತಿರುವ ಬ್ಲಾಗ್ ಲೋಕ ಏನು ಮಾಡುತ್ತಿದೆ? ಹೊರಜಗತ್ತಿನೊಂದಿಗೆ ಮುಕ್ತ ಸಂವಹನ ನಡೆಸಲು ಇದ್ದ ಪತ್ರಿಕಾ ಪ್ರಕಟಣೆ, ಖಾಸಗಿ ಸಂವಹನಕ್ಕಾಗಿ ಇದ್ದ ಪತ್ರ ಲೇಖನ - ಈ ಎರಡರ ಮಧ್ಯೆ ಬ್ಲಾಗಿನ ಲೋಕ ಬಂದು ನಿಂತಿದೆ. ಮೊದಲಿಗೆ ಬರೆಯಲು ಪ್ರಾರಂಭಿಸಿದಾಗ ಏನನ್ನಾದರೂ ಬರೆದರೆ ಪತ್ರಿಕೆಗಳಿಗೆ ಕಳಿಸಿ ಅವರ ಕೃಪೆಗಾಗಿ ಕಾಯಬೇಕಿತ್ತು. ಪ್ರತೀ ಪತ್ರಿಕೆಗೂ ಅದರದೇ ಆದ ವ್ಯಕ್ತಿತ್ವ, ನುಡಿಗಟ್ಟು, ಹಾಗೂ ಮಿತಿಗಳಿರುತ್ತಿದ್ದುವು. ಆ ಮಿತಿಯನ್ನು ಮೀರಿದರೆ ಬರವಣಿಗೆಯ ಸೊಬಗೇ ನಾಶವಾಗುತ್ತಿತ್ತು. ಉದಾಹರಣೆಗೆ ನಾನು ಮಿಲನ್ ಕುಂದೆರಾನ ಒಂದು ದೀರ್ಘ ಹಿಚ್ ಹೈಕಿಂಗ್ ಗೇಮ್ ಅನ್ನುವ ಕಥೆಯನ್ನು ಅನುವಾದ ಮಾಡಿದ್ದೆ. ದುರಾದೃಷ್ಟವಶಾತ್ತು ಆ ಕಥೆಯನ್ನು ಪ್ರಕಟಿಸಬಹುದಾಗಿದ್ದ ತುಷಾರ-ಮಯೂರದಂತಹ ಪತ್ರಿಕೆಗಳು ಆಸಕ್ತಿ ತೋರಲಿಲ್ಲ. ಆದರೆ ಆ ಕಥೆಯ ಸೌಂದರ್ಯವನ್ನು ಕಂಡವರು ಲಂಕೇಶ್. ಆದರೆ ಲಂಕೇಶ್ ಪತ್ರಿಕೆಯ ಚೌಕಟ್ಟನಲ್ಲಿ ಆ ಕಥೆ ಆರು ಕಂತುಗಳಲ್ಲಿ ಪ್ರಕಟಗೊಂಡು ಅದರಲ್ಲಿದ್ದ ಒಂದೇ ಓದಿಗೆ ದಕ್ಕಬಹುದಾಗಿದ್ದ ಸಾಧ್ಯತೆಗಳನ್ನು ಇಲ್ಲವಾಗಿಸಿಬಿಟ್ಟಿತು. ಹೀಗಾಗಿ ಅದು ಪ್ರಕಟಗೊಂಡೂ, ಪ್ರಕಟಗೊಳ್ಳದಿದ್ದಂತೆಯೇ ಆಯಿತು. ಹೀಗೇ ಕೆಲವು ಸಮಕಾಲೀನ ವಿಚಾರಗಳ ಬಗ್ಗೆ ತುರ್ತಿನ ಚರ್ಚೆಯಾಗಬೇಕಿದ್ದರೆ ಸಂಪಾದಕರ ಓಲೆಗಳ ಮೂಲಕ ಆಗುವುದು ಸುಲಭದ ಮಾತಲ್ಲ. ಅಲ್ಲಿಯೂ ಅಂಪೈರಾಗಿ ಸಂಪಾದಕ ವೃಂದ ಅಡ್ಡನಿಂತುಬಿಟ್ಟಿರುತ್ತದೆ. ಈ ಎಲ್ಲ ಅಡಚಣೆಗಳು ನಮಗೆ ಹಿಂದೆ ಕಾಣುತ್ತಲೇ ಇರಲಿಲ್ಲ. ಆದರೆ ಬ್ಲಾಗಿನ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿದ್ದಂತೆ ಅದರ ಸೃಜಲಶೀಲ ಉಪಯೋಗಗಳೂ ತೆರೆದುಕೊಳ್ಳುತ್ತಿವೆ.

ಸಾಮಾನ್ಯ ಪತ್ರಿಕೆಗಳಿಗಿದ್ದ ಮಿತಿಗಳನ್ನು ಕೆಂಡಸಂಪಿಗೆಯಂತಹ ಆನ್-ಲೈನ್ ಪತ್ರಿಕೆಗಳು ಮೀರಿ ನಿಲ್ಲಬಹುದು. ಅಂಥ ಪತ್ರಿಕೆಗಳಲ್ಲಿ ಒಂದು ಸಂಪಾದಕೀಯ ಶಿಸ್ತೂ ಇರುತ್ತದೆ. ಆ ಮಾಧ್ಯಮದ ಲಕ್ಷಣಗಳೂ, ಬ್ಲಾಗಿನ ಲಕ್ಷಣಗಳಿಗೂ ತಂತ್ರಾಂಶದ ದೃಷ್ಟಿಯಿಂದ ಯಾವ ಮೂಲಭೂತ ವ್ಯತ್ಯಾಸವೂ ಇಲ್ಲ. ಆದರೂ ಈಗ ಸ್ಫೋಟಗೊಳ್ಳುತ್ತಿರುವ ಬ್ಲಾಗುಗಳ ಕಥೆಯೇನು ಎಂದು ಯೋಚಿಸಿದಾಗ - ಅಭಿವ್ಯಕಿಗೆ ತಂತ್ರಾಂಶದ ಅವಶ್ಯಕತೆ ಇದೆಯೇ ಹೊರತು, ತಂತ್ರಾಂಶ ಅಭಿವ್ಯಕ್ತಿಯ ರೂಪುರೇಷೆಗಳನ್ನು ನಿರ್ದೇಶಿಸುವುದಿಲ್ಲ ಎನ್ನುವ ಮಾತು ನಮಗೆ ತಿಳಿದುಬರುತ್ತದೆ. ಹೀಗಾಗಿಯೇ ಕೆಂಡಸಂಪಿಗೆಯಲ್ಲಿ ಬರೆಯುವವರು, ಪತ್ರಿಕೆಗಳಿಗೂ ಬರೆಯಬಹುದು, ತಮ್ಮ ಖಾಸಗೀ ಬ್ಲಾಗುಗಳನ್ನೂ ಇರಿಸಿಕೊಳ್ಳಬಹುದು. ಸಂಪದಕ್ಕೂ ಕೆಂಡಸಂಪಿಗಗೂ ತಂತ್ರಾಂಶದಲ್ಲಿ ಮೂಲಭೂತ ವ್ಯತ್ಯಾಸವಿಲ್ಲವಾದರೂ, ಸಂಪಾದಕೀಯ ಶಿಸ್ತು, ಓರಣದಲ್ಲಿ ಅಜಗಜಾಂತರವಿದೆ.

ಪತ್ರಿಕೆ - ಆನ್ ಲೈನ್ ಆಗಿರಲೀ ಆಫ್ ಲೈನ್ ಆಗಿರಲೀ - ಒಂದು ಸಾಮಾನ್ಯ ಒದುಗಸಮುದಾಯಕ್ಕೆ ಭಿನ್ನ ಹಾಗೂ ವೈವಿಧ್ಯಪೂರ್ಣ ಬರವಣಿಗೆಗಳು ಗುಚ್ಛವನ್ನು ನೀಡುತ್ತದೆ. ಆದರೆ ಬ್ಲಾಗ್ ನೀಡುವುದು ಒಂದು ಖಾಸಗೀ ವ್ಯಕ್ತಿತ್ವದ ಅಭಿಪ್ರಾಯ ಗುಚ್ಛ. ಹೀಗಾಗಿ ನಾಗತಿಹಳ್ಳಿ ಐಂದ್ರಿತಾಗೆ ಮಾಡಿದ ಕಪಾಳಮೋಕ್ಷದ ಬಗೆಗೆ ನಾನು ಏನಾದರೂ ಹೇಳಬೇಕನ್ನಿಸಿದರೆ ನನ್ನ ಖಾಸಗೀ ಜಾಗದಲ್ಲಿ ಅದನ್ನು ಬರೆದುಕೊಳ್ಳಬಹುದು. ಅದನ್ನು ಓದುವವರು ನನ್ನ ಅಭಿಪ್ರಾಯದ ಬಗ್ಗೆ ಕುತೂಹಲವಿರುವುದರಿಂದ ಮಾತ್ರ ಓದುತ್ತಾರೆ. ಒಂದು ರೀತಿಯಲ್ಲಿ ಯಾರೂ ಕೇಳದೆಯೇ ನಾನು ನನ್ನ ಆಲೋಚನೆಯನ್ನು ಹೊರಲೋಕಕ್ಕೆ ಹರಿಯಬಿಡುತ್ತೆನೆ. ಇಷ್ಟವಿದ್ದವರು ಓದುತ್ತಾರೆ, ಆಸಕ್ತಿಯಿದ್ದವರು ಪ್ರತಿಕ್ರಿಯಿಸುತ್ತಾರೆ, ಇನ್ನೂ ಮುಂದಕ್ಕೆ ಹೋಗಿ ಈ ವಿಷಯ ಚರ್ಚಿತವಾಗಲೂ ಬಹುದು.

ಬ್ಲಾಗುಗಳ ಮೂಲಭೂತ ಲಕ್ಷಣಗಳು ಎರಡು. ಒಂದು- ಅದರಲ್ಲಿರಬಹುದಾದ ಅನಾಮಿಕತೆ. ಎರಡನೆಯದು - ಅನಾಮಿಕತೆಯಿಂದ ಉಂಟಾಗಬಹುದಾದ ಮುಕ್ತತೆ. ಅನಾಮಿಕತೆ ನಮಗೆ ಒಂದು ಆಯ್ಕೆ. ಪ್ರತೀ ಬ್ಲಾಗೂ, ಬ್ಲಾಗಿಗನೂ, ಬ್ಲಾಗಿಗಳೂ ಅನಾಮಿಕವಾಗಿ ಉಳಿಯಬೇಕೆಂದೇನೂ ಇಲ್ಲ. ಆದರೆ ಅದರಲ್ಲಿನ ಒಂದು ಗುಪ್ತವಾದ ಸಾಧ್ಯತೆ ನಮ್ಮನ್ನು ಪುಳಕಿತಗೊಳಿಸಬಹುದು. ಅನೇಕ ಬ್ಲಾಗಿಗರು ತಮ್ಮ ಹೆಸರು, ಚಿತ್ರ, ಈಮೈಲ್ ವಿಳಾಸ, ಎಲ್ಲವನ್ನೂ ನೀಡಿ, ತಮ್ಮ ಅಸ್ತಿತ್ವವನ್ನು ಮುಕ್ತವಾಗಿರಿಸುವ ಧೈರ್ಯಮಾಡಿ, ತಮ್ಮ ಬರವಣಿಗಯನ್ನು ಮುಂದುವರೆಸುತ್ತಾರೆ. ಹೀಗೆ ಬರೆಯುವಾಗ ಅದರಲ್ಲಿ ಒಂದು ಶಿಷ್ಟತೆ ನಮಗೆ ಕಾಣುತ್ತದೆ. ಆದರೆ ಬ್ಲಾಗುಗಳಲ್ಲಿರುವ ಪ್ರತಿಕ್ರಿಯೆಗಳಲ್ಲಿ ನಾವು ಸಾಮಾನ್ಯತಃ ಆ ಶಿಷ್ಟತೆಯನ್ನು ಕಾಣುವುದಿಲ್ಲ. ಅದರಲ್ಲೂ ಪ್ರತಿಕ್ರಿಯೆ ಅನಾಮಿಕವಾದಷ್ಟೂ ಅದರ ಭಾಷೆ ಕಠೋರವಾಗಿರುವುದನ್ನು ನಾವು ಕಾಣಬಹುದು. ನಮ್ಮಲ್ಲೆಲ್ಲ ಸುಪ್ತವಾಗಿರುವ ಈ ಮೃಗಕ್ಕೆ ನಾವು ಕೊಡುವ ಶಿಷ್ಟಾಚಾರದ ಮುಖವಾಡವನ್ನು ಕಳಚಲು ಬ್ಲಾಗುಗಳು ಅವಕಾಶ ಮಾಡಿಕೊಟ್ಟಿವೆ.

ಈ ಮಾಧ್ಯಮ ಎಷ್ಟೋ ಜನರ ಸುಪ್ತ ಪ್ರತಿಭೆಯನ್ನು ಹೊರಗೆಳೆಯಲು ಪ್ರಯತ್ನಿಸಿದೆ. ಪ್ರತಿಯೊಬ್ಬರ ವ್ಯಕ್ತಿತ್ವದ ಅಭಿವ್ಯಕ್ತಿಗೂ ಎಡೆಮಾಡಿಕೊಟ್ಟಿದೆ. ಕೆಲವರು ತಮ್ಮ ಕವಿತೆಗಳಿಗೆ ಇದನ್ನೊಂದು ಮಾಧ್ಯಮ ಮಾಡಿಕೊಂಡರೆ, ಇನ್ನು ಕೆಲವರು ಅಡುಗೆಯ ವಿಧಾನವನ್ನ ಜಗತ್ತಿಗೆ ಕಲಿಸಲು ಹೊರಟಿದ್ದಾರೆ. ಕೆಲವರು ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸುವವರಾದರೆ, ಇನ್ನಷ್ಟು ಜನ ತಮ್ಮ ಇತರ ಮಾಧ್ಯಮಗಳಲ್ಲಿ ಬಂದಿರುವ ಅಕ್ಷರಗುಚ್ಚವನ್ನ ಸಮಗ್ರೀಕರಿಸಲು ಬ್ಲಾಗನ್ನು ಉಪಯೋಗಿಸುತ್ತಿದ್ದಾರೆ. ಅನಂತಮೂರ್ತಿಯಂತಹ ಲೇಖಕರು ತಮ್ಮ ವಾರದ ಬರವಣಿಗೆಯನ್ನು ಈ ಮಾಧ್ಯಮದಲ್ಲೂ ಲಭಿಸುವಂತೆ ಮಾಡಿದ್ದಾರೆ. ಹೀಗೆ ಅನೇಕ ರೀತಿಯ ಅಭಿವ್ಯಕ್ತಿಗಳಿಗೆ ಈ ಮಾಧ್ಯಮ ಮುಕ್ತವಾಗಿ ತೆರೆದು ನಿಂತಿದೆ. ಈ ಮಾಧ್ಯಮದ ಮಿತಿಯೆಂದರೆ - ಯಾವುದೇ ಅಡ್ಡಕತ್ತರಿಯಿಲ್ಲದಿರುವುದರಿಂದ - ಜನಸಮೂಹಕ್ಕೆ ತಮ್ಮ ಅಭಿವ್ಯಕ್ತಿ ಹೋಗುವುದಕ್ಕೆ ಮುನ್ನ ಇರಬಹುದಾಗಿದ್ದ ಸಂಪಾದಕೀಯ ಶಿಸ್ತು ಇಲ್ಲವಾಗಿದೆ. ಹೀಗಾಗಿಯೇ ಹಳೆಯ ಕಾಲದ ಓದುಗರಿಗೆ ಕಿರಿಕಿರಿಯುಂಟುಮಾಡುವ ಭಾಷಾಪ್ರಯೋಗವನ್ನೂ ನಾವು ಕಾಣಬಹುದು. ಅದಕ್ಕೆ ಮದ್ದೋ ಎಂಬಂತೆ, ನಿರ್ಮಮಕಾರ ಪ್ರತಿಕ್ರಿಯೆಗಳೂ ಬರಬಹುದು. ಪ್ರತಿಕ್ರಿಯೆಗಳಾಧಾರದ ಮೇಲೆ ಮೂಲ ಲೇಖನವನ್ನು ತಿದ್ದುವ ಸಾಧ್ಯತೆಯೂ ಇದೆ.

ವೆಜಿಟೇರಿಯನ್ ಅನ್ನುವುದಕ್ಕೆ ಶಾಖಾಹಾರ ಅನ್ನುವ ಪದಪ್ರಯೋಗ ಸಮರ್ಪಕವಲ್ಲ ಬದಲಿಗೆ ಸಸ್ಯಾಹಾರ ಅನ್ನುವ ಪದವನ್ನು ಉಪಯೋಗಿಸಬೇಕೆಂದು, ಪ್ರಕಾರ, ಪ್ರಾಕಾರಕ್ಕೆ ಇರುವ ವ್ಯತ್ಯಾಸವನ್ನು ನನಗೆ ಕಲಿಸಿದ್ದೇ ನನ್ನ ಬ್ಲಾಗಿನ ಓದುಗರು. ಇದು ಪತ್ರಿಕೆಗಳಲ್ಲಿ ಆಗುತ್ತಿದ್ದ ಮಾತಲ್ಲ. ಯಾಕೆಂದರೆ ಹೀಗೆ ಪದಪ್ರಯೋಗವನ್ನು ತಿದ್ದುವಂತಹ ಪತ್ರಗಳನ್ನು ಸಂಪಾದಕರು ಕಡೆಗಣಿಸುವುದೇ ಹೆಚ್ಚು. ಹೀಗಾಗಿ ನಾವು ಕೆಟ್ಟ ಭಾಷಾಪ್ರಯೋಗವನ್ನು ದೂರುತ್ತಲೇ, ಒಳ್ಳೆಯ ಭಾಷಾಪ್ರಯೋಗವನ್ನು ಕಲಿಯುವ ಸಾಧ್ಯತೆಯನ್ನೂ ಇದರಲ್ಲಿ ಕಾಣಬಹುದು. ಆದರೆ ಬ್ಲಾಗನ್ನು ಬರೆಯುವವರು ಅನಾಮಿಕತೆಯಿಂದ ಬರಬಹುದಾದ ಕಠೋರ ಮಾತುಗಳನ್ನು ಕೇಳುವ, ಅದನ್ನು ಅಂತರ್ಗತ ಮಾಡಿಕೊಳ್ಳುವ ಗುಂಡಿಗೆ ಇರುವವರಾಗಬೇಕು. ಇನ್ನೂ ಧೈರ್ಯಸ್ಥರಾದರೆ ಆ ಅಂಥ ಪ್ರತಿಕ್ರಿಯೆಗಳನ್ನು ಜಗತ್ತಿಗೇ ಕಾಣುವಂತೆ ಮಾಡುವ ಧೈರ್ಯವೂ ಇರಬೇಕು. ಶಿಷ್ಟ ಜಗತ್ತಿನಲ್ಲಿ ಬದುಕಿ ಬೆಳೆದಿರುವ ನಮ್ಮಂತಹ ಮಧ್ಯವಯಸ್ಕರಿಗೆ ಅಸಹನೆಯ ಭಾಷೆಯನ್ನು ಅರಗಿಸಿಕೊಳ್ಳುವ ಛಾತಿಯಿರಬೇಕು. ಈ ರೀತಿಯಾದಂತಹ ಸುಪ್ತ ಪ್ರತಿಕ್ರಿಯೆಗಳು ಹಿಂದೂ ನಮ್ಮ ಲೇಖನಗಳಿಗೆ ಇದ್ದಿರಬಹುದು, ಹಾಗೂ ನಾವು ಬರೆದದ್ದನ್ನು ಬೇರೆಯವರು ಭಿನ್ನವೇ ಆದ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು ಅನ್ನುವ ಸತ್ಯ ತಟ್ಟುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಓದುಗರ ಪ್ರತಿಕ್ರಿಯೆ ನನ್ನ ಬರವಣಿಗೆಯನ್ನು ಹೆಚ್ಚು ಜವಾಬ್ದಾರಿಯುತವನ್ನಾಗಿ ಮಾಡಿದೆ. ಆ ಕಾರಣದಿಂದ ಬ್ಲಾಗಿನ ಮಾಧ್ಯಮ ನನಗೆ ಪ್ರಿಯವಾಗುತ್ತದೆ.

ಆದರೆ ಬ್ಲಾಗಿನ ಲೋಕಕ್ಕೆ ಒಂದು ಅಲಿಖಿತ ನಿಯಮವಿದೆ. ಅದೆಂದರೆ ಆ ತಾಣದಲ್ಲಿ ಹೊಸ ಹೊಸ ಎಂಟ್ರಿಗಳು ನಿಯಮಿತವಾಗಿ ಸೇರಬೇಕು. ಬ್ಲಾಗಿನಲ್ಲಿ ಅನಿಯಮಿತ ಕಾಲಕ್ಕೊಮ್ಮೆ ಏನಾದರೂ ಹಾಕಬಹುದಾದ ಸಾಧ್ಯತೆ ಇದೆಯೆನ್ನುವುದೇನೋ ನಿಜ. ಆದರೆ ಸುಮಾರಷ್ಟು ಕಾಲ ಬ್ಲಾಗನ್ನು ನಿಲ್ಲಿಸಿಬಿಟ್ಟರೆ ನಾವು ನಮ್ಮ ಓದುಗರನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಹೀಗಾಗಿ (ನನ್ನದನ್ನೊಳಗೊಂಡು) ಅನೇಕ ಬ್ಲಾಗುಗಳು ಶಿಸ್ತಿಲ್ಲದೇ ಸೊರಗುತ್ತವೆ.

ಈ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುತ್ತಿರುವಾಗಲೇ ಮತ್ತೊಂದು ವಿಷಯ ನನ್ನ ಮನಸ್ಸಿಗೆ ತಟ್ಟುತ್ತದೆ. ಬ್ಲಾಗುಗಳಲ್ಲಿ ಹೂರಣಕ್ಕೆ ಒಂದು ವ್ಯಕ್ತಿತ್ವ ಇರುತ್ತದಾದರೂ ಓರಣಕ್ಕೆ ಅದು ಹೆಚ್ಚಾಗಿ ದಕ್ಕುವುದಿಲ್ಲ. ಪತ್ರಿಕೆಗಳಲ್ಲಿನ ಲೇಖನಗಳಿಗೂ ಇದು ಅನ್ವಯಿಸುತ್ತಾದರೂ, ಪತ್ರಿಕೆಗಳನ್ನು ನಡೆಸುವವರು ಎಷ್ಟಾದರೂ ಭಿನ್ನ ವ್ಯಕ್ತಿಗಳಾದ್ದರಿಂದ - ಆಯಾ ಸಂಪಾದಕ ವಿಚಾರಧಾರೆಯ ವ್ಯಕ್ತಿತ್ವ ಆ ಪತ್ರಿಕೆಗಳಿಗೆ ಬಂದುಬಿಡುತ್ತವೆ. ಆದರೆ ಬ್ಲಾಗುಗಳು ಖಾಸಗೀ ಸ್ಥಾನವನ್ನು ಆಕ್ರಮಿಸುವುದರಿಂದ ಓರಣಕ್ಕೆ ಒಂದು ವ್ಯಕ್ತತ್ವ ಮುಖ್ಯವಾಗಬಹುದು ಅನ್ನುವುದು ನನ್ನ ನಂಬಿಕೆ. ಆದರೆ ಅದರ ಸಾಧ್ಯತೆಗಳ ಮಿತಿಗಳನ್ನು ನಮಗೆ ತಂತ್ರಜ್ಞಾನ ಇನ್ನೂ ತೋರಿಸುತ್ತಿದೆ. ಇದರಲ್ಲಿ ಮುಖ್ಯವಾದದ್ದು ಕಂಪ್ಯೂಟರಿನ ಸ್ಕ್ರೀನಿನ ಪರಿಮಿತಿಗೆ ಸಂಬಂಧಿಸಿದ್ದು. ಒಮ್ಮೆಗೆ ಆ ಸ್ಕ್ರೀನಿನ ಪರಿಮಿತಿಯೊಳಗಿರುವ ಬರವಣಿಗ ಮಾತ್ರ ಕಾಣಿಸುತ್ತದೆ. ಸುತ್ತ ಮುತ್ತ ಕೊಂಡಿಗಳನ್ನು ಕೊಟ್ಟರೆ ಒಂದೇ ಕಾಲಮ್ಮಿನಲ್ಲಿ ಉದ್ದಕ್ಕೆ ಬರವಣಿಗೆಯನ್ನು ತೆಗದೊಯ್ಯಬೇಕು. ಅದರಲ್ಲಿ ಅಡಕ ಮಾಡಬಹುದಾದ ಚಿತ್ರಗಳಿಗೂ ಕೆಲವು ಮಿತಿಗಳಿರುತ್ತವೆ. ಹೀಗಾಗ ಬ್ಲಾಗಿನ ಓರಣ ಹೆಚ್ಚಾಗಿ ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುವುದಿಲ್ಲ. ಬದಲಿಗೆ ಇರುವ ಆಯ್ಕೆಗಳಲ್ಲಿ ನಮಗಿಷ್ಟವಾದದ್ದು ಯಾವುದು ಅನ್ನುವುದನ್ನ ಮಾತ್ರ ಪ್ರತಿನಿಧಿಸುತ್ತವೆ.

