ಇಪ್ಪತ್ತು ವರುಷಗಳ ಹಿಂದೆ ಬರವಣಿಗೆ ಎನ್ನುವುದು ಕಾಗದದ ಮೇಲೆ ಸೇರಿಸುವ ಅಕ್ಷರಜಾಲವಾಗಿತ್ತು. ಹಾಗೂ ಬರೆದದ್ದು ಪ್ರಕಟಗೊಳ್ಳಲು ಹಲವು ಸಹಜ ಅಡಚಣೆಗಳೂ ಇದ್ದುವು. ಈಗ ತಂತ್ರಜ್ಞಾನದ ವೃದ್ಧಿಯೊಂದಿಗೆ ಇಂದು ಕೀಲಿಮಣೆಯ ಮೇಲೆ ಹಲವುಬಾರಿ ಬೆರಳುಗಳನ್ನಾಡಿಸಿ, ಒಂದು ಗುಂಡಿಯನ್ನು ಒತ್ತಿದರೆ ಬರೆದದ್ದು ಜಗತ್ತಿಗೇ ತಿಳಿಯುತ್ತದೆ. ಅಚ್ಚು ಮಾಧ್ಯಮದಲ್ಲೂ ಇದು ತುಂಬಾ ಸರಳವಾಗಿದೆಯೆಂದು ಗೆಳೆಯರೊಬ್ಬರು ಹೇಳಿದರು. ಡಿಟಿಪಿಯ ತಂತ್ರಜ್ಞಾನ ಬಂದಿರುವುದರಿಂದ ಮೊದಲು 1000 ಪ್ರತಿಗಳಿಗೆ ಕಡಿಮೆ ಅಚ್ಚು ಮಾಡುವುದು ಕಷ್ಟ ಎಂದು ಒದ್ದಾಡುತ್ತಿದ್ದುದಕ್ಕೆ ವಿರುದ್ಧವಾಗಿ 150 ಪ್ರತಿಗಳನ್ನು ಅಚ್ಚು ಹಾಕಬಹುದಾದ ಸಾಧ್ಯತೆಯಿದೆಯಂತೆ. ಅಕ್ಷರ ಜೋಡಣೆಯನ್ನು ಕಂಪ್ಯೂಟರಿನಲ್ಲಿ ಕಾಯ್ದಿರಿಸಬಹುದಾದ್ದರಿಂದ, ಸರಕಾರಿ, ಲೈಬ್ರರಿ ಆರ್ಡರುಗಳು ಬಂದಾಗ ಇನ್ನಷ್ಟು ಪ್ರತಿಗಳನ್ನು ಅಚ್ಚು ಹಾಕಬಹುದು...
ಕೆಲವು ಮಾಧ್ಯಮಗಳಲ್ಲಿ ಈಗಲೂ ಪ್ರಕಟಿಸುವುದು ಕಷ್ಟವೇ ಆದರೂ, ಅದಕ್ಕೆ ಕಾಯಬೇಕಾಗಿ ಬಂದರೂ, ನಮಗೆ ಬಹಳಷ್ಟು ಇತರ ಮಾರ್ಗಗಳು ಸುಲಭವಾಗಿ ಕಾಣಿಸುತ್ತಿವೆ. ಬ್ಲಾಗುಗಳ ಲೋಕವೂ ತ್ವರಿತ ನಿರ್ವಾಣದ ಲೋಕವೇ ಆಗಿದೆ. ಇದರಿಂದ ಎಷ್ಟೋ ಹೊಸ ಧ್ವನಿಗಳು ಬರಬಹುದು, ಹೊಸ ರೀತಿಯ ಅಭಿವ್ಯಕ್ತಿಯೂ ಕಾಣಬಹುದು. ಆದರೂ ಈ ಯಂತ್ರದ ಮೂಲಕ ಮಾತನಾಡುವ, ಇಡೀ ವ್ಯಕ್ತಿತ್ವ ಪ್ರಕಟಗೊಳ್ಳದ - ಅನಾಮಿಕತೆಯಿಂದಾಗಿಯೇ ಬೆತ್ತಲಾಗುವ ಬ್ಲಾಗಿನ ಮಾಧ್ಯಮ ಕುತೂಹಲದ್ದೂ ಆಗಿದೆ. ಇದರಿಂದಾಗಿ ಈಗ ಕಾಣುವ ಈ ಅಭಿವ್ಯಕ್ತಿಗೆ ಶಿಸ್ತಿನ, ಎಸ್ಥಟಿಕ್ಸ್ ಗೆ ಸಂಬಂಧಿಸಿದ, ಚಿಂತನದ, ಹಲವು ಮಗ್ಗಲುಗಳನ್ನೂ ಯೋಚಿಸಿನೋಡಬಹುದು.
ಹೈದರಾಬಾದಿನಲ್ಲಿ ಕರ್ನಾಟಕ ಸಾಹಿತ್ಯ ಮಂದಿರ ಪ್ರಕಟಸುತ್ತಿದ್ದ ಪರಿಚಯ ಎಂಬ ಪತ್ರಿಕೆಗೆ ಬರೆದ ಬರವಣಿಗೆಗಳು ನನ್ನ ಮಟ್ಟಿಗೆ ಇಂದಿನ ಬ್ಲಾಗಿನ ಚೌಕಟ್ಟಿಗೆ ಹತ್ತಿರವಾದಂತಹ ಬರವಣಿಗೆಗಳು. ದೂರದ ಊರಿನಿಂದ ಬರುತ್ತಿದ್ದ ಪತ್ರಿಕೆಗೆ ಸಂಪಾದಕರೂ, ಬರಹಗಾರರೂ, ಪ್ರೂಫ್ ಓದುವವರೂ, ಒಮ್ಮೊಮ್ಮೆ ಕುತೂಹಲದಿಂದ ಅಕ್ಷರದ ಮೊಳೆಗಳನ್ನು ಜೋಡಿಸುತ್ತಿದ್ದವರೂ ಎಲ್ಲ ಅಲ್ಲಿ ಅಡ್ಡಾ ಹಾಕುತ್ತಿದ್ದ ನಾಲ್ಕಾರು ಮಿತ್ರರು. ಅಕ್ಷರ ಜೋಡಿಸಿ ನೋಡಿ, ಉಳಿದ ಜಾಗವನ್ನು ಸುದ್ದಿ, ಪುಟ್ಟ ಕತೆ, ಅಲ್ಲೇ ಹೆಣೆದ ಕವಿತೆ ಹೀಗೆ ಕ್ಷಣದಲ್ಲೇ ಬರೆದ ತಕ್ಷಣ ಸಾಕ್ಷಾತ್ಕಾರದ ತುಣುಕು ಬರವಣಿಗೆಗಳನ್ನು ಮಾಡಲು ಕೆಲವರಿಗಷ್ಟೇ ಸಾಧ್ಯವಿತ್ತು. ಆದರೂ ಈ ಸಾಧ್ಯತೆಯೂ ಸಂಪಾದಕನ ಒಟ್ಟಾರೆ ಒಪ್ಪಿಗೆಯ ಪರಿಧಿಯಲ್ಲಿ, ಶಿಷ್ಟಾಚಾರದ ಚೌಕಟ್ಟಿನೊಳಗೆ ನಡೆಯುತ್ತಿತ್ತು. ಇಂಥ ಮಾಧ್ಯಮ ಎಟುಕದಿದ್ದವರು ಎಲ್ಲಿಂದಲೋ ಪತ್ರಿಕೆಯಲ್ಲಿ ಪುಟ್ಟ ಸುದ್ದಿ ನೀಡಿ - ಪೋಸ್ಟ್ ಕಾರ್ಡ್ ಕಥೆಗಳ ಸಂಕಲನಕ್ಕೆ ಬರಹಗಳನ್ನು ಆಹ್ವಾನಿಸುತ್ತಿದ್ದರು. ಅಲ್ಲಿ ಪದಗಳ ಮಿತಿ ಒಂದು ನಿಗದಿತ ಜಾಗಕ್ಕೆ ಪರಿಮಿತವಾಗಿರುತ್ತಿತ್ತು. ನಿಮ್ಮ ಕೈಬರಹದ ಚಮತ್ಕಾರದಲ್ಲಿ ಹೆಚ್ಚು ಪದಗಳನ್ನು ಅದರೂಳಕ್ಕೆ ತೂರಿಸುವ ಶ್ರದ್ಧೆಯನ್ನು ಬರಹಗಾರರು ತೋರಬಹುದಿತ್ತು. ಹೀಗಾಗಿಯೇ ವರ್ಡ್ ಕೌಂಟ್ ಇಲ್ಲದ ಕಾಲದಲ್ಲೂ ಕಥಾಸ್ಪರ್ಧೆಗಳಿಗೆ ಪುಟಮಿತಿಗಳಿರುತ್ತಿದ್ದವು. ಆ ಪುಟಮಿತಿಯನ್ನೂ ಮೀರಿ ಕಥಾಸ್ಪರ್ಧೆಗಳಿಗೆ ಕಥೆಗಳನ್ನು ಕಳಿಸುತ್ತಿದ್ದ ನಮ್ಮ ಭಾಗ್ಯ ಈಗಿನ ಪದಗಳೆಣಿಸುನ ಲಕ್ಕಿಗರ ಕಾಲಕ್ಕಿಂತ ಭಿನ್ನವೂ ಉತ್ತಮವೂ ಆಗಿತ್ತನ್ನಿಸುತ್ತದೆ. ಅಥವಾ ನನಗೆ ವಯಸ್ಸಾಗುವುದನ್ನ ನಾನು ಗಮಸಿಸುತ್ತಿಲ್ಲ.
ಪ್ರಕಟಣಾ ತಂತ್ರಜ್ಞಾನ ಬೆಳೆದ ಹಾಗೆ ಅಂತರ್ಜಾಲವೂ ನಮ್ಮ ಕೈಗೆಟುಕುತ್ತಿರುವ ಈ ಕಾಲದಲ್ಲಿ ಬರವಣಿಗೆಯ ಪರಿಯ ಕೆಲ ನಿಯಮಗಳು ಸಹಜವಾಗಿಯೇ ಬದಲಾಗುತ್ತಿವೆ. ಹೀಗಾಗಿ ಇದರಿಂದ ಬರವಣಿಗೆಯ ಗುಣಮಟ್ಟದ ಮತ್ತು ವೈವಿಧ್ಯತೆಯ ಮೇಲೆ ಆಗಿರಬಹುದಾದ ಪರಿಣಾಮ ಏನಿರಬಹುದು? ಯಾರು ಈ ಹೊಸ ಮಾಧ್ಯಮವನ್ನು ತಮ್ಮದಾಗಿಸಿಕೊಂಡಿದ್ದಾರೆ, ಅವರುಗಳ ಸಾಮಾನ್ಯತಃ ಕಾಳಜಿಗಳೇನಿರಬಹುದು.. ಈ ಹುಡುಕಾಟಕ್ಕೆ ಹೊರಟರೆ ಕನ್ನಡದಲ್ಲಿ ಬರುತ್ತಿರುವ ಐನೂರಕ್ಕೂ ಹೆಚ್ಚು ಬ್ಲಾಗುಗಳನ್ನು ನಾವು ಪರಿಶೀಲಿಸಿ ಅದರಲ್ಲಿನ ಹೂರಣವನ್ನು ಹುಡುಕಬಹುದು. ಈ ಐನೂರು ಬ್ಲಾಗುಗಳು ಒಂದು ರೀತಿಯ ಖಾಸಗೀ ಆಸ್ತಿಯಲ್ಲಿ ಕಟ್ಟಿದ ಸ್ವಂತ ಮನೆಗಳು. ಇದಲ್ಲದೇ ಜಾಲದಲ್ಲಿರಬಹುದಾದ ತ್ವರಿತ ಪ್ರಕಟಣೆ ನೀಡುವ - ಸಂಪದ, ದಟ್ಸ್ ಕನ್ನಡದಂತಹ ಸಾಮೂಹಿಕ ತಾಣಗಳೂ ಹೊಸ ಮಾಧ್ಯಮವನ್ನು ಒದಗಿಸಿವೆ.