ಓರಣದಲ್ಲಿ ಮತ್ತೂಂದು ಮುಖ್ಯವಾದ ವಿಚಾರವೆಂದರೆ ಅಕ್ಷರಗಳ ಜೋಡಣೆಗೆ ಸಂಬಂಧಿಸಿದ್ದು. ಕನ್ನಡ ಭಾಷೆಯ ಅಕ್ಷರಗಳು ಸಹಜವಾಗಿಯೇ ಸುಂದರವಾಗಿವೆ. ಹೆಚ್ಚಾದ ಅಕ್ಷರಗಳಿಗೆ ಸುರಳಿಗಳಿರುವುದರಿಂದ ಸಹಜವಾಗಿಯೇ ಗುಂಡಾಗಿ, ಒಂದರ ಪಕ್ಕ ಒಂದು ಹೊಂದಿಕೊಂಡು ಕೂತಿರುತ್ತವೆ. ಹೀಗಾಗಿ ಕನ್ನಡದಲ್ಲಿ ಸ್ಟೈಲೈಸ್ಡ್ ಆಗಿ ಬರೆಯುವ ಅವಶ್ಯಕತೆ ಕಡಿಮೆ. ಇಂಗ್ಲೀಷನ್ನು ಅಂದಗೊಳಿಸಲು ಕ್ಯಾಲಿಗ್ರಫಿ ಬೇಕು. ಆದರೆ ಉರ್ದು - ಭಾಷೆಯೇ ಕ್ಯಾಲಿಗ್ರಫಿಕ್ ಆಗಿರುತ್ತದೆ. ಹೀಗಾಗಿಯೇ ಕನ್ನಡದಲ್ಲಿ ಇಂಗ್ಲೀಷಿಗಿಂತ ಕಡಿಮೆ ಫಾಂಟು - ಅಕ್ಷರ ಜೋಡಣೆ ಶೈಲಿ - ಗಳು ಇವೆಯೇನೋ. ಲೀಪ್ ತಂತ್ರಾಂಶ ಬಂದಾಗ ನಂದಿ ಮತ್ತು ಉಮಾ ಫಾಂಟುಗಳು ಬಂದುವು, ಹೀಗೆಯೇ ಮಿಕ್ಕ ತಂತ್ರಾಂಶದ ಜೊತೆಗೆ ಭಿನ್ನ ಫಾಂಟುಗಳು. ಆದರೆ ನೀವು ಬ್ಲಾಗ್ ಮಾಡಬೇಕೆಂದರೆ ಈ ಭಿನ್ನ ವ್ಯಕ್ತಿತ್ವಗಳನ್ನು ಬದಿಗಿಟ್ಟು ತುಂಗಾ ಫಾಂಟನ್ನು ಮಾತ್ರ ಕಾಣಬಹುದು. ಹೀಗಾಗಿ ನಮ್ಮ ದೃಷ್ಟಿಗೆ ಒಂದು ಬ್ಲಾಗಿಗೂ ಮತ್ತೊಂದಕ್ಕೂ ಅಕ್ಷರ ಜೋಡಣೆಯ ಓರಣದಲ್ಲಿ ಹೆಚ್ಚು ವ್ಯತ್ಯಾಸ ಕಾಣದಿರಬಹುದು. ಹೀಗಾಗಿಯೇ ನಮ್ಮ ಬ್ಲಾಗುಗಳಿಗೆ ಒಂದು ಭಿನ್ನ ವ್ಯಕ್ತಿತ್ವ ದೊರೆಯುವುದು ಅದರ ಹೂರಣದಿಂದ ಮಾತ್ರ.


ಓರಣವೇಕೆ ಬೇಕು ಎನ್ನುವುದನ್ನ ನನ್ನ ಗೆಳೆಯರೊಬ್ಬರು ಮತ್ತೊಂದು ಭಿನ್ನ ಸಂದರ್ಭದಲ್ಲಿ ಪ್ರಶ್ನಿಸುತ್ತಾರೆ. ಹಸಿವಾಗಿದ್ದವರಿಗೆ ಊಟ ಕಾಣಲು ಚೆಂದವಿದೆಯೇ ಇಲ್ಲವೇ ಎನ್ನುವುದು ಮುಖ್ಯವಾಗುವುದಿಲ್ಲ. ಯಾವುದಾದರೂ ದರ್ಶಿನಿಯಲ್ಲಿ ಅಥವಾ ಬೀದಿಬದಿಯ ತಳ್ಳುಗಾಡಿಯಲ್ಲಿ ಹೋಗಿ ಒಂದು ಇಡ್ಲಿಯೋ ದೋಸೆಯೋ ತಿಂದು ಬಂದರೆ ಸಾಕು. ಅದೇ ಪಂಚತಾರಾ ಹೋಟೆಲಿನಲ್ಲಿ ಊಟದ ಹೂರಣಕ್ಕಿಂತ ಓರಣಕ್ಕೇ ಹೆಚ್ಚು ಒತ್ತು. ನನ್ನ ಗೆಳೆಯರ ವಾದವೆಂದರೆ, ಹಸಿವಾಗದಿರುವವರಿಗೆ ಊಟ ಉಣ್ಣಿಸಲು ಈ ಸರ್ಕಸ್ಸನ್ನು ಮಾಡಬೇಕಾಗುತ್ತದೆ. ಹೀಗಾಗಿ ಒಂದೇ ಫಾಂಟ್ ಇರುವ ಕನ್ನಡ ಬ್ಲಾಗುಗಳನ್ನು ನಾವು ಹೂರಣಕ್ಕಾಗಿಯೇ ನೋಡಬಹುದಾದ ಅದ್ಭುತ ಸಾಧ್ಯತೆ ನಮ್ಮ ಮುಂದಿದೆ.

ಅಚ್ಚುಕೂಟಕ್ಕೆ ಹೋದ ನಮ್ಮೆಲ್ಲ ಹಿರಿಯರ ಬರಹಗಳೂ ಈ ಸ್ಟಾಂಡರ್ಡೈಸೇಷನ್ - ಸಮಾನತೆ -ಗೆ ಒಳಪಟ್ಟರೂ ಮೂಲ ಬರಹಗಳು ಲೇಖಕರ ವ್ಯಕ್ತಿತ್ವವನ್ನೂ ಅವರ ಕರಡು ಬರಹಗಳನ್ನು ನೋಡಿದರೆ ಲೇಖನ ಕಟ್ಟುವ ಆಲೋಚನಾ ಲಹರಿಯನ್ನೂ ಅದನ್ನು ಸುಧಾರಿಸುವತ್ತ ತೋರಿದ ಒಲವನ್ನೂ ಕಾಣಬಹುದಿತ್ತು. ಆದರೆ ತಂತ್ರಜ್ಞಾನದ ಉಪಯೋಗ ಹೆಚ್ಚುತ್ತಿದ್ದಂತೆ, ಲೇಖನದ ಕರುಡೇ ಕಾಣುವುದಿಲ್ಲ. ಬ್ಲಾಗಿನಲ್ಲಿ ಇದು ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತದೆ. ಮೂಲ ಲೇಖನವನ್ನ ಯಾವಾಗಲಾದರೂ ತಿದ್ದಬಹುದಾದ್ದರಿಂದ, ಸುಧಾರಿಸಬಹುದಾದ್ದರಿಂದ, ಲೇಖಕರಿಗೆ ಉಪಯೋಗಕರವಾದರೂ, ಅವರನ್ನು ಅರ್ಥಮಾಡಿಕೊಳ್ಳಹೊರಟ ಸಂಶೋಧಕರಿಗೆ ಈ ಚರಿತ್ರೆಯ ಕೊಂಡಿಗಳು ಕಾಣುವುದೇ ಇಲ್ಲ. ಹೀಗಾಗಿ ಈ ಮಾಧ್ಯಮ, ಒಂದು ರೀತಿಯಿಂದ ಸದಾ ಸಮಕಾಲೀನವಾಗುವ ಮಾಧ್ಯಮವಾಗಿಬಿಡುವ ಅಪಾಯದ ಸಾಧ್ಯತೆಯಿದೆ.

ತಂತ್ರಜ್ಞಾನ ಬರವಣಿಗೆಯ ತಂತ್ರಾಂಶ ಅಂದಕೂಡಲೇ ನಮಗೆ ತೇಜಸ್ವಿ ನೆನಪಿಗೆ ಬರದಿದ್ದರೆ ಹೇಗೆ? ತೇಜಸ್ವಿ ತಂತ್ರಜ್ಞಾನದ ಬಗ್ಗೆ ತಮಗಿದ್ದ ಪ್ರಭುತ್ವವನ್ನು ಉಪಯೋಗಿಸಿ ಕುವೆಂಪು ಅವರ ಕೈಬರಹದ ರಾಮಾಯಣ ದರ್ಶನಂ ಹೊತ್ತಿಗೆಯನ್ನು ಪ್ರಕಟಿಸಿದ್ದರು. ಈಗಿನ ತಂತ್ರಜ್ಞಾನವನ್ನ ಉಪಯೋಗಿಸು ಕುವೆಂಪು ಅವರ ಕೈಬರಹವನ್ನೇ ಒಂದು ಫಾಂಟನ್ನಾಗಿ ಅವರು ಪರಿವರ್ತಿಸಿದ್ದರು. ಆದರೆ ಆ ಪುಸ್ತಕ ಹೊರಗೆ ಬಂದಾಗ ಕೆಲವು ಅಪಸ್ವರಗಳೂ ಎದ್ದುವು. ಅದೆಂದರೆ, ಇದು ಕುವೆಂಪು ಅವರ ಮೂಲ ಬರವಣಿಗೆಯಲ್ಲ, ಬದಲಿಗೆ ಅವರ ಕೈಬರಹವನ್ನು ಮಾತ್ರ ಬಳಸಿದ ಚಿತ್ತಿಲ್ಲದ ಕೃತಿ ಎಂದು. ಅರ್ಥಾತ್: ಕುವೆಂಪು ಮೂಲ ಕರಡಿನಲ್ಲಿದ್ದ ಎಲ್ಲ ಸುಕ್ಕುಗಳನ್ನೂ ತೆರೆದು ಅವಕ್ಕೆ ಇಸ್ತ್ರಿ ಹಾಕಿ ಈ ಪುಸ್ತಕವನ್ನು ಹೊರತರಲಾಗಿತ್ತು. ಆದರೆ ಜನರಿಗೆ ಆಸಕ್ತಿಯಿದ್ದದ್ದು ಮುದ್ರಣಕ್ಕೆ ಕುವೆಂಪು ಕಳಿಸಿದ ಕರಡು ಹೇಗಿದ್ದಿರಬಹುದು ಅನ್ನುವ ವಿಚಾರದಲ್ಲಿ. ಬದಲಿಗೆ ಅವರಿಗೆ ದೊರೆತದ್ದು ಕುವೆಂಪು ಕೈಬರಹದಲ್ಲಿ ಅಚ್ಚಾದ, ಅದೇ ಹಳೆಯ ಅಚ್ಚಿನ ಮನೆಯ ಕಾವ್ಯವೇ.

ಕಡೆಗೂ ಏನು ಗೆಲ್ಲುವುದು? ಬ್ಲಾಗುಗಳು ಹೊಸ ಲೇಖಕರನ್ನು ಹುಟ್ಟು ಹಾಕುವುದೇ? ಹಳೇ ಸಾಹಿತ್ಯವನ್ನು ನಮ್ಮ ಮುಂದೆ ತಂದಿಡುವುದೇ - ಈ ಎಲ್ಲ ಪ್ರಶ್ನೆಗಳಿಗೂ ಅನಂತ ಉತ್ತರಗಳು ನಮಗೆ ಸಿಗುತ್ತವೆ. ಹಿಂದೆ ಪುಣೇಕರ್ ಹೇಳಿದ್ದರಂತೆ - ನವ್ಯಕಾಲದಲ್ಲಿ ಇದ್ದ ವಿಮರ್ಶಕರು ಎಷ್ಟು ಕಠೋರವಾಗಿದ್ದರೆಂದರೆ - ಅವರ ವಿಮರ್ಶೆ ಅನೇಕ ಮೀಡಿಯಾಕರ್ (ಅಷ್ಟೇನೂ ಉತ್ತಮವಲ್ಲದ) ಸಾಹತ್ಯವನ್ನೇ ಕೊಂದು ಹಾಕಿದ್ದರಿಂದ, ಉತ್ತಮ ಸಾಹಿತ್ಯ ಬರುವುದು ದುಸ್ತರವಾಯಿತಂತೆ. ಅವರ ಮಾತಿನ ಮಜಕೂರೇನೆಂದರೆ - ಪ್ರತಿಯೊಬ್ಬ ಅನಂತ ಮೂರ್ತಿ, ಅಡಿಗ, ಲಂಕೇಶ, ಕಾರಂತರನ್ನು ಅರಗಿಸಿಕೊಳ್ಳವ ಜನತೆ ಬೆಳೆಯಬೇಕೆಂದರೆ, ಅದಕ್ಕೆ ತಯಾರಿಯಾಗಿ ನರಸಿಂಹಯ್ಯು, ಅನಂತರಾವ್, ಟಿಕೆ ರಾಮರಾವ್ ಅವರಂತಹ ಲೇಖಕರು ಒದುವ ಹವ್ಯಾಸವನ್ನು ಬೆಳೆಸುವುದು ಅನಿವಾರ್ಯ ಎನ್ನುವುದು. ಪುಣೇಕರರ ವಾದವನ್ನು ಬ್ಲಾಗುಗಳಿಗೂ ವಿಸ್ತರಿಸಬಹುದು. ಹೀಗೆ ತಮ್ಮ ಅಂತರ್ಗತವನ್ನು ತೋಡಿಕೊಳ್ಳುವ ಜನರಲ್ಲಿ ಎಷ್ಟು ಅಕಾಡೆಮಿ ಪ್ರಶಸ್ತಿಯನ್ನು ಗೆಲ್ಲಬಲ್ಲ ಸುಪ್ತಚೇತನದವರಿದ್ದರೋ ಯಾರಿಗೆ ಗೊತ್ತು. ಅಷ್ಟು ತಾಕತ್ತಿನ ಸುಪ್ತಚೇತನವಿಲ್ಲದಿದ್ದರೂ ಆ ಬಗೆಯ ಲೇಖಕರನ್ನು ಮೆಚ್ಚುವ ಜನಾಂಗವಾದರೂ ಇರಬಹುದು. ಹೀಗಾಗಿ ಬ್ಲಾಗಿನ ಲೋಕ ತೆರೆದುಕೊಂಡಿರುವುದು ಒಳ್ಳೆಯದೇ ಆಯಿತನ್ನಬಹುದಲ್ಲವೇ?





Monday, March 30, 2009

ರಾಮಲಿಂಗ ರಾಜು ಎನ್ನುವ ಎನ್ ಮೈನಸ್ ವನ್ ಹೀರೋ

ಎಲ್ಲರ ನಂಬಿಕೆಗೆ ದ್ರೋಹ ಮಾಡಿರಬಹುದು ಆದರೆ ರಾಮಲಿಂಗ ರಾಜು ಕ್ರಿಮಿನಲ್ ಅಲ್ಲ ಎಂದು ತೆಲುಗು ಚಾನೆಲ್‌ಗಳು ನಡೆಸಿದ ಎಸ್.ಎಂ.ಎಸ್. ಪೋಲ್ ತಿಳಿಸಿದೆಯಂತೆ. ಇದೊಂದು ಆಸಕ್ತಿಯ ಸುದ್ದಿ! ಈ ರೀತಿಯ ಸಿಂಪತಿ ರಾಜುವಿಗೆ ಬರುವುದರಲ್ಲಿ ಅಷ್ಟು ಆಶ್ಚರ್ಯವಾಗಬಾರದೇನೋ. ಯಾಕೆಂದರೆ ಅವರು ಸತ್ಯಂ ವಧಾ ಮಾಡಿದ್ದಲ್ಲದೇ ಕನ್ನೇಶ್ವರ ಧರ್ಮಂ ಚರಾ ಮಾಡಿದ್ದಾರೆ!  "ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ನನಗಾಗಿಲ್ಲ", ಎಂದ ಮೇಲೆ ಅವರು ಅಪರಾಧಿ ಹೇಗಾಗುತ್ತಾರೆ? ಆದರೆ ನಮ್ಮ ಪ್ರಶ್ನೆ "ನಿಮಗಂತೂ ಲಾಭವಾಗಿಲ್ಲ.. ಆದರೆ ಇದರಿಂದ ಯಾರಿಗೆ ಲಾಭವಾಯಿತು?" ಅನ್ನುವುದು.

ಈ ಸುದ್ದಿಯನ್ನು ಓದಿದ ಕೂಡಲೇ ಹಲವು ವರ್ಷಗಳ ಹಿಂದೆ ನಾನಿದ್ದ ಸಂಸ್ಥೆಗೆ ಹೊಸ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ಸಂದರ್ಶನಗಳನ್ನು ನಡೆಸುತ್ತಿದ್ದಾಗ ನಡೆದ ಘಟನೆ ನನಗೆ ನೆನಪಾಗುತ್ತದೆ. ಮೂರು ಜನರ ಪ್ಯಾನಲ್ ಮುಂದೆ ಈ ಹುಡುಗ ಹಾಜರಾದ. ತಂದೆ ಐ.ಎ.ಎಸ್ ಅಧಿಕಾರಿ. ಮಾತನಾಡುತ್ತಿದ್ದಾಗ ಬುದ್ಧಿವಂತನಂತೆ ಕಾಣುತ್ತಿದ್ದ. ಅವನಿಗೆ ಹೆಚ್ಚಿನ ವಿಷಯಗಳ ಬಗ್ಗೆ ಅವಗಾಹನೆ ಇತ್ತು. ಆದರೆ ಅವನ ಸರ್ಟಿಫಿಕೇಟುಗಳನ್ನು ನೋಡಿದಾಗ ಅವನು ಎರಡು ಬಾರಿ ಫೇಲಾದದ್ದು ನಮಗೆ ಕಾಣಿಸುತ್ತಿತ್ತು. ಉತ್ತಮ ಸ್ಥರದಲ್ಲಿರುವ ತಂದೆ-ತಾಯಿ, ನೋಡಲು ಬುದ್ಧಿವಂತನಂತೆ ಕಾಣುವ ಹುಡುಗ, ಆದರೆ ವಿದ್ಯೆಗೆ ಬಂದಾಗ ಎರಡು ಬಾರಿ ಫೇಲು. ಇದರಲ್ಲಿ ತಂಗಪದಕಂ ಕಥೆ ನನಗೆ ಕಾಣಿಸಿತ್ತು. ಹೀಗಾಗಿ ಅವನ ಹಿನ್ನೆಲೆಯ ಬಗ್ಗೆ ಸಂದರ್ಶನದಲ್ಲಿ ಚರ್ಚಿಸಿದೆ. "ಸರ್ ನಾನು ನಮ್ಮಪ್ಪ ಅಮ್ಮನಿಗೆ ಕೆಟ್ಟ ಹೆಸರು ತಂದ ಮಗ, ನಾಟ್ ವರ್ಥಿ ಆಫ್ ಮೈ ಫಾದರ್" ಅಂದ. ಓದುತ್ತಾ ಓದುತ್ತಾ ನಾನು ’ದಾರಿ ತಪ್ಪಿದ ಮಗ’ನಾಗಿಬಿಟ್ಟೆ. ಅದರ ಅರಿವು ನನಗಿದೆ. ಹೀಗಾಗಿ ಈಗ ನಾನು ನನ್ನನ್ನು ತಿದ್ದಿಕೊಂಡು ಸರಿಯಾದ ದಾರಿಯಲ್ಲಿ ನಡೆಯಬೇಕೆಂದು ನಿರ್ಧರಿಸಿದ್ದೇನೆ" ಅಂದ. ನಾನು ಜೇಬಿನಿಂದ ಕರ್ಚೀಫು ತೆಗೆದು ನನ್ನ ಕಣ್ಣೊರೆಸಿಕೊಂಡೆ. ಆ ನಂತರ ಆ ಪ್ಯಾನೆಲ್ಲಿನಲ್ಲಿ ನಾನು ಕೇಳಿದ್ದು ಒಂದೇ ಪ್ರಶ್ನೆ "ನಿನ್ನ ಜೀವನದಲ್ಲಿ ನಿನಗೆ ಅತೀ ಮುಖ್ಯವಾದ ನೀತಿ ಯಾವುದು?" ಅಂದು ಮಾತ್ರ ಕೇಳಿದೆ. ಕ್ಷಣವೂ ಮಿಟುಕಾಡದೇ "ಪ್ರಾಮಾಣಿಕತೆ ಸರ್" ಅಂದ. ಅಲ್ಲಿಗೆ ನನ್ನ ಕಡೆಯಿಂದ ಅವನ ಸಂದರ್ಶನ ಮುಗಿದಿತ್ತು. ಮಿಕ್ಕವರು ಏನೇನೋ ಪ್ರಶ್ನೆ ಕೇಳಿದರು - ಅವನು ಅವನ ಸಾಮರ್ಥ್ಯಕ್ಕನುಸಾರವಾಗಿ ಜವಾಬು ಕೊಟ್ಟ. ಅವನು ಕೋಣೆಯಿಂದ ಹೊರಹೊರಟಾಗ ಅವನ ಬಗ್ಗೆ ಸ್ವಲ್ಪ ಹೊತ್ತು ಚರ್ಚೆ ನಡೆಯಿತಾದರೂ, ಅವನು ಬುದ್ಧಿವಂತ ಅನ್ನುವುದರಲ್ಲಿ ನಮಗ್ಯಾರಿಗೂ ಅನುಮಾನವಿರಲಿಲ್ಲ. ಸಂದರ್ಶನದಲ್ಲೂ ಚೆನ್ನಾಗಿಯೇ ಮಾಡಿದ್ದ. ಆದರೆ ಅವನ ಚರಿತ್ರೆಯನ್ನು ಅವನಿಗೆ ವಿರುದ್ಧವಾಗಿ ಹಿಡಿಯಬೇಕೋ, ಅಥವಾ ಅವನಿಗೆ ಮತ್ತೊಂದು ಅವಕಾಶಗಳನ್ನು ನಾವು ಕಲ್ಪಿಸಬೇಕೋ ಅನ್ನುವ ಚರ್ಚೆ ಬಿಸಿಯಾಗಿ ನಡೆಯಿತು. ಕಡೆಗೆ ಅವನಿಗೆ ನಮ್ಮ ಸಂಸ್ಥೆಯಲ್ಲಿ ಒಂದು ಸೀಟನ್ನು ಕೊಡಬೇಕು ಅನ್ನುವುದು ಎಲ್ಲರ ನಿರ್ಧಾರವಾಗಿತ್ತು.

ರಾಜುವಿನ ಕಥೆ ಇಂಥದ್ದೇ ಇರಬಹುದು. ಯಾರೂ ತಮ್ಮೆಡೆಗೆ ಕೈಯೆತ್ತಿ ಬೊಟ್ಟು ಮಾಡಿ ತೋರಿಸುವುದಕ್ಕೆ ಮೊದಲೇ ಕೈಎತ್ತಿದರೆ ಪ್ರಾಮಾಣಿಕತೆಯ ಒಂದು ಸಿಂಪಥಿ ಬಂದೇ ಬರುತ್ತದೆ. ಒಂದು ಥರದಲ್ಲಿ ಅಪರಾಧವನ್ನು ಒಪ್ಪಿಸಲು/ನಿರೂಪಿಸಲು ವ್ಯಯ ಮಾಡಬಹುದಾದ ಸಮಯ ಹಣ ಬುದ್ಧಿವಂತಿಕೆಯನ್ನು ರಾಜು ಬಚಾವು ಮಾಡಿದಹಾಗಾಯಿತು. ಇದೂ ಸಾಲದೆಂಬಂತೆ, ರಾಜುವಿನ ಜೀವನ ಐಷಾರಮದ್ದಲ್ಲ, ಆತ ಪುಸ್ತಕಗಳನ್ನು ಓದುತ್ತಿದ್ದ, ಹಂಚುತ್ತಿದ್ದ ಬುದ್ಧಿಜೀವಿ, ಮಿತಭಾಷಿ ಅನ್ನುವ ಎಲ್ಲ ವಿಷಯಗಳನ್ನೂ ಪರಿಗಣಿಸಿದರೆ ಆತನ ಬಗ್ಗೆ ಸುಲಭವಾಗಿ ಕರುಣೆ ಉಕ್ಕುತ್ತದೆ. "ನಾನು ಮಾಡಿದ್ದು ಪ್ರಾಮಾಣಿಕವಾದ ಕೆಲಸ, ಆದರೆ ನನ್ನ ಲೆಕ್ಕಾಚಾರ ತಪ್ಪಿ ನಾನು ಈ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದೇನೆ. ಲೆಕ್ಕಾಚಾರ ಸರಿಹೋಗಿದ್ದರೆ ಎಲ್ಲವೂ ಸರಿಯಾಗುತ್ತಿತ್ತು." ಎನ್ನುವುದು ರಾಜುವಿನ ವಾದ. ಬ್ಯಾಂಕಿನ ಮ್ಯಾನೇಜರು ಪ್ರತಿದಿನ ಬ್ಯಾಂಕಿನ ಹಣವನ್ನು ಕದ್ದು ಅದರಲ್ಲಿ ಸೈಡ್ ವ್ಯಾಪಾರ ಮಾಡಿ ಮುಂಜಾನೆ ಹಣವನ್ನು ವಾಪಸ್ಸಿಟ್ಟು, "ಹೀಗೆ ಆರ್ಜಿತವಾದ ಹಣದಲ್ಲಿ ಬಡವರಿಗೆ ವಿದ್ಯಾರ್ಜನೆಗೆ ಸಹಾಯ ಮಾಡುತ್ತಿದ್ದೆ" ಅಂದ ಕೂಡಲೇ ಅಪರಾಧದ ತೀವ್ರತೆ ಕಡಿಮೆಯಾಗುವುದೇ? "ಹೀಗೆ ಒಂದು ಸಂಜೆ ಹಣವನ್ನು ಒಯ್ಯುತ್ತಿದ್ದಾಗ ಅದು ಕಳುವಾಯಿತು, ನನ್ನ ಇರಾದೆಯಲ್ಲಿ ಯಾವುದೇ ತಪ್ಪಿರಲಿಲ್ಲ. ಈ ರೀತಿಯ ಚರ್ಯೆಯನ್ನು ನಾನು ಹಲವು ವರ್ಷಗಳಿಂದ ಮಾಡುತ್ತಿದ್ದೆ" ಅಂದಕೂಡಲೇ ಆತ ಅಪರಾಧಿಯಾಗದೆಯೇ ಉಳಿಯುತ್ತಾರೆಯೇ? ಒಂದು ಥರದಲ್ಲಿ ಕೊಳ್ಳೆ ಹೊಡೆವ ಡಕಾಯಿತನಿಗೂ, ನಗುನಗುತ್ತಾ ನಮ್ಮ ನಡುವೆಯಿರುವ "ಸಮಾಜದಲ್ಲಿ ಒಗ್ಗಿ ಒಂದಾಗಿರುವ" ಅಪರಾಧಿಗಳಿಗೂ ಇರುವ ವ್ಯತ್ಯಾಸ ಇದೇ ಇರಬಹುದು.

ನಮ್ಮ ಹುಡುಗನ ಕಥೆಗೆ ಮತ್ತೆ ಬರೋಣ. ಹುಡುಗ ಬಂದ. ಆದರೆ ಮೊದಲ ಟರ್ಮಿನಲ್ಲಿ ಪಾಠಮಾಡಿದಾಗ ನನಗೆ ಇದ್ದ ಮೂವತ್ತು ಕ್ಲಾಸುಗಳಲ್ಲಿ ಅವನು ಇಪ್ಪತ್ತರಲ್ಲಿ ಗೈರುಹಾಜರಾಗಿದ್ದ. ಆಗ ನಮಗಿದ್ದ ನಿಯಮದ ಪ್ರಕಾರ ಗೈರುಹಾಜರಾದ ಪ್ರತೀ ಕ್ಲಾಸಿಗೂ ಗ್ರೇಡಿನ ಒಂದು ಭಾಗವನ್ನು ಕತ್ತರಿಸಲಾಗುತ್ತಿತ್ತು. ಮೊದಲ ಟರ್ಮಿನ ಅಂತ್ಯದಲ್ಲಿ ಅವನಿಗೆ ನನ್ನ ವಿಷಯದಲ್ಲಿ ಡಿ ಬಂದಿತ್ತು. ಹೀಗಾಗಿ ಅವನು ತೊಂದರೆಯಲ್ಲಿದ್ದ. ಅದೇ ಕಥೆ ಇತರ ಕೆಲವು ವಿಷಯಗಳಲ್ಲೂ ಆಗಿತ್ತು. ನಿಯಮಾನುಸಾರ ಅವನನ್ನು ಸಂಸ್ಥೆಯನ್ನು ಬಿಟ್ಟುಹೋಗಲು ಹೇಳಬೇಕಿತ್ತು. ಖಾಸಗಿಯಾಗಿ ನಾನು ಅವನಲ್ಲಿಟ್ಟಿದ್ದ ನಂಬಿಕೆಗೆ ಘಾತಮಾಡಿದ್ದರಿಂದ ಅವನ ಬಗ್ಗೆ ನನಗೆ ಯಾವುದೇ ಕರುಣೆಯಿರಲಿಲ್ಲ. ಆ ಕ್ಷಣಕ್ಕೆ ಎಲ್ಲರೂ ಒಕ್ಕೊರಲಿನಲ್ಲಿ ಅವನನ್ನು ಆಚೆಗೆ ಕಳುಹಿಸಲು ತೀರ್ಮಾನ ಮಾಡಿದೆವು. ಅವನಿಗೆ ಪತ್ರವೂ ಹೋಯಿತು. ಆಗ ಆದದ್ದೇನು? ಹುಡುಗ ಹೋಗಿ ತನ್ನ ತಂದೆಯ ಕಾಲು ಹಿಡಿದ. ಅವನ ತಂದೆ ನಮ್ಮ ನಿರ್ದೇಶಕರ/ಚೇರ್ಮನ್ನರ ಕಾಲು ಹಿಡಿದರು. ಅವನಿಗೆ ಮತ್ತೊಂದು ಅವಕಾಶ ನೀಡಬೇಕೆಂಬ ತೀರ್ಮಾನವಾಯಿತು. ಹೀಗಾಗಿ ಅವನು ಮತ್ತೆ ಮೊದಲ ವರ್ಷಕ್ಕೆ ಬಂದು ಹೊಸದಾಗಿ ತನ್ನ ಜೀವನವನ್ನು ಪ್ರಾರಂಭಮಾಡಿದ. ಗಮ್ಮತ್ತಿನ ವಿಷಯವೆಂದರೆ ನಾನು ಕಲಿಸುತ್ತಿದ್ದ ಮ್ಯಾನೇಜ್‍ಮೆಂಟ್ ಎಕೌಂಟಿಂಗ್ ಎನ್ನುವ ವಿಷಯ ಬಿಕಾಂ ಮಾಡಿದ ವಿದ್ಯಾರ್ಥಿಗಳಿಗೂ ಜಟಿಲವಾದದ್ದು ಅನ್ನುವ ಪ್ರತೀತಿಯಿರುವಾಗ, ಅಂಥ ಯಾವುದೇ ಹಿನ್ನೆಲೆಯಿಲ್ಲದ ಈ ಹುಡುಗ ಗೈರುಹಾಜರಿಯ ದಂಡವಿಲ್ಲದಿದ್ದರೆ ಸುಲಭವಾಗಿ ಪಾಸಾಗುತ್ತಿದ್ದ.. ಅಂದರೆ ಅವನು ತರಗತಿಗೆ ಬಂದ ೧೦ ಕ್ಲಾಸುಗಳಲ್ಲಿ ಸಾಕಷ್ಟು ಕಲಿತಿದ್ದ ಅಂದ ಹಾಗಾಯಿತು.

ಹೀಗಾಗಿಯೇ ರಾಮಲಿಂಗ ರಾಜುವಿನ ಹಿಂದಿನ ಸಾಧನೆಗಳನ್ನು ಪರಿಗಣಿಸಿದಾಗ ಆಂಧ್ರಪ್ರದೇಶದ ಜನತೆ ಆತನ ಬಗ್ಗೆ ಉದಾರವಾದ ಮಾತುಗಳನ್ನಾಡುವುದರಲ್ಲಿ ನಮಗೆ ಹೆಚ್ಚಿನ ಆಶ್ಚರ್ಯವಾಗಬಾರದು. ಐಟಿಯಲ್ಲಿ ಕರ್ನಾಟಕಕ್ಕೂ ಆಂಧ್ರಪ್ರದೇಶಕ್ಕೂ ಮೊದಲಿನಿಂದಲೂ ಹಣಾಹಣಿಯ ಪೈಪೋಟಿ ಇದ್ದೇ ಇದೆ. ನಮಗೆ ನಾರಾಯಣ ಮೂರ್ತಿ/ ಪ್ರೇಂಜಿ ಇಬ್ಬರಿದ್ದರೆ, ಅವರಿಗೊಬ್ಬನೇ ರಾಜು. ಚಂದ್ರಬಾಬುವಿನ ಕಾಲದಲ್ಲಿ ಆಂಧ್ರದ ಸರಕಾರ ಆತನನ್ನು ತಮ್ಮ ದೊಡ್ಡ ಸಾಧಕನಂತೆ ಬಿಲ್ ಕ್ಲಿಂಟನ್ ಹಾಗೂ ಬಿಲ್ ಗೇಟ್ಸ್ ಮುಂದೆ ತೋರಿಸಿದ್ದು ಉಂಟು. ಹೀಗಾಗಿ ರಾಜುವಿನ ಹೆಸರು ಒಂದು ರೀತಿಯಲ್ಲಿ ಹೈದರಾಬಾದಿನ ಸಿಲಿಕಾನ್ ಕನಸುಗಳ ಭಾಗವಾಗಿ ಹಾಸುಹೊಕ್ಕಾಗಿದೆ. ಅದಕ್ಕೇ ಅವರ ಬೀಳನ್ನೂ ಬಹುಶಃ ಜನರು ಒಪ್ಪಲು ಸುಲಭವಾಗಿ ತಯಾರಾತುವುದಿಲ್ಲವೇನೋ. ರಾಜು ಬಿಟ್ಟರೆ ಮತ್ತೊಬ್ಬ ಐಟಿ ದೊರೆ ಆಂಧ್ರಕ್ಕೆಲ್ಲಿ? ಅದರಲ್ಲೂ ಸತ್ಯಂ ಸಂಸ್ಥೆಯನ್ನು ಇನ್ಫಿ ಟೇಕೋವರ್ ಮಾಡಬೇಕು ಅನ್ನುವು ಕೆಲವು ಸಲಹೆಗಳು ಬರುತ್ತಿರುವಾಗ ಇದು ಆಶ್ಚರ್ಯದ ವಿಷಯವೇನೂ ಅಲ್ಲ. ಇದರಲ್ಲಿ ರಾಜುವಿನ ಬುದ್ಧಿವಂತಿಕೆಯೆಂದರೆ ತಮ್ಮನ್ನು ಅಪರಾಧಿಯೆಂದು ಯಾರಾದರೂ ಘೋಷಿಸುವುದಕ್ಕೆ ಮೊದಲೇ ತಮ್ಮ ತಪ್ಪೊಪ್ಪಿಗೆ ನೀಡಿರುವುದು. ಇದನ್ನೇ ನಾವು ಎನ್ ಮೈನಸ್ ವನ್ ಘಳಿಗೆ ಎನ್ನಬಹುದು.

ಮತ್ತೆ ಈ ಹುಡುಗನ ವಿಷಯಕ್ಕೆ ಬರೋಣ. ಹುಡುಗನಿಗೆ ಮತ್ತೊಂದು ಅವಕಾಶ ಬಂತು. ಈ ಬಾರಿ ಅವನು ಮೊದಲ ಟರ್ಮಿನಲ್ಲಿ ಸರಿಯಾಗಿಯೇ ಮಾಡಿದ. ನಮ್ಮ ನಿಯಮಾನುಸಾರ ವಿದ್ಯಾರ್ಥಿಗಳು ದೂರದ ಹಳ್ಳಿಗಳಲ್ಲಿ ೧೦ ವಾರಕಾಲ ವಾಸ್ತವ್ಯ ಹೂಡಿ ಗ್ರಾಮೀಣ ಬದುಕನ್ನು ಹತ್ತಿರದಿಂದ ನೋಡಿ ದಾಖಲಾತಿ ಮಾಡಬೇಕಿತ್ತು. ಜೊತೆಗೆ ಕೆಲವು ಇತರ ಕೆಲಸಗಳನ್ನೂ ಮಾಡಬೇಕಿತ್ತು. ಆದರೆ ಅವನಿರಬೇಕಿದ್ದ ಬಿಹಾರದ ಹಳ್ಳಿಯಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ನನ್ನ ಸಹೋದ್ಯೋಗಿಯೊಬ್ಬರು ಹೋದಾಗ ತಿಳಿದದ್ದೇನು? - "ಸರ್ ಅವರು ಇಲ್ಲೇ ಇದ್ದಾರೆ, ಆದರೆ ಆಗಾಗ ಹೊರಗೆ ಹೋಗುತ್ತಿರುತ್ತಾರೆ. ವಾರಾಂತ್ಯದಲ್ಲಿ ಪಟ್ನಾಗೆ ಹೋಗುತ್ತಾರೆ. ಈ ದಿನ ಸಿನೇಮಾ ನೋಡಲು ಹೋಗಿದ್ದಾರೆ." ಮತ್ತೆ ಆ ಹುಡುಗ ಸಿಕ್ಕಿಬಿದ್ದಿದ್ದ! ಮತ್ತೆ ಅವನ ನಡವಳಿಕೆ ಚರ್ಚೆಗೆ ಬಂತು. ಅವನನ್ನು ಮತ್ತೆ ಹೊರಹಾಕಬೇಕಿತ್ತು ಅಥವಾ ಇನ್ನೊಂದು ಅವಕಾಶ ನೀಡಬೇಕಿತ್ತು!! ಕಡೆಗೆ ನಾವು ನಿರ್ಧರಿಸಿದ್ದು ಹೀಗೆ: ಅವನು ತನ್ನ ವಿದ್ಯೆಯನ್ನು ಮುಂದುವರೆಸಬಹುದು, ಆದರೆ ಎರಡು ವರ್ಷಗಳ ನಂತರ ಅವನಿಗೆ ಡಿಗ್ರಿ ಕೊಡುವುದಕ್ಕೆ ಬದಲು, ಮತ್ತೆ ಅವನನ್ನು ಹಳ್ಳಿಗೆ ಕಳಿಸ ಬೇಕು, ಈ ಭಾಗವನ್ನು ಅವನು ಸರಿಯಾಗಿ ಮುಗಿಸಿದ ಮೇಲೆಯೇ ಅವನಿಗೆ ಡಿಗ್ರಿ ನೀಡಬೇಕು. ಹೀಗೆ ಎರಡು ವರ್ಷದ ಕಾರ್ಯಕ್ರಮದಲ್ಲಿ ಶಾಮೀಲಾದ ಅವನಿಗೆ ನಾಲ್ಕನೆಯ ವರ್ಷದ ಅಂತ್ಯದಲ್ಲಿ ಡಿಗ್ರಿ ಸಿಗುವುದಿತ್ತು....

ರಾಜುವಿನ ಬಗ್ಗೆ ಒಳ್ಳೆಯ ಮಾತುಗಳು ಎಲ್ಲಿಂದ ಬರುತ್ತಿವೆ, ಅವುಗಳ ಆಶಯವೇನು? "ಅಯ್ಯೋ ಪಾಪ, ಪ್ರಾಮಾಣಿಕವಾಗಿ ತನ್ನ ತಪ್ಪೊಪ್ಪಿಕೊಂಡ ರಾಜುವನ್ನು ಕ್ರಿಮಿನಲ್ ಎಂದು ಕರೆಯುವುದು ಸಮಂಜಸವಲ್ಲ.. ಆತ ಸತ್ಯಂ ಸಂಸ್ಥೆಯನ್ನು ತನ್ನ ಮಗುವಿನಂತೆ ಬೆಳೆಸಿದ್ದಾರೆ, ಸಾಲದ್ದಕ್ಕೆ ತನ್ನ ಸಂಸ್ಥೆ ಬೈರ್ರಾಜು ಫೌಂಡೇಷನ್ ಮೂಲಕ ೧೦೮ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದ್ದಾರೆ. ತಪ್ಪು ಮಾಡಿರುವುದಾಗಿ ಸರಿಯಾದ ಸಮಯದಲ್ಲಿ ಒಪ್ಪಿದ್ದಾರೆ. ಈ ಥರದ ವ್ಯಕ್ತಿ ಕ್ರಿಮಿನಲ್ ಹೇಗಾಗಬಹುದು? ಈತನನ್ನು ಅನುಕಂಪದಿಂದ ನೋಡಬೇಕು....

ಹೌದು ನಿಜ.. ಆ ಹುಡುಗನ ಕಥೆಯೇನಾಯಿತು? ಮೂರನೆಯ ವರ್ಷದ ಅಂತ್ಯಕ್ಕೆ ಅವನ ಒಟ್ಟರೆ ನಡವಳಿಕೆ ಸರಿಯಾಗಿಯೇ ಇತ್ತು. ಘಟಿಕೋತ್ಸವದ ಮುನ್ನ ನನ್ನ ಸಹೋದ್ಯೋಗಿಯೊಬ್ಬರು ಅವನನ್ನು ಮತ್ತೆ ಹಳ್ಳಿಗೆ ಕಳಿಸುವದು ಅವಶ್ಯಕವಾದರೂ ಡಿಗ್ರಿ ತಡೆಹಿಡಿಯುವುದು ಸಮಂಜಸವೇ ಅನ್ನುವ ಪ್ರಶ್ನೆ ಚರ್ಚಿತವಾಯಿತು. ಯಾಕೆ? ಮೂಲತಃ ಹುಡುಗ ಒಳ್ಳೆಯವನು ಮಧ್ಯೆ ದಾರಿ ತಪ್ಪಿದ್ದ. ಈಗ ಅವನಿಗೆ ಒಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ ಅವಳು ಅವನನ್ನು ಹದ್ದುಬಸ್ತಿಗೆ ತಂದಿದ್ದಾಳೆ, ಅವನಿಗೆ ಮತ್ತೊಂದು ಅವಕಾಶ ನೀಡಬೇಕು - ಹುಡುಗನ ಭವಿಷ್ಯ ಹಾಳಾಗುವುದಕ್ಕೆ ನಾವು ಕಾರಣವಾಗಬಾರದು ಎನ್ನುವುದು ನನ್ನ ಸಹೋದ್ಯೋಗಿಯ ವಿಚಾರವಾಗಿತ್ತು. ಅಷ್ಟು ಹೊತ್ತಿಗೆ ಆ ಹುಡುಗನ ಬಗ್ಗೆ ನನಗೇನೊ ಅನುಕಂಪವಿರಲಿಲ್ಲ. ನಾನು ನನ್ನ ವಿಚಾರವನ್ನು ಮಂಡಿಸಿದೆ. ಅವನ ಸಂದರ್ಶನದ ದಿನ ನಾನು ಅವನನ್ನು ನಂಬಿ ಮೋಸ ಹೋದ ವಿಚಾರವನ್ನು ತಿಳಿಸಿದೆ. ಆದರೆ ನನ್ನ ವಿರೋಧ ವಿರೋಧವಾಗಿಯೇ ಉಳಿಯಿತು. ಅವನು ಘಟಿಕೋತ್ಸವದಲ್ಲಿ ಡಿಗ್ರಿ ಪಡೆದ. ಅವನ ಗೆಳತಿ ಅನ್ನಿಸಿಕೊಂಡ ಹುಡುಗಿಯನ್ನು ಮದುವೆಯಾದ. ಆ ಘಟಿಕೋತ್ಸವದ ನಂತರ ಅವನು ನಾವು ಕಂಡಿದ್ದ ಆ ಹುಡುಗನೇ ಎನ್ನುವ ಪ್ರಶ್ನೆ ಕೇಳುವ ಹಾಗೆ ಸಭ್ಯಸ್ಥನಾಗಿ ವರ್ತಿಸುತ್ತಿದ್ದಾನೆ. ಮೊದಲಿಗೆ ಅವನನ್ನು ನಮ್ಮ ಸಂಸ್ಥೆಯ ಒಳಗೆ ಕರೆತರುವುದರಲ್ಲಿ ನಾನು ತಪ್ಪು ಮಾಡಿದ್ದೆ. ಕಡೆಗೆ ಅವನ ಡಿಗ್ರಿಯನ್ನು ತಡೆಹಿಡಿಯಬೇಕೆಂದು ವಾದಿಸಿ ಮತ್ತೆ ತಪ್ಪು ಮಾಡಿದ್ದೆ.

ಹೀಗಾಗಿ ’ಪ್ರಾಮಾಣಿಕ’ ಕ್ರಿಮಿನಲ್‍ಗಳಿಗೆ ಎಷ್ಟು ಅವಕಾಶ ಕೊಡಬೇಕು, ಯಾವಾಗ ಕ್ಷಮಿಸಬೇಕು, ಎಷ್ಟು ಭೂತಕಾಲವನ್ನು ಪರಿಗಣಿಸಬೇಕು, ಎಷ್ಟು ಭವಿಷ್ಯದ ಬಗ್ಗೆ ನಾವು ಕಣ್ಣಿಡಬೇಕು ಎಂದು ತಿಳಿಯದೇ ಕಕ್ಕಾಬಿಕ್ಕಿಯಾಗಿದ್ದೇನೆ. ರಾಜುವಿನವಿಷಯದಲ್ಲಿ ಆತನ ಪರವಾಗಿ ಆಂಧ್ರ [ಎಸ್.ಎಂ.ಎಸ್ ಕಳಿಸಿದ] ೯೦ ಪ್ರತಿಶತ ಜನತೆ ಓಟು ಮಾಡಿರುವುದರಲ್ಲೂ ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುವೆ!! ಆದರೆ ರಾಜು ತಮ್ಮ ತಪ್ಪೊಪ್ಪಿಗೆಯನ್ನು ಒಂದು ವಾರ ಮುಂದಕ್ಕೆ ಹಾಕಿದ್ದರೆ... ಅವರನ್ನು ಪೋಲೀಸರು ಮೊದಲಿಗೆ ಹಿಡಿದಿದ್ದರೆ... ಜನತೆಯ ಅಭಿಪ್ರಾಯ ಏನಾಗುತ್ತಿತ್ತು? ಈ ಎನ್ ಮೈನಸ್ ವನ್ ಕ್ಷಣದಿಂದ ರಾಮಲಿಂಗ ರಾಜುವಿಗೆ ಆಗಿರುವ ಫಾಯಿದೆ ಎಷ್ಟು? ಗೊತ್ತಿಲ್ಲ.....



 

Wednesday, March 25, 2009

ಸತ್ಯಂ ತಲ್ಲಣಗಳು

ಸತ್ಯಂ ಕೇಂದ್ರ ಕಛೇರಿ
"ನೀವೆಲ್ಲರೂ ನಂಬಿರುವಂತೆ - ಹಾಗೂ ಕಂಪನಿಯ ಲೆಕ್ಕಪತ್ರದನುಸಾರವಾಗಿ ಇರಬೇಕಿದ್ದ ಏಳುಸಾವಿರ ಕೋಟಿ ರೂಪಾಯಿಗಳು ಇಲ್ಲ. ಆದರೆ ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ಆಗಿಲ್ಲ. ತಪ್ಪಾಯಿತು ಕ್ಷಮಿಸಿ". ಐದು ಪುಟಗಳ ದೊಡ್ಡ ಪತ್ರಬರೆದ ರಾಮಲಿಂಗ ರಾಜು ಹೇಳಿದ್ದರ ಮಜಕೂರು ಇಷ್ಟೇ. ಮಿಕ್ಕ ನಾಲ್ಕಾರು ಪುಟಗಳು ಏನೊಂದನ್ನೂ ವಿವರಿಸಲಾಗದ ಅನವಶ್ಯಕ ವಿವರಗಳು. ಹೀಗೆ ಹಣ ಮಾಯವಾಗುವುದರ ಸುಳಿವು ಯಾರಿಗೂ ಉಂಟಾಗಲಿಲ್ಲ. ಹಿಂದೆ ನಡೆದ ಅನೇಕ ಇಂತಹ ಭ್ರಷ್ಟ ನಡಾವಳಿಯಲ್ಲಿ ಈ ಇಂಥ ಪತನಕ್ಕೆ ಮುನ್ನ ಯಾವುದಾದರೂ ಸುದ್ದಿಯಿದ್ದೇ ಇರುತ್ತಿತ್ತು. ಅದು ಹರ್ಷದ್ ಮೆಹತಾ ಬಿಗ್ ಬುಲ್ ಆಗಿ ಉತ್ತುಂಗಕ್ಕೇರುತ್ತಿದ್ದ ಕಥೆಯೇ ಇರಬಹುದು, ಕೇತನ್ ಪಾರೀಕನ ಕಥೆಯೇ ಇರಬಹುದು, ಅಥವಾ ವಿಪರೀತವಾಗಿ ಬಿಸಿಯೇರಿದ್ದ ಆರ್ಥಿಕ ಸಂಸ್ಥೆಗಳ ಆಕರ್ಷಣೆಯ ಸಿ ಆರ್‍ ಬಿ ಸಂಸ್ಥೆಯಿಂದ ಪ್ರಾರಂಭವಾದ ಎನ್.ಬಿ.ಎಫ್.ಸಿ ಹಗರಣವೇ ಆಗಿರಬಹುದು.. ಇಲ್ಲವೇ ಡಾಟ್.ಕಾಂ ಕಂಪನಿಗಳು ಒಂದರ ನಂತರ ಒಂದು ಪತನಗೊಂಡ ಪರಿಯೇ ಇರಬಹುದು. ಎನ್ರಾನ್ ಸಂಸ್ಥೆ ಬಿದ್ದಾಗಲೂ ಆ ಸಂಸ್ಥೆಯ ಬಗ್ಗೆ ಮುಂಚೆಯೇ ಪ್ರಶ್ನೆಗಳನ್ನು ಕೇಳಿದವರೂ ಆ ಬಗ್ಗೆ ವಾದವಿವಾದಗಳೂ ಇದ್ದದ್ದು ಸಹಜವೇ. ಹಾಗೆ ನೋಡಿದರೆ ಪ್ರಶ್ನೆಗಳನ್ನೆದುರಿಸುತ್ತಲೇ ಬದುಕಿ ಬೆಳೆದಿರುವ ಭಾರತೀಯ ಸಂಸ್ಥೆಗಳಲ್ಲಿ ರಿಲಯನ್ಸ್ ಮತ್ತು ಐಸಿಐಸಿಐ ಬ್ಯಾಂಕಿನ ಹೆಸರುಗಳು ಪ್ರಮುಖವಾಗಿ ಕಾಣುತ್ತವೆ. ರಿಲಯನ್ಸ್ ಸಂಸ್ಥೆಯ ಬೆಳವಣಿಗೆಯ ಸಮಯದಲ್ಲಿ ಅರುಣ್ ಶೌರಿ ನೇತೃತ್ವದ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಅವರ ವಿರುದ್ಧ ಸಮರ ಸಾರಿದ್ದರೂ ಧೀರೂಭಾಯಿ ಅದನ್ನೆಲ್ಲ ಸಹಿಸಿ ನಗುತ್ತಲೇ ತಮಗೆ ತಿಳಿದ ಮಾರ್ಗದಲ್ಲಿ ಆ ಸಂಸ್ಥೆಯನ್ನು ಬೆಳೆಸಿದರು. ಐಸಿಐಸಿಐ ಬ್ಯಾಂಕಿನ ಬಗ್ಗೆ ಅನೇಕ ಅನುಮಾನದ ಗೊಣಗಾಟಿಕೆ ಮತ್ತು ಹೂಡಿಕೆದಾರರು ಒಂದೇಕಾಲಕ್ಕೆ ಹಣ ತೆಗೆದುಕೊಳ್ಳುವಂತಹ [ರನ್] ಘಟನೆಗಳು ಎರಡು ಬಾರಿ ಆದುವಾದರೂ, ರಿಜರ್ವ್ ಬ್ಯಾಂಕಿನ ಕೃಪಾಕಟಾಕ್ಷದಿಂದಾಗಿ ಆ ಬ್ಯಾಂಕು ಉಳಿದುಕೊಂಡಿತು. ಈ ಹಿನ್ನೆಲೆಯಲ್ಲಿ ಸತ್ಯಂ ಸಂಸ್ಥೆಯ ಪತನ ನಿಜಕ್ಕೂ ಅನಿರೀಕ್ಷಿತ, ಅನಪೇಕ್ಷಿತ, ಆದರೆ ಬಹುಶಃ ಅನಿವಾರ್ಯ ಘಟನೆಯಾಗಿದೆ!