ಈ ತಂತ್ರಜ್ಞಾನದ ಭಿನ್ನತೆಯೇ ಹೊಸರೀತಿಯ ಬರವಣಿಗೆಯನ್ನೂ ಹೊಸತರಹದ ಬರಹಗಾರರನ್ನೂ ಹುಟ್ಟು ಹಾಕಿದೆ. ಎಂದೂ ಲೇಖನಿಯನ್ನು ಕಾಗದಕ್ಕೆ ಮುಟ್ಟಿಸದೇ ಇದ್ದಿರಬಹುದಾದ ಕಪಾಟಿನೊಳಗಿನ ಬರಹಗಾರರು ತಮ್ಮ ಲಜ್ಜೆಯನ್ನು ಬದಿಗೊತ್ತಿ ಕೀಲಿಮಣೆಯ ಮೇಲೆ ಕೈಯಾಡಿಸುತ್ತಾ ಮುಷ್ಟಿಮೈಥುನ ಮಾಡಿಕೊಳ್ಳಲು ಒಂದು ರೀತಿಯ ಬಹಿರಂಗ ಅನಾಮಿಕತೆಯನ್ನು ಬ್ಲಾಗುಗಳು ಒದಗಿಸಿಕೊಟ್ಟಿವೆ. ಇದೊಂದು ವಿಚಿತ್ರ ರೀತಿಯ ಮುಖ ಮುಚ್ಚಿಕೊಳ್ಳಲೇ ಬೇಕೆಂದು ಬಯಸುವ ಅನಾಮಿಕತೆಯಲ್ಲ. ಆದರೆ ಮುಖ ತೋರಿಸುತ್ತಲೇ, ನಾನ್ಯಾರು ಎನ್ನುವುದು ನಿನಗೆ ಗೊತ್ತಿಲ್ಲವಾದ್ದರಿಂದ ನನಗೆ ಪ್ರಾಮಾಣಿಕವಾಗಿರಲು - ಆ ಮೂಲಕ ನಿನಗೆ ನೋವುಂಟಾದರೂ ಅಪ್ರಿಯ ಸತ್ಯವನ್ನು ಹೇಳುವ ಧೈರ್ಯವನ್ನೂ ಈ ಮಾಧ್ಯಮ ಒದಗಿಸಿಕೊಟ್ಟಿದೆ. ಮುಂಬಯಿಯ ಬ್ಯಾಂಡ್ ಸ್ಟಾಂಡಿನ ಕಡಲ ಕಟ್ಟೆಯ ಮೇಲೆ ತಬ್ಬಿ ಕುಳಿತ ಅನೇಕ ಪ್ರೇಮಿಗಳಂತೆ - ತಮ್ಮ ಹತ್ತಿರದವರಿಂದ ಅನಾಮಿಕತೆಯನ್ನೂ, ಹಾಗೂ ಜಗತ್ತಿನಲ್ಲಿ ಬಿಂದಾಸ್ ಜೀವಿಸುವ ಖುಲ್ಲಂ-ಖುಲ್ಲಾ ಪ್ರವೃತ್ತಿಯನ್ನೂ ಏಕಕಾಲಕ್ಕೆ ಬೆಳೆಸಿಕೊಳ್ಳಲು ಈ ಮಾಧ್ಯಮ ಅನುವು ಮಾಡುಕೊಟ್ಟಿದೆ.
ಗಮ್ಮತ್ತಿನ ವಿಚಾರವೆಂದರೆ - ತಂತ್ರಜ್ಞಾನಕ್ಕೂ ನಮ್ಮಲ್ಲಿ ಬರವಣಿಗೆಯಲ್ಲಿ ತೊಡಗುತ್ತಿರುವ ಹೊಸ ಜನರಿಗೂ ನಾವು ತಾಳೆಹಾಕುತ್ತಿರುವಾಗಲೇ, ತಂತ್ರಜ್ಞಾನದಲ್ಲಿ ಈ ಮಧ್ಯೆ ಆದ ಬದಲಾವಣೆಗಳು ನಮ್ಮನ್ನು ಹೆಚ್ಚಾಗಿ ತಟ್ಟಲಿಲ್ಲವೆನ್ನುವ ವಿಚಾರವನ್ನು ಮನಗಾಣಬೇಕು. ಬರವಣಿಗೆಯ ಪ್ರಕ್ರಿಯೆಯನ್ನು ಬದಲಾಯಿಸಬಲ್ಲ, ಹಾಗೂ ನಾವು ಯೋಚಿಸುವ, ಆ ಆಲೋಚನೆಗಳನ್ನು ಅಕ್ಷರಕ್ಕಿಳಿಸುವ ಸಮಯದ ಸಮನ್ವಯತೆಯನ್ನು ಪ್ರಶ್ನಿಸುವ ಯಾವುದೇ ತಂತ್ರಜ್ಞಾನ ಕನ್ನಡವನ್ನು ಆಳವಾಗಿ ತಟ್ಟಿರಲಿಲ್ಲವೆನಿಸುತ್ತದೆ. ಗಣಕಯಂತ್ರ ಬರುವುದಕ್ಕೆ ಮೊದಲೇ ನಮ್ಮಲ್ಲಿ ಅನೇಕ ವರ್ಷಗಳ ಕಾಲ ಕನ್ನಡದ ಟೈಪ್ ರೈಟರುಗಳಿದ್ದುವು. ಬಹಳಷ್ಟು ಜನ ಇಂಗ್ಲೀಷ್ ಬರಹಗಾರರು ಕೈಬರಹದಿಂದ, ನೇರವಾಗಿ ಟೈಪು ಮಾಡುವ ಕಲೆಯನ್ನು ಮೈಗೂಡಿಸಿಕೊಂಡು, ತಮ್ಮ ಕೈಬರಹ ಹೆಚ್ಚಾಗಿ ಕಾಣದಂತೆ ಮರೆಮಾಚಿ ಮ್ಯಾನ್ಯುಸ್ಕ್ರಿಪ್ಟನ್ನು ಟೈಪ್ ಸ್ಕ್ರಪ್ಟಿಗೆ ಬದಲಾಯಿಸಿದ್ದರೂ, ಕನ್ನಡ ಭಾಷೆಯ ನುಡಿಗಟ್ಟಿನ ಸಂಕೀರ್ಣತೆಯಿಂದಾಗಿ ಕನ್ನಡ ಟೈಪ್ ರೈಟರ್ ಲೇಖಕರನ್ನು ಹೆಚ್ಚಾಗಿ ಆಕರ್ಷಿಸಲ್ಲಿಲ್ಲ. ಬಹುಶಃ ತಕ್ಷಣ ಬರಹಕ್ಕೆ ಆಗ ಐದಾರು ಸಾವಿರ ರೂಪಾಯಿ ಬೆಲೆಬಾಳುತ್ತಿದ್ದ ಟೈಪ್ ರೈಟರನ್ನು ಕೊಳ್ಳಬಹುದೆಂದು ಆಲೋಚಿಸುವ ಧೈರ್ಯವಿದ್ದದ್ದೇ - ಅಷ್ಟೊತ್ತಿಗಾಗಲೇ ನುರಿತು ಹೆಚ್ಚು ಬರೆಯುವ ಸಾಧ್ಯತೆಯಿದ್ದ ಅಸ್ಖಲಿತರಿಗೆ ಮಾತ್ರ. ಸಾಲದ್ದಕ್ಕೆ ಕನ್ನಡದ ಶುದ್ಧತೆಯನ್ನು ಗೌರವಿಸುವವರಿಗೆ ಐತ್ವಕ್ಕೂ (ೈ) ವಟ್ರಸುಳಿಗೂ (ೃ) ವ್ಯತ್ಯಾಸವನ್ನೇ ತೋರದ ಈ ಕ್ಲಿಷ್ಟ ಯಂತ್ರ ಬೇಸರವನ್ನೇ ತರಿಸಿರಬೇಕು. ಕನ್ನಡ ಟೈಪ್ ರೈಟರುಗಳನ್ನು ಪ್ರೀತಿಸಿದವರ - ಆ ತಂತ್ರಜ್ಞಾನವನ್ನು ಪೋಷಿಸಿದವರ ಯಾದಿ ತಯಾರಿಸಲು ಕಷ್ಟವೇ ಆಗಬಹುದಾದರೂ - ಖ್ಯಾತ ಬರಹಗಾರರಾದ ಎಸ್.ಎಲ್.ಭೈರಪ್ಪನವರು ಮಾತ್ರ ಎಲ್ಲ ಇಂಗ್ಲೀಷ್ ಟೈಪ್ ರೈಟರುಗಳನ್ನೂ ಅರಬ್ಬೀ ಸಮುದ್ರಕ್ಕೆ ಹಾಕಬೇಕೆಂದು ಹೇಳಿ ತಮ್ಮ ಕನ್ನಡಪ್ರೀತಿಯನ್ನ ವ್ಯಕ್ತ ಪಡಿಸಿದ್ದರು. ಆದರೆ ಭೈರಪ್ಪನವರು ಕನ್ನಡ ಟೈಪ್ ರೈಟರ್ ಉಪಯೋಗಿಸುತ್ತದ್ದರೇ ಇಲ್ಲವೇ ಅನ್ನುವುದು ನನಗೆ ತಿಳಿಯದು.
ನನಗೆ ತಿಳಿದಿರುವಂತೆ ಖಾಸಗೀ ಕನ್ನಡ ಟೈಪ್ ರೈಟರನ್ನು ಕೊಂಡವರಲ್ಲಿ ಮೊದಲಿಗರು ಯಶವಂತ ಚಿತ್ತಾಲರು. ಅದೃಷ್ಟವಶಾತ್ ಅದು ಅವರಿಗೆ ಒಗ್ಗಿ ಬರಲಿಲ್ಲ. ಅದೃಷ್ಟವಶಾತ್ ಅನ್ನುವ ಪದ ಉಪಯೋಗಿಸುವುದಕ್ಕೆ ಕಾರಣವನ್ನು ಚಿತ್ತಾಲರ ಶುದ್ಧವಾದ, ಚಿತ್ತಿಲ್ಲದ ಕೈಬರಹ ನೋಡಿದವರಿಗೆ ಅರ್ಥವಾಗುತ್ತದೆ. ಒಂದು ರೀತಿಯಲ್ಲಿ ಲೇಖಕನ ಕೈಯಿಂದಲೇ ಬಂದ ಅಕ್ಷರಗುಚ್ಚವನ್ನು ನೋಡವುದಕ್ಕೂ, ಮಧ್ಯೆ ಆ ಅಕ್ಷರಗಳನ್ನು ರೂಪಾಂತರಗೊಳಿಸಿ ಮುದ್ರಣಾಲಯದ ನಂತರ ನೋಡುವುದಕ್ಕೂ ಬಹಳವೇ ವ್ಯತ್ಯಾಸವಿದೆ.