ಸತ್ಯಂ ಸಂಸ್ಥೆಯ ಒಗಟನ್ನು ಬಿಡಿಸಲು ಹಲವು ದಿನಗಳೇ ಹಿಡಿಯಬಹುದು. ಅದರ ಮುನ್ಸೂಚನೆಗಳನ್ನು ಕಂಡುಕೊಳ್ಳುವುದು ಕಷ್ಟದ ವಿಷಯವೇ ಆಗಿತ್ತು. ರಾಮಲಿಂಗ ರಾಜು ಅವರ ಖಾಸಗೀ ವ್ಯಕ್ತಿತ್ವದ ಬಗ್ಗೆ ಈ ವರೆಗೂ ಯಾವ ಪ್ರಶ್ನೆಗಳೂ ಎದ್ದಿರಲಿಲ್ಲ. ಆತ ಹೆಚ್ಚು ಮಾತನಾಡಿದವರಲ್ಲ. ಪತ್ರಿಕೆಗಳಲ್ಲಿ ವಿಪರೀತವಾಗಿ ಕಾಣಿಸಿಕೊಂಡವರಲ್ಲ. ವಿಜಯ ಮಲ್ಯಾರ ಹಾಗೆ ಐಷಾರಾಮಕ್ಕೆ ಹೆಸರಾದವರೂ ಅಲ್ಲ. ಬದಲಿಗೆ ಹೈದರಾಬಾದಿನ ವಾಲ್ಡೆನ್ ಪುಸ್ತಕದಂಗಡಿಯಲ್ಲಿ ಆಗಾಗ ಬಂದು ಒಂದು ರಾಶಿ ಪುಸ್ತಕಗಳನ್ನು ಕೊಂಡು ಅದನ್ನು ತಾವು ಓದುವುದಲ್ಲದೇ ತಮ್ಮ ಉದ್ಯೋಗಿಗಳಿಗೂ ಹಂಚಿ ಓದಿಸುತ್ತಿದ್ದ ವ್ಯಕ್ತಿ. ಡಾಟ್ ಕಾಮ್ ಉತ್ತುಂಗದಲ್ಲಿ ೨೫ ಲಕ್ಷಗಳ ವ್ಯಾಪಾರವಿದ್ದ ಇಂಡಿಯಾ ವರ್ಲ್ಡ್ ಡಾಟ್ ಕಾಂ ಸಂಸ್ಥೆಯನ್ನು ೫೦೦ ಕೋಟಿಗಳಿಗೆ ಕೊಂಡಾಗ ಅನೇಕರು ಹುಬ್ಬೇರಿಸಿದ್ದರಾದರೂ, ಆಗಿನ ಕಾಲದಲ್ಲಿ ಅದನ್ನು ವಿಚಿತ್ರ ಎಂದು ಪರಿಗಣಿಸುವವರು ಹೆಚ್ಚಿರಲಿಲ್ಲ. ಅದರ ವಿಪರೀತ ಪರಿಣಾಮ ಸತ್ಯಂ ಸಂಸ್ಥೆಯ ಮೇಲೆ ಆದಂತಿರಲಿಲ್ಲ. ಸಾಫ್ಟ್ ವೇರಿನ ಸುಲ್ತಾನರಾದ ಇನ್ಫಿ, ವಿಪ್ರೋ, ಟಿಸಿಎಸ್‍ಗೂ ಸತ್ಯಂಗೂ ಇದ್ದ ಒಂದು ಭಿನ್ನತೆಯೆಂದರೆ ಸತ್ಯಂ ಸಂಸ್ಥೆ ಸಿಫಿಯ ಮೂಲಕ ಇಂಟರ್‌ನೆಟ್ ಸೇವೆಯ ಮಾರ್ಗವನ್ನು ಕ್ರಮಿಸಿತು. ಟಾಟಾ ಸಂಸ್ಥೆಯವರು ವಿ.ಎಸ್.ಎನ್.ಎಲ್ ಕೂಳ್ಳುವುದರ ಮೂಲಕ ಆ ರಂಗವನ್ನು ಪ್ರವೇಶಿಸಿದರೂ ಅದನ್ನು ಟಿ.ಸಿ.ಎಸ್.ನಿಂದ ಭಿನ್ನವಾಗಿರಿಸಿದ್ದರು. ಜೊತೆಗಿ ವಿ.ಎಸ್.ಎನ್.ಎಲ್ ಬರೇ ಇಂಟರ್‌ನೆಟ್ ಸೇವೆಗೆ ಮೀಸಲಾಗಿಯೂ ಇರಲಿಲ್ಲ.

ಸತ್ಯಂ ಸಂಸ್ಥೆಗೆ ಅನೇಕ ಪುರಸ್ಕಾರಗಳೂ ಬಂದಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಥೆಯಲ್ಲಿನ ಉತ್ತಮ ನಡವಳಿಕೆಗಾಗಿ "ಕಾರ್ಪೊರೇಟ್ ಗವರ್ನೆನ್ಸ್"ಗೇ ಮೀಸಲಾದ ಗೋಲ್ಡನ್ ಪೀಕಾಕ್ ಪುರಸ್ಕಾರವನ್ನು ಎರಡು ಬಾರಿ ಆ ಸಂಸ್ಥೆ ಪಡೆದಿತ್ತು. ರಾಜು ಆ ವಿಷಯದ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಿದ್ದರು. ಹೀಗಾಗಿ ಆ ಸಂಸ್ಥೆಯಬಗ್ಗೆ ಅನುಮಾನ ಇರುವುದಕ್ಕೆ ಕಾರಣಗಳೇ ಇರಲಿಲ್ಲ. ಸತ್ಯಂ ಸಂಸ್ಥೆಯ ಸಂಬಳಗಳು ಐಟಿ ಸಂಬಳಗಳ ಸ್ಥರದಲ್ಲೇ ಇದ್ದುವಂತೆ. ಅವರ ಆಸ್ತಿ, ಬಿಲ್ಡಿಂಗು, ಮಿಕ್ಕ ಖರ್ಚುಗಳೂ ಇತರ ಸಂಸ್ಥೆಗಳಿಗಿಂತ ಭಿನ್ನವಾಗಿದ್ದುವು ಎಂದು ಹೇಳಲು ಕಷ್ಟವೇ. ಆಮದನಿಯೂ ಅದೇ ಮಟ್ಟದಲ್ಲಿ ಇದ್ದಿರಬೇಕು. ಸತ್ಯಂ ಸಂಸ್ಥೆಯ ಸೇವೆಯನ್ನು ಪಡೆಯುತ್ತಿದ್ದವರಲ್ಲಿ ದೊಡ್ಡ ಸಂಸ್ಥೆಗಳ ಹೆಸರುಗಳಿಗೆ ಬರವೇನೂ ಇರಲಿಲ್ಲ. ಹೀಗಾಗಿ ಎಲ್ಲ ಸಂಸ್ಥೆಗಳ ಸ್ಥರದಲ್ಲೇ ಲಾಭವನ್ನೂ ಸಹಜವಾಗಿ ಸತ್ಯಂ ಪಡೆಯಬೇಕಿತ್ತು. ಆದರೆ ಆ ಲಾಭಗಳು ಕಳೆದ ಹಲವು ವರ್ಷಗಳಿಂದ ಆರ್ಜಿತವಾಗುತ್ತಿರಲಿಲ್ಲ ಎಂದು ರಾಜು ಹೇಳಿದ್ದಾರೆ. ಇದನ್ನು ಹೇಗೆ ನಂಬುವುದು? ಜೊತೆಗೆ ಈ ಸ್ಥರದಲ್ಲಿ ಲಾಭ ಬರುತ್ತಿರಲಿಲ್ಲವೆಂದರೆ ಯಾರಿಗೂ ತಿಳಿಯದಿರುತ್ತದೆಯೇ? ಅರ್ಥಾತ್ ಲಾಭ ಬಂದಿರಬೇಕು. ಹಣ ಇದ್ದಿರಬೇಕು. ಅದು ಎಲ್ಲೋ ಹೊರಕ್ಕೆ ಹರಿದಿರಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೀಗೆ ಉತ್ತುಂಗದಲ್ಲಿರುವ, ಎಲ್ಲರ ನಂಬಿಕೆ-ಗೌರವಗಳನ್ನು ಸಂಪಾದಿಸಿರುವ ಒಬ್ಬ ವ್ಯಕ್ತಿ ಇಂಥ ಪತನದ ದಾರಿ ಹಿಡಿಯಲು ಏನು ಕಾರಣಗಳಿರಬಹುದು? ಪ್ರತಿದಿನದ ಊಟ, ಬಟ್ಟೆ, ಓಡಾಡಲು ಕಾರು, ಇರಲು ಒಂದು ಮನೆ, ಒಂದು ತಲೆಮಾರಿನ ಖರ್ಚಿಗಾಗುವಷ್ಟು ಹಣ, ಅಥವಾ ಎರಡು ತಲೆಮಾರುಗಳಿಗೆ.. ಅಥವಾ... ಒಬ್ಬ ವ್ಯಕ್ತಿಯ ಆರ್ಜನೆಯ ಮಿತಿಯೆಲ್ಲಿ? ಹಾಗೆ ನೋಡಿದರೆ ಇದು ಧನಾರ್ಜನೆಯ ಆಟವಲ್ಲವೇ ಅಲ್ಲವೇನೋ, ಬದಲಿಗೆ ಯಾವುದೋ ಸಾಧನೆಯ ಬೆನ್ನು ಹತ್ತಿ ನಡೆವ ನಶೆಯಿರಬಹುದು. ಸಚಿನ್ ಟಿಂಡೂಲ್ಕರನಿಗೆ ರನ್‌ಗಳನ್ನು ಸಂಪಾದಿಸುತ್ತಲೇ ಜಗತ್ತಿನ ಎಲ್ಲ ರಿಕಾರ್ಡುಗಳನ್ನೂ ಮುರಿಯುವ ಬಯಕೆಯಿದ್ದಂತೆ, ಜಗತ್ತಿನಲ್ಲಿ ಅತಿವೇಗವಾಗಿ ಓಡಿ ರಿಕಾರ್ಡು ಸ್ಥಾಪಿಸಿದ ಉಸೇನ್ ಬೋಲ್ಟಿಗೆ ತನ್ನ ರಿಕಾರ್ಡನ್ನೇ ಮುರಿಯುವ ಬಯಕೆಯಿದ್ದಂತೆ, ಅಥವಾ ಸತತವಾಗಿ ಒಂದು ವಾರ ಸೈಕಲ್ ಚಲಾಯಿಸಿ ಲಿಮ್ಕಾ/ಗಿನ್ನೆಸ್ ಪುಸ್ತಕಗಳಲ್ಲಿ ಅಮರರಾಗುವ ಬಯಕೆಯಿದ್ದಂತೆ, ಉತ್ತಮ ಧಂಧೆ ಮಾಡುವ, ಭಾರತೀಯ ಶ್ರೀಮಂತರ ಯಾದಿಯಲ್ಲಿ ಸ್ಥಾನ ಪಡೆಯಬೇಕೆಂಬುದೂ ಒಂದು ನಶೆಯಿರಬಹುದು. ಹೀಗಾಗಿ ನಮಗೆ ನಾವೇ ಇಟ್ಟುಕೊಂಡ ಗುರಿಯನ್ನು ಯಾವುದೇ ಪರಿಸ್ಥಿತಿಯಲ್ಲಿ ನಾವು ಸಾಧಿಸಲೇ ಬೇಕೆಂದು ಹೊರಟ ಅತೃಪ್ತ ಆತ್ಮಗಳ ಪತನ ಈ ನಶೆಯಿಂದಾಗಿಯೇ ಆಗುವುದೋ ಏನೋ.

ಕಿಂಗ್ಶುಕ್ ನಾಗ್ ಪ್ರಕಾರ ರಾಜುಗೆ ಇದ್ದ ಪ್ರೀತಿ ಮಣ್ಣಿನದ್ದು. ಹೀಗಾಗಿಯೇ ಅವರು ಮೇಡ್ಚಲ್ ಸುತ್ತಮುತ್ತ ಭೂಮಿಯನ್ನು ಕೊಳ್ಳುತ್ತಲೇ, ತಮ್ಮ ನೆಲದ ಮೇಲಿನ ಪ್ರೀತಿಯನ್ನು ತೋರಿಸುತ್ತಲೇ ಹೋದರಂತೆ. ರಾಜು ಐಟಿಗೆ ಬರುವುದಕ್ಕೆ ಮುನ್ನ ರಿಯಲ್ ಎಸ್ಟೇಟಿನ ಧಂಧೆಯಲ್ಲಿದ್ದರು. ಈಚೆಗೆ ಆ ಬಗೆಗಿನ ಪ್ರೀತಿಯನ್ನು ಮೈಟಾಸ್ ಸಂಸ್ಥೆಗಳ ಮೂಲಕ ತೋರಿಸಿದ್ದರು. ಇದ್ದಕ್ಕಿದ್ದ ಹಾಗೆ ಜಮೀನಿನ ಬೆಲೆಗಳು ಬೀಳಲು ಪ್ರಾರಂಭವಾಗಿ ತಮ್ಮ ಸುತ್ತಲಿನ ನೆಲ ಕುಸಿಯತೊಡಗಿದಾಗ ಕನಸುಗಳು ಛಿದ್ರವಾಗಿ ಸತ್ಯದ ಧಕ್ಕೆ ಸತ್ಯಂ-ರಾಜುವಿಗೆ ಆಯಿತೇ? ಈಗ ಮುಂದೇನು? ಅವರ ಸುತ್ತಮುತ್ತಲಿದ್ದವರ ಗತಿಯೇನು? ಅವರಿಗಾಗಿ ಡೆಡ್‍ಲೈನುಗಳೆಂದು ಹಗಲು-ರಾತ್ರೆ ಕೆಲಸ ಮಾಡಿದವರ ಕನಸುಗಳ ಗತಿಯೇನು? ಬರೇ "ನನ್ನನ್ನು ಕ್ಷಮಿಸಿ, ನಾನು ರಾಜೀನಾಮೆ ಕೊಡುತ್ತಿದ್ದೇನೆ, ದೇಶದ ಕಾನೂನಿಗೆ ನನ್ನನ್ನು ಒಪ್ಪಿಸಿಕೊಳ್ಳುತ್ತಿದ್ದೇನೆ" ಅಂದರೆ ಸಾಕೇ? ಅಲ್ಲಿಗೆ ರಾಜುವಿನ ಜವಾಬ್ದಾರಿ ಮುಗಿಯಿತೇ? ಹೈದರಾಬಾದಿನಲ್ಲೇ ಅಡಗಿ ಯಾರಿಗೂ ತಮ್ಮ ಮುಖ ತೋರಿಸಲಾಗದ ಪರಿಸ್ಥಿತಿಯಲ್ಲಿರುವ ರಾಜುವಿನ ಮನಸ್ಸಿನಲ್ಲಿ ತಮ್ಮ ಅದ್ಭುತ ಜೀವನವನ್ನು ಹಿಟ್ ವಿಕೆಟ್ ಮಾಡಿಕೊಂಡ ರೀತಿಯನ್ನು ಕಂಡು ಚಕಿತರಾಗಿ ದಿಗ್ಭ್ರಾಂತರಾಗಿರಬಹುದು.

ಮೇಂಡು ರಾಮ್ ಮೋಹನ್ ರಾವ್ರಾಜುವಿನ ಕಥೆ ಹಾಗಿರಲಿ. ಅದರ ಜೊತೆಜೊತೆಗೇ ಇರುವ ಮೇಂಡು ರಾಮ್ ಮೋಹನ್ ರಾವ್ [ಅಥವಾ ನಾವೆಲ್ಲರೂ ಪ್ರೀತಿಯಿಂದ ಸಂಬೋಧಿಸುತ್ತಿದ್ದ ಎಂ.ಆರ್] ಅವರ ಗತಿ ನೋಡಿ - ಸತ್ಯಂ ಸಂಸ್ಥೆಯ ಬೋರ್ಡಿನಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದ ಎಂ.ಆರ್ ಸತ್ಯಂನಿಂದ ರಾಜೀನಾಮೆ ಕೊಟ್ಟಿದ್ದಲ್ಲದೇ ತಾವು ಮುಖ್ಯಸ್ಥರಾಗಿದ್ದ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್‌ನ ಕೆಲಸವನ್ನೂ ಕಳೆದುಕೊಳ್ಳಬೇಕಾಯಿತು. ನಾನು ಐಐಎಂಬಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಂ.ಆರ್ ನಮಗೆ ಪಾಠ ಮಾಡುತ್ತಿದ್ದರು. ಆಗಿನ ದಿನಗಳಲ್ಲಿ ಆರು ತಿಂಗಳು ನ್ಯೂಯಾರ್ಕ್ ಮತ್ತು ಆರು ತಿಂಗಳು ಭಾರತದಲ್ಲಿರುತ್ತಿದ್ದ ಎಂ.ಆರ್ ತಮ್ಮ ಪ್ರವಚನದ ವಿಷಯವಾದ ಆಪರೇಷನ್ಸ್ ರಿಸರ್ಚ್ ಮತ್ತು ಗಣಿತ ಶಾಸ್ತ್ರದಲ್ಲಿ ಮೇಧಾವಿ ಅನ್ನುವುದರಲ್ಲಿ ಅನುಮಾನವಿರಲಿಲ್ಲ. ಹೆಚ್ಚು ಮಾತನಾಡದೇ ಸದಾ ಹಸನ್ಮುಖಿಯಾಗಿರುತ್ತಿದ್ದ ಎಂ.ಆರ್.ಗೆ ಬಹುಶಃ ಗಣಿತದಲ್ಲಿ ಮಂದಮತಿಯಾಗಿದ್ದ ನನ್ನಂತಹ ವಿದ್ಯಾರ್ಥಿಗಳಿಗೆ ಪಾಠಮಾಡುವುದೂ ಚಡಪಡಿಕೆಯ ವಿಷಯವಾಗಿತ್ತೆನ್ನಿಸುತ್ತದೆ, ಹೀಗಾಗಿ ನಾಲ್ಕಾರು ಬುದ್ಧಿವಂತರನ್ನು ಹೆಕ್ಕಿ ಅವರನ್ನುದ್ದೇಶಿಸಿ ಪಾಠ ಮಾಡುತ್ತಿದ್ದರು - ನಾವುಗಳೆಲ್ಲಾ ಆ ಬುದ್ಧಿವಂತರಿಂದ ಹಾಸ್ಟೆಲಿನಲ್ಲಿ ಕಲಿಯುತ್ತಿದ್ದೆವು. ಎಂ.ಆರ್. ಯಾವಾಗಲೂ ತಮ್ಮ ಪೇಪರುಗಳು, ಗಣಿತ ತಿಳಿದ ತಮ್ಮ ಕೆಲವೇ ಜನರ ಮಿತ್ರವೃಂದದ ನಡುವೆಯಿರುತ್ತಿದ್ದರು. ಒಂದು ಥರದಲ್ಲಿ ಆತ ಮ್ಯಾನೇಜ್‌ಮೆಂಟು, ಕಂಪನಿಗಳು, ಸ್ಟ್ರಾಟಜಿ, ವ್ಯೂಹ, ಮಾರುಕಟ್ಟೆ -- ಈ ಎಲ್ಲದರಿಂದ ಹಾಗೂ ಐಐಎಂನ ಆಂತರಿಕ ರಾಜಕೀಯದಿಂದಲೂ ದೂರವಾಗಿ ಇದ್ದುಬಿಟ್ಟಿದ್ದರು. ಅದೇ ಕಾಲದಲ್ಲಿ ಅವರು ನಮಗಿಂತ ಕೆಲವೇ ವರ್ಷಗಳು ಕಿರಿಯನಾಗಿದ್ದ ತಮ್ಮ ಮಗನ ಸಾವನ್ನೂ ನೋಡಬೇಕಾಯಿತು. ಈ ಎಲ್ಲ ಹಿನ್ನೆಲೆಯನ್ನು ನಾನು ಹೇಳುತ್ತಿರುವುದಕ್ಕೆ ಕಾರಣವಿಷ್ಟೇ. ಎಂ.ಆರ್. ಯಾವುದೇ ಸಂಸ್ಥೆಯ ಬೋರ್ಡಿನಲ್ಲಿ ಕೂತು ಅದರ ಸ್ಟ್ರಾಟಜಿಯ ಬಗ್ಗೆ ಚರ್ಚಿಸುವುದನ್ನು ನನಗೆ ಊಹಿಸಲಿಕ್ಕೂ ಸಾಧ್ಯವಿಲ್ಲ. ಹಾಗೆ ನೋಡಿದರೆ ಎಂ.ಆರ್.ಗೆ ಇದ್ದ ಗೆಳೆಯರಲ್ಲಿ ಅತ್ಯಂತ ಸಮೀಪದವರೆಂದರೆ ಐಐಎಸ್ಸಿಯ ಕಂಪ್ಯೂಟರ್ ವಿಭಾಗದ ವಿಜಯ ಚಂದ್ರು ಅವರಾಗಿದ್ದರು.

ಹೀಗಿದ್ದ ಎಂ.ಆರ್. ಕೆಲವರ್ಷಗಳ ನಂತರ ಐಐಎಂನ ನಿರ್ದೇಶಕರಾದಾಗ ಬಹಳಷ್ಟು ಮಂದಿ ಅವಾಕ್ಕಾದರು. ಅವರನ್ನು ನಿರ್ದೇಶಕರನ್ನಾಗಿ ಸರಕಾರ ಆಯ್ಕೆ ಮಾಡಿದ್ದು ಒಂದು ಆಶ್ಚರ್ಯವಾದರೆ, ಅದನ್ನು ಅವರು ಒಪ್ಪಿದ್ದು ಮತ್ತೊಂದು ಆಶ್ಚರ್ಯವಾಗಿತ್ತು. ಆ ನಂತರ ಎಂ.ಆರ್ ಬಗ್ಗೆ ಇದ್ದ ಜೋಕೆಂದರೆ - ನಿರ್ದೇಶಕ ಎಂ.ಆರ್.ಗೂ ಪ್ರೊಫೆಸರ್ ಎಂ.ಆರ್.ಗೂ ವ್ಯತ್ಯಾಸವೇನು ಅನ್ನುವ ಪ್ರಶ್ನೆ - ಅದಕ್ಕೆ ಉತ್ತರ ಎಂ.ಆರ್. ಪ್ರೊಫೆಸರ್ ಆಗಿದ್ದಾಗ ಕಾರಿನ ಮುಂದಿನ ಸೀಟಿನಲ್ಲಿ ಕೂತು ತಮ್ಮ ಕಾರನ್ನು ತಾವೇ ಚಲಾಯಿಸುತ್ತಿದ್ದರು, ಈಗ ಹಿಂದೆ ಕೂಡುತ್ತಾರೆ. ಅರ್ಥಾತ್ ಎಂ.ಆರ್ ಆಡಳಿತಕ್ಕಿಂತ ಗಣಿತ ಮತ್ತು ಆಪರೇಷನ್ ರಿಸರ್ಚಿನಲ್ಲಿಯೇ ಹೆಚ್ಚಿನ ಆಸಕ್ತಿ ತೋರುತ್ತಿದ್ದರು. ಆ ಸಮಯದಲ್ಲಿ ಗಣಿತ ಶಾಸ್ತ್ರದ ಪ್ರಮುಖ ಪ್ರಶಸ್ತಿಯಾದ ಫುಲ್ಕರ್‍ಸನ್ ಪ್ರಶಸ್ತಿ ಎಂ.ಆರ್. ಪಾಲಿಗೆ ದಕ್ಕಿತ್ತು. ಐಐಎಂನಿಂದ ನಿವೃತ್ತರಾದಾಗ ಮತ್ತೆ ಎಂ.ಆರ್ ಜೀವನವನ್ನು ಆರಾಮವಾಗಿ ಕಳೆಯುತ್ತಾರೆಂದು ಎಣಿಸಿದ್ದವರಿಗೆ ಆಶ್ಚರ್ಯ ಕಾದಿತ್ತು. ಆತ ಹೊಸದಾಗಿ ಪ್ರಾರಂಭವಾದ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್‍ನ [ಡೀನ್] ಮುಖ್ಯಸ್ಥರಾಗಿ ಕೆಲಸ ಕೈಗೊಂಡರು. ಹೀಗೆ, ಏನನ್ನೂ ಬಯಸದೆಯೇ ತಮ್ಮ ಗಣಿತದಲ್ಲಿ ಮುಳುಗುತ್ತಾರೆಂದು ಎಣಿಸಿದ್ದ ಎಂ.ಆರ್.ಗೂ ಕುರ್ಚಿಯ, ಅದರ ಮೇಲೆ ಕೂಡುವ ವ್ಯಾಮೋಹ ಇತ್ತೆನ್ನುವುದು ನಮಗೆ ವಿಚಿತ್ರ ರೀತಿಯಲ್ಲಿ ತಟ್ಟಿದ ಸತ್ಯ. ಸತ್ಯಂ ರಾಜುವಿಗೂ ಈ ಥರದ ಯಾವುದೋ ನಶೆಯಿದ್ದಿರಬಹುದು. ಎಂ.ಆರ್. ಅವರ ಬಳಿ ಕಾಣದೇ ಸುಪ್ತವಾಗಿದ್ದಂತಹ ಈ ನಶೆ ಅವರನ್ನು ಬಲಿತೆಗೆದುಕೊಂಡಿರಬಹುದು.
ನಾನು ಎಂ.ಆರ್. ಬಗ್ಗೆ ದೀರ್ಘವಾಗಿ ಬರೆದದ್ದಕ್ಕೆ ಕಾರಣವಿದೆ. ಈ ಇಂಥ ಎಂ.ಆರ್ ಸತ್ಯಂ ಸಂಸ್ಥೆಯ ಬೋರ್ಡಿನ ಸ್ಥಾನವನ್ನು ಒಪ್ಪಿದ್ದು ಅವರು ನಿರ್ದೇಶಕರ ಸ್ಥಾನ/ಡೀನ್ ಸ್ಥಾನ ಒಪ್ಪಿದಂತೆಯೇ, ಒಂದು ಪೊಳ್ಳು ಘನತೆಗಾಗಿ ಇದ್ದಿರಬಹುದು. ಇಂಥಹ ಪೊಳ್ಳು ಘನತೆಗೆ ನಾವೆಲ್ಲರೂ ಆಗಾಗ ಬಲಿಯಾಗುತ್ತೇವೆ. ಈ ಘನತೆಯ ನಡುವೆ ಅವರು ಸತ್ಯಂ ಬೋರ್ಡಿನಲ್ಲಿ ಸ್ಥಾನ ಪಡೆದದ್ದಲ್ಲದೇ ಆ ಸಂಸ್ಥೆಯ ಆಡಿಟ್ ಕಮಿಟಿಯ ನೇತೃತ್ವವನ್ನೂ, ಹಾಗೂ ಕೆಲದಿನಗಳ ಹಿಂದೆ ಸತ್ಯಂ ಸಂಸ್ಥೆ ಪ್ರಯತ್ನಿಸಿದ ಮೈಟಾಸ್ ಸಂಸ್ಥೆಯ ವಿಲೀನವನ್ನು ಚರ್ಚಿಸಿದ ಬೋರ್ಡ್ ಮೀಟಿಂಗಿನ ನೇತೃತ್ವವನ್ನೂ ಆತ ವಹಿಸಿದ್ದರು. ಈಗ ಎಲ್ಲ ದಿಕ್ಕುಗಳಿಂದಲೂ ಸ್ವತಂತ್ರ ನಿರ್ದೇಶಕರ ಪಾತ್ರದ ಬಗ್ಗೆಗಿನ ಅನುಮಾನಗಳು ಬರುತ್ತಿರುವ ಸಂದರ್ಭದಲ್ಲಿ ಎಂ.ಆರ್. ಅವರ ತಲೆದಂಡವನ್ನು ಕೇಳುವುದು ಸಹಜವೇ ಆಗಿದೆ. ಆದರೆ ಫುಲ್ಕರ್‍ಸನ್ ಪ್ರಶಸ್ತಿ ಪಡೆದ ಘನ ಗಣಿತಜ್ಞನ ಕಾರ್ಯಕಾಲದ ಅಂತ್ಯ ಈ ಕಪ್ಪುನಿಶಾನೆಯಿಂದ ಪೂರ್ಣಗೊಳ್ಳಬೇಕಿತ್ತೇ? ಸ್ವತಂತ್ರ ನಿರ್ದೇಶಕರಿಗೆ ಏನೂ ತಿಳಿದಿರಲಿಲ್ಲವೆಂದು ರಾಜು ಹೇಳುತ್ತಾರೆ. ಅದು ಹೇಗೆ? ಹಾಗಾದರೆ ಸ್ವತಂತ್ರ ನಿರ್ದೇಶಕರು ಆ ಸ್ಥಾನದಲ್ಲಿ ಇದ್ದದ್ದಾದರೂ ಏಕೆ ಎನ್ನುವ ಪ್ರಶ್ನೆಯು ಸಹಜವಾಗಿ ಉದ್ಭವವಾಗುತ್ತದೆ. ಆದರೆ ಕಂಪನಿಯ ಬೋರ್ಡಿನಲ್ಲಿ ಸ್ವತಂತ್ರ ನಿರ್ದೇಶಕನಾಗಿ ಕೂತು ಅನುಭವವಿರುವುದರಿಂದ ಎಂ.ಆರ್ ಈ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರಬಹುದಾದ ಪರಿಸ್ಥಿತಿಯ ಹಿನ್ನೆಲೆಯನ್ನು ನಾನು ಊಹಿಸಬಲ್ಲೆ. [ಹಾಗೆಂದು ಎಂ.ಆರ್.ಗೆ ಏನೂ ಗೊತ್ತಿಲ್ಲವೆಂದು ನಾನು ಖಚಿತವಾಗಿ ಹೇಳುತ್ತಿಲ್ಲ, ಆದರೆ ಆ ಸ್ಥಾನದ ಪರಿಮಿತಿಗಳನ್ನು ವಿವರಿಸಲು ಪ್ರಯತ್ನಿಸುತ್ತಿದ್ದೇನೆ ಅಷ್ಟೇ]. ಬಹುಶಃ ಮೈಟಾಸ್ ವಿಲೀನದ ವಿಷಯ ಬರುವುದಕ್ಕೆ ಮೊದಲು ರಾಜು ಮತ್ತು ಸಂಸ್ಥೆಗೆ ಸಂಬಂಧಿಸಿದ ಜನ ಎಂ.ಆರ್. ಮತ್ತು ಇತರ ನಿರ್ದೇಶಕರ ಮುಂದೆ ಈ ವಿಲೀನದಿಂದ ಸಂಸ್ಥೆಗೆ ಆಗಬಹುದಾದ ಲಾಭದ ಬಗ್ಗೆ ವಿವರಿಸಿರಲಿಕ್ಕೂ ಸಾಕು. ಅವರ ವಾದಸರಣಿಯನ್ನು ಊಹಿಸಬೇಕಾದರೆ ಅದು ಹೀಗಿದ್ದಿರಬಹುದು:
ಸತ್ಯಂ ೫೦೦೦ ಕೋಟಿಗಳಿಗೂ ಹೆಚ್ಚಿನ ಹಣವನ್ನು ಕೈಯಲ್ಲಿ ಹಿಡಿದು ಕೂತಿದೆ [ಸೆಪ್ಟಂಬರ್ ಲೆಕ್ಕ ಇದನ್ನು ತೋರಿಸುತ್ತಿತ್ತು, ಆದರೆ ಆ ಹಣ ನಿಜಕ್ಕೂ ಇಲ್ಲವೆಂಬುದು ಎಂ.ಆರ್. ಮತ್ತು ಇತರ ನಿರ್ದೇಶಕರಿಗೆ ತಿಳಿದಿರಲಿಲ್ಲವೆನ್ನುವುದನ್ನು ಈ ಕ್ಷಣಕ್ಕೆ ನಂಬೋಣ]
ಮೈಟಾಸ್ ಮನೆಗಳುಈ ಹಣವನ್ನು ಇಲ್ಲವೇ ಷೇರುದಾರರಿಗೆ ಡಿವಿಡೆಂಡ್ ರೂಪದಲ್ಲಿ ವಾಪಸ್ಸು ಮಾಡಬೇಕು, ಇಲ್ಲವೇ ಅದನ್ನು ಎಲ್ಲಾದರೂ ಹೂಡಬೇಕು. ಹಣವನ್ನು ಹೂಡಲು/ ಕೊಳ್ಳಲು ಒಳ್ಳೆಯ ಸಾಫ್ಟ್ ವೇರ್ ಸಂಸ್ಥೆಗಳು ಕಾಣುತ್ತಿಲ್ಲ. ಆದರೆ ರಿಯಲ್ ಎಸ್ಟೇಟಿನಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು. ಜೊತೆಗೆ ಸತ್ಯಂ ಸಂಸಾರದವರೇ ನಡೆಸುತ್ತಿರುವ ಮೈಟಾಸ್ ಸಂಸ್ಥೆಗಳು ಇವೆ. ಅವುಗಳ ಕೈಯಲ್ಲಿ ಒಳ್ಳೆಯ [ಹೈದರಾಬಾದ್ ಮೆಟ್ರೋವನ್ನೊಳಗೊಂಡು] ಯೋಜನೆಗಳಿವೆ. ಹೀಗಾಗಿ ಈ ಸಂಸ್ಥೆಗಳನ್ನು ಹೊರಗಿನವರಿಂದ ಬೆಲೆ ಕಟ್ಟಿಸಿ ವಿಲೀನಗೊಳಿಸುವುದರಲ್ಲಿ ಅರ್ಥವಿದೆ. ಆದರೆ ಮೈಟಸ್ ಸಂಸ್ಥೆ ನಮ್ಮದೇ ಆದ್ದರಿಂದ ಆ ಮೀಟಿಂಗಿನಲ್ಲಿ ನಾವು ಪಾಲ್ಗೊಳ್ಳುವುದಿಲ್ಲ. ನೀವೇ ಅದರ ನಾಯಕತ್ವ ವಹಿಸಬೇಕು ಎಂದೆಲ್ಲಾ ಹೇಳಿ ಗಣಿತಜ್ಞ ಎಂ.ಆರ್. ಅವರನ್ನು ಒಪ್ಪಿಸಿರಬಹುದು. ಎಂ.ಆರ್. ಈ ವಾದಸರಣಿಯನ್ನು ನಂಬಿರಲಿಕ್ಕೂ ಸಾಕು. ಹೀಗೆ ಸ್ವತಂತ್ರ ನಿರ್ದೇಶಕರ ಬಳಿ ಬರುವ ಮಾಹಿತಿ ಮ್ಯಾನೇಜ್‍ಮೆಂಟಿನವರು ಕೊಡುವುದೇ ಆಗಿರುತ್ತದೆ ಎನ್ನುವುದನ್ನು ನಾವು ಮನಗಾಣಬೇಕು.
ಆಡಿಟ್ [ಲೆಕ್ಕ ಪರಿಶೋಧನೆಯ] ವಿಷಯದಲ್ಲೂ ಇದು ನಿಜ. ಲೆಕ್ಕ ಪರಿಶೋಧಕರು ಕೊಡುವ ಲೆಕ್ಕದ ಆಧಾರದ ಮೇಲೆ ಆಡಿಟ್ ಕಮಿಟಿ ತನ್ನ ಚರ್ಚೆಯನ್ನು ನಿರ್ವಹಿಸುತ್ತದೆ. ಇಲ್ಲಿ ಕೇಳಬೇಕಾದ ಪ್ರಶ್ನೆಯೆಂದರೆ ಲೆಕ್ಕ ಪರಿಶೋಧಕರೂ ಹಾಗೂ ಆಡಿಟ್ ಕಮಿಟಿಯವರೂ ಮ್ಯಾನೇಜ್‍ಮೆಂಟಿನವರ ಗೈರು ಹಾಜರಿಯಲ್ಲಿ ಲೆಕ್ಕಪತ್ರದ ಚರ್ಚೆ ನಡೆಸಿದರೇ? ಪರಿಶೋಧಕರು ತಮ್ಮ ಗ್ರಹಿಕೆಯನ್ನು ಪ್ರಾಮಾಣಿಕವಾಗಿ ಕಮಿಟಿಗೆ ಒಪ್ಪಿಸಿದರೇ? ಈ ಎಲ್ಲವೂ ಹಲವು ಘಂಟೆಗಳ ಕಾಲದಲ್ಲಿ ನಡೆಯಬೇಕೆನ್ನುವುದನ್ನು ನಾವು ಗಮನದಲ್ಲಿಡಬೇಕು. ಲೆಕ್ಕಪತ್ರವನ್ನು ಜಾಹೀರುಮಾಡುವ ದಿನ ಅನೇಕರು ಅದಕ್ಕಾಗಿ ಕಾಯುತ್ತಿರುತ್ತಾರೆ. ಲೆಕ್ಕ ಪತ್ರದ ಆಧಾರದ ಮೇಲೆ ಕಂಪನಿಯ ಷೇರಿನ ದರ ಏರುವುದೂ ಇಳಿಯುವುದರ ಪ್ರಕ್ರಿಯೆಯಾಗಬಹುದು. ಹೀಗಾಗಿ ಕಂಪನಿಯ ಪರಿಣಾಮ ಹೆಚ್ಚುಕಾಲ ನಿರ್ದೇಶಕರ ಕೈಯಲ್ಲಿ ಇರುವುದಕ್ಕೆ ಅವರ ಕೈಯಿಂದ ಜಾರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿಯೇ ಮಿಕ್ಕೆಲ್ಲ ಕಾಗದ ಪತ್ರಗಳನ್ನು ಮುಂಚಿತವಾಗಿ ನಿರ್ದೇಶಕರಿಗೆ ಕಳಿಸಿದರೂ ಲೆಕ್ಕಪತ್ರ ಮಾತ್ರ ದಸ್ತಕತ್ತಿನ ದಿನ ಮೇಜಿನ ಮೇಲೆ ಪ್ರತ್ಯಕ್ಷವಾಗುತ್ತದೆ. ಸಾಲದ್ದಕ್ಕೆ ಪತ್ರಿಕಾಗೋಷ್ಠಿಯ ಸಮಯದ ಮುಂಚೆ ಎಲ್ಲವನ್ನೂ ಚರ್ಚಿಸಿ ಮುಗಿಸಬೇಕು. ಹೀಗಾಗಿ ನಿರ್ದೇಶಕರಿಗೆ ಏನಾದರೂ ಮಾಡಬೇಕೆಂದರೂ ಸಮಯವಿರುವುದಿಲ್ಲ. ಸಾಮಾನ್ಯವಾಗಿ ಈ ಲೆಕ್ಕವನ್ನು ಪರಿಶೋಧಕರು ಕೂಲಂಕಶವಾಗಿ ನೋಡಿರುತ್ತಾರಾದ್ದರಿಂದ, ಅವರ ಮಾತಿನ ಆಧಾರದ ಮೇಲೆ ಎಲ್ಲವೂ ಪಾಸಾಗುತ್ತದೆ. ಆದರೆ ಬೇಲಿಯೇ ಹೊಲವನ್ನು ಮೇಯ್ದರೆ? ಹೈದರಾಬಾದಿನಲ್ಲಿ ಪ್ರಾರಂಭವಾಗಿ ಕುಸಿದು ಬಿದ್ದ ಗ್ಲೋಬಲ್ ಟ್ರಸ್ಟ್ ಬ್ಯಾಂಕಿನ ಲೆಕ್ಕ ಪರಿಶೋಧಕರಾದ ಪ್ರೈಸ್ ವಾಟರ್‌ಹೌಸ್ ಸಂಸ್ಥೆಯೇ ಸತ್ಯಂನ ಪರಿಶೋಧಕರಾಗಿದ್ದರು ಅನ್ನುವುದರಲ್ಲಿ ಮರ್ಮವಿದೆಯೇ?


ಕೃಷ್ಣ ಪಾಲೆಪುಯಾವುದೇ ಕಾನೂನು ಮನುಷ್ಯನ ನಿಯತ್ತನ್ನು ನಿಯಂತ್ರಿಸುವುದಿಲ್ಲ. ನಿಯತ್ತೇ ನೆಟ್ಟಗಿಲ್ಲದಿದ್ದಾಗ ಕಾನೂನು ಮಾಡುವುದು ಪೋಸ್ಟ್ ಮಾರ್ಟೆಂ ಮಾತ್ರ. ಸತ್ಯಂ ಕಾಂಡದಲ್ಲಿ ಬಹುಶಃ ನಿಯತ್ತು ನೆಟ್ಟಗಿರಲಿಲ್ಲವೇನೋ. ಹೀಗಾಗಿ ರಾಜು ತಾವು ಮುಳುಗುತ್ತಲೇ, ಎಂ.ಆರ್. ಅಂತಹ ಮೇಧಾವಿಗಳನ್ನೂ ತಮ್ಮೊಡನೆ ಕರೆದೊಯ್ಯುತ್ತಿದ್ದಾರೆ. ಹಾಗೆಯೇ ಕೃಷ್ಣ ಪಾಲೆಪು ಎನ್ನುವ ಹಾರ್ವರ್ಡ್ ಪ್ರೊಫೆಸರರ ಪಾತ್ರವೂ ಕುತೂಹಲದ್ದು. ಪಾಲೆಪು ಸತ್ಯಂ ಬೋರ್ಡಿನಲ್ಲಿರುವುದಲ್ಲದೇ ಆ ಸಂಸ್ಥೆಗೆ ಕನ್ಸಲ್ಟಿಂಗ್ ಸೇವೆಗಳನ್ನೂ ಒದಗಿಸಿದ್ದರಂತೆ. ಇದೂ ವಿಚಿತ್ರವಾದ ಪರಿಪಾಠ. ಪಾಲೆಪು ಬೋರ್ಡಿನಲ್ಲಿರುತ್ತಲೇ ಹೇಗೆ ದೊಡ್ಡ ಮೊತ್ತದ ಕನ್ಸಲ್ಟಿಂಗ್ ಪಡೆಯಲು ಸಾಧ್ಯ? ಹೀಗೆ ನಡೆದಾಗ "ಕಾರ್ಪೊರೇಟ್ ಗವರ್ನೆನ್ಸ್" ಗಾಗಿ ಪ್ರಶಸ್ತಿ ಬರುವುದು ವಿರೋಧಾಭಾಸವೇ ಸರಿ! ಅಮೆರಿಕದ ಕಾನೂನಿನನುಸಾರ ಪಾಲೆಪು ಅವರನ್ನು "ಸ್ವತಂತ್ರ" ನಿರ್ದೇಶಕರು ಎಂದು ಹೇಳುವುದು ಸಾಧ್ಯವಿಲ್ಲ. ಈಗ ಅಮೆರಿಕದಲ್ಲಿ ಹಾಕಿರುವ ಕೇಸುಗಳ ಭಾರದಲ್ಲಿ ಪಾಲೆಪು ಮುಳುಗಿ ಅದನ್ನು ಹೋರಾಡುವುದರಲ್ಲೇ ಮುಂದಿನ ಹಲ ವರ್ಷಗಳನ್ನು ಖರ್ಚು ಮಾಡಬೇಕಾಗುತ್ತದೆ.

ಸ್ವತಂತ್ರ ನಿರ್ದೇಶಕರು ಸಂಸ್ಥೆಯಲ್ಲಿ ಏನು ಮಾಡಬಹುದು? ಹೆಚ್ಚೆಂದರೆ ನಾಲ್ಕಾರು ಬೋರ್ಡ್ ಮೀಟಿಂಗುಗಳಿಗೆ ಹೋಗಿ, ಒಂದೆರಡು ಕಮಿಟಿಗಳಲ್ಲಿ ಕೂತು ಬರಬಹುದು. ಉದಾಹರಣೆಗೆ ತಮ್ಮ ಸಂಸ್ಥೆ ತನ್ನ ದಾಖಲೆಗಳನ್ನು ಸಮಯಕ್ಕನುಸಾರವಾಗಿ ರಿಜಿಸ್ಟ್ರಾರಿಗೆ ಸಲ್ಲಿಸಿದೆ, ಜನತೆಯಿಂದ ಯಾವ ಹೂಡಿಕೆಗಳನ್ನೂ ತೆಗೆದುಕೊಂಡಿಲ್ಲ ಎನ್ನುವ ಪತ್ರವನ್ನು ಪ್ರತೀ ವರ್ಷ ಈ ನಿರ್ದೇಶಕರು ಸಲ್ಲಿಸಬೇಕು. ಆ ಪತ್ರಕ್ಕೆ ಆಧಾರ ಸಂಸ್ಥೆಯಿಂದ ಇವೆಲ್ಲ ನಡೆದಿದೆ ಅನ್ನುವ ಘೋಷಣಾ ಪತ್ರವಾಗಿರುತ್ತದೆ. ಆ ಘೋಷಣಾ ಪತ್ರವೇ ಸುಳ್ಳಾದರೆ? ಎಷ್ಟರ ಮಟ್ಟಿಗೆ ನಿರ್ದೇಶಕರು ಈ ಎಲ್ಲವನ್ನೂ ಪರಿಶೀಲಿಸಬಲ್ಲರು? 

ಸ್ವತಂತ್ರ ನಿರ್ದೇಶಕರು ಎಷ್ಟು ಸ್ವತಂತ್ರರು ಅನ್ನುವುದೂ ಒಂದು ಪ್ರಶ್ನೆ. ಹಲವು ಲಕ್ಷಗಳ ಸಿಟ್ಟಿಂಗ್ ಫೀಸು ಮತ್ತು ಸತ್ಯಂ ಕೇಸಿನಲ್ಲಿ ಪಾಲೆಪುಗೆ ನೀಡುತ್ತಿದ್ದ ಕೋಟಿಗಟ್ಟಲೆ ಕಂಸಲ್ಟೆನ್ಸಿಯನ್ನು ಬಿಟ್ಟುಕೊಡಬೇಕಾಗಿ ಬರಬೇಕಾದ ಪರಿಸ್ಥಿತಿಯನ್ನು ಉಂಟುಮಾಡಬಹುದಾದ ಕಷ್ಟದ ಪ್ರಶ್ನೆಗಳನ್ನು ಈ ನಿರ್ದೇಶಕರು ಯಾಕೆ ಕೇಳುತ್ತಾರೆ? ಅವರಿಗೆ ಸಿಟ್ಟಿಂಗ್ ಫೀಸು ಕೊಡದಿದ್ದಲ್ಲಿ ಇಲ್ಲಿ ಸಮಯ ವ್ಯಯ ಮಾಡಲು ಇರಬಹುದಾದ ಪ್ರೇರಣೆಯಾದರೂ ಏನು? [ಸತ್ಯಂ ವಿಷಯಕ್ಕೆ ಬಂದಾಗ - ಇಡೀ ವಿಶ್ವದಲ್ಲಿ ಕೆಲಸ ಮಾಡುವ ಸಂಸ್ಥೆಯ ಸ್ವತಂತ್ರ ನಿರ್ದೇಶಕರು - ವಿನೋದ್ ಧಾಮ್ ಹೊರತುಪಡಿಸಿ - ಎಲ್ಲರೂ ತೆಲುಗರೇ ಆಗಿದ್ದರೆನ್ನುವುದು ಕೇವಲ ಕಾಕತಾಳೀಯವಿರಬಹುದು] ಈ ಗೋಜಲನ್ನು ಬಿಡಿಸುವುದು ಸುಲಭದ ಮಾತಲ್ಲ. ಮುಂದಿನ ದಿನಗಳಲ್ಲಿ ಸ್ವತಂತ್ರ ನಿರ್ದೇಶಕರ ಪಾತ್ರದ ಚರ್ಚೆ ದೀರ್ಘವಾಗಿ ನಡೆಯುವುದಿದೆ.

ಈ ಕಾಂಡ ಇಲ್ಲಿಗೇ ಮುಗಿಯುವುದಿಲ್ಲ. "ಪಿಕ್ಚರ್ ಅಭೀ ಬಾಕಿ ಹೈ ಮೇರೆ ದೋಸ್ತ್..." ಆದರೆ ಈ ಕಾಂಡ ಯಾವುದೋ ಉತ್ತುಂಗಕ್ಕೇರುವ ನಶೆಯನ್ನು ಹೊತ್ತ ಜನರ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಮೊದಲಿಗೆ ನಾನು ಟೆಂಡೂಲ್ಕರ್ ರನ್‍ಗಳನ್ನು ಸಂಪಾದಿಸುವ ನಶೆಯ ಬಗ್ಗೆ ಹೇಳಿದೆ. ಆ ನಶೆಯಿಂದ ಯಾರಿಗೂ ನಷ್ಟವಿಲ್ಲ, ಬದಲಿಗೆ ನಾವೆಲ್ಲಾ ಆ ಖುಷಿಯ ಭಾಗವಾಗಿ ಆನಂದಿಸುತ್ತೇವೆ. ಆದರೆ ರಾಜುವಿನ ನಶೆ - ಅದೇನೇ ಇದ್ದರೂ - ಐವತ್ತಮೂರು ಸಾವಿರ ಉದ್ಯೋಗಿಗಳ ಬದುಕಿನಲ್ಲಿ ಆತಂಕವನ್ನು ಉಂಟುಮಾಡಿ - ಎಂ.ಆರ್. ಅಂತಹ ಮೇಧಾವಿಗಳ ಜೀವನವನ್ನು ಊಹಿಸಿಯೇ ಇರದ ರೀತಿಯಲ್ಲಿ ಘಾತಗೊಳಿಸಿಬಿಟ್ಟಿದೆ. ಒಬ್ಬನ ನಶೆಗೆ ಇಷ್ಟೊಂದು ಜನ ಬೆಲೆ ತೆತ್ತಬೇಕಿರುವುದಕ್ಕಿಂತ ವಿಷಾದಕರ ವಿಷಯ ಬೇರೇನೂ ಇಲ್ಲ.



Monday, March 23, 2009

ಆತಂಕವಾದದ ಕಾಲದಲ್ಲಿ ಐಶಾರಾಮದ ಆತಂಕ

ಲೇಖಕರು ತಾಜ್ ನಿಂದ ತೆಗೆದ ಗೇಟ್ ವೇ ಚಿತ್ರ

"ಶ್ರೀಮಂತರ ಹಾಗೂ ಮೇಲ್ಮಧ್ಯಮವರ್ಗದವರ ಕೊಳಕು ಸಂಸ್ಕೃತಿಯ ದೊಡ್ಡ ಅಡ್ಡೆ ಲಿಯೋಪೋಲ್ಡ್ ಕೆಫೆ. ಬಿಯರಿನ ಅಮಲು ಇಳಿದು ಹೋದರೂ, ಐಶಾರಾಮಿ ಸಂಸ್ಕೃತಿಯ ಅಮಲು ಇಳಿಯುವಂತಿಲ್ಲ. ಸಿ. ಎಸ್. ಟಿ. ಯಿಂದ ಹೊರಡುವ ರೈಲು ಗಾಡಿಗಳಲ್ಲಿ ಮಲ್ಲಿಕಾ ಸಾರಾಭಾಯಿ, ಅಮೃತಾ ಪಟೇಲ್ ಹಾಗೂ ಎನ್.ಡಿ.ಡಿ.ಬಿಯ ಎಂಡಿ, ಟಿಕ್ಕು - ಯಾರೂ ಕಾಣಸಿಗುವುದಿಲ್ಲ. ಆ ಕರಾಳ ರಾತ್ರಿಯಂದು ರೈಲು ನಿಲ್ದಾಣದಲ್ಲಿದ್ದು ವಿವಿಧ ರೀತಿಯಲ್ಲಿ ತಪ್ಪಿಸಿ ಬಂದಿರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಹೆಸರಿಲ್ಲದ ಜನರ ಮುಖದಲ್ಲಿ ನಗೆಯಿದೆಯೋ ಇಲ್ಲವೋ ಗೊತ್ತಿಲ್ಲ. ಲಿಯೋಪೋಲ್ಡ್ ಕೆಫೆಯ ಅಮಲಿನ ರುಚಿಯಂತೂ ಅವರಿಗೆ ತಿಳಿದಿಲ್ಲ...." [ಅನಾಮಿಕ ಅತಿಥಿ]

ಈ ಹಿಂದೆ ನಾನು ತಾಜ್ ಬಗ್ಗೆ ಬರೆದಾಗಲೂ ಇಂಥದೊಂದು ಪ್ರತಿಕ್ರಿಯೆ ಬರಬಹುದು ಅನ್ನುವ ಅನುಮಾನವಿತ್ತು. ಸಾಮಾಜಿಕ/ಆರ್ಥಿಕ ಸ್ಥರದಲ್ಲಿ ಭಿನ್ನತೆಯಿರುವ ಸಮಸಮಾಜದ ಉಟೋಪಿಯಾದಲ್ಲಿ ಬದುಕದಿರುವ ನಿಜಜಗತ್ತಿನಲ್ಲಿ ಈ ರೀತಿಯಾದಂತಹ ಪ್ರತಿಕ್ರಿಯೆ ಬರುವುದು ಸಹಜವೂ ಹೌದು, ಸಮಂಜಸವೂ ಹೌದು. ಈ ಮಾತು, ಅದರ ಹಿನ್ನೆಲೆಗೆ, ಪ್ರತಿಕ್ರಿಯೆಯಾಗಿ ನಾನು ಯಾವ ಸ್ಪಷ್ಟ ನಿಲುವನ್ನೂ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೂ ಆ ಬಗ್ಗೆ ನನ್ನ ಅನುಮಾನಗಳನ್ನೂ, ಕಾಳಜಿಯನ್ನೂ, ಸಮಜಾಯಿಷಿಯನ್ನೂ, ಅಸಹಾಯಕತೆಯನ್ನೂ, ಅಷಾಢಭೂತಿತನವನ್ನೂ ಪ್ರಾಮಾಣಿಕವಾಗಿ ಮಂಡಿಸಲು ಸಿದ್ಧನಾಗಿದ್ದೇನೆ.

"ಇಷ್ಟುದಿನ ಆತಂಕ ನಮ್ಮನ್ನು ತಟ್ಟಿದಾಗ ಅದು ಒಂದು ಅಂಕಿಸಂಖ್ಯೆ ಮಾತ್ರವಾಗಿತ್ತು. ಈ ಬಾರಿ ಆ ಅಷ್ಟೂ ಅಂಕಿಗಳಿಗೆ ಒಂದು ಮುಖವೂ ಇದೆ. ಹೀಗಾಗಿಯೇ ಅದು ನಮ್ಮನ್ನು ಇನ್ನೂ ಹೆಚ್ಚಾಗಿ ತಟ್ಟುತ್ತಿದೆ." ಈ ವಾಕ್ಯ ನನ್ನ ಬರಹದ ಅಂತಿಮ ವಾಕ್ಯವಾಗಿತ್ತು. ಅದರಿಂದಲೇ ಪ್ರಾರಂಭಿಸುತ್ತೇನೆ. ಆ ಕರಾಳ ರಾತ್ರೆಯಂದು ಸಿ.ಎಸ್.ಟಿ.ಯಿಂದ ತಪ್ಪಿಸಿ ಬಂದ ಜನರ ಕಥೆಗಳು ನಮಗೆ ಪ್ರಾಪ್ತವಾಗಿಲ್ಲ. ಅಷ್ಟೇ ಏಕೆ ಅದಕ್ಕೆ ಮುನ್ನ ನಡೆದ ಅನೇಕ ಘಟನಾವಳಿಗಳ ಮುಖಚಹರೆ ನಮಗೆ ಗೊತ್ತೇ?