ಅನಂತಮೂರ್ತಿಯವರ ಟಿಪ್ಪಣಿಗಳನ್ನು ನೋಡಿ - ಬರವಣಿಗೆಯಲ್ಲಿ ಅವರು ಅಕ್ಷರಗಳನ್ನು ನೇಯುವ ರೀತಿ ಆಪ್ಯಾಯಮಾನದ್ದು. ತಿರುಮಲೇಶರ ಅಕ್ಷರಗಳು ಹೈದರಾಬಾದೀ ಲಕ್ಷಣಗಳನ್ನು ಹೊಂದಿದ್ದು ಕನ್ನಡ-ಉರ್ದುವಿನ ಮಿಶ್ರಣದಂತೆ ಕಾಣುತ್ತದೆ. ಎಚ್.ಎಸ್.ವಿ ಅವರದ್ದು ಅಗಲವಾದ ವಿಶಾಲ ಮನಸ್ಸಿನ ಬರವಣಿಗೆ. ಕೆ.ಸತ್ಯನಾರಾಯಣರದ್ದು ಬಹಳಷ್ಟನ್ನು ಹೇಳಬೇಕೆಂಬ ಕಾತರದಿಂದ ಬರೆದ ಅವಸರದ ಬರವಣಿಗೆ - ಜಯಂತ ಕಾಯ್ಕಿಣಿಯದ್ದು ಮುದ್ದಾಗಿ ಕಾಣುವ ಶುದ್ಧ ಬರವಣಿಗೆ - ಅದರ ಜೊತೆಗೆ ಅಲ್ಲಿಲ್ಲಿ ಕೆಲವು ಚಿತ್ತಾರಗಳ ಸಂಭ್ರಮ - ಸಾಲದ್ದಕ್ಕೆ ಕಡಲ ದಂಡೆಯ ಜೀವಿ ಎಂದು ನಿರೂಪಿಸಲೋ ಎಂಬಂತೆ ಕಾಣುವ ಮೀನುಗಳ ಭಿತ್ತಿಗಳು. ನಾಗತಿಹಳ್ಳಿ ಚಂದ್ರಶೇಖರನದ್ದು ಅತೀ ಶುದ್ಧ, ಮುದ್ದಾದ, ಮುದ್ರಣದಂತೆ ಕಾಣುವ (ಒಮ್ಮೊಮ್ಮೆ ಕೃತಕವೆನ್ನಿಸಬಹುದಾದಷ್ಟು ಗುಂಡಾದ) ಬರವಣಿಗೆ.
ಈ ಮೀಮಾಂಸೆಗೆ ಒಗ್ಗದ ಕನ್ನಡದ ಇಬ್ಬರು ಲೇಖಕರು - ಪಾಲ್ ಸುದರ್ಶನ್ ಮತ್ತು ಪತ್ತೇದಾರಿ ಸಾಹಿತ್ಯ ಬರೆವ ಎಚ್.ಕೆ.ಅನಂತರಾವ್. ಪಾಲ್ ಟೈಪ್ ರೈಟರಿನ ಅನಂತ ಸಾಧ್ಯತೆಗಳನ್ನು ಪರಿಶೀಲಿಸಿ ನೇರವಾಗಿ ಬೇಕಿದ್ದರೆ ಎರಡು ಕಾಲಂಗಳಲ್ಲಿ ಟೈಪ್ ಮಾಡಬಲ್ಲವನಾಗಿದ್ದ ಚತುರ. ಸಿ.ಜಿ.ಕೆ ರಂಗನಿರಂತರ ಎನ್ನುವ 150 ದಿನಗಳ ಸತತ ನಾಟಕದ ಕಾರ್ಯಕ್ರಮ ನಡೆಸಿದಾಗ ಪಾಲ್ "ಕಟ್ಟೆ" ಅನ್ನುವ ಮೂರು ಕಾಲಮ್ಮಿನ ವಾರ್ತಾಪತ್ರವನ್ನು ಸುಲಭವಾಗಿ ನೇರವಾಗಿ ಟೈಪ್ ಮಾಡಿ, ಪ್ರತೀ ವಾರ ಹೊರತರುತ್ತಿದ್ದರು. ಅದರ ಹೂರಣವೂ ಅವರೇ, ಓರಣವೂ ಅವರೇ. ಎಚ್.ಕೆ.ಅನಂತರಾಯರ ತೊಂದರೆಗಳು ಎರಡು - ಅವರ ಕಥೆಗಳು ಅದ್ಭುತವಾಗಿರುವ ಸಾಧ್ಯತೆ ಇದ್ದರೂ - ಭಾಷೆಯ ಮೇಲಿನ ಹಿಡಿತ - ಕಾಗುಣಿತ - ಅಲ್ಪ ಮಹಾಪ್ರಾಣಗಳು ಅಷ್ಟಕ್ಕಷ್ಟೇ.. ಹೀಗಾಗಿ ವೈಎನ್ಕೆ ಹೇಳುತ್ತಿದ್ದಂತೆ ಅವರೊಬ್ಬ ಗ್ರೇಟ್ ಡಿಕ್ಟೇಟರ್. ಆದರೆ ಅವರಿಗೆ ಸಿಗುವ ಹುಡುಗರೂ ಎಷ್ಟು ಬೃಹಸ್ಪತಿಗಳಾಗುತ್ತಿದ್ದರೆಂದರೆ, ಅವರ ಕಾದಂಬರಿಗಳ ಅನೇಕ ವಾಕ್ಯಗಳನ್ನು ಬಹುಶಃ ಸುಧಾ ಪತ್ರಿಕೆಯ ಸಂಪಾದಕ ವಿಭಾಗವೇ ಬರೆದಿರಬಹುದು... ಈ ಇಬ್ಬರೂ ತಂತ್ರಜ್ಞಾನವನ್ನು ತಯಾರಿಸುವವರಿಗೆ ಖುಷಿಯನ್ನು ನೀಡುವವರು - ಒಬ್ಬಾತ ತನ್ನಬಳಿಯಿದ್ದ ತಂತ್ರಜ್ಞಾನವನ್ನು ಉಪಯೋಗಿಸುವ ಪರಿಗೆ, ಮತ್ತೊಬ್ಬ ಉಪಯೋಗಿಸಬಹುದಾದ ಸಾಧ್ಯತೆಗಳ ದಿಕ್ಕನ್ನು ತೋರಲು.... ಆದರೆ ಈ ಇಬ್ಬರೂ ತುರ್ತು ಪ್ರಕಟಣೆಯ ಬ್ಲಾಗುಗಳು ಪ್ರಕಟಣಾ ತಂತ್ರಜ್ಞಾನವನ್ನು ಉಪಯೋಗಿಸುವವರಲ್ಲ.
ಟೈಪ್ ರೈಟರಿನಿಂದ ಮುಂದಕ್ಕೆ ಹೊರಟರೆ ಕಂಪ್ಯೂಟರ್ ಯುಗಕ್ಕೆ ನಾವು ನೆಗೆಯಬೇಕು. ಆಂಗ್ಲಭಾಷೆಯ ಸೀದಾ ಸಾದಾ ಸಾಧ್ಯತೆಗಳನ್ನು ಮೀರಿ ಗಣಕಯಂತ್ರದ ಯುಗ ನಮ್ಮನ್ನು ಆವರಿಸಿತು. ಒಂದು ರೀತಿಯಲ್ಲಿ ಕನ್ನಡ ಸಾರಸ್ವತ ಲೋಕ ಟೈಪ್ ರೈಟರನ್ನು ಅಂತರ್ಗತ ಮಾಡಿಕೊಳ್ಳದಿದ್ದದ್ದೇ ಕನ್ನಡದ ಭಾಗ್ಯವಿರಬಹುದು. ಯಾಕೆಂದರೆ ಆಂಗ್ಲಭಾಷೆಯ ಅನಂತ ಸಾಧ್ಯತೆಗಳೂ ಟೈಪ್ ರೈಟರಿನಿಂದ ಆಮದಾದ ಕ್ವರ್ಟಿ (ಕ್ಯು, ಡಬ್ಲ್ಯು, ಈ, ಆರ್, ಟಿ, ವೈ) ಕೀಲಿಮಣೆಯಾಧಾರದ ಮೇಲೆಯೆ ಬೆಳಿಯಿತು. ಕನ್ನಡದ ಟೈಪ್ ರೈಟರಿನ ಕೀಲಿಮಣೆಯ ಬಂಧನಕ್ಕೆ ಒಳಗಾಗಿದ್ದವರು ಪಾಲ್ ಸುದರ್ಶನನಂತಹ ಕೆಲವಾರು ವ್ಯಕ್ತಿಗಳಾದ್ದರಿಂದ ಆ ಬಂಧನದಿಂದ ಮುಕ್ತರಾಗಿ ಭಿನ್ನವಾಗಿ ಯೋಚಿಸುವ ಸಾಧ್ಯತೆ ಕನ್ನಡವನ್ನೊಳಗೊಂಡು ಭಾರತೀಯ ಭಾಷೆಗಳಿಗೆ ಸುಲಭವಾಗಿ ಪ್ರಾಪ್ತವಾಯಿತು.