- ಮುಂಬಯಿಯ ಲೋಕಲ್ ರೈಲಿನಲ್ಲಿ ಬಾಂಬುಗಳು ಸ್ಫೋಟಗೊಂಡಾಗ ಬಹುಶಃ ಅಸುನೀಗಿದವರ ಸಂಖ್ಯೆ ತಾಜ್-ಒಬೆರಾಯ್‍ಗಿಂತ ಹೆಚ್ಚಿತ್ತು 
- ಅಹಮದಾಬಾದಿನಲ್ಲಿ ಸರಣಿಬಾಂಬುಗಳು ಸ್ಫೋಟಗೊಂಡಾಗ ನಮಗೆ ಹೀಗೇ ಅಸುನೀಗಿದವರ/ತಪ್ಪಿಸಿಕೊಂಡವರ ಕಥೆಗಳು ಬರಲಿಲ್ಲ.
-ಹೈದರಾಬಾದಿನ ಗೋಕುಲ್ ಚಾಟ್ ಭಂಡಾರದಲ್ಲಿ/ಲುಂಬಿಣಿ ಪಾರ್ಕಿನಲ್ಲಿ/ ಮಕ್ಕಾ ಮಸೀದಿಯಲ್ಲಿ ನಮಗೆ ಸಿಕ್ಕದ್ದು ಅಂಕಿಸಂಖ್ಯೆಯೇ ಹೊರತು ಮುಖಗಳಲ್ಲ.

ಹಾಗೆ ನೋಡಿದರೆ ತಾಜ್/ಒಬೇರಾಯ್ ಹೋಟೆಲಿನಲ್ಲಿ ಅಸುನೀಗಿದವರೆಲ್ಲರೂ ಐಷಾರಾಮಿ ಅಮಲಿನ ಶ್ರೀಮಂತರಲ್ಲ. ಅವರ ಹೆಸರುಗಳು ನಮಗೆ ತಿಳಿದಿಲ್ಲ. ಹಿಂದೂಸ್ತಾನ್ ಟೈಮ್ಸ್ ನಲ್ಲಿ ಈ ಹಲ್ಲೆಯಲ್ಲಿ ಅಸುನೀಗಿದವರ ಹೆಸರುಗಳ ಯಾದಿಯೊಂದಿಗೆ ಶ್ರದ್ಧಾಂಜಲಿಯೂ ಇತ್ತು. ಅಲ್ಲಿದ್ದ ಅನೇಕ ಹೆಸರುಗಳನ್ನು ನಾವು ಗುರುತಿಸಲು ಸಾಧ್ಯವಾಗಿಲ್ಲವಷ್ಟೇ ಅಲ್ಲ, ಅನೇಕರನ್ನು ‘ಅನಾಮಿಕ' ಎಂದೇ ಹೆಸರಿಸಲಾಗಿತ್ತು. ಅದೇ ರೀತಿಯಲ್ಲಿ ಅಮೃತಾ ಪಟೇಲ್ ಸಿ.ಎಸ್.ಟಿ.ಯಿಂದ ತಪ್ಪಿಸಿ ಬಂದಿದ್ದರೆ, ಅದು ಅವರ ಬಗ್ಗೆ ಈಗ ಉಂಟಾಗಿರುವ ಸುದ್ದಿಗಿಂತ ಹೆಚ್ಚಿನ ಸುದ್ದಿ ಮಾಡುತ್ತಿತ್ತು - ಆಕೆ ತಪ್ಪಿಸಿ ಬಂದ ಪರಿಯನ್ನು ವಿವರಿಸುವುದಲ್ಲದೇ, ಆಕೆ ಯಾಕೆ ಸಿ.ಎಸ್.ಟಿಯಲ್ಲಿದ್ದರು ಅನ್ನುವ ಕಥೆಯೂ ಸುದ್ದಿಗೆ ಗ್ರಾಸವಾಗುತ್ತಿತ್ತು.

ಇದು ಯಾಕೆ ಹೀಗೆ? ಒಂದು ಕ್ಷಣ ಆಲೋಚಿಸಿ ನೋಡೋಣ. ತಾಜ್, ಸಿ.ಎಸ್.ಟಿ, ಕಾಮಾ ಆಸ್ಪತ್ರೆ, ಒಬೆರಾಯ್ ಎಲ್ಲ ಜಾಗಗಳಲ್ಲೂ ಜನರನ್ನು ರಕ್ಷಿಸುವ, ಆತಂಕವಾದಿಗಳನ್ನು ಹಿಡಿಯುವ/ಕೊಲ್ಲುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವರೆಷ್ಟು? ಅಸುನೀಗಿದವರೆಷ್ಟು? ಅವರುಗಳಲ್ಲಿ ನಮಗೆ ತಿಳಿದಿರುವ ಹೆಸರುಗಳು ಯಾವುವು? - ಕರ್ಕರೆ, ಕಾಮ್ಟೆ, ಸಲಸ್ಕರ್, ಉನ್ನಿಕೃಷ್ಣನ್..... ಇವರೆಲ್ಲರೂ ತಾವಿದ್ದ ಘಟಕದ ಮಟ್ಟಿಗೆ ನಾಯಕತ್ವದ ಜವಾಬ್ದಾರಿ ಹೊತ್ತವರು. ಅನಾಮಿಕನಾಗಿರಬಹುದಾದ ನನಗೂ, ಅನಾಮಿಕ ಅತಿಥಿಗೂ, ಪತ್ರಿಕೆ ಓದುವ - ಸುದ್ದಿ ಗ್ರಹಿಸುವ ಅನೇಕರಿಗೆ ‘ಪರಿಚಯ'ವಾಗಿರಬಹುದಾದ ಜನರ ಬಗ್ಗೆ ಸುದ್ದಿಯಾಗುತ್ತದೆ. ಹೀಗಾಗಿಯೇ ಅಮಿತಾಭ್ ಬಚ್ಚನ್‍ಗೆ ಹೊಟ್ಟೆನೋವಾದರೆ ಅದು ಸುದ್ದಿ. ಕಾಲರಾ/ಪ್ಲೇಗಿನಿಂದ ಸಾವಿರಾರು ಮಂದಿ ಸತ್ತಾಗ ಅದು ಅಂಕಿ-ಸಂಖ್ಯೆ.

ಒಂದು ಮಾನವ ಜೀವ, ಒಂದು ಮಾನವ ಜೀವವೇ. ಮತ್ತೊಂದು ಜೀವ ಇನ್ನೊಂದಕ್ಕಿಂತ ಹೆಚ್ಚಿನ ಕಿಮ್ಮತ್ತಿನದಲ್ಲ ಅನ್ನುವುದನ್ನು ನಾವೆಲ್ಲರೂ ನಂಬುತ್ತೇವೆ, ಹಾಗೂ ಆ ಬಗ್ಗೆ ಭಾಷಣ ಕುಟ್ಟುತ್ತೇವೆ. ಆದರೆ ಇದು ನಿಜವೇ? ಇದು ನಿಜವೇ ಆಗಿದ್ದಲ್ಲಿ ‘ಬಾಡಿಗಾರ್ಡ್' ಅಥವಾ ‘ರಕ್ಷಕ'ರ ದಳಗಳೇ ಇರುತ್ತಿರಲಿಲ್ಲ. ಎಲ್ಲೋ ನಾವು ‘ಜೀವ'ದ ಸಮಾನತೆಯನ್ನು ಒಪ್ಪಿದರೂ, ಕೆಲವರ ಜೀವನ ಹೆಚ್ಚು ಕಿಮ್ಮತ್ತಿನದಾಗಿರುತ್ತದೆ ಅನ್ನುವುದನ್ನೂ ಚರ್ಚೆಯಿಲ್ಲದೇ ಸ್ವೀಕರಿಸಿದ್ದೇವೆ. ಹೆಚ್ಚು ಬಹಿರಂಗವಾಗಿ ಚರ್ಚಿಸಲು ಇದು ಮುಜುಗರದ ಮಾತಾಗುತ್ತದೆ. ಯಾರದೋ ಕೆಲವರ ಜೀವಕ್ಕೆ ಇತರರ ಜೀವನವನ್ನು ಅಡ್ಡವಾಗಿಟ್ಟು ರಕ್ಷಣೆಯನ್ನು ಈ ಸಮಾಜ ಒದಗಿಸುತ್ತದೆ. ಇದು ಯಾಕಿದ್ದಿರಬಹುದು? ಬಹುಶಃ ಇಂಥ ಕೆಲವು ಜೀವಗಳು ಬದುಕಿದ್ದರೆ ಒಟ್ಟಾರೆ ಸಮಾಜಕ್ಕೆ ಆಗುವ ಲಾಭವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸಮಾಜ ಅವರಿಗೆ ರಕ್ಷಣೆಯನ್ನು ಒದಗಿಸುತ್ತದೆ ಅನ್ನುವ ವಾದಸರಣಿಯನ್ನು ಒಪ್ಪಬೇಕಾಗುತ್ತದೇನೋ. ಕೆಲ ಮಾಜಿ ಪ್ರಧಾನ ಮಂತ್ರಿಗಳ/ರಾಜಕಾರಣಿಗಳ ಸ್ಪಷ್ಟ ಉದಾಹರಣೆಗಳನ್ನು ಕೊಟ್ಟು ಈ ರಕ್ಷಣೆಯ ವಾದವನ್ನು ತಳ್ಳಿಹಾಕುವುದು ಸಾಧ್ಯವಾಗಬಹುದಾದರೂ, ಈ ವಾದಸರಣಿಯನ್ನು ಪರಿಶೀಲಿಸುವುದು ಆಸಕ್ತಿಯ ವಿಷಯ. ಗಾಂಧೀಜಿಯನ್ನು ಬಡವರಾಗಿಡಲು ದೇಶ ಬಹಳಷ್ಟು ಖರ್ಚುಮಾಡಬೇಕಾಗಿದೆ ಎಂದು ಸರೋಜಿನೀ ದೇವಿ ಮಹಾತ್ಮನ ಕಾಲೆಳೆದಿದ್ದರಂತೆ. ಯೋಚಿಸಿ ನೋಡಿ, ಜನವರಿ ೩೦, ೧೯೪೮ರಂದು ಮಹಾತ್ಮನ ಜೀವ ಉಳಿದಿದ್ದರೆ ಅದರಿಂದ ಭಾರತದ ಹೆಚ್ಚಿನಂಶ ಜನತೆಗೆ ಕೆಡುಕಿಗಿಂತ ಒಳಿತೇ ಆಗುತ್ತಿತ್ತೇನೋ. ಅಕಸ್ಮಾತ್ ಮಹಾತ್ಮನ ಜೀವವನ್ನು ಉಳಿಸುವ ಯತ್ನದಲ್ಲಿ ಒಬ್ಬ ‘ಕಮಾಂಡೋ' ಶಹೀದನಾಗಿದ್ದರೆ - ಅವನ ತ್ಯಾಗ ಮೆಚ್ಚಿ ಬರೆಯಲ್ಪಡುತ್ತಿತ್ತಾದರೂ - ಆ ಜೀವಕ್ಕೆ ಮಹಾತ್ಮನ ಜೀವದಷ್ಟೇ ಕಿಮ್ಮತ್ತನ್ನು ಸಮಾಜ ಕಟ್ಟುತ್ತಿತ್ತೇ? ಗೊತ್ತಿಲ್ಲ.

ತಾಜ್ ಹೋಟೆಲಿನ, ಒಬೆರಾಯ್ ಹೋಟೆಲಿನ ಘಟನಾವಳಿ ಸಿ.ಎಸ್.ಟಿಗಿಂತ ಪ್ರಾಮುಖ್ಯತೆ ಪಡೆಯುವುದು ಮತ್ತೊಂದು ಕಾರಣಕ್ಕಾಗಿ. ಅಲ್ಲಿದ್ದ ‘ಗುರುತಿಸಬಲ್ಲ' ಜನರಿದ್ದ ಪರಿಸ್ಥಿತಿಯಿತ್ತು. ಸಹಜವಾಗಿ ಅವರಿಗೆ ಶ್ರೀಸಾಮಾನ್ಯರಿಗಿಂತ ಹೆಚ್ಚಿನ ರಕ್ಷಣೆ ಸಿಗುವ ಸಾಧ್ಯತೆಯಿತ್ತು. ವಿಮಾನದಲ್ಲಿ ಪ್ರಯಾಣಿಸುವವರಿಗೆ ಸಿಗುವ ಸುರಕ್ಷತೆಯ ಮುಂದೆ ರೈಲಿನಲ್ಲಿ ಪ್ರಾಯಾಣಿಸುವವರಿಗೆ ಯಾವುದೂ ಸುರಕ್ಷತೆಯಿಲ್ಲವೆನ್ನಬೇಕು. ಬಸ್ಸಿನಲ್ಲಿ ಪ್ರಾಯಾಣಿಸುವವರಿಗೆ ಅದಕ್ಕೂ ಕಡಿಮೆ ಸುರಕ್ಷತೆ. ತಾಜ್ ಹೋಟೆಲಿನಲ್ಲಿ ಇರಬಹುದಾದ ‘ಐಷಾರಾಮಿ' ಜನರಿಗೆ ಈ ಸುರಕ್ಷತೆಯನ್ನು ಖಾಸಗಿಯಾಗಿ ಅಥವಾ ಸರಕಾರದಿಂದ ಪಡೆಯುವ ಸಾಧ್ಯತೆ ಸಾಮಾನ್ಯರಿಗಿಂತ ಹೆಚ್ಚೆನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಅಂಥ ಜನರ ಮೇಲೆ ಹಲ್ಲೆ ನಡೆದಾಗ, ಅದು ಸಾಮಾನ್ಯಕ್ಕಿಂತ ದೊಡ್ಡ ಸುದ್ದಿಯಾಗುತ್ತದೆ. ಯಾಕೆಂದರೆ ಅಭೇದ್ಯ ಅನ್ನಿಸಿಕೊಳ್ಳುವ ಆ ಕೋಟೆಯಲ್ಲಿ ಕನ್ನ ಹಾಕುವುದು ಬಾಗಿಲೇ ಇಲ್ಲದ ಮನೆಯಲ್ಲಿ ಕಳ್ಳತನವಾಗುವುದಕ್ಕಿಂತ ದೊಡ್ಡ ಸುದ್ದಿಯಾಗುವುದು ಸಹಜವೇ ಇದೆ. ಹೀಗಾಗಿಯೇ ಆ ಚಹರೆಗಳು ಬರೇ ಚಹರೆಗಳಲ್ಲದೇ ತಪ್ಪಿಸಿಕೊಂಡವರ/ಬಲಿಯಾದವರ ಚಹರೆಗಳ ಪ್ರತೀಕವಾಗಿಬಿಡುತ್ತವೆ. ಇದು ಸಿ.ಎಸ್.ಟಿ ಮತ್ತು ತಾಜ್‍ ನಡುವೆ ಇರುವ ಅಂತರದ ಮಹಿಮೆ.

ಇನ್ನು ಲಿಯೋಪೋಲ್ಡ್ ಕಥೆಗೆ ಬರೋಣ. ಲಿಯೋಪೋಲ್ಡ್ ಕೆಫೆ ಅತೀ-ಶ್ರೀಮಂತರ ಅಡ್ಡಾ ಅಂತೂ ಅಲ್ಲವೇ ಅಲ್ಲ. ಅಲ್ಲಿ ಬರುವ ಹೆಚ್ಚಿನಂಶ ವಿದೇಶೀ ಪ್ರಯಾಣಿಕರು ಮತ್ತು ಭಾರತೀಯರು ಬಹುಶಃ ಮಧ್ಯಮವರ್ಗದ ಮೇಲಿನ ಸ್ಥರಕ್ಕೆ ಸೇರಿದವರಿರಬಹುದು. ಗಾಂಧೀಬಜಾರಿನ/ಜಯನಗರದ ಪಬ್ಬುಗಳಲ್ಲಿ ಕಾಣುವ ಜನರಂತಹ ಜನ. ಸಣ್ಣ ಹೋಟೆಲುಗಳಲ್ಲಿ ಇಳಿದುಕೊಂಡು, ಕಡಿಮೆದರದಲ್ಲಿ ಬ್ಯಾಕ್‍ಪ್ಯಾಕ್ ಮಾಡಿಕೊಳ್ಳುತ್ತಾ, ಟೂರಿಸ್ಟ್ ಗೈಡುಗಳ ಮೂಲಕ ದೇಶವನ್ನು ಕಾಣುವ ಜನರ ತಂಡ ಅಲ್ಲಿ ನಮಗೆ ಹೆಚ್ಚಿನಂಶ ಕಾಣುತ್ತದೆ. ತಾಜ್‍ನಲ್ಲಿರುವ ‘ಐಷಾರಾಮಿ' ಜನ ಸಾಮಾನ್ಯವಾಗಿ ಲಿಯೋಗೆ ಹೋಗುವ ಸಾಧ್ಯತೆ ಕಡಿಮೆ. ಹೀಗಾಗಿಯೇ ನಮಗೆ ಲಿಯೋ ಒಂದು ಸುದ್ದಿಯಾಯಿತೇ ವಿನಃ ಅಲ್ಲಿನ ಮುಖಗಳು ಕಾಣಲಿಲ್ಲ. ಲಿಯೋದಲ್ಲಿ ನಾನು ನನ್ನ ಸ್ವಂತ ದುಡ್ಡಿನಿಂದ ಬಿಯರು ಕುಡಿಯಬಹುದಾದರೂ, ತಾಜ್‍ನಲ್ಲಿ ಆ ಸಾಹಸವನ್ನು ಮಾಡಲು ನಾನು ಯತ್ನಿಸುವುದಿಲ್ಲ. ಹೀಗಾಗಿ ನಮ್ಮ ಅನಾಮಿಕ ಅತಿಥಿಗಳ ವಾದಸರಣಿಯನ್ನು ಹೆಚ್ಚು ಅರಿಯಲು ಲಿಯೋಪೋಲ್ಡ್ ಕೆಫೆ ‘ಐಷಾರಾಮ'ದಲ್ಲಿ ತಾಜ್‍ಗಿಂತ ಸಿ.ಎಸ್.ಟಿ.ಗೇ ಸಮೀಪ ಅಂದರೆ ತಪ್ಪಾಗಲಾರದು.

ಈ ವಾದಸರಣಿ ಸಾಮಾನ್ಯದ ಹಂತದ್ದು. ಇದನ್ನು ಖಾಸಗೀ ಸ್ಥರಕ್ಕೂ ಎಳೆದು ತರೋಣ. ತಾಜ್ ಭಾರತದ ಸರ್ವಶ್ರೇಷ್ಠ ಹೋಟೆಲುಗಳಲ್ಲಿ ಒಂದಾಗಿತ್ತು. ಅದನ್ನು ‘ಲಕ್ಷುರಿ' ಹೋಟೆಲ್ಲೆಂದು ತಾಜ್‍ನವರೇ ಕರೆಯುತ್ತಿದ್ದರು. ಹೀಗಾಗಿ ಅದು ಐಷಾರಾಮದ ಪ್ರತೀಕವಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ತಾಜ್‍ನಲ್ಲಿ ಉಳಿದುಕೊಳ್ಳುವವರೆಲ್ಲರೂ ಐಷಾರಾಮಿಗಳೇ? ಅಥವಾ ಐಷಾರಾಮಕ್ಕಾಗಿಯೇ ಅಲ್ಲಿಗೆ ಬರುವವರೇ? ಈ ವಾದ ತುಸು ಕುತೂಹಲದ್ದಾಗುತ್ತದೆ. ತಾಜ್ ಹೋಟೆಲಿನಲ್ಲಿ ಅಂದು ಇದ್ದವರಲ್ಲಿ ವಿತ್ತಶಾಸ್ತ್ರೀಯ ಪ್ರೊ.ವೈದ್ಯನಾಥನ್ ಕೂಡಾ ಒಬ್ಬರು. ಅವರನ್ನು ಬಲ್ಲವರು ಯಾರೂ ಆತನನ್ನು ಐಷಾರಾಮಿ ಎಂದು ಕರೆಯುವುದಿಲ್ಲ. ಮತ್ತೊಂದು ಭಿನ್ನಸ್ಥರದಲ್ಲಿ - ಲಕ್ಷಾಂತರ ಹಾಲು ಉತ್ಪಾದಕರ ಜೀವನವನ್ನು ಉತ್ತಮಗೊಳಿಸಿದ ಅಮುಲ್ ಸಂಸ್ಥೆಯ ಪಿತಾಮಹ ಕುರಿಯನ್ ಪ್ರತಿಬಾರಿಯೂ ‘ಐಷಾರಾಮ'ಕ್ಕಾಗಿಯೇ ಮುಂಬಯಿಯ ತಾಜ್‍ನಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ಅವರ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಅದು ತಪ್ಪೇ? ಕುರಿಯನ್‍ರಂತಹ ನಾಯಕರು ತಾಜ್‍ನಲ್ಲಿ ಉಳಿದುಕೊಂಡ ಕಾರಣಕ್ಕಾಗಿ ಬಡ ಹಾಲು ಉತ್ಪಾದಕರಿಗೆ ಅಪ್ರಸ್ತುತರಾಗುತ್ತಾರೆಯೇ? ಈ ವಿರೋಧಾಭಾಸವನ್ನು ನಾವು ನಮ್ಮ ಮನದಲ್ಲಿ ಪರಿಷ್ಕರಿಸಿಕೊಳ್ಳುವ ಪರಿ ಏನು? ಅದೇ ಕ್ಷಣಕ್ಕೆ ತಾಜ್/ಒಬೆರಾಯ್‍ನಲ್ಲಿ  ಅನೇಕ ಇತರ ‘ಐಶಾರಾಮಿ'ಗಳೂ ಇದ್ದಿದ್ದಿರಬಹುದು.

ಕುರಿಯನ್ ಬಿಟ್ಟು ವೈದ್ಯನಾಥನ್ ಅಂತಹವರ ವಿರೋಧಾಭಾಸವನ್ನು ನೋಡೋಣ. ವೈದ್ಯನಾಥನ್ ಅವರು ಹೆಚ್ಚಿನ ಕೆಲಸವನ್ನು ಕೃಷಿ, ನೀರಾವರಿ, ಬಡತನದ ಅಧ್ಯಯನ, ಸಹಕಾರೀ ಕ್ಷೇತ್ರದ ಉದ್ಧಾರ, ಹಾಗೂ ಜನರ ಜೀವನವನ್ನು ಉತ್ತಮಪಡಿಸಲು ಬೇಕಾದ ವಿತ್ತೀಯ ಸೂತ್ರಗಳನ್ನು ಸರಕಾರ ರೂಪಿಸುವಂತೆ ತಮ್ಮ ಬರವಣಿಗೆ-ಅಧ್ಯಯನದ ಮೂಲಕ ಜೀವಮಾನ ಪರ್ಯಂತ ಮಾಡಿಕೊಂಡು ಬಂದಿದ್ದಾರೆ. ಹಾಗಾದರೆ ಅವರು ತಾಜ್‍ನಂತಹ ಜಾಗದಲ್ಲಿ ಇರದೇ ಸಿ.ಎಸ್.ಟಿಯಲ್ಲಿ ಇರಬೇಕಾಗಿತ್ತೇ? ಅವರು ಅಂದು ಸಿ.ಎಸ್.ಟಿಯಲ್ಲಿ ಇದ್ದಿದ್ದರೂ ಅದರಲ್ಲಿ ಆಶ್ಚರ್ಯವೇನೂ ಇಲ್ಲ ಅನ್ನುವುದನ್ನು ನಾವು ಮನಗಾಣಬೇಕು. ತಾಜ್‍ನಲ್ಲಿ ಇರುತ್ತ ಜನೋಪಯೋಗಿ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲವೇ? ಈ ವಿರೋಧಾಭಾಸವೇ ಕೆಲಸದ ತುರ್ತು, ಅವಶ್ಯಕತೆಗೂ ಐಷಾರಾಮಕ್ಕೂ ನಡುವಿನ ಗೆರೆಯನ್ನು ಕ್ಷೀಣಗೊಳಿಸುತ್ತದೆ.