ತಂತ್ರಜ್ಞಾನದಲ್ಲಿ ತುಸು ಬದಲಾವಣೆಗಳಾಗುತ್ತಾ ಹೋದರೂ, ಅದು ಈಗಾಗಲೇ ಬರೆಯುತ್ತಾ ಇದ್ದ ಬರಹಗಾರರಿಗೆ ಉಪಯೋಗಿಸಲು ಸಿಕ್ಕ ಮತ್ತೊಂದು ಪರಿಕರವಾಯಿತೇ ಹೊರತು, ಬರವಣಿಗೆಯ ಪರಿಭಾಷೆಯನ್ನು ಅದು ಬದಲಾಯಿಸುವ ಗೋಜಿಗೆ ಹೋಗಲಿಲ್ಲ. ತಂತ್ರಜ್ಞಾನದ ಬದಲಾವಣೆಯನ್ನು ಆಸಕ್ತಿಯಿಂದ ಬರಮಾಡಿಕೊಂಡ ಸೃಜನಶೀಲ ಬರಹಗಾರರು ಕಡಿಮೆಯೇ ಇರಬೇಕು. ಇದಕ್ಕೆ ಕಾರಣ - ಬರಹಗಾರನ ಬಳಿಯಿದ್ದ (ಹಾಗೂ ಸುಲಭವಾಗಿ ಪ್ರಾಪ್ರವಾಗುತ್ತಿದ್ದ) ತಂತ್ರಜ್ಞಾನಕ್ಕೂ ಆ ಬದಿಯಲ್ಲಿ ಪ್ರಕಟಣಾ ಬಳಗದಲ್ಲಿದ್ದ ತಂತ್ರಜ್ಞಾನಕ್ಕೂ ತಾಳೆಯಿಲ್ಲದಿರುವುದೇ ಆಗಿತ್ತು. ನಮ್ಮಲ್ಲಿಗೆ ಮೊದಲಿಗೆ ಬಂದ ಸೇಡಿಯಾಪು ತಂತ್ರ ಆಂಗ್ಲ ಭಾಷೆಯಾಧಾರದ ಮೇಲೆ ಕನ್ನಡವನ್ನು ಬರೆಯುವ (phonetic transliteration) ರೀತಿಯನ್ನು ಪ್ರತಿಪಾದಿಸಿತು. ಅದೃಷ್ಟವಶಾತ್ತು ಅದು ಮುಕ್ತವಾಗಿ, ಮುಫತ್ತಾಗಿ ಲಭ್ಯವಾಗುತ್ತಿದ್ದ ಸಾಫ್ಟ್ ವೇರ್ ಆದ್ದರಿಂದ ಸುಲಭವಾಗಿ ಡೌನ್ ಲೋಡ್ ಮಾಡಿ ಉಪಯೋಗಿಸಲು ಸಾಧ್ಯವಾಗಿತ್ತು. ಹೀಗಾಗಿ ಅನೇಕರು ಸೇಡಿಯಾಪು, ಮತ್ತು ಅದೇ ನಿಯಮಗಳ ಆಧಾರದ ಮೇಲೆ ಹೆಚ್ಚಿನ ಶಿಷ್ಟತೆಯೊಂದಿಗೆ ವಿಕಸನಗೊಳ್ಳುತ್ತಿರುವ 'ಬರಹ'ದ ಮೊರೆ ಹೋದರು. ಅದೇ ಕಾಲಕ್ಕೆ ಪುಣೆಯಲ್ಲಿರುವ ಸರಕಾರಿ ಸಂಸ್ಥೆ ಸಿ-ಡ್ಯಾಕ್ - ಲೀಪ್ ಅನ್ನುವ ಸಾಫ್ಟ್ ವೇರನ್ನು ತಯಾರುಮಾಡಿತ್ತು. ಲೀಪ್ ಉತ್ತಮ ಸಾಫ್ಟ್ ವೇರ್ ಅನ್ನುವುದಕ್ಕೆ ಕಾರಣ - ಆ ಕಾರ್ಯಕ್ರಮದಲ್ಲಿ ಭಿನ್ನ ರೀತಿಯ ಅಕ್ಷರಗಳ ಫಾಂಟುಗಳಿಲ್ಲದ್ದದ್ದಲ್ಲದೇ (ನಂದಿ, ಉಮಾ), ಕೀಲಿಮಣೆಯನ್ನು ಉಪಯೋಗಿಸಲು ಮೂರು ಭಿನ್ನ ಆಯ್ಕೆಗಳಿದ್ದುವು - ಕನ್ನಡ ಟೈಪ್ ರೈಟರಿನ ಕೀಲಿಮಣೆ, ಬರಹದಂತೆ ಇಂಗ್ಲೀಷ್ ಅಕ್ಷರಗಳಾಧಾರದ ಮೇಲೆ ಕನ್ನಡವನ್ನು ಬರೆವ ಕೀಲಿಮಣೆ, ಮತ್ತು ಕನ್ನಡದ್ದೇ ಆದ ಕೀಲಿಮಣೆ. ಕನ್ನಡದ್ದೇ ಆದ ಕೀಲಿಮಣೆ ಅಂದರೇನು? ಕನ್ನಡ ಭಾಷೆಯ ನುಡಿಗಟ್ಟಿನ ನಿಯಮಾನುಸಾರ - ಸ್ವರಗಳು ಒಂದೆಡೆ, ವ್ಯಂಜನಗಳು ಒಂದೆಡೆ, ಒತ್ತಕ್ಷರಗಳನ್ನು ಒತ್ತುವ ನಿಯಮ ಹಾಗೂ ಒಟ್ಟರೆ ಒಂದು ಪದವನ್ನು ಟೈಪ್ ಮಾಡಲು ಉಪಯೋಗಿಸಲು ಒತ್ತಬೇಕಾದ ಕೀಲಿಗಳ ಸಂಖ್ಯೆಯನ್ನು ಮಿತಿಗೊಳಿಸುವುದರಲ್ಲಿ ಈ ಕೀಲಿಮಣೆ ಸಫಲವಾಗುತ್ತಿತ್ತು. ಒಂದು ರೀತಿಯಾಗಿ ಕನ್ನಡದ ಪರಿಭಾಷೆಗೆ ಒಗ್ಗಿದಂತೆ ಈ ಕೀಲಿಮಣೆಯನ್ನು ರೂಪಿಸಲಾಗಿತ್ತು. ಹೀಗಾಗಿಯೇ ಇದು ಕನ್ನಡದ - ಕಂಪ್ಯೂಟರೀಕರಣಕ್ಕೆ ಅತೀ ಮಹತ್ವದ ಕೊಡುಗೆಯಾಗಬಹುದಿತ್ತು.
ಆದರೆ ಇದರಲ್ಲಿ ಎರಡು ತೊಂದರೆಗಳಿದ್ದುವು. ಇದು ಕನ್ನಡದ್ದೇ ಆದ ಕೀಲಿಮಣೆಯಾದ್ದರಿಂದ - ಹಾಗೂ ಕನ್ನಡಕ್ಕಾಗಿಯೇ ಯಾರೂ ಕಂಪ್ಯೂಟರನ್ನು ಕೊಳ್ಳುತ್ತಿರಲಿಲ್ಲವಾದ್ದರಿಂದ, ಕಂಪ್ಯೂಟರನ್ನು ಕೊಂಡವರಿಗೆಲ್ಲರಿಗೂ ಆಂಗ್ಲಭಾಷೆಯ ಮೇಲೆ ತುಸುವಾದರೂ ಹಿಡಿತವಿದ್ದು ಆಂಗ್ಲದ ಕೀಲಿಮಣೆಯಮೇಲೆ ಅಭ್ಯಾಸಬಲದಿಂದಾಗಿ ಪ್ರಭುತ್ವವಿರುತ್ತಿದ್ದರಿಂದ ಬರಹ - ಆಕೃತಿ - ನುಡಿಗಳಂತಹ ಕಾರ್ಯಕ್ರಮಗಳೇ ಜನಪ್ರಿಯವಾಗುತ್ತಾ ಹೋದುವು. ಎರಡನೆಯ ತೊಂದರೆ ಮುಫತ್ತಾಗಿ ಸಿಗುತ್ತಿದ್ದ ಸೇಡಿಯಾಪುವಿನೆದುರು, ಹೆಚ್ಚು ಸಮಯ ಕಳೆಯದೇ ಡೌನ್ ಲೋಡ್ ಮಾಡಬಲ್ಲ ಬರಹದೆದುರು - ಐದಾರು ಸಾವಿರ ರೂಪಾಯಿ ಬೆಲೆ ತೆತ್ತು ಒಂದು ಹಾರ್ಡ್ ವೇರ್ ಲಾಕ್ ಜೊತೆಗೆ ಬರುತ್ತಿದ್ದ ಈ ತಂತ್ರಾಂಶವನ್ನು ಕೊಳ್ಳಲು ಯಾರಿಗೂ ಮನಸ್ಸೇ ಬರುತ್ತಿರಲಿಲ್ಲ. ಇಷ್ಟಲ್ಲಾ ಕೊಂಡರೂ, ಆ ತಂತ್ರಾಂಶದಲ್ಲಿ ಬರೆದ ಬರವಣಿಗೆಯನ್ನು ಓದಲೂ ಅದೇ ತಂತ್ರಾಂಶ ಬೇಕಿತ್ತಾದ್ದರಿಂದ - ಪ್ರಕಟಣಾ ಜಗತ್ತು ಅದನ್ನು ಬರಮಾಡಿಕೊಂಡ ಹೊರತು, ಖಾಸಗೀ ವ್ಯಕ್ತಿಗಳು ಅದನ್ನು ಮೈಗೂಡಿಸಿಕೊಳ್ಳವುದು ಕಷ್ಟವೇ ಆಗಿತ್ತು.
ಜಗತ್ತಿನಾದ್ಯಂತ ಬಳಸುವ ಇಂಗ್ಲೀಷ್ ಭಾಷೆಗೆ ಈ ರೀತಿಯಾದಂತಹ ತೊಂದರೆಗಳಿರಲಿಲ್ಲ. ಯಾವುದೇ ಹೊಸ ತಂತ್ರಾಂಶ ಬಂದರೂ, ಅದಕ್ಕೆ ಅಸ್ತಿತ್ವದಲ್ಲಿದ್ದ ಮಿಕ್ಕ ತಂತ್ರಾಂಶಗಳೊಂದಿಗೆ ಒಂದು ಕೊಂಡಿಯಿರುತ್ತಿತ್ತು. ಉದಾಹರಣೆಗೆ ವರ್ಡ್ ನಿಂದ ವರ್ಡ್ ಪರ್ಫೆಕ್ಟ್ ಅಥವಾ ಓಪನ್ ಆಫೀಸಿನಿಂದ ವರ್ಡ್ಗೆ, ಸುಲಭವಾಗಿ ಕಡತಗಳನ್ನು ಆಮದು ರಫ್ತುಮಾಡುವ ಸಾಧ್ಯತೆಯಿದ್ದಂತೆ, ಲೀಪಿನಿಂದ ಬರಹಕ್ಕೆ - ಹಾಗೂ ಕನ್ನಡದ ತಂತ್ರಾಂಶ ಹಿಡಿದು ವರ್ಡ್ ನಂತಹ ತಂತ್ರಾಂಶಕ್ಕೆ ಬದಲಿಸುವುದೂ, ಅದನ್ನು ಆ ತಂತ್ರಾಂಶದಲ್ಲಿ ಎಡಿಟ್ ಮಾಡುವುದೂ, ಸುಲಭವಾದ ಮಾತೇನೂ ಆಗಿರಲಿಲ್ಲ. ಹಾಗೂ ಏನೇ ಮಾಡಿದರೂ ಅದನ್ನು ಒದುವವರ ಯಂತ್ರದಲ್ಲಿ ಕನ್ನಡದ್ದೇ ಫಾಂಟ್ (ಅಕ್ಷರಗುಚ್ಛ) ಇಲ್ಲವಾದರೆ ಅಲ್ಲಿ ಕಾಣುತ್ತಿದ್ದದ್ದು ಕೇವಲ ಪ್ರಶ್ನಾರ್ಥಕ ಚಿನ್ಹೆಗಳು ಮಾತ್ರ....
ಹೀಗಾಗಿ ಕನ್ನಡದ ತಂತ್ರಾಂಶ ಒಂದು ಸಾಮಾನ್ಯ - ಎಲ್ಲರಿಗೂ ಅನ್ವಯವಾಗುವ - ಒಪ್ಪಿತ ಗುಣಮಟ್ಟವನ್ನು ರೂಪಿಸಲಿಲ್ಲವಾದ್ದರಿಂದ ಆ ಬದಿಯಲ್ಲಿ ಪ್ರಕಟಣಾ ತಂತ್ರಾಂಶದ ಕ್ರಾಂತಿ ನಡೆಯುತ್ತಿದ್ದರೂ ನಾವು ಸ್ವಲ್ಪಮಟ್ಟಿಗೆ ಹಿಂದುಳಿದೆವು. ಅರ್ಥಾತ್ - ನಮ್ಮ ಸುಪ್ತ ಅಭಿವ್ಯಕ್ತಿಗೆ ಇಂಗ್ಲೀಷಿನ ಬ್ಲಾಗ್ ಲೋಕ ತೆರೆದುಕೊಳ್ಳುತ್ತಿದ್ದರೂ, ಕನ್ನಡದ ಲೋಕ ಕೆಲಕಾಲದವರೆಗೆ ಸರಳವಾಗಿ ತೆರೆದುಕೊಳ್ಳಲಿಲ್ಲ. ಹೀಗಾಗಿ ಜಗತ್ತಿನಲ್ಲಿ ಜನ ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು, ದಿನಚರಿಯನ್ನೂ ಡೈರಿಯ ರೀತಿಯಲ್ಲಿ ತಮ್ಮ ತಮ್ಮ ಸ್ವಂತ ತಾಣಗಳಾದ ಬ್ಲಾಗುಗಳಲ್ಲಿ ಬರೆಯುತ್ತಾ ಹೋದರೂ ಕನ್ನಡದ ಮಟ್ಟಿಗೆ ಆ ಬೆಳವಣಿಗೆ ತುಸು ಸಾವಧಾನದಿಂದಲೇ ನಡೆಯಿತೆನ್ನಬೇಕು.
ತಂತ್ರಜ್ಞಾನದ ಬಗ್ಗೆ ಇಷ್ಟು ಉದ್ದದ ಮೀಮಾಂಸೆ ಬರೆಯಲು ಕಾರಣವಿಷ್ಟೇ - ಬ್ಲಾಗಿನಂತಹ ಒಂದು ಹೊಸ ಅಭಿವ್ಯಕ್ತಿಮಾಧ್ಯಮ ಉಂಟಾಗಬೇಕಾದರೆ ಅದಕ್ಕೆ ಇರಲೇಬೇಕಾದ ಪರಿಕರಗಳು, ಹಾಗೂ ಆ ಪರಿಕರಗಳನ್ನು ಉಪಯೋಗಿಸಲು ಇರಬೇಕಾದ ಸರಳತೆಯನ್ನು ಕನ್ನಡದ ಸಂದರ್ಭದಲ್ಲಿ ಅಳವಡಿಸಲು ನಮಗೆ ಸಾಕಷ್ಟೇ ಸಮಯ ಹಿಡಿಯಿತು. ಈಗಲೂ ಆ ಪ್ರಕ್ರಿಯೆ ಅಷ್ಟು ಸುಲಭವೇನೂ ಅಲ್ಲ. ನುಡಿಯನ್ನು ಮೈಗೂಡಿಸಿಕೊಂಡವರಿಗೆ ನೇರವಾಗಿ ಬ್ಲಾಗ್ ಮಾಡುವುದು ಸಾಧ್ಯವಿಲ್ಲ. ನನ್ನ ಮಟ್ಟಿಗೇ ಹೇಳಬೇಕಾದರೆ ನಾನು ಒಂದು ನೋಟ್ ಪ್ಯಾಡಿನಲ್ಲಿ ನನಗೆ ಬರೆಯಬೇಕನ್ನಿಸಿದ್ದನ್ನು ಬರೆದು ಅದನ್ನು ನನ್ನ ಬ್ಲಾಗಿನಲ್ಲಿ ಲಗತ್ತಿಸುತ್ತೇನೆ. ಆದರೆ ಈಗಿನ ತಂತ್ರಾಂಶ ಉಪಯೋಗಿಸಿ ಬರೆಯುವವರಿಗೆ ಬರಹ ಡೈರೆಕ್ಟ್ ಅಥವಾ ಆಪರೇಟಿಂಗ್ ಸಿಸ್ಟಂನಲ್ಲೇ ಲಭ್ಯವಿರುವ ಭಾಷಾ ಆಯ್ಕೆಯನ್ನು ಮಾಡಿ ಲೀಪ್ ಕೀಲಿಮಣೆಯ ನಿಯಮಾನುಸಾರ ನೇರವಾಗಿ ಬರೆಯಬಹುದಾಗಿದೆ. ಗಮ್ಮತ್ತಿನ ವಿಚಾರವೆಂದರೆ, ಈ ಬದಿಯಲ್ಲಿ ಬರೆದದ್ದನ್ನು ಆಬದಿಯಲ್ಲಿ ಜನ ಓದಬಲ್ಲವರಾಗಿದ್ದಾರೆ. ಯುನಿಕೋಡ್ನ ನಿಯಮಾನುಸಾರ ಈ ಬರವಣಿಗೆ ಆಗುತ್ತದಾದ್ದರಿಂದ ಕನ್ನಡ ತಂತ್ರಾಂಶಕ್ಕೆ ಒಂದು ಮೂಲಭೂತ ಪರಿಮಾಣ ಮತ್ತು ಗುಣಮಟ್ಟ ಪ್ರಾಪ್ತವಾಗಿದೆ.
ಹೀಗೆ ಸ್ಫೋಟಗೊಂಡಿರುವ ಅಭಿವ್ಯಕ್ತಿಗೆ ಮುಕ್ತ ಅವಕಾಶವನ್ನು ನೀಡುತ್ತಿರುವ ಬ್ಲಾಗ್ ಲೋಕ ಏನು ಮಾಡುತ್ತಿದೆ? ಹೊರಜಗತ್ತಿನೊಂದಿಗೆ ಮುಕ್ತ ಸಂವಹನ ನಡೆಸಲು ಇದ್ದ ಪತ್ರಿಕಾ ಪ್ರಕಟಣೆ, ಖಾಸಗಿ ಸಂವಹನಕ್ಕಾಗಿ ಇದ್ದ ಪತ್ರ ಲೇಖನ - ಈ ಎರಡರ ಮಧ್ಯೆ ಬ್ಲಾಗಿನ ಲೋಕ ಬಂದು ನಿಂತಿದೆ. ಮೊದಲಿಗೆ ಬರೆಯಲು ಪ್ರಾರಂಭಿಸಿದಾಗ ಏನನ್ನಾದರೂ ಬರೆದರೆ ಪತ್ರಿಕೆಗಳಿಗೆ ಕಳಿಸಿ ಅವರ ಕೃಪೆಗಾಗಿ ಕಾಯಬೇಕಿತ್ತು. ಪ್ರತೀ ಪತ್ರಿಕೆಗೂ ಅದರದೇ ಆದ ವ್ಯಕ್ತಿತ್ವ, ನುಡಿಗಟ್ಟು, ಹಾಗೂ ಮಿತಿಗಳಿರುತ್ತಿದ್ದುವು. ಆ ಮಿತಿಯನ್ನು ಮೀರಿದರೆ ಬರವಣಿಗೆಯ ಸೊಬಗೇ ನಾಶವಾಗುತ್ತಿತ್ತು. ಉದಾಹರಣೆಗೆ ನಾನು ಮಿಲನ್ ಕುಂದೆರಾನ ಒಂದು ದೀರ್ಘ ಹಿಚ್ ಹೈಕಿಂಗ್ ಗೇಮ್ ಅನ್ನುವ ಕಥೆಯನ್ನು ಅನುವಾದ ಮಾಡಿದ್ದೆ. ದುರಾದೃಷ್ಟವಶಾತ್ತು ಆ ಕಥೆಯನ್ನು ಪ್ರಕಟಿಸಬಹುದಾಗಿದ್ದ ತುಷಾರ-ಮಯೂರದಂತಹ ಪತ್ರಿಕೆಗಳು ಆಸಕ್ತಿ ತೋರಲಿಲ್ಲ. ಆದರೆ ಆ ಕಥೆಯ ಸೌಂದರ್ಯವನ್ನು ಕಂಡವರು ಲಂಕೇಶ್. ಆದರೆ ಲಂಕೇಶ್ ಪತ್ರಿಕೆಯ ಚೌಕಟ್ಟನಲ್ಲಿ ಆ ಕಥೆ ಆರು ಕಂತುಗಳಲ್ಲಿ ಪ್ರಕಟಗೊಂಡು ಅದರಲ್ಲಿದ್ದ ಒಂದೇ ಓದಿಗೆ ದಕ್ಕಬಹುದಾಗಿದ್ದ ಸಾಧ್ಯತೆಗಳನ್ನು ಇಲ್ಲವಾಗಿಸಿಬಿಟ್ಟಿತು. ಹೀಗಾಗಿ ಅದು ಪ್ರಕಟಗೊಂಡೂ, ಪ್ರಕಟಗೊಳ್ಳದಿದ್ದಂತೆಯೇ ಆಯಿತು. ಹೀಗೇ ಕೆಲವು ಸಮಕಾಲೀನ ವಿಚಾರಗಳ ಬಗ್ಗೆ ತುರ್ತಿನ ಚರ್ಚೆಯಾಗಬೇಕಿದ್ದರೆ ಸಂಪಾದಕರ ಓಲೆಗಳ ಮೂಲಕ ಆಗುವುದು ಸುಲಭದ ಮಾತಲ್ಲ. ಅಲ್ಲಿಯೂ ಅಂಪೈರಾಗಿ ಸಂಪಾದಕ ವೃಂದ ಅಡ್ಡನಿಂತುಬಿಟ್ಟಿರುತ್ತದೆ. ಈ ಎಲ್ಲ ಅಡಚಣೆಗಳು ನಮಗೆ ಹಿಂದೆ ಕಾಣುತ್ತಲೇ ಇರಲಿಲ್ಲ. ಆದರೆ ಬ್ಲಾಗಿನ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿದ್ದಂತೆ ಅದರ ಸೃಜಲಶೀಲ ಉಪಯೋಗಗಳೂ ತೆರೆದುಕೊಳ್ಳುತ್ತಿವೆ.
ಸಾಮಾನ್ಯ ಪತ್ರಿಕೆಗಳಿಗಿದ್ದ ಮಿತಿಗಳನ್ನು ಕೆಂಡಸಂಪಿಗೆಯಂತಹ ಆನ್-ಲೈನ್ ಪತ್ರಿಕೆಗಳು ಮೀರಿ ನಿಲ್ಲಬಹುದು. ಅಂಥ ಪತ್ರಿಕೆಗಳಲ್ಲಿ ಒಂದು ಸಂಪಾದಕೀಯ ಶಿಸ್ತೂ ಇರುತ್ತದೆ. ಆ ಮಾಧ್ಯಮದ ಲಕ್ಷಣಗಳೂ, ಬ್ಲಾಗಿನ ಲಕ್ಷಣಗಳಿಗೂ ತಂತ್ರಾಂಶದ ದೃಷ್ಟಿಯಿಂದ ಯಾವ ಮೂಲಭೂತ ವ್ಯತ್ಯಾಸವೂ ಇಲ್ಲ. ಆದರೂ ಈಗ ಸ್ಫೋಟಗೊಳ್ಳುತ್ತಿರುವ ಬ್ಲಾಗುಗಳ ಕಥೆಯೇನು ಎಂದು ಯೋಚಿಸಿದಾಗ - ಅಭಿವ್ಯಕಿಗೆ ತಂತ್ರಾಂಶದ ಅವಶ್ಯಕತೆ ಇದೆಯೇ ಹೊರತು, ತಂತ್ರಾಂಶ ಅಭಿವ್ಯಕ್ತಿಯ ರೂಪುರೇಷೆಗಳನ್ನು ನಿರ್ದೇಶಿಸುವುದಿಲ್ಲ ಎನ್ನುವ ಮಾತು ನಮಗೆ ತಿಳಿದುಬರುತ್ತದೆ. ಹೀಗಾಗಿಯೇ ಕೆಂಡಸಂಪಿಗೆಯಲ್ಲಿ ಬರೆಯುವವರು, ಪತ್ರಿಕೆಗಳಿಗೂ ಬರೆಯಬಹುದು, ತಮ್ಮ ಖಾಸಗೀ ಬ್ಲಾಗುಗಳನ್ನೂ ಇರಿಸಿಕೊಳ್ಳಬಹುದು. ಸಂಪದಕ್ಕೂ ಕೆಂಡಸಂಪಿಗಗೂ ತಂತ್ರಾಂಶದಲ್ಲಿ ಮೂಲಭೂತ ವ್ಯತ್ಯಾಸವಿಲ್ಲವಾದರೂ, ಸಂಪಾದಕೀಯ ಶಿಸ್ತು, ಓರಣದಲ್ಲಿ ಅಜಗಜಾಂತರವಿದೆ.