ಇನ್ನಷ್ಟು ಸುದ್ದಿ: ಅಂದು ಅಮೃತಾ ಪಟೇಲ್ ತಾಜ್ ಹೋಟೇಲಿನಲ್ಲಿದ್ದದ್ದು ಸರ್ ದೊರಾಬ್ಜಿ ಟಾಟಾ ಟ್ರಸ್ಟಿನ ಬೋರ್ಡ್ ಮೀಟಿಂಗಿನಲ್ಲಿ ಪಾಲ್ಗೊಳ್ಳಲು. ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಟಾಟಾ ಸಂಸ್ಥೆಗಳಲ್ಲಿ ಹೆಚ್ಚಿನ ಬಂಡವಾಳ ಹಾಕಿರುವ ಟಾಟಾ ಸನ್ಸ್ ನ ಪ್ರಮುಖ ಬಂಡವಾಳದಾರ ಸಂಸ್ಥೆಗಳು. ಬಹಳಷ್ಟು ಜನರಿಗೆ ಈ ಸತ್ಯ ತಿಳಿಯದಿರಬಹುದು. ಮಿಕ್ಕ ಭಾರತೀಯ ಬಂಡವಾಳಶಾಹೀ ಸಂಸ್ಥೆಗಳಿಗೂ ಟಾಟಾ ಸಂಸ್ಥೆಗೂ ಇರುವ ವ್ಯತ್ಯಾಸ ಇಲ್ಲಿದೆ. ಟಾಟಾ ಸಂಸ್ಥೆಗಳ ಮುಖ್ಯ ಬಂಡವಾಳಗಾರ ರತನ್ ಟಾಟಾ ಅಲ್ಲ. ಬದಲಿಗೆ ರತನ್ ಟಾಟಾ ಕೇವಲ ನಿರ್ವಹಿಸುತ್ತಿರುವ, ಲಾಭವನ್ನು ಯಾರಿಗೂ ಹಂಚಲಾರದ ಟಾಟಾ ಸಂಸ್ಥಾನದ ಟ್ರಸ್ಟುಗಳು. ಅತ್ಯಂತ ಹೆಚ್ಚಿನ ಬಂಡವಾಳ ಹೂಡಿರುವ ಖಾಸಗೀ ವ್ಯಕ್ತಿ ಶಾಪೂರ್‍ಜಿ ಪಾಲೊಂಜಿ ಮಿಸ್ತ್ರಿ. ಟಾಟಾ ಸಂಸಾರಕ್ಕೆ ಸೇರಿದವನಲ್ಲವೇ ಅಲ್ಲ. ದೊರಾಬ್ಜಿ/ರತನ್ [ಈ ಸರ್ ರತನ್ ಟಾಟಾ ನಮಗೆ ತಿಳಿದಿರುವ ಬದುಕಿರುವ ರತನ್ ಟಾಟಾ ಅಲ್ಲ, ಬದಲಿಗೆ ಆತನ ಹಿಂದಿನ ತಲೆಮಾರಿಗೆ ಸಂದವರು] ಟಾಟಾ ಸಂಸ್ಥಾನಗಳು ಟಾಟಾ ಸಂಸ್ಥೆಯಿಂದ ಬಂದ ಲಾಭ ಮತ್ತು ಹಣವನ್ನು ಹೂಡಿರುವುದು ಎಲ್ಲಿ ಗೊತ್ತೇ? ದೇಶ ಹೆಮ್ಮೆ ಪಡಬಹುದಾದಂತಹ ಅನೇಕ ಸಂಸ್ಥೆಗಳಲ್ಲಿ... ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್, ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್, ಹಾಗೂ ನೊಬೆಲ್ ಪ್ರಶಸ್ತಿ ಪಡೆದ ಇಂಟರ್‍ ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್‍ನ ಮುಖ್ಯಸ್ಥ  ರಾಜೇಂದ್ರ ಪಚೌರಿ ತಮ್ಮ ಮೂಲ ಕೆಲಸವನ್ನು ಮಾಡಿದ್ದ ಟಾಟಾ ಸಂಸ್ಥೆ ಮೂಲಧನ ಕೊಟ್ಟು ಸಂಸ್ಥಾಪಿಸಿದ್ದ ಟಾಟಾ ಎನೆರ್ಜಿ ರಿಸರ್ಚ್ ಇನ್ಸ್ಟಿಟ್ಯೂಟಿನಂಥ ಸಂಸ್ಥೆಗಳಲ್ಲಿ [ಈಗ ಆ ಸಂಸ್ಥೆಯ ಹೆಸರನ್ನು ದ ಎನರ್ಜಿ ಇನ್ಸ್ಟಿಟ್ಯೂಟ್ ಎಂದು ಬದಲಾಯಿಸಿ ಟಾಟಾ ಹೆಸರಿಗೆ ಟಾಟಾ ಹೇಳಿ ಟೆರಿ ಎಂಬ ಮೂಲ ಹೆಸರನ್ನು ಉಳಿಸಿಕೊಂಡಿದ್ದಾರೆನ್ನುವುದು ಬೇರೆಯ ಮಾತು]. ಮೊನ್ನೆ ಶಿಂಗೂರಿನಲ್ಲಿ ಟಾಟಾ ಸಂಸ್ಥೆಯ ನ್ಯಾನೋ ಫ್ಯಾಕ್ಟರಿಯ ವಿರುದ್ಧ ಪ್ರತಿಭಟಿಸುತ್ತಿದ್ದ ಮೇಧಾ ಪಾಟ್ಕರಳನ್ನೊಳಗೊಂಡ ಅನೇಕರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನಲ್ಲಿ ತರಬೇತಿ ಪಡೆದವರು. ಕೆಲವರು ತಮ್ಮ ಸಮಾಜ ಸೇವೆಗೆ ಟಾಟಾ ಟ್ರಸ್ಟುಗಳಿಂದ ಈಗಲೂ ಹಣ ಪಡೆಯುತ್ತಿರುವ ಸ್ವ-ಸಹಾಯ ಸಂಸ್ಥೆಯ ಪ್ರತಿನಿಧಿಗಳು! ಈ ಎಲ್ಲವನ್ನೂ ನೆನೆದರೆ ದೊರಾಬ್ಜಿ/ರತನ್ ಟಾಟಾ/ ಜೆ.ಆರ್.ಡಿ ಟಾಟಾ ಮತ್ತು ಟಾಟಾರ ಇತರ ಸಂಸ್ಥಾನಗಳ ಯೋಗದಾನದ ಅಂದಾಜು ನಮಗೆ ಸಿಗುತ್ತದೆ.

ಇಂಥಹ ಸಂಸ್ಥೆಯ ಬೋರ್ಡ್ ಮೀಟಿಂಗಿಗೆ ಹೋದ ಅಮೃತಾ ಪಟೇಲ್ ಎಲ್ಲಿ ಉಳಿದುಕೊಳ್ಳಬಹುದಿತ್ತು? ಅಂದು ಬೋರ್ಡ್ ಮೀಟಿಂಗಿನಲ್ಲಿ ಏನು ಚರ್ಚಿಸಿರಬಹುದು? ಬಿಹಾರದ ಮೂಲೆಯಲ್ಲಿ ಕೆಲಸ ಮಾಡುತ್ತಿರುವ ಪುಟ್ಟ ಸ್ವಸಹಾಯ ಸಂಸ್ಥೆಗೆ ದೇಣಿಗೆ ನೀಡುವ, ಛತ್ತೀಸ್ ಗಢದಲ್ಲಿ ಗಿರಿಜನರಿಗೆ ಸಹಾಯವಾಗುವಂತಹ ಯಾವುದಾದರೂ ಆರೋಗ್ಯಯೋಜನೆಗೆ ದೇಣಿಗೆ ನೀಡುವ ಠರಾವಿನ ಚರ್ಚೆ ಅಂದು ಇದ್ದಿರಬಹುದೇ? ಟಾಟಾ ಸಂಸ್ಥಾನವೇ ನಡೆಸುತ್ತಿರುವ ಟಾಜ್ ಹೋಟೆಲಿನಲ್ಲಿ ಆಕೆ ಇಳಿದುಕೊಳ್ಳುವುದರಲ್ಲಿ ವಿರೋಧಾಭಾಸವಿತ್ತೇ? ತಾಜ್ ಗುಂಪಿನ ಹೋಟೆಲುಗಳು ಆರ್ಜಿಸುವ ಲಾಭದ ಹೆಚ್ಚಿನಂಶವನ್ನು ಸಮಾಜಕ್ಕೇ ಅಂಕಿತಗೊಳಿಸಿರುವ ಈ ಸಂಸ್ಥೆ ‘ಐಷಾರಾಮಿ' ಜೀವನವನ್ನು ಮಾರಾಟ ಮಾಡುತ್ತಾ ಆರ್ಜಿಸಿದ ಲಾಭದ ಹೆಚ್ಚಿನಂಶ ಹೀಗೆ ದೇಶಕ್ಕೆ ಉಪಯೋಗುವಾಗುವ ಕಾರ್ಯದಲ್ಲಿ ತೊಡಗಿಸಿದಾಗ ನಾವು ಕಪ್ಪು ಬಿಳುಪಿನ ನಡುವಿನ ನಡುವಿನ ರೇಖೆಯನ್ನು ಎಲ್ಲಿ ಎಳೆಯುವುದು?

ತಾಜ್ ಹೋಟೆಲ್ ಸ್ಥಾಪಿತವಾದದ್ದೇ ಒಂದು ರಾಷ್ಟ್ರೀಯತೆಯ ಪ್ರತೀಕವಾಗಿ. ಬ್ರಿಟಿಷರು ನಡೆಸುತ್ತಿದ್ದ ಹೋಟೆಲುಗಳಲ್ಲಿ ತಮಗೆ ಇರಲು ಅವಕಾಶವಾಗಲಿಲ್ಲವೆಂದು ಜಮ್‍ಶೇಡ್‍ಜಿ ಟಾಟಾ ಮುಂಬಯಿಯಲ್ಲಿ ಈ ಹೋಟೆಲನ್ನು ಕಟ್ಟಿಸಿದರು. ಈ ಹೋಟೆಲಿನ ನಿರ್ಮಾಣದ ಉಸ್ತುವಾರಿಯನ್ನು ಅವರೇ ಸ್ವತಃ ವಹಿಸಿದ್ದಲ್ಲದೇ, ಅವರು ಅಸುನೀಗುವುದಕ್ಕೆ ಮುನ್ನ ಅದು ಪೂರ್ಣವಾಗುವುದನ್ನೂ ಕಂಡಿದ್ದರು. [ಟಾಟಾ ಸ್ಟೀಲ್‍ನ ನಿರ್ಮಾಣ ಕೂಡಾ ಅವರ ಜೀವನಕಾಲದಲ್ಲಿ ಮುಗಿದಿರಲಿಲ್ಲವೆಂದು ಪ್ರತೀತಿ]. ಹೀಗೆ ಪ್ರಾರಂಭವಾದ ತಾಜ್ ಹೋಟೆಲಿನ ಅಸ್ತಿತ್ವ ಭಾರತದಲ್ಲಲ್ಲದೇ ನ್ಯೂಯಾರ್ಕ್ ನಗರದ ಪಿಯರ್ ಹೋಟೆಲನ್ನೊಳಗೊಂಡು ಜಗತ್ತಿನ ಅನೇಕ ಭಾಗಗಳಲ್ಲಿ ಹಬ್ಬಿದೆ. ಐಷಾರಾಮಿ ತಾಜ್ ಅಲ್ಲದೇ ಕಡಿಮೆ ದರದಲ್ಲಿ ಇರಬಹುದಾದ ಜಿಂಜರ್ ಹೋಟೆಲುಗಳೂ ತಾಜ್ ಸಂಸ್ಥೆಗೆ ಸೇರಿದವೇ. 

ನಾವು ‘ಐಷಾರಾಮಿ'ಗಳೆಂದು ಕರೆವ ಜನ ತಮ್ಮ ಐಷಾರಾಮಕ್ಕೆ ಹಣವನ್ನು ಎಲ್ಲಿಂದ ಸಂಪಾದಿಸಬಹುದು? ಆ ಹಣವನ್ನು ಸಂಪಾದಿಸುವುದಕ್ಕೆ ದಿನದಲ್ಲಿ ಎಷ್ಟು ಗಂಟೆ ಕಾಲ ಕೆಲಸ ಮಾಡಬಹುದು? ಅವರು ಮಾಡುವ ಕೆಲಸದಿಂದ ಎಷ್ಟು ಜನರಿಗೆ ನೌಕರಿ ಸಿಗಬಹುದು? ಸಮಾಜಕ್ಕೆ ಅದರಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಎಷ್ಟು ಉಪಯೋಗವಾಗಬಹುದು? ಈ ಪ್ರಶ್ನೆಗಳನ್ನು ನಾವು ಉತ್ತರಿಸಲು ಪ್ರಯತ್ನಿಸಿದರೆ ಐಷಾರಾಮಿಗಳಿಗೊ ಶ್ರೀಸಾಮಾನ್ಯರಿಗೂ ಇರುವ ಅವಿನಾಭಾವ ನಂಟು ನಮಗೆ ಕಾಣಸಿಗುತ್ತದೆ. ಐಷಾರಾಮಿಗಳು ಭಿನ್ನ ರೀತಿಯಾದ ಜೀವನವನ್ನು ಜೀವಿಸಬಹುದೇ? ತಾಜ್/ಒಬೆರಾಯ್‍ನಲ್ಲಿ ಉಳಿದು ಅಲ್ಲಿನ ಷಾಮಿಯಾನ/ಗೋಲ್ಡನ್ ಡ್ರಾಗನ್/ಸೂಕ್/ಕಂದಹಾರ್/ಟಿಫಿನ್ ಎನ್ನುವ ಜಾಗಗಳಲ್ಲಿ ಸಿಂಗಲ್ ಮಾಲ್ಟ್ ವಿಸ್ಕಿ ಕುಡಿಯದೇ ಲಕ್ಷಾಂತರ ರೂಪಾಯಿ ಸಂಬಳ ಪಡೆವ ಚೆಫ್‍ಗಳು ಉಣಬಡಿಸುವ ಗೊರ್ಮೆ ಊಟವನ್ನು ಮಾಡದೆಯೇ ಜೀವಿಸಬಹುದೇ? ಅಥವಾ ಅವರು ಮಾಡುತ್ತಿರುವ/ದುಡಿಯುತ್ತಿರುವ ಸಂದರ್ಭದಲ್ಲಿ ಇವು ಅತ್ಯಾವಶ್ಯಕವೇ ಅನ್ನುವ ಪ್ರಶ್ನೆ ಸಹಜದ್ದು. ಅಮಲಿಗೆ ಸಿಂಗಲ್ ಮಾಲ್ಟೇ ಆಗಬೇಕೆಂದೇನೂ ಇಲ್ಲ. ಸಾರಾಯಿ ಕೂಡಾ ಸಾಕಾಗಬಹುದು ಅನ್ನುವುದು ನಮ್ಮ ವಾದ. ಆದರೆ ಅಮಲಿಗೆ ಸಾರಾಯಿಯನ್ನೇ ಕುಡಿಯಬೇಕೋ, ಸಿಂಗಲ್ ಮಾಲ್ಟನ್ನೇ ಕುಡಿಯಬೇಕೋ ಎಂದು ನಿರ್ಧರಿಸುವವರು ಯಾರು?

ನಮಗೆಲ್ಲರಿಗೂ ಜೀವನವನ್ನು ಉತ್ತಮಗೊಳಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಬಡವರು ಬಡವರಾಗಿರಬಾರದು. ಬೈಕಿನಲ್ಲಿ ಓಡಾಡುವವರಿಗೆ ಕಾರು ಕೊಳ್ಳುವ ಅವಕಾಶ ಬಂದರೆ ಬೇಡ ಅನ್ನುವವರು ಎಷ್ಟು ಜನ? ಕಾರು ‘ಐಷಾರಾಮ'ವಾದರೆ ಅದು ಕೊಳಕು ಸಂಸ್ಕೃತಿಯೇ? ಹೌದು ಶ್ರೀಮಂತಿಕೆಯನ್ನು ಪ್ರದರ್ಶಿಸುವ ರೀತಿಯಲ್ಲಿ ಒಂದು ಕೊಳಕುತನ ಇದೆ ಅನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಆ ಗೆರೆಯನ್ನು ನಾವು ಎಲ್ಲಿ ಎಳೆಯಬೇಕು?

ಈಚೆಗೆ ನಮ್ಮ ಸಂಸ್ಥೆಯಲ್ಲಿ ಸಮಾಜ-ಸೇವಾ ಸಂಸ್ಥೆಗಳ ಬಗೆಗಿನ ಒಂದು ಕೋರ್ಸಿನಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ನಾನು ಇಬ್ಬರು ಭಿನ್ನ ವ್ಯಕ್ತಿಗಳನ್ನು ಕರೆದಿದ್ದೆ. ಮಜದೂರ್ ಕಿಸಾನ್ ಸೇವಾ ಸಂಸ್ಥಾನದ ನಿಖಿಲ್ ಡೇ ವಿದ್ಯಾರ್ಥಿಗಳನ್ನು ಉದ್ದೇಶಿಸುತ್ತಾ ಹೇಳಿದ್ದು ತಾವು ತಮ್ಮ ಸಂಸ್ಥೆಯಿಂದ ಬಡವರಿಗೆ ಅನ್ವಯವಾಗುವ ‘ನ್ಯೂನತಮ ದೈನಿಕ ಕೂಲಿ" ಯಷ್ಟೇ [ದಿನಕ್ಕೆ ನೂರು ರೂಪಾಯಿ] ಪಡೆಯುತ್ತಿರುವುದಾಗಿಯೂ, ತಾವು ಮಾಡುತ್ತಿರುವ ಕೆಲಸದಲ್ಲಿ ಅಷ್ಟರಲ್ಲಿ ಬದುಕುವುದನ್ನು ಕಲಿಯಬೇಕೆಂದೂ - ‘ನನ್ನಿಂದ ಯಾರೂ ಏನೂ ಕಸಿಯಲಾರದಷ್ಟು ಕಡಿಮೆ ಸಂಪನ್ಮೂಲಗಳಲ್ಲಿ ಬದುಕುವ ಸಾಧ್ಯತೆಯಿದ್ದಾಗಲೇ ಪ್ರತಿಭಟನೆಯ ಜೀವನವನ್ನು ನಡೆಸಲು ಸಾಧ್ಯ' ಎಂದು ಗಾಂಧೀವಾದವನ್ನು ಪ್ರತಿಪಾದಿಸಿದರು. ಮುಂದಿನ ವಾರ ಬಂದು ಮಾತನಾಡಿದ ರಮೇಶ್ ರಾಮನಾಥನ್ ತಮ್ಮ ಕೆಲಸದ ಮೊದಲ ಹದಿನೈದು ವರ್ಷಗಳಲ್ಲಿ ಅದ್ಭುತ ಸಂಪಾದನೆ ಮಾಡಿ - ಜೀವನದಲ್ಲಿ ಮತ್ತೆ ಸಂಪಾದಿಸುವ ಅವಶ್ಯಕತೆಯಿಲ್ಲವೆನ್ನಿಸಿದ ಕ್ಷಣಕ್ಕೆ ತಮ್ಮ ‘ಐಷಾರಾಮಿ' ಕೆಲಸವನ್ನು ಬಿಟ್ಟು ಜನಾಗ್ರಹ ಪ್ರಾರಂಭಿಸಿದ ಕಥೆಯನ್ನು ಹೇಳಿದರಲ್ಲದೇ ಹೇಗೆ ಅವರ ಹಿಂದಿನ ಸಂಪಾದನೆ ಮತ್ತು ಅದರಲ್ಲಿ ಅವರು ಮಾಡಿರುವ ಉಳಿತಾಯ ತಮ್ಮ ‘ಐಷಾರಾಮಿ' ಬದುಕಿನ ಸ್ಥರದಲ್ಲಿ ಯಾವು ಕುಂದೂ ಬರದಂತೆ ಜೀವನವನ್ನು ನಡೆಸುತ್ತಾ ತಮ್ಮ ಸೇವಾಕೆಲಸವನ್ನೂ ಮಾಡಲು ಸಾಧ್ಯವಾಯಿತು ಎನ್ನುವುದನ್ನ ಹೇಳಿದರು. ಇದರಲ್ಲಿ ಯಾವುದು ಸರಿ ಯಾವುದು ತಪ್ಪಾದ ಮಾರ್ಗ? ಎಲ್ಲಿ ಇದರ ಎಲ್ಲೆ?

ಈ ಪ್ರಶ್ನೆಗಳನ್ನು ನಾವು ಕೇಳುತ್ತಲೇ ನಾವು ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿ.ಎಸ್.ಟಿ.ಗೂ ಹೋಗಲಾರದ ವರ್ಗದವರು ನಮ್ಮ ದೇಶದಲ್ಲಿದ್ದಾರೆ. ಸಿ.ಎಸ್.ಟಿಯ ರೈಲುಗಳಲ್ಲಿ ದಿನವೂ ಜೀವ ತೇಯುವ ಜನರಿದ್ದಾರೆ. ಲಿಯೋಪೋಲ್ಡ್ ನಲ್ಲಿ ಬಿಯರು ಕುಡಿವ ಜನರಿದ್ದಾರೆ. ತಾಜ್‍ನ ಐಷಾರಾಮಿಗಳಿದ್ದಾರೆ. ತಾಜ್‍ನ ಐಷಾರಾಮಿಗಳು ಐಷಾರಾಮ ಮಾಡುವುದರಲ್ಲಿ ಜೀವನದ ಅರ್ಥ ಕಂಡುಕೊಂಡಾರು. ಆದರೆ ಅವರುಗಳು ಸಿ.ಎಸ್.ಟಿಗೆ ಹೋಗಲಾರದ ಜನರಮೇಲೆ ದಬ್ಬಾಳಿಕೆ ಮಾಡಿ, ಸಿ.ಎಸ್.ಟಿಯಲ್ಲಿ ಜೀವ ತೇಯುವ ಜನರ ಬೆವರಿನ ಶೋಷಣೆಯ ಮೇಲೆ ಐಷಾರಾಮ ಮಾಡಿದರೆ - ಐಷಾರಾಮದ ಮೂಲಾಧಾರ ಈ ಅಂತರದಲ್ಲಿದ್ದರೆ ಅಲ್ಲಿ ಅಪಾಯವಿದೆ ಎನ್ನುವುದನ್ನು ನಾವು ಮನಗಾಣಬೇಕು. ಹೀಗಾಗಿಯೇ ಟಾಟಾರಂಥಹ ಟಾಟಾರಿಗೇ, ತಮ್ಮ ದೇಣಿಗೆಯನ್ನು ಪಡೆದ ಜನರಿಂದಲೇ ಪ್ರತಿಭಟನೆ ಎದುರಿಸುವ ಪರಿಸ್ಥಿತಿ ಉಂಟಾಯಿತು. ಅದರ ರಾಜಕಾರಣವೇನೇ ಇದ್ದರೂ ಅದರ ಮೂಲಾಧಾರವನ್ನು ನಾವು ಮರೆಯುವಂತಿಲ್ಲ.

ಉದಾರೀಕರಣದ ಪರಿಣಾಮವಾಗಿ ದೇಶದ ಆರ್ಥಿಕ ಬೆಳವಣಿಗೆ ೯%ದ ವೇಗದಲ್ಲಿ ಆಗುತ್ತಿದೆ. ಆದರೆ ೭೦% ಜನಜೀವನದ ಆಧಾರವಾಗಿರುವ ಕೃಷಿ ಕ್ಷೇತ್ರ ೨-೪%ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಈ ಹದಿನೇಳು ವರ್ಷಗಳಲ್ಲಿ ಕಂಡಿಲ್ಲ. ಇದು ಉದಾಹರಣೆ ಮಾತ್ರ. ಮೂಲತಃ ದೇಶ ಆರ್ಥಿಕವಾಗಿ ಬೆಳೆಯುತ್ತಿದ್ದರೂ ಅದರ ಪರಿಣಾಮ ಸಮಾಜದಲ್ಲಿ ಅಂತರವನ್ನು ಹೆಚ್ಚಿಸುತ್ತ ಬಂದಿದೆ. ತಾಜ್‍ನಲ್ಲಿ ಉಳಿಯುವ ‘ಐಷಾರಾಮಿ'ಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದರೆ ತಮ್ಮ ಐಷಾರಾಮಕ್ಕೆ ಸವಾಲಾಗಿರುವ ಅನೇಕ ಆತಂಕಗಳನ್ನು ಎದುರಿಸಬೇಕಾಗುತ್ತದೆ.

ಈ ಆತಂಕಗಳ ಮೂಲ ಭಿನ್ನರೀತಿಯಲ್ಲಿ ಹೊರಹೊಮ್ಮುತ್ತದೆ. ೨೦೦೧ರಲ್ಲಿ ನಕ್ಸಲ್ ಚಳುವಳಿ ದೇಶದ ಪೂರ್ವಭಾಗದಲ್ಲಿನ ಆಂಧ್ರಪ್ರದೇಶದಿಂದ ಹಿಡಿದು - ಮಧ್ಯಪ್ರದೇಶವನ್ನೊಳಗೊಂಡು - ಬಿಹಾರದ ವರೆಗೂ ಒಂಬತ್ತು ರಾಜ್ಯಗಳಲ್ಲಿ ಹಬ್ಬಿತ್ತು. ೨೦೦೫ರ ವೇಳೆಗೆ ಆ ಚಳುವಳಿ [ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರಾಖಂಡ್ ಒಳಗೊಳ್ಳುತ್ತಾ] ಹದಿಮೂರು ರಾಜ್ಯಗಳಲ್ಲಿ ೧೬೫ ಜಿಲ್ಲೆಗಳಲ್ಲಿ ಹಬ್ಬಿತ್ತು. ಇದು ಬೆಳೆಯುತ್ತಿರುವ ಚಳುವಳಿ. ಬೆಂಗಳೂರಿನಂತಹ ನಗರದಲ್ಲಿ ಕನ್ನಡ ರಾಷ್ಟ್ರೀಯತೆಗೆ ಸಂಬಂಧಿಸಿದ ಹಿಂಸಾಚಾರ, ನೆರೆದೇಶಗಳಿಂದ ಬರುವ ಕೋಮು ಹಿಂಸಾಚಾರಕ್ಕೆ ಸ್ಥಳೀಯ ‘ಸ್ಲೀಪರ್ ಸೆಲ್ಲು'ಗಳ ಸಹಕಾರ, ಕೇರಳದ ಮಲ್ಲಪುರಂ ಜಿಲ್ಲೆಯಿಂದ ನಿರ್ಯಾತ ಗೊಳ್ಳುತ್ತಿರುವ ನಿರುದ್ಯೋಗಿ ಜಿಹಾದಿಗಳು - ಈ ಎಲ್ಲವುಗಳ ಮೂಲಸೆಲೆ ಇರುವುದೇ ಸಿ.ಎಸ್.ಟಿಗೂ ತಾಜ್‍ಗೂ ಇರುವ ಅಂತರದಲ್ಲಿ. ಹೀಗಾಗಿ ನಮ್ಮ ಅನಾಮಿಕ ಅತಿಥಿಗಳ ಸಿಟ್ಟಿನ ಹಿಂದಿರುವ ‘ಅಸಮಾನತೆ'ಯ ಮೂಲಸೆಲೆಗಳನ್ನು ನಾವು ಗುರುತಿಸದೇ ಹೋದರೆ ಭವಿಷ್ಯವೂ ಭೀಕರವಾಗುತ್ತದೆ. ಹೀಗಾಗಿಯೇ ತಾಜ್ ಕಾಂಡದ ನಂತರ ದೇಶದ ಒಳಭದ್ರತೆಗೆ ನಾವು ಎಷ್ಟು ಆರ್ಥಿಕ ಸವಲತ್ತುಗಳನ್ನು ಒದಗಿಸಬೇಕೋ ಅಷ್ಟೇ ಮುಖ್ಯವಾಗಿ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ವಿಕಾಸದ ಸೂತ್ರಗಳತ್ತ ನಮ್ಮ ಧ್ಯಾನವನ್ನು ಕೇಂದ್ರೀಕರಿಸಬೇಕಾಗಿದೆ. ಹೀಗಾಗಿಯೇ ಮಾರುಕಟ್ಟೆಯ ಸೂತ್ರಗಳ ಮೇಲೆಯೇ ಅತಿಯಾಗಿ ಆಧಾರಿತವಾಗಿರುವ ನಮ್ಮ ಆರ್ಥಿಕ ನೀತಿಯನ್ನು ಸ್ವಲ್ಪ ಮಟ್ಟಿಗಾದರೂ ಸಾಮಾಜಿಕ ಸೂತ್ರಗಳತ್ತ ಎಳೆಯುವುದು ಅವಶ್ಯಕ ಅನ್ನುವ ಪರಿಸ್ಥಿತಿಗೆ ನಾವು ಬರುತ್ತಿದ್ದೇವೆ.