ಪತ್ರಿಕೆ - ಆನ್ ಲೈನ್ ಆಗಿರಲೀ ಆಫ್ ಲೈನ್ ಆಗಿರಲೀ - ಒಂದು ಸಾಮಾನ್ಯ ಒದುಗಸಮುದಾಯಕ್ಕೆ ಭಿನ್ನ ಹಾಗೂ ವೈವಿಧ್ಯಪೂರ್ಣ ಬರವಣಿಗೆಗಳು ಗುಚ್ಛವನ್ನು ನೀಡುತ್ತದೆ. ಆದರೆ ಬ್ಲಾಗ್ ನೀಡುವುದು ಒಂದು ಖಾಸಗೀ ವ್ಯಕ್ತಿತ್ವದ ಅಭಿಪ್ರಾಯ ಗುಚ್ಛ. ಹೀಗಾಗಿ ನಾಗತಿಹಳ್ಳಿ ಐಂದ್ರಿತಾಗೆ ಮಾಡಿದ ಕಪಾಳಮೋಕ್ಷದ ಬಗೆಗೆ ನಾನು ಏನಾದರೂ ಹೇಳಬೇಕನ್ನಿಸಿದರೆ ನನ್ನ ಖಾಸಗೀ ಜಾಗದಲ್ಲಿ ಅದನ್ನು ಬರೆದುಕೊಳ್ಳಬಹುದು. ಅದನ್ನು ಓದುವವರು ನನ್ನ ಅಭಿಪ್ರಾಯದ ಬಗ್ಗೆ ಕುತೂಹಲವಿರುವುದರಿಂದ ಮಾತ್ರ ಓದುತ್ತಾರೆ. ಒಂದು ರೀತಿಯಲ್ಲಿ ಯಾರೂ ಕೇಳದೆಯೇ ನಾನು ನನ್ನ ಆಲೋಚನೆಯನ್ನು ಹೊರಲೋಕಕ್ಕೆ ಹರಿಯಬಿಡುತ್ತೆನೆ. ಇಷ್ಟವಿದ್ದವರು ಓದುತ್ತಾರೆ, ಆಸಕ್ತಿಯಿದ್ದವರು ಪ್ರತಿಕ್ರಿಯಿಸುತ್ತಾರೆ, ಇನ್ನೂ ಮುಂದಕ್ಕೆ ಹೋಗಿ ಈ ವಿಷಯ ಚರ್ಚಿತವಾಗಲೂ ಬಹುದು.
ಬ್ಲಾಗುಗಳ ಮೂಲಭೂತ ಲಕ್ಷಣಗಳು ಎರಡು. ಒಂದು- ಅದರಲ್ಲಿರಬಹುದಾದ ಅನಾಮಿಕತೆ. ಎರಡನೆಯದು - ಅನಾಮಿಕತೆಯಿಂದ ಉಂಟಾಗಬಹುದಾದ ಮುಕ್ತತೆ. ಅನಾಮಿಕತೆ ನಮಗೆ ಒಂದು ಆಯ್ಕೆ. ಪ್ರತೀ ಬ್ಲಾಗೂ, ಬ್ಲಾಗಿಗನೂ, ಬ್ಲಾಗಿಗಳೂ ಅನಾಮಿಕವಾಗಿ ಉಳಿಯಬೇಕೆಂದೇನೂ ಇಲ್ಲ. ಆದರೆ ಅದರಲ್ಲಿನ ಒಂದು ಗುಪ್ತವಾದ ಸಾಧ್ಯತೆ ನಮ್ಮನ್ನು ಪುಳಕಿತಗೊಳಿಸಬಹುದು. ಅನೇಕ ಬ್ಲಾಗಿಗರು ತಮ್ಮ ಹೆಸರು, ಚಿತ್ರ, ಈಮೈಲ್ ವಿಳಾಸ, ಎಲ್ಲವನ್ನೂ ನೀಡಿ, ತಮ್ಮ ಅಸ್ತಿತ್ವವನ್ನು ಮುಕ್ತವಾಗಿರಿಸುವ ಧೈರ್ಯಮಾಡಿ, ತಮ್ಮ ಬರವಣಿಗಯನ್ನು ಮುಂದುವರೆಸುತ್ತಾರೆ. ಹೀಗೆ ಬರೆಯುವಾಗ ಅದರಲ್ಲಿ ಒಂದು ಶಿಷ್ಟತೆ ನಮಗೆ ಕಾಣುತ್ತದೆ. ಆದರೆ ಬ್ಲಾಗುಗಳಲ್ಲಿರುವ ಪ್ರತಿಕ್ರಿಯೆಗಳಲ್ಲಿ ನಾವು ಸಾಮಾನ್ಯತಃ ಆ ಶಿಷ್ಟತೆಯನ್ನು ಕಾಣುವುದಿಲ್ಲ. ಅದರಲ್ಲೂ ಪ್ರತಿಕ್ರಿಯೆ ಅನಾಮಿಕವಾದಷ್ಟೂ ಅದರ ಭಾಷೆ ಕಠೋರವಾಗಿರುವುದನ್ನು ನಾವು ಕಾಣಬಹುದು. ನಮ್ಮಲ್ಲೆಲ್ಲ ಸುಪ್ತವಾಗಿರುವ ಈ ಮೃಗಕ್ಕೆ ನಾವು ಕೊಡುವ ಶಿಷ್ಟಾಚಾರದ ಮುಖವಾಡವನ್ನು ಕಳಚಲು ಬ್ಲಾಗುಗಳು ಅವಕಾಶ ಮಾಡಿಕೊಟ್ಟಿವೆ.
ಈ ಮಾಧ್ಯಮ ಎಷ್ಟೋ ಜನರ ಸುಪ್ತ ಪ್ರತಿಭೆಯನ್ನು ಹೊರಗೆಳೆಯಲು ಪ್ರಯತ್ನಿಸಿದೆ. ಪ್ರತಿಯೊಬ್ಬರ ವ್ಯಕ್ತಿತ್ವದ ಅಭಿವ್ಯಕ್ತಿಗೂ ಎಡೆಮಾಡಿಕೊಟ್ಟಿದೆ. ಕೆಲವರು ತಮ್ಮ ಕವಿತೆಗಳಿಗೆ ಇದನ್ನೊಂದು ಮಾಧ್ಯಮ ಮಾಡಿಕೊಂಡರೆ, ಇನ್ನು ಕೆಲವರು ಅಡುಗೆಯ ವಿಧಾನವನ್ನ ಜಗತ್ತಿಗೆ ಕಲಿಸಲು ಹೊರಟಿದ್ದಾರೆ. ಕೆಲವರು ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸುವವರಾದರೆ, ಇನ್ನಷ್ಟು ಜನ ತಮ್ಮ ಇತರ ಮಾಧ್ಯಮಗಳಲ್ಲಿ ಬಂದಿರುವ ಅಕ್ಷರಗುಚ್ಚವನ್ನ ಸಮಗ್ರೀಕರಿಸಲು ಬ್ಲಾಗನ್ನು ಉಪಯೋಗಿಸುತ್ತಿದ್ದಾರೆ. ಅನಂತಮೂರ್ತಿಯಂತಹ ಲೇಖಕರು ತಮ್ಮ ವಾರದ ಬರವಣಿಗೆಯನ್ನು ಈ ಮಾಧ್ಯಮದಲ್ಲೂ ಲಭಿಸುವಂತೆ ಮಾಡಿದ್ದಾರೆ. ಹೀಗೆ ಅನೇಕ ರೀತಿಯ ಅಭಿವ್ಯಕ್ತಿಗಳಿಗೆ ಈ ಮಾಧ್ಯಮ ಮುಕ್ತವಾಗಿ ತೆರೆದು ನಿಂತಿದೆ. ಈ ಮಾಧ್ಯಮದ ಮಿತಿಯೆಂದರೆ - ಯಾವುದೇ ಅಡ್ಡಕತ್ತರಿಯಿಲ್ಲದಿರುವುದರಿಂದ - ಜನಸಮೂಹಕ್ಕೆ ತಮ್ಮ ಅಭಿವ್ಯಕ್ತಿ ಹೋಗುವುದಕ್ಕೆ ಮುನ್ನ ಇರಬಹುದಾಗಿದ್ದ ಸಂಪಾದಕೀಯ ಶಿಸ್ತು ಇಲ್ಲವಾಗಿದೆ. ಹೀಗಾಗಿಯೇ ಹಳೆಯ ಕಾಲದ ಓದುಗರಿಗೆ ಕಿರಿಕಿರಿಯುಂಟುಮಾಡುವ ಭಾಷಾಪ್ರಯೋಗವನ್ನೂ ನಾವು ಕಾಣಬಹುದು. ಅದಕ್ಕೆ ಮದ್ದೋ ಎಂಬಂತೆ, ನಿರ್ಮಮಕಾರ ಪ್ರತಿಕ್ರಿಯೆಗಳೂ ಬರಬಹುದು. ಪ್ರತಿಕ್ರಿಯೆಗಳಾಧಾರದ ಮೇಲೆ ಮೂಲ ಲೇಖನವನ್ನು ತಿದ್ದುವ ಸಾಧ್ಯತೆಯೂ ಇದೆ.
ವೆಜಿಟೇರಿಯನ್ ಅನ್ನುವುದಕ್ಕೆ ಶಾಖಾಹಾರ ಅನ್ನುವ ಪದಪ್ರಯೋಗ ಸಮರ್ಪಕವಲ್ಲ ಬದಲಿಗೆ ಸಸ್ಯಾಹಾರ ಅನ್ನುವ ಪದವನ್ನು ಉಪಯೋಗಿಸಬೇಕೆಂದು, ಪ್ರಕಾರ, ಪ್ರಾಕಾರಕ್ಕೆ ಇರುವ ವ್ಯತ್ಯಾಸವನ್ನು ನನಗೆ ಕಲಿಸಿದ್ದೇ ನನ್ನ ಬ್ಲಾಗಿನ ಓದುಗರು. ಇದು ಪತ್ರಿಕೆಗಳಲ್ಲಿ ಆಗುತ್ತಿದ್ದ ಮಾತಲ್ಲ. ಯಾಕೆಂದರೆ ಹೀಗೆ ಪದಪ್ರಯೋಗವನ್ನು ತಿದ್ದುವಂತಹ ಪತ್ರಗಳನ್ನು ಸಂಪಾದಕರು ಕಡೆಗಣಿಸುವುದೇ ಹೆಚ್ಚು. ಹೀಗಾಗಿ ನಾವು ಕೆಟ್ಟ ಭಾಷಾಪ್ರಯೋಗವನ್ನು ದೂರುತ್ತಲೇ, ಒಳ್ಳೆಯ ಭಾಷಾಪ್ರಯೋಗವನ್ನು ಕಲಿಯುವ ಸಾಧ್ಯತೆಯನ್ನೂ ಇದರಲ್ಲಿ ಕಾಣಬಹುದು. ಆದರೆ ಬ್ಲಾಗನ್ನು ಬರೆಯುವವರು ಅನಾಮಿಕತೆಯಿಂದ ಬರಬಹುದಾದ ಕಠೋರ ಮಾತುಗಳನ್ನು ಕೇಳುವ, ಅದನ್ನು ಅಂತರ್ಗತ ಮಾಡಿಕೊಳ್ಳುವ ಗುಂಡಿಗೆ ಇರುವವರಾಗಬೇಕು. ಇನ್ನೂ ಧೈರ್ಯಸ್ಥರಾದರೆ ಆ ಅಂಥ ಪ್ರತಿಕ್ರಿಯೆಗಳನ್ನು ಜಗತ್ತಿಗೇ ಕಾಣುವಂತೆ ಮಾಡುವ ಧೈರ್ಯವೂ ಇರಬೇಕು. ಶಿಷ್ಟ ಜಗತ್ತಿನಲ್ಲಿ ಬದುಕಿ ಬೆಳೆದಿರುವ ನಮ್ಮಂತಹ ಮಧ್ಯವಯಸ್ಕರಿಗೆ ಅಸಹನೆಯ ಭಾಷೆಯನ್ನು ಅರಗಿಸಿಕೊಳ್ಳುವ ಛಾತಿಯಿರಬೇಕು. ಈ ರೀತಿಯಾದಂತಹ ಸುಪ್ತ ಪ್ರತಿಕ್ರಿಯೆಗಳು ಹಿಂದೂ ನಮ್ಮ ಲೇಖನಗಳಿಗೆ ಇದ್ದಿರಬಹುದು, ಹಾಗೂ ನಾವು ಬರೆದದ್ದನ್ನು ಬೇರೆಯವರು ಭಿನ್ನವೇ ಆದ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು ಅನ್ನುವ ಸತ್ಯ ತಟ್ಟುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಓದುಗರ ಪ್ರತಿಕ್ರಿಯೆ ನನ್ನ ಬರವಣಿಗೆಯನ್ನು ಹೆಚ್ಚು ಜವಾಬ್ದಾರಿಯುತವನ್ನಾಗಿ ಮಾಡಿದೆ. ಆ ಕಾರಣದಿಂದ ಬ್ಲಾಗಿನ ಮಾಧ್ಯಮ ನನಗೆ ಪ್ರಿಯವಾಗುತ್ತದೆ.
ಆದರೆ ಬ್ಲಾಗಿನ ಲೋಕಕ್ಕೆ ಒಂದು ಅಲಿಖಿತ ನಿಯಮವಿದೆ. ಅದೆಂದರೆ ಆ ತಾಣದಲ್ಲಿ ಹೊಸ ಹೊಸ ಎಂಟ್ರಿಗಳು ನಿಯಮಿತವಾಗಿ ಸೇರಬೇಕು. ಬ್ಲಾಗಿನಲ್ಲಿ ಅನಿಯಮಿತ ಕಾಲಕ್ಕೊಮ್ಮೆ ಏನಾದರೂ ಹಾಕಬಹುದಾದ ಸಾಧ್ಯತೆ ಇದೆಯೆನ್ನುವುದೇನೋ ನಿಜ. ಆದರೆ ಸುಮಾರಷ್ಟು ಕಾಲ ಬ್ಲಾಗನ್ನು ನಿಲ್ಲಿಸಿಬಿಟ್ಟರೆ ನಾವು ನಮ್ಮ ಓದುಗರನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಹೀಗಾಗಿ (ನನ್ನದನ್ನೊಳಗೊಂಡು) ಅನೇಕ ಬ್ಲಾಗುಗಳು ಶಿಸ್ತಿಲ್ಲದೇ ಸೊರಗುತ್ತವೆ.
ಈ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುತ್ತಿರುವಾಗಲೇ ಮತ್ತೊಂದು ವಿಷಯ ನನ್ನ ಮನಸ್ಸಿಗೆ ತಟ್ಟುತ್ತದೆ. ಬ್ಲಾಗುಗಳಲ್ಲಿ ಹೂರಣಕ್ಕೆ ಒಂದು ವ್ಯಕ್ತಿತ್ವ ಇರುತ್ತದಾದರೂ ಓರಣಕ್ಕೆ ಅದು ಹೆಚ್ಚಾಗಿ ದಕ್ಕುವುದಿಲ್ಲ. ಪತ್ರಿಕೆಗಳಲ್ಲಿನ ಲೇಖನಗಳಿಗೂ ಇದು ಅನ್ವಯಿಸುತ್ತಾದರೂ, ಪತ್ರಿಕೆಗಳನ್ನು ನಡೆಸುವವರು ಎಷ್ಟಾದರೂ ಭಿನ್ನ ವ್ಯಕ್ತಿಗಳಾದ್ದರಿಂದ - ಆಯಾ ಸಂಪಾದಕ ವಿಚಾರಧಾರೆಯ ವ್ಯಕ್ತಿತ್ವ ಆ ಪತ್ರಿಕೆಗಳಿಗೆ ಬಂದುಬಿಡುತ್ತವೆ. ಆದರೆ ಬ್ಲಾಗುಗಳು ಖಾಸಗೀ ಸ್ಥಾನವನ್ನು ಆಕ್ರಮಿಸುವುದರಿಂದ ಓರಣಕ್ಕೆ ಒಂದು ವ್ಯಕ್ತತ್ವ ಮುಖ್ಯವಾಗಬಹುದು ಅನ್ನುವುದು ನನ್ನ ನಂಬಿಕೆ. ಆದರೆ ಅದರ ಸಾಧ್ಯತೆಗಳ ಮಿತಿಗಳನ್ನು ನಮಗೆ ತಂತ್ರಜ್ಞಾನ ಇನ್ನೂ ತೋರಿಸುತ್ತಿದೆ. ಇದರಲ್ಲಿ ಮುಖ್ಯವಾದದ್ದು ಕಂಪ್ಯೂಟರಿನ ಸ್ಕ್ರೀನಿನ ಪರಿಮಿತಿಗೆ ಸಂಬಂಧಿಸಿದ್ದು. ಒಮ್ಮೆಗೆ ಆ ಸ್ಕ್ರೀನಿನ ಪರಿಮಿತಿಯೊಳಗಿರುವ ಬರವಣಿಗ ಮಾತ್ರ ಕಾಣಿಸುತ್ತದೆ. ಸುತ್ತ ಮುತ್ತ ಕೊಂಡಿಗಳನ್ನು ಕೊಟ್ಟರೆ ಒಂದೇ ಕಾಲಮ್ಮಿನಲ್ಲಿ ಉದ್ದಕ್ಕೆ ಬರವಣಿಗೆಯನ್ನು ತೆಗದೊಯ್ಯಬೇಕು. ಅದರಲ್ಲಿ ಅಡಕ ಮಾಡಬಹುದಾದ ಚಿತ್ರಗಳಿಗೂ ಕೆಲವು ಮಿತಿಗಳಿರುತ್ತವೆ. ಹೀಗಾಗ ಬ್ಲಾಗಿನ ಓರಣ ಹೆಚ್ಚಾಗಿ ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುವುದಿಲ್ಲ. ಬದಲಿಗೆ ಇರುವ ಆಯ್ಕೆಗಳಲ್ಲಿ ನಮಗಿಷ್ಟವಾದದ್ದು ಯಾವುದು ಅನ್ನುವುದನ್ನ ಮಾತ್ರ ಪ್ರತಿನಿಧಿಸುತ್ತವೆ.
ಓರಣದಲ್ಲಿ ಮತ್ತೂಂದು ಮುಖ್ಯವಾದ ವಿಚಾರವೆಂದರೆ ಅಕ್ಷರಗಳ ಜೋಡಣೆಗೆ ಸಂಬಂಧಿಸಿದ್ದು. ಕನ್ನಡ ಭಾಷೆಯ ಅಕ್ಷರಗಳು ಸಹಜವಾಗಿಯೇ ಸುಂದರವಾಗಿವೆ. ಹೆಚ್ಚಾದ ಅಕ್ಷರಗಳಿಗೆ ಸುರಳಿಗಳಿರುವುದರಿಂದ ಸಹಜವಾಗಿಯೇ ಗುಂಡಾಗಿ, ಒಂದರ ಪಕ್ಕ ಒಂದು ಹೊಂದಿಕೊಂಡು ಕೂತಿರುತ್ತವೆ. ಹೀಗಾಗಿ ಕನ್ನಡದಲ್ಲಿ ಸ್ಟೈಲೈಸ್ಡ್ ಆಗಿ ಬರೆಯುವ ಅವಶ್ಯಕತೆ ಕಡಿಮೆ. ಇಂಗ್ಲೀಷನ್ನು ಅಂದಗೊಳಿಸಲು ಕ್ಯಾಲಿಗ್ರಫಿ ಬೇಕು. ಆದರೆ ಉರ್ದು - ಭಾಷೆಯೇ ಕ್ಯಾಲಿಗ್ರಫಿಕ್ ಆಗಿರುತ್ತದೆ. ಹೀಗಾಗಿಯೇ ಕನ್ನಡದಲ್ಲಿ ಇಂಗ್ಲೀಷಿಗಿಂತ ಕಡಿಮೆ ಫಾಂಟು - ಅಕ್ಷರ ಜೋಡಣೆ ಶೈಲಿ - ಗಳು ಇವೆಯೇನೋ. ಲೀಪ್ ತಂತ್ರಾಂಶ ಬಂದಾಗ ನಂದಿ ಮತ್ತು ಉಮಾ ಫಾಂಟುಗಳು ಬಂದುವು, ಹೀಗೆಯೇ ಮಿಕ್ಕ ತಂತ್ರಾಂಶದ ಜೊತೆಗೆ ಭಿನ್ನ ಫಾಂಟುಗಳು. ಆದರೆ ನೀವು ಬ್ಲಾಗ್ ಮಾಡಬೇಕೆಂದರೆ ಈ ಭಿನ್ನ ವ್ಯಕ್ತಿತ್ವಗಳನ್ನು ಬದಿಗಿಟ್ಟು ತುಂಗಾ ಫಾಂಟನ್ನು ಮಾತ್ರ ಕಾಣಬಹುದು. ಹೀಗಾಗಿ ನಮ್ಮ ದೃಷ್ಟಿಗೆ ಒಂದು ಬ್ಲಾಗಿಗೂ ಮತ್ತೊಂದಕ್ಕೂ ಅಕ್ಷರ ಜೋಡಣೆಯ ಓರಣದಲ್ಲಿ ಹೆಚ್ಚು ವ್ಯತ್ಯಾಸ ಕಾಣದಿರಬಹುದು. ಹೀಗಾಗಿಯೇ ನಮ್ಮ ಬ್ಲಾಗುಗಳಿಗೆ ಒಂದು ಭಿನ್ನ ವ್ಯಕ್ತಿತ್ವ ದೊರೆಯುವುದು ಅದರ ಹೂರಣದಿಂದ ಮಾತ್ರ.