ಈ ಕಾಂಡ ನಡೆಯುತ್ತಿದ್ದಾಗ ಹೆಚ್ಚಿನ ಸದ್ದಿಲ್ಲದೇ-ಸುದ್ದಿಯಿಲ್ಲದೇ ಅಸುನೀಗಿದ ಹಿಂದುಳಿದ ಜಾತಿಗಳ ‘ರಾಜ' ವಿ.ಪಿ.ಸಿಂಗ್ ಅವರನ್ನು ನಾವೆಲ್ಲ ಈ ಆತಂಕದ ನಡುವೆ ಮರೆತೇ ಬಿಟ್ಟೆವು. ಅವರ ಸಾವು ಅವರು ಪ್ರತಿಪಾದಿಸಿದ ವಿಚಾರಗಳನ್ನು ನಾವು ಪುನರಾವಲೋಕನ ಮಾಡಲೂ ಸಾಧ್ಯವಾಗದಷ್ಟು ಮರೆಗುಳಿತನವನ್ನು ನಮಗೆ ದಯಪಾಲಿಸದಿರಲಿ. ಅವರು ಪ್ರತಿಪಾದಿಸಿದ ಕೆಲವು ಸೂತ್ರಗಳನ್ನು ಈ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಮತ್ತೆ ವಿಚಾರ ಮಾಡೋಣ. ಗಾಂಧಿ, ನೆಹರೂ, ಇಂದಿರಾ, ಲೋಹಿಯಾರ ಅರ್ಥಸೂತ್ರದ ನಿಲುವುಗಳನ್ನು ಮರುಪರಿಶೀಲಿಸೋಣ. ದೂರದ ಪುಟ್ಟ ಹಳ್ಳಿಯಿಂದ ಬಸ್ಸು ಅಲ್ಲಿಂದ ರೈಲು ಹತ್ತಿ ಸಿ.ಎಸ್.ಟಿ ಸೇರಿ, ಬೇಸರವಾದಾಗ ಲಿಯೋಪೋಲ್ಡ್ ನಲ್ಲಿ ತಂಪಾದ ಬಿಯರು ಕುಡಿಯುವ, ತಾಜ್‍ನ ಐಷಾರಾಮವನ್ನು ಅನುಭವಿಸುವ ಕನಸನ್ನು ಕಾಣುವ ಅವಕಾಶವನ್ನಾದರೂ ನಾವು ನಿರ್ಮಾಣ ಮಾಡೋಣ. ಆ ಕನಸು ಇಲ್ಲದ ದಿನ ಆ ಕನಸಿನ ಪ್ರತೀಕವಾದ ಸ್ಥಾವರಗಳನ್ನು ಧ್ವಂಸ ಮಾಡುವ ಕೆಲಸ ಆರಂಭವಾಗುತ್ತದೆ. ನಾವು ಈಗಾಗಲೇ ಆ ಪ್ರಕ್ರಿಯೆ ಪ್ರಾರಂಭವಾಗಿರುವುದನ್ನು ಕಂಡಿದ್ದೇವಾದ್ದರಿಂದ, ನಮ್ಮ ಆತಂಕದ ಕಾಲ, ಆತಂಕವಾದದ ಕಾಲ ಸಧ್ಯದಲ್ಲೇ ಮುಗಿಯುವಂತೆ ಕಾಣುತ್ತಿಲ್ಲ.


Thursday, March 12, 2009

ಶಾಂತಾರಾಮ್-ಆತಂಕರಾಮ್

ಕಳೆದೆರಡು ವರುಷಗಳಿಂದ ನನ್ನ ಮುಂಬಯಿ ಯಾತ್ರೆಗಳು ಸುಮಾರು ತಿಂಗಳಿಗೊಮ್ಮೆ ಆಗುತ್ತಿದೆ. ಅಲ್ಲಿರುವ ಸಂಸ್ಥೆಯೊಂದರ ಬೋರ್ಡಿಗೆ ನನ್ನನ್ನು ಸೇರಿಸಿಕೊಂಡಿರುವುದರಿಂದ ಮೀಟಿಂಗಿಗಾಗಿ ಆಗಾಗ ಹೋಗಬೇಕಾಗುತ್ತದೆ. ಮೀಟಿಂಗು ಸಂಸ್ಥೆಯ ೧೬ನೇ ಮಹಡಿಯ ಆಫೀಸಿನಲ್ಲಾಗುತ್ತದಾದರೂ ಉಳಿದುಕೊಳ್ಳುವುದಕ್ಕೆ ಏರ್ಪಾಟು ಮುಖ್ಯತಃ ತಾಜ್ ಹೋಟೇಲಿನಲ್ಲಿ ಮಾಡುತ್ತಿದ್ದರು. ಮೊದಲಿಗೆ ಪಂಚತಾರಾ ಹೋಟೇಲಿನಲ್ಲಾಗುವ ಎಲ್ಲ ಮುಜುಗರಗಳಿಗೂ ನಾನು ಒಳಗಾಗಿದ್ದೆನಾದರೂ, ಬರಬರುತ್ತಾ ಆ ಜಾಗ ನನಗೆ ಅಭ್ಯಾಸವಾಗಹತ್ತಿತ್ತು. ಹೀಗಾಗಿಯೇ ಎರಡು ತಿಂಗಳುಗಳ ಹಿಂದೆ ಆ ಹೊಟೇಲಿನಲ್ಲಿ ಹೆಚ್ಚು ಉಳಿದದ್ದರ ಪ್ರತೀಕವಾಗಿ ಅವರು ನನಗೆ ಗೋಲ್ಡ್ ಕಾರ್ಡ್ ಒಂದನ್ನು ಕೊಟ್ಟಿದ್ದನ್ನು ಜೋಪಾನವಾಗಿ ಉಳಿಸಿಕೊಂಡಿದ್ದೆ.

ತಾಜ್‍ನಲ್ಲಿ ಉಳಿದುಕೊಳ್ಳುವುದನ್ನು ಪ್ರಾರಂಭಿಸಿದಾಗ ಮೊದಲಿಗೆ ನನಗೆ ಕೊಡುತ್ತಿದ್ದ ಕೋಣೆ ಟವರಿನ ಆಚೆ ಬದಿಯಲ್ಲಿ ಸ್ಟಾಕ್ ಎಕ್ಸ್ಚೇಂಜು ಕಾಣಿಸುವ ಭಾಗದಲ್ಲಿತ್ತು. ಆದರೆ ಕ್ರಮೇಣ ಸಮುದ್ರ ಕಾಣುವ ಮುಖ್ಯ ದಿಕ್ಕಿನ ಕಡೆಗೆ ನನಗೆ ವರ್ಗಾವಣೆಯಾಯಿತು. ಬೆಳ್ಳಿ-ಗೋಲ್ಡ್ ಕಾರ್ಡುಗಳಿದ್ದವರಿಗೆ ಉತ್ತಮ ಕೋಣೆಯ ಸವಲತ್ತು ಸಿಗಬಹುದು ಅನ್ನುವುದು ನನಗೆ ಆ ನಂತರ ತಿಳಿಯಿತು. ಗೇಟ್‍ವೇ ಕಾಣಿಸುವ ರೂಮಿಗೆ ಬರುವವರೆಗೂ ನನಗೆ ತಾಜ್ ಬಗ್ಗೆ ಏನೂ ಖಾಸಾ ಭಾವನೆಗಳಿರಲಿಲ್ಲ. ರಾತ್ರೆ ತಲುಪುವ ವೇಳೆಗೆ ತಡವಾಗುತ್ತಿತ್ತು. ಬೆಳಿಗ್ಗೆ ಎದ್ದು ತಿಂಡಿ ಮಾಡಿ ಮೀಟಿಂಗಿಗೆ ಹೋದರೆ, ಅಲ್ಲಿಂದ ಹಾಗೇ ಪಲಾಯನ ಮಾಡುತ್ತಿದ್ದೆ. ಆದರೆ ಗೇಟ್‍ವೇ ದರ್ಶನವಾಗುವಂತಹ ಕೋಣೆ ಸಿಗಲು ಪ್ರಾರಂಭವಾದಾಗಿನಿಂದ ನಾನು ಒಂದು ವಿಚಿತ್ರ ಅಭ್ಯಾಸವನ್ನು ಹಾಗೂ ತಾಜ್ ಬಗ್ಗೆ ಒಂದು ಪ್ರೀತಿಯನ್ನೂ ಬೆಳೆಸಿಕೊಂಡಿದ್ದೆ - ನಾನು ಇದ್ದ ವಿವಿಧ ಕೋಣೆಗಳಿಂದ ಸುಮಾರು ೪೦-೫೦ ಗೇಟ್‍ವೇ ಫೋಟೋಗಳನ್ನು ನಾನು ತೆಗೆದಿದ್ದೆ. ಕೆಲವು ರಾತ್ರೆಯ ಕತ್ತಲಲ್ಲಿ ತೆಗೆದವು, ಕೆಲವು ಮುಂಜಾನೆಯ ಮಸುಕಿನಲ್ಲಿ ತೆಗೆದವು. 

ತಾಜ್‍ನಲ್ಲಿ ಮೇಲಿನ ಮಹಡಿಗಳಲ್ಲಿ ಬಾಲ್ಕನಿಗೆ ಹೋಗುವ ಗಾಜಿನ ಬಾಗಿಲನ್ನು ಸೀಲ್ ಮಾಡಿದ್ದರು.. ಯಾರೂ ಅಲ್ಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳದಿರಲು ಇದು ಮುಂಜಾಗ್ರತಾ ಕ್ರಮವಿದ್ದಿರಬೇಕು. ಕೆಳಗಿನ ಅಂತಸ್ತಿನಲ್ಲಿ ಗಾಜಿನ ಬಾಗಿಲು ತೆರೆದು ಹೊರಬರಬಹುದಿತ್ತಾದರೂ ಹೊರಗೆ ಜಾಲಿಯೊಂದನ್ನು ಬಿಗಿದಿದ್ದರು. ಆ ಜಾಲಿಯ ಮೂಲಕವೇ ಗೇಟ್‍ವೇ ಮತ್ತು ಸಮುದ್ರ-ದೋಣಿಗಳ ದರ್ಶನ ಮಾಡಿಕೊಳ್ಳಬಹುದಿತ್ತು. ತಾಜ್ ಟವರಿನ ಹಲವು ಅಂತಸ್ತುಗಳನ್ನು ನೋಡಿದ್ದರೂ, ಹಳೆಯ ಹೆರಿಟೇಜ್ ಕಟ್ಟಡದಲ್ಲಿ ಇರುವ ಭಾಗ್ಯ ಒಮ್ಮೆಯೂ ಉಂಟಾಗಿಲ್ಲ ಅನ್ನುವುದು ಈ ಎಲ್ಲ ಘಟನಾವಳಿಗಳ ನಡುವೆ ನನ್ನನ್ನು ತಟ್ಟಿತು.

ತಾಜ್‍ನಲ್ಲಿ ತಿನ್ನಲು ಐದಾರು ಜಾಗಗಳಿದ್ದುವಾದರೂ, ನಾನು ಎಂದೂ ಅಲ್ಲಿ ಹೆಚ್ಚು ಉಂಡವನೇ ಅಲ್ಲ. ತಿಂದರೂ ಏನನ್ನಾದರೂ ರೂಮಿಗೇ ತರಿಸಿಕೊಳ್ಳುತ್ತಿದ್ದೆ, ಬೆಳಗಿನ ನಾಷ್ಟಾಕ್ಕೆ ಮಾತ್ರ ಶಾಮಿಯಾನಾ ಅನ್ನುವ ರೆಸ್ಟಾರೆಂಟಿಗೆ ಹೋಗಿ ಅಲ್ಲಿನ ಬಫೆಯಲ್ಲಿ ಸಿಗುತ್ತಿದ್ದ ಹಣ್ಣುಗಳನ್ನು - ಹಾಗೂ ಅದೃಷ್ಟವಶಾತ್ ಆ ದಿನದಂದು ಅಲ್ಲಿನ ಚೆಫ್ - ಮಸಾಲಾ ಉಪ್ಪಿಟ್ಟು ಮಾಡಿದ್ದರೆ ಅದನ್ನು, ತಿಂದು ಮುಂದುವರೆಯುತ್ತಿದ್ದೆ. ಒಂದೇ ಜಾಗದಲ್ಲಿ ಚೆನ್ನಾಗಿ ಬಿಡಿಸಿಟ್ಟ ಮನಸ್ಸಿಗೆ ಮುದನೀಡುವರೀತಿಯಲ್ಲಿ ಜೋಡಿಸಿಟ್ಟ ಹಣ್ಣುಗಳನ್ನು ಕಂಡರೇನೇ ಹೊಟ್ಟೆ ತುಂಬುತ್ತಿತ್ತು. ಸಾಮಾನ್ಯವಾಗಿ ಎಲ್ಲ ಪಂಚತಾರಾ ಹೋಟೇಲುಗಳಂತೆಯೇ ಇಲ್ಲೂ ಇಡ್ಲಿ ದೋಸೆ ಸಾಂಬಾರು ಅಷ್ಟಕ್ಕಷ್ಟೇ. ಆದರೆ ಅಲ್ಲಿನ ಉಪ್ಪಿಟ್ಟು ಮಾತ್ರ ಜಗತ್ತಿನಲ್ಲೇ ಅತ್ಯುತ್ತಮ ಎನ್ನುವ ರೀತಿಯದ್ದಾಗಿತ್ತು. ಇದನ್ನು ನನಗೆ ಉಣಬಡಿಸಿದ, ಎಂದೂ ಕಾಣದ ಚೆಫ್ ಈಚೆಯ ಘಟನೆಯ ನಂತರ ಬದುಕಿದ್ದಾನೋ ಇಲ್ಲವೋ ಅನ್ನುವ ವಿಚಾರ ಆಗಾಗ ಮನಸ್ಸಿನಲ್ಲಿ ಹಾಯ್ದುಹೋಗುತ್ತದೆ.

ಹೀಗೆ ಮುಜುಗರ ಪಡುತ್ತಲೇ ಇಷ್ಟಪಡಲಾರಂಭಿಸಿದ ತಾಜ್ ಮೇಲೆ ಹಲ್ಲೆಯಾಯಿತು ಅಂದಾಗ ಎಲ್ಲೋ ಈ ಹಲ್ಲೆ ನನ್ನನ್ನೇ ತಾಕಿತೇ - ಅಂದು ನಾನು ಅಲ್ಲಿಲ್ಲದಿದ್ದದ್ದು ನನ್ನ ಅದೃಷ್ಟವೇ ಅನ್ನುವ ವಿಚಾರಗಳೆಲ್ಲಾ ನನ್ನ ಮನಸ್ಸಿನಲ್ಲಿ ಹಾಯ್ದುಹೋಗುತ್ತದೆ. ನಿಜಕ್ಕೂ ಇದನ್ನು ಅರಗಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗೆ ನೋಡಿದರೆ ಹೆಚ್ಚೂ ಕಮ್ಮಿ ಅಲ್ಲಿಗೆ ಹೋದಾಗಲೆಲ್ಲಾ ಸಂಜೆಯ ವೇಳೆ ಮುಂಬಯಿಯಲ್ಲಿರುವುದಾದರೆ, ತಾಜಿನ ಕೋಣೆಯಿಂದ ಜಾರಿಕೊಂಡು ಪಕ್ಕದ ಬೀದಿಯಲ್ಲಿದ್ದ ಲಿಯೋಪೋಲ್ಡ್ ಕೆಫೆಗೂ ಹೋಗಿ ಉದ್ದನೆ ಕೊಳವೆಯಾಕಾರದ ಬಿಯರಿನ ಕೊಪ್ಪರಿಗೆಯೊಂದನ್ನು ಖಾಲಿ ಮಾಡಿ ಬರುತ್ತಿದ್ದದ್ದೂ ತಾಜಾನನಪಿನಲ್ಲಿದೆ. ಪಕ್ಕದಲ್ಲೇ ತೆಂಡೂಲ್ಕರ್ಸ್ ಅನ್ನುವ ಸಚಿನ್ ತೆಂಡೂಲ್ಕರನ ರೆಸ್ಚುರಾ ಇದ್ದರೂ ಅಲ್ಲಿಗೆ ಹೋದದ್ದಿಲ್ಲ. 

ಲಿಯೋ ಬಗ್ಗೆ ಬರೆಯಬೇಕೆಂದು ಅಲ್ಲಿನ ಚಿತ್ರವನ್ನೂ ತೆಗೆದಿಟ್ಟಿದ್ದೆ, ಹಾಗೂ, ಅದೇ ಲಿಯೋಪೋಲ್ಡ್ ಸುತ್ತಮುತ್ತಲೇ ಓಡಾಡುತ್ತ ಗ್ರೆಗರಿ ರಾಬರ್ಟ್ಸ್ ಬರೆದಿದ್ದ ಶಾಂತಾರಾಮ್ ಪುಸ್ತಕದ ಬಗೆಗೂ ಬರೆಯಬೇಕೆಂದು ಯೋಚಿಸಿದ್ದೆ. ಲೋನ್ಲಿ ಪ್ಲಾನೆಟ್ ಇತ್ಯಾದಿಗಳಲ್ಲಿ ಚರ್ಚಿತವಾಗಿದ್ದ ಲಿಯೋಪೋಲ್ಡ್ ಕೆಫೆಗೆ ತನ್ನದೇ ಗ್ರಾಹಕ ಬಳಗವಿತ್ತು. ಎಷ್ಟರ ಮಟ್ಟಿಗೆ ಅದು ವಿದೇಶೀ ಯಾತ್ರಿಗಳಲ್ಲಿ ಹೆಸರುಮಾಡಿತ್ತೆಂದರೆ, ಬಿಯರು, ಊಟ ಇತ್ಯಾದಿಗಳಲ್ಲದೇ ಲಿಯೋಪೋಲ್ಡ್ ನಲ್ಲಿ ಅವರದೇ ಟೀ ಷರ್ಟುಗಳೂ, ಶಾಂತಾರಾಮ್ ಪುಸ್ತಕದ ಆಟೋಗ್ರಾಫ್ ಕಾಪಿಗಳೂ ಮಾರಾಟಕ್ಕಿದ್ದುವು. ಗುಂಡಿನ ಗುರುತಿನ ಅನೇಕ ರಂಧ್ರಗಳನ್ನು ಹೊತ್ತ ಲಿಯೋಪೋಲ್ಡ್ ಕೆಫೆ ಮತ್ತೆ ಬಾಗಿಲು ತೆರೆದು ಮಾರಾಟ ಆರಂಭಮಾಡಿದೆ. ಅಲ್ಲಿ ಇನ್ನೂ ಶಾಂತಾರಾಮ್ ಪ್ರತಿಗಳು ಸಿಗುತ್ತವೆಯೇ? ಗೊತ್ತಿಲ್ಲ. ಶಾಂತಾರಾಮ್ ಹೆಸರು ಸರಿಯೇ?

೨೬ರ ಸಂಜೆ ಮನೆಯಲ್ಲಿ ಕೂತು ಕ್ರಿಕೆಟ್ ಮ್ಯಾಚು ನೋಡುತ್ತಿದ್ದೆ. ಭಾರತ ಐದನೆಯ ಬಾರಿಗೆ ಇಂಗ್ಲೆಂಡನ್ನು ಚಚ್ಚಿ ತನ್ನ ಶ್ರೇಷ್ಠತೆಯನ್ನು ಮೆರೆಯುತ್ತಿದ್ದಾಗ, ಲಿಯೋಪೋಲ್ಡ್ ನಲ್ಲಿ ’ಗನ್ ಬ್ಯಾಟಲ್’ ಆಗುತ್ತಿದೆ ಅನ್ನುವ ವಾರ್ತೆ ಬಂದಿತ್ತು. ಅಲ್ಲಿನ ಪರಿಸರದಲ್ಲಿ ಜಗಳ ಪ್ರಾರಂಭವಾಗಿ, ಯಾವನೋ ತನ್ನು ಬಂದೂಕಿನ ಕುದುರೆಯನ್ನೆಳೆದಿರಬಹುದು ಅಂದುಕೊಂಡೆನಾದರೂ, ಅದೇ ನನ್ನನ್ನು ವಿಚಲಿತಗೊಳಿಸಲು ಸಾಕಾಗಿತ್ತು. ಮುಂಜಾನೆ ನಾಲ್ಕಕ್ಕೆ ನಾನು ಏರ್‍ಪೋರ್ಟಿಗೆ ಹೋಗಬೇಕಾಗಿದ್ದದ್ದರಿಂದ ಟಿವಿಯನ್ನು ಆರಿಸಿ ಮಲಗಿಬಿಟ್ಟೆ. ಬೆಳಿಗ್ಗೆ ಏಳುವ ವೇಳೆಗೆ ನನ್ನ ಮೊಬೈಲಿನಲ್ಲಿ ೨ ಎಸ್.ಎಮ್.ಎಸ್ ಮತ್ತು ಮೂರು ಮಿಸ್ ಕಾಲುಗಳಿದ್ದುವು. ಎಲ್ಲವೂ ಕಳೆದಬಾರಿ ನನ್ನ ಜೊತೆಗೆ ಲಿಯೋಪೋಲ್ಡ್ ನಲ್ಲಿ ಕೂತು ಬಿಯರು ಹಾಕಿದ್ದ ಹಳೆಯ ವಿದ್ಯಾರ್ಥಿಯಿಂದ. ಮೊದಲನೆಯದು - ಹೋಪ್ ಯು ಆರ್ ಅಲೈವ್ [ನೀನು ಬದುಕಿದ್ದೀಯ ಅಂತ ಆಶಿಸುತ್ತಿರುವೆ] ಎರಡನೆಯದು - "ತಾಜ್ ಇಸ್ ಆನ್ ಪೈರ್" ನನಗೆ ನಂಬಲಾಗಲಿಲ್ಲ. ಯಾಕೆಂದರೆ ಹೋದಬಾರಿ ಅಲ್ಲಿಗೆ ಹೋದಾಗ ನಮ್ಮನ್ನು ರಸ್ತೆಯಲ್ಲೇ ಇಳಿಸಿ ಸೂಟ್‍ಕೇಸುಗಳನ್ನು ಎಕ್ಸ್ ರೇ ಮಾಡಿ, ಕೈಯಲ್ಲಿದ್ದ ಬ್ಯಾಗನ್ನು ತೆಗೆದು ಪರೀಕ್ಷಿಸಿ ಒಳಕ್ಕೆ ಕಳಿಸಿದ್ದರು. ಪಾಕಿಸ್ತಾನದ ಮ್ಯಾರಿಯಟ್ ಹೋಟೇಲಿನ ಘಟನೆಯ ನಂತರ ತಾಜ್‍ನಲ್ಲಿನ ಸೆಕ್ಯೂರಿಟಿ ತುಸು ಅತಿಯಾಯಿತೋ ಅಂತಲೂ ಅನ್ನಿಸಿತ್ತು. 

ಟಿವಿ ಹಚ್ಚಿ ನೋಡಿದರೆ ಅದೂ ನಿಜ. ಮುಂಬೈಯಿಯ ಮೂಲಕವೇ ಅಹಮದಾಬಾದಿಗೆ ಪ್ರಯಾಣ ಮಾಡಿದೆ. ಆದರೆ ಏರ್ಫೋರ್ಟಿನಿಂದ ಆಚೆ ಬರುವ ಅವಶ್ಯಕತೆ ಇರಲಿಲ್ಲ. ವಿದ್ಯಾರ್ಥಿಗೆ ಪೋನ್ ಮಾಡಿ ನನ್ನ ಕುಶಲ ತಿಳಿಸಿದೆ.

ಮುಂಬಯಿ ಏರ್ ಪೋರ್ಟಿನಲ್ಲಿ ಅಹಮದಾಬಾದಿನ ಫ್ಲೈಟ್ ಹತ್ತುತ್ತಿರುವಾಗ ಮಲ್ಲಿಕಾ ಸಾರಾಭಾಯಿ, ಅಮೃತಾ ಪಟೇಲ್ ಹಾಗೂ ಎನ್.ಡಿ.ಡಿ.ಬಿಯ ಎಂಡಿ, ಟಿಕ್ಕು - ಎಲ್ಲರೂ ಕಂಡರು. ಯಾರ ಮುಖದಲ್ಲೂ ನಗೆಯಿಲ್ಲ. ಎಲ್ಲರೂ ಗರಬಡಿದವರಂತಿದ್ದರು. ಮಾರನೆಯ ದಿನದ ಪತ್ರಿಕೆ ಓದಿದಾಗಲೇ ತಿಳಿದದ್ದು ಅವರುಗಳೆಲ್ಲರೂ ತಾಜ್‍ನಲ್ಲಿ ಉಳಿದುಕೊಂಡು ವಿವಿಧ ರೀತಿಯಲ್ಲಿ ತಪ್ಪಿಸಿ ಬಂದಿದ್ದರು! ಅಹಮದಾಬಾದಿಗೆ ಬಂದ ನಂತರ ಆ ತಾಜ್ ಪ್ರಾಂತದಲ್ಲೇ ವಾಸವಾಗಿರುವ ನನ್ನ ಹಳೆಯ ಸಹೋದ್ಯೋಗಿ ಸಂಜೀವ್ ಗೆ ಫೋನ್ ಹಚ್ಚಿದೆ. "ಹೇಗಿದ್ದೀಯ?" ಎಂದು ಕೇಳುತ್ತಿರುವಾಗಲೇ ಹಿಂದಿನಿಂದ ಗುಂಡಿನ ಶಬ್ದವೂ ಕೇಳಿಸುತ್ತಿತ್ತು " ಯೋಚಿಸಬೇಡ.. ನಾರಿಮನ್ ಬಿಲ್ಡಿಂಗ್ ಪಕ್ಕದಲ್ಲೇ ಇದೆ. ಅಲ್ಲಿ ಕಮಾಂಡೋಗಳು ಇಳಿಯುತ್ತಿದ್ದಾರೆ, ನಾನು ಚೆನ್ನಾಗಿಯೇ ಇದ್ದೇನೆ. ನನ್ನ ಕುಶಲ ತಿಳಿಯಬೇಕಾದರೆ ಟಿವಿ ನೋಡುತ್ತಾ ಇರು" ಅಂದು ನಕ್ಕ! 

ಈ ಪರಿಸ್ಥಿತಿಯಲ್ಲಿ ನಾವು ಮಾಡಬಹುದಾದದ್ದು ಇಷ್ಟೇ! ಹೋದಬಾರಿ ಮೀಟಿಂಗಿಗೆ ಹೋದಾಗ ಒಬಿರಾಯ್ ನಲ್ಲಿ ಊಟ, ತಾಜ್‍ನಲ್ಲಿ ವಸತಿ, ಲಿಯೋಪೋಲ್ಡ್ ನಲ್ಲಿ ಬಿಯರು ಹಾಕಿದ್ದಲ್ಲದೇ ರಾತ್ರೆ ರೀಗಲ್ ಸಿನೇಮಾದಲ್ಲಿ ತಶನ್ ನೋಡಿಬಂದದ್ದು ನೆನಪಾಯಿತು. ಈ ಬಾರಿ ಹೋದಾಗ ಇವುಗಳಲ್ಲಿ ಒಂದನ್ನೂ ಸಾಧಿಸಲು ನನಗಾಗುವುದಿಲ್ಲ. ಇಷ್ಟುದಿನ ಆತಂಕ ನಮ್ಮನ್ನು ತಟ್ಟಿದಾಗ ಅದು ಒಂದು ಅಂಕಿಸಂಖ್ಯೆ ಮಾತ್ರವಾಗಿತ್ತು. ಈ ಬಾರಿ ಆ ಅಷ್ಟೂ ಅಂಕಿಗಳಿಗೆ ಒಂದು ಮುಖವೂ ಇದೆ. ಹೀಗಾಗಿಯೇ ಅದು ನಮ್ಮನ್ನು ಇನ್ನೂ ಹೆಚ್ಚಾಗಿ ತಟ್ಟುತ್ತಿದೆ.