ಓರಣವೇಕೆ ಬೇಕು ಎನ್ನುವುದನ್ನ ನನ್ನ ಗೆಳೆಯರೊಬ್ಬರು ಮತ್ತೊಂದು ಭಿನ್ನ ಸಂದರ್ಭದಲ್ಲಿ ಪ್ರಶ್ನಿಸುತ್ತಾರೆ. ಹಸಿವಾಗಿದ್ದವರಿಗೆ ಊಟ ಕಾಣಲು ಚೆಂದವಿದೆಯೇ ಇಲ್ಲವೇ ಎನ್ನುವುದು ಮುಖ್ಯವಾಗುವುದಿಲ್ಲ. ಯಾವುದಾದರೂ ದರ್ಶಿನಿಯಲ್ಲಿ ಅಥವಾ ಬೀದಿಬದಿಯ ತಳ್ಳುಗಾಡಿಯಲ್ಲಿ ಹೋಗಿ ಒಂದು ಇಡ್ಲಿಯೋ ದೋಸೆಯೋ ತಿಂದು ಬಂದರೆ ಸಾಕು. ಅದೇ ಪಂಚತಾರಾ ಹೋಟೆಲಿನಲ್ಲಿ ಊಟದ ಹೂರಣಕ್ಕಿಂತ ಓರಣಕ್ಕೇ ಹೆಚ್ಚು ಒತ್ತು. ನನ್ನ ಗೆಳೆಯರ ವಾದವೆಂದರೆ, ಹಸಿವಾಗದಿರುವವರಿಗೆ ಊಟ ಉಣ್ಣಿಸಲು ಈ ಸರ್ಕಸ್ಸನ್ನು ಮಾಡಬೇಕಾಗುತ್ತದೆ. ಹೀಗಾಗಿ ಒಂದೇ ಫಾಂಟ್ ಇರುವ ಕನ್ನಡ ಬ್ಲಾಗುಗಳನ್ನು ನಾವು ಹೂರಣಕ್ಕಾಗಿಯೇ ನೋಡಬಹುದಾದ ಅದ್ಭುತ ಸಾಧ್ಯತೆ ನಮ್ಮ ಮುಂದಿದೆ.
ಅಚ್ಚುಕೂಟಕ್ಕೆ ಹೋದ ನಮ್ಮೆಲ್ಲ ಹಿರಿಯರ ಬರಹಗಳೂ ಈ ಸ್ಟಾಂಡರ್ಡೈಸೇಷನ್ - ಸಮಾನತೆ -ಗೆ ಒಳಪಟ್ಟರೂ ಮೂಲ ಬರಹಗಳು ಲೇಖಕರ ವ್ಯಕ್ತಿತ್ವವನ್ನೂ ಅವರ ಕರಡು ಬರಹಗಳನ್ನು ನೋಡಿದರೆ ಲೇಖನ ಕಟ್ಟುವ ಆಲೋಚನಾ ಲಹರಿಯನ್ನೂ ಅದನ್ನು ಸುಧಾರಿಸುವತ್ತ ತೋರಿದ ಒಲವನ್ನೂ ಕಾಣಬಹುದಿತ್ತು. ಆದರೆ ತಂತ್ರಜ್ಞಾನದ ಉಪಯೋಗ ಹೆಚ್ಚುತ್ತಿದ್ದಂತೆ, ಲೇಖನದ ಕರುಡೇ ಕಾಣುವುದಿಲ್ಲ. ಬ್ಲಾಗಿನಲ್ಲಿ ಇದು ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತದೆ. ಮೂಲ ಲೇಖನವನ್ನ ಯಾವಾಗಲಾದರೂ ತಿದ್ದಬಹುದಾದ್ದರಿಂದ, ಸುಧಾರಿಸಬಹುದಾದ್ದರಿಂದ, ಲೇಖಕರಿಗೆ ಉಪಯೋಗಕರವಾದರೂ, ಅವರನ್ನು ಅರ್ಥಮಾಡಿಕೊಳ್ಳಹೊರಟ ಸಂಶೋಧಕರಿಗೆ ಈ ಚರಿತ್ರೆಯ ಕೊಂಡಿಗಳು ಕಾಣುವುದೇ ಇಲ್ಲ. ಹೀಗಾಗಿ ಈ ಮಾಧ್ಯಮ, ಒಂದು ರೀತಿಯಿಂದ ಸದಾ ಸಮಕಾಲೀನವಾಗುವ ಮಾಧ್ಯಮವಾಗಿಬಿಡುವ ಅಪಾಯದ ಸಾಧ್ಯತೆಯಿದೆ.
ತಂತ್ರಜ್ಞಾನ ಬರವಣಿಗೆಯ ತಂತ್ರಾಂಶ ಅಂದಕೂಡಲೇ ನಮಗೆ ತೇಜಸ್ವಿ ನೆನಪಿಗೆ ಬರದಿದ್ದರೆ ಹೇಗೆ? ತೇಜಸ್ವಿ ತಂತ್ರಜ್ಞಾನದ ಬಗ್ಗೆ ತಮಗಿದ್ದ ಪ್ರಭುತ್ವವನ್ನು ಉಪಯೋಗಿಸಿ ಕುವೆಂಪು ಅವರ ಕೈಬರಹದ ರಾಮಾಯಣ ದರ್ಶನಂ ಹೊತ್ತಿಗೆಯನ್ನು ಪ್ರಕಟಿಸಿದ್ದರು. ಈಗಿನ ತಂತ್ರಜ್ಞಾನವನ್ನ ಉಪಯೋಗಿಸು ಕುವೆಂಪು ಅವರ ಕೈಬರಹವನ್ನೇ ಒಂದು ಫಾಂಟನ್ನಾಗಿ ಅವರು ಪರಿವರ್ತಿಸಿದ್ದರು. ಆದರೆ ಆ ಪುಸ್ತಕ ಹೊರಗೆ ಬಂದಾಗ ಕೆಲವು ಅಪಸ್ವರಗಳೂ ಎದ್ದುವು. ಅದೆಂದರೆ, ಇದು ಕುವೆಂಪು ಅವರ ಮೂಲ ಬರವಣಿಗೆಯಲ್ಲ, ಬದಲಿಗೆ ಅವರ ಕೈಬರಹವನ್ನು ಮಾತ್ರ ಬಳಸಿದ ಚಿತ್ತಿಲ್ಲದ ಕೃತಿ ಎಂದು. ಅರ್ಥಾತ್: ಕುವೆಂಪು ಮೂಲ ಕರಡಿನಲ್ಲಿದ್ದ ಎಲ್ಲ ಸುಕ್ಕುಗಳನ್ನೂ ತೆರೆದು ಅವಕ್ಕೆ ಇಸ್ತ್ರಿ ಹಾಕಿ ಈ ಪುಸ್ತಕವನ್ನು ಹೊರತರಲಾಗಿತ್ತು. ಆದರೆ ಜನರಿಗೆ ಆಸಕ್ತಿಯಿದ್ದದ್ದು ಮುದ್ರಣಕ್ಕೆ ಕುವೆಂಪು ಕಳಿಸಿದ ಕರಡು ಹೇಗಿದ್ದಿರಬಹುದು ಅನ್ನುವ ವಿಚಾರದಲ್ಲಿ. ಬದಲಿಗೆ ಅವರಿಗೆ ದೊರೆತದ್ದು ಕುವೆಂಪು ಕೈಬರಹದಲ್ಲಿ ಅಚ್ಚಾದ, ಅದೇ ಹಳೆಯ ಅಚ್ಚಿನ ಮನೆಯ ಕಾವ್ಯವೇ.
ಕಡೆಗೂ ಏನು ಗೆಲ್ಲುವುದು? ಬ್ಲಾಗುಗಳು ಹೊಸ ಲೇಖಕರನ್ನು ಹುಟ್ಟು ಹಾಕುವುದೇ? ಹಳೇ ಸಾಹಿತ್ಯವನ್ನು ನಮ್ಮ ಮುಂದೆ ತಂದಿಡುವುದೇ - ಈ ಎಲ್ಲ ಪ್ರಶ್ನೆಗಳಿಗೂ ಅನಂತ ಉತ್ತರಗಳು ನಮಗೆ ಸಿಗುತ್ತವೆ. ಹಿಂದೆ ಪುಣೇಕರ್ ಹೇಳಿದ್ದರಂತೆ - ನವ್ಯಕಾಲದಲ್ಲಿ ಇದ್ದ ವಿಮರ್ಶಕರು ಎಷ್ಟು ಕಠೋರವಾಗಿದ್ದರೆಂದರೆ - ಅವರ ವಿಮರ್ಶೆ ಅನೇಕ ಮೀಡಿಯಾಕರ್ (ಅಷ್ಟೇನೂ ಉತ್ತಮವಲ್ಲದ) ಸಾಹತ್ಯವನ್ನೇ ಕೊಂದು ಹಾಕಿದ್ದರಿಂದ, ಉತ್ತಮ ಸಾಹಿತ್ಯ ಬರುವುದು ದುಸ್ತರವಾಯಿತಂತೆ. ಅವರ ಮಾತಿನ ಮಜಕೂರೇನೆಂದರೆ - ಪ್ರತಿಯೊಬ್ಬ ಅನಂತ ಮೂರ್ತಿ, ಅಡಿಗ, ಲಂಕೇಶ, ಕಾರಂತರನ್ನು ಅರಗಿಸಿಕೊಳ್ಳವ ಜನತೆ ಬೆಳೆಯಬೇಕೆಂದರೆ, ಅದಕ್ಕೆ ತಯಾರಿಯಾಗಿ ನರಸಿಂಹಯ್ಯು, ಅನಂತರಾವ್, ಟಿಕೆ ರಾಮರಾವ್ ಅವರಂತಹ ಲೇಖಕರು ಒದುವ ಹವ್ಯಾಸವನ್ನು ಬೆಳೆಸುವುದು ಅನಿವಾರ್ಯ ಎನ್ನುವುದು. ಪುಣೇಕರರ ವಾದವನ್ನು ಬ್ಲಾಗುಗಳಿಗೂ ವಿಸ್ತರಿಸಬಹುದು. ಹೀಗೆ ತಮ್ಮ ಅಂತರ್ಗತವನ್ನು ತೋಡಿಕೊಳ್ಳುವ ಜನರಲ್ಲಿ ಎಷ್ಟು ಅಕಾಡೆಮಿ ಪ್ರಶಸ್ತಿಯನ್ನು ಗೆಲ್ಲಬಲ್ಲ ಸುಪ್ತಚೇತನದವರಿದ್ದರೋ ಯಾರಿಗೆ ಗೊತ್ತು. ಅಷ್ಟು ತಾಕತ್ತಿನ ಸುಪ್ತಚೇತನವಿಲ್ಲದಿದ್ದರೂ ಆ ಬಗೆಯ ಲೇಖಕರನ್ನು ಮೆಚ್ಚುವ ಜನಾಂಗವಾದರೂ ಇರಬಹುದು. ಹೀಗಾಗಿ ಬ್ಲಾಗಿನ ಲೋಕ ತೆರೆದುಕೊಂಡಿರುವುದು ಒಳ್ಳೆಯದೇ ಆಯಿತನ್ನಬಹುದಲ್ಲವೇ